ಬೀದರ – ಸಚಿವ ಪ್ರಿಯಾಂಕ ಖರ್ಗೆ ಆಪ್ತನೊಬ್ಬ ಟೆಂಡರ್ ಕೊಡುವುದಾಗಿ ಹೇಳಿ ಗುತ್ತಿಗೆದಾರರೊಬ್ಬರಿಂದ ಲಕ್ಷಾಂತರ ರೂಪಾಯಿ ಲಂಚ ಪಡೆದು ವಂಚನೆ ಮಾಡಿದ್ದಕ್ಕೆ ಮನನೊಂದು ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಜರುಗಿದೆ.
ಸಚಿವರೊಬ್ಬರ ಆಪ್ತರಿಂದ ಮೋಸಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಇದು ಎರಡನೇ ಪ್ರಕರಣ ವಾಗಿದೆ. ಈ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಆಪ್ತನೊಬ್ಬನ ಕಿರುಕುಳ ತಾಳಲಾರದೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿತ್ತು.
ಈಗ ಬೀದರ ಜಿಲ್ಲೆಯ ಕಟ್ಟಿತೂಗಾಂವ್ ಗ್ರಾಮದ ಸಚಿನ್ ಪಾಂಚಾಳ (೨೬) ಎಂಬ ಗುತ್ತಿಗೆದಾರನಿಗೆ ಕಾಮಗಾರಿಯ ಟೆಂಡರ್ ಕೊಡಿಸುವುದಾಗಿ ಹೇಳಿ ಮೋಸ ಮಾಡಿದ್ದರಿಂದ ಸಚಿನ್ ಏಳು ಪುಟಗಳ ಡೆತ್ ನೋಟ್ ಬರೆದು ರೇಲ್ವೇ ಟ್ರಾಕ್ ಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಚಿವ ಪ್ರಿಯಾಂಕ ಖರ್ಗೆ ಆಪ್ತ ರಾಜು ಕಪನೂರ ಎಂಬಾತನ ಮೇಲೆ ಈ ಆರೋಪ ಬಂದಿದ್ದು ಮೃತನಿಂದ ಲಕ್ಷಾಂತರ ರೂಪಾಯಿ ತೆಗೆದುಕೊಂಡಿದ್ದಲ್ಲದೆ ಮತ್ತೆ ಒಂದು ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದನೆನ್ನಲಾಗಿದೆ. ಕೋಟಿ ಹಣ ನೀಡದಿದ್ದರೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದನೆನ್ನಲಾಗಿದೆ.
ಕಲಬುರ್ಗಿಯ ಮಾಜಿ ಕಾರ್ಪೋರೇಟರ್ ಆಗಿದ್ದ ರಾಜು ಕಪನೂರು, ನಂದಕುಮಾರ ನಾಗಭುಜಂಗೆ, ಗೋರಖನಾಥ ಎಂಬುವವರು ಸೇರಿ ಒಟ್ಟು ಆರು ಜನರ ವಿರುದ್ಧ ಜೀವ ಬೆದರಿಕೆ ಆರೋಪ ಬಂದಿದೆ.
ರೇಲ್ವೇ ಟ್ರಾಕ್ ಮೇಲೆ ಎರಡು ತುಂಡಾಗಿದ್ದ ಸಚಿನ್ ಮೃತದೇಹವನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ತಮಗೆ ನ್ಯಾಯ ಸಿಗುವವರೆಗೂ ಶವವನ್ನು ಶವಾಗಾರಕ್ಕೆ ಒಯ್ಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು ಕೊನೆಗೂ ಶವವನ್ನು ಅಲ್ಲಿಂದ ಕದಲಿಸಲು ಯಶಸ್ವಿಯಾದರು. ಶವವನ್ನು ಬ್ರಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ.
ಈ ಮಧ್ಯೆ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ರಾಜು ಕಪನೂರ ತನ್ನ ಮೇಲೆ ಬಂದಿರುವ ಆರೋಪವನ್ನು ತಳ್ಳಿ ಹಾಕಿದ್ದು ಸಚಿನ್ ನಿಗೆ ನಾವು ಕಾಮಗಾರಿಯ ದುಡ್ಡು ಖಾತೆಗೆ ಹಾಕಿದ್ದೇವೆ ಆದರೆ ಆತನೇ ಕೆಲಸ ಮಾಡಿಲ್ಲ. ಯಾಕೆಂದು ಕೇಳಿದ್ದಕ್ಕೆ ಸಬೂಬು ಹೇಳುತ್ತ ಬಂದಿದ್ದ. ಈಗ ಆತನ ಆತ್ಮಹತ್ಯೆಗೆ ಏನೇನೋ ಬಣ್ಣ ಹಚ್ಚಲಾಗುತ್ತಿದೆ. ಈ ಬಗ್ಗೆ ಸರಿಯಾದ ವಿಚಾರಣೆ ನಡೆಯಬೇಕು ಎಂದು ಹೇಳಿದ್ದಾನೆ.
ಪ್ರಕರಣದ ಬಗ್ಗೆ ಸಚಿವ ಪ್ರಿಯಾಂಕ ಖರ್ಗೆ ಎಕ್ಸ್ ನಲ್ಲಿ ಬರೆದುಕೊಂಡಿದ್ದು, ಸಚಿನ್ ಸಾವಿಗೆ ವಿಷಾದ ವ್ಯಕ್ತಪಡಿಸಿ ಪ್ರಕರಣದ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾಸಚಿ ನ್
ವರದಿ : ನಂದಕುಮಾರ ಕರಂಜೆ, ಬೀದರ