ಸಮನ್ವಯ ಕವಿ, ನಾಡೋಜ ಚನ್ನವೀರ ಕಣವಿ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಸಮನ್ವಯ ಕವಿ ಎಂದು ಕರೆಸಿಕೊಳ್ಳುವ ಕವಿ ಚನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ೧೯೨೮ರ ಜೂನ್ ೨೮ರಂದು ಜನಿಸಿದರು. ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ ಧಾರವಾಡದಲ್ಲಿಯೆ ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣ ಪೂರೈಸಿದರು.

೧೯೫೨ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾದರು ನಂತರ ನಿರ್ದೇಶಕರಾಗಿ ೧೯೮೩ ರವರೆಗೆ ಸೇವೆ ಸಲ್ಲಿಸಿದರು.ಅವರ ಪತ್ನಿ ಶಾಂತಾದೇವಿ ಅವರು ಕೂಡ ಸಾಹಿತ್ಯ ಸಂಸ್ಕೃತಿಯ ಒಲವುಳ್ಳ ದೊಡ್ಡ ಮನೆತನದಿಂದ ಬಂದವರು.

ಚನ್ನವೀರ ಕಣವಿಯವರು ನವೋದಯ ಕವಿ. ಬೇಂದ್ರೆ, ಕುವೆಂಪು, ಪು.ತಿ.ನ, ಮಧುರಚೆನ್ನ ಮೊದಲಾದವರ ಕಾವ್ಯದ ಪ್ರಭಾವವನ್ನು ಕಣವಿ ಅವರ ಪ್ರಾರಂಭದ ರಚನೆಗಳಲ್ಲಿ ಇಂಥ ನೆಲೆಯನ್ನು ಗುರುತಿಸಬಹುದಾಗಿದ್ದು, ಅವರ ಕಾವ್ಯದಲ್ಲಿ ರಮ್ಯತೆ, ಆದರ್ಶಪ್ರಿಯತೆಯ ಗುಣಗಳು ವಿಶೇಷವಾಗಿ ಕಂಡು ಬರುತ್ತವೆ.೧೯೪೯ರಲ್ಲಿ ಪ್ರಕಟವಾದ ‘ಕಾವ್ಯಾಕ್ಷಿ’,೧೯೫೦ರಲ್ಲಿ ಪ್ರಕಟವಾದ ‘ಭಾವಜೀವಿ’ ಕಾವ್ಯ ಸಂಗ್ರಹಗಳು ಇದೆ ಭಾವಗಳಿಂದ ತುಂಬಿವೆ.

- Advertisement -

೧೯೫೩ರಲ್ಲಿ ಕಣವಿಯವರ ಮೂರನೆಯ ಸಂಗ್ರಹ ‘ಆಕಾಶಬುಟ್ಟಿ’ ಪ್ರಕಟವಾಯಿತು.ಸಮಾಜದ ದೋಷಗಳನ್ನು ಕವಿ ಇಲ್ಲಿ ವ್ಯಗ್ರರಾಗಿ ಟೀಕೆಗೆ ಗುರಿ ಮಾಡುತ್ತಾರೆ.ವ್ಯಂಗ್ಯದ ಧಾಟಿ ಇಲ್ಲಿ ಪ್ರಕಟಗೊಂಡಿದೆ. ಬಸವರಾಜ ಕಟ್ಟೀಮನಿ, ನಿರಂಜನ, ಎಕ್ಕುಂಡಿಯವರಂಥ ಬಂಡಾಯ ಕವಿಗಳ ಸ್ನೇಹ ಸಂಪರ್ಕ ಮತ್ತು ಆಗ ಪ್ರಚಲಿತವಿದ್ದ ಪ್ರಗತಿಶೀಲ ಸಾಹಿತ್ಯ ಚಳವಳಿ ಅವರನ್ನು ಪ್ರಭಾವಿಸಿರಬಹುದು.ಆಕಾಶಬುಟ್ಟಿ ಸಂಗ್ರಹದಲ್ಲಿರುವ ‘ಪ್ರಜಾಪ್ರಭುತ್ವ’ ಎಂಬ ಪ್ರತಿಮಾನಿಷ್ಠವಾದ ಕವಿತೆ ಕಣವಿ ಅವರ ಮುಂದಿನ ಕಾವ್ಯದ ಮುನ್ಸೂಚನೆಯಂತಿದೆ.

ನವೋದಯದ ಕವಿಯಾದರೂ ಕಣವಿಯವರು ನವ್ಯತೆಯಲ್ಲೂ ಪಳಗಿದ್ದು ಕಂಡುಬಂದಿದೆ. ೧೯೫೪ರಲ್ಲಿ ಗೋಪಾಲಕೃಷ್ಣ ಅಡಿಗರ ‘ಚಂಡೆ ಮದ್ದಳೆ’ ಪ್ರಕಟವಾಗಿ ನವ್ಯಮಾರ್ಗ ಅಧಿಕೃತವಾಗಿ ಉದ್ಘಾಟಿತವಾಯಿತು. ನವ್ಯ ಶೈಲಿಯಲ್ಲಿ ರೋಮ್ಯಾಂಟಿಕ್ ಮನೋಧರ್ಮದ ಚೆನ್ನವೀರಕಣವಿ ಅವರು ಈ ಹೊಸ ಕಾವ್ಯ ಸಂದರ್ಭದೊಂದಿಗೆ ಬೇರೊಂದು ರೀತಿಯಲ್ಲಿ ಸಂಘರ್ಷಕ್ಕೆ ತೊಡಗಿದ್ದೇ ಅವರ ಕಾವ್ಯ ಜೀವನದ ಮುಂದಿನ ಅಧ್ಯಾಯ.

ಅಡಿಗರ ನವ್ಯ ಮಾರ್ಗದೊಂದಿಗೆ ಕಣವಿ ಅವರ ಸಂಬಂಧ ಅನ್ಯೋನ್ಯವಾದುದಾಗಿರಲಿಲ್ಲ. ಅಡಿಗರ ಕಾವ್ಯ ಪ್ರವಾಹದಲ್ಲಿ ಪೂರ್ತಿಯಾಗಿ ಕೊಚ್ಚಿ ಹೋಗದಷ್ಟು ಕಣವಿ, ಜಿ.ಎಸ್.ಎಸ್ ಮತ್ತು ಕೆ.ಎಸ್.ನ ಅವರು ಸಾಧಿಸಿಕೊಂಡಿದ್ದರು.

ಹೀಗಾಗಿಯೇ ಅಡಿಗರ ಅನುಯಾಯಿಗಳಿಗಿಂತ ಭಿನ್ನವಾಗಿ ಇವರು ಕಾವ್ಯ ಸೃಷ್ಟಿಸುವುದು ಸಾಧ್ಯವಾಯಿತು.ಭಾಷೆಯ ದೃಷ್ಟಿಯಿಂದ, ಲಯದ ದೃಷ್ಟಿಯಿಂದ, ಅನುಭವವನ್ನು ನಿಷ್ಠುರವಾಗಿ ಶೋಧಿಸಬೇಕೆಂಬ ದೃಷ್ಟಿಯಿಂದ ಇವರು ನವ್ಯವನ್ನು ಒಪ್ಪಿಕೊಂಡರು. ಆದರೆ ಆಗ ನವ್ಯದಲ್ಲಿ ವಿಶೇಷವಾಗಿ ಕಾಣುತ್ತಿದ್ದ ನಿರಾಶಾಭಾವ, ಏಕಾಕಿತನದ ನೋವು, ಕಾಮದ ವಿಜೃಂಭಣೆ ವ್ಯಂಗ್ಯದ ಆಟಾಟೋಪಗಳನ್ನೂ ಇವರು ಬದಿಗಿಟ್ಟು ಬದುಕನ್ನು ಸ್ನೇಹ, ಪ್ರೀತಿ, ವಾತ್ಸಲ್ಯ, ಸಹನಶೀಲತೆ ಮೊದಲಾದ ಮೌಲ್ಯಗಳನ್ನು ಆಶ್ರಯಿಸಿ ಸಹ್ಯವಾಗಿಸುವುದು ಸಾಧ್ಯವಿದೆ ಎಂಬ ನಿಲುವಿನಿಂದ ಬರೆದರು.

ದಾಂಪತ್ಯವನ್ನು ಕುರಿತು, ಮಕ್ಕಳನ್ನು ಕುರಿತು, ನಿಸರ್ಗವನ್ನು ಕುರಿತು, ಅಷ್ಟೇಕೆ ಪ್ರಾಣಿ-ಪಕ್ಷಿಗಳನ್ನು ಕುರಿತು ಕಣವಿ ಅವರು ಬರೆದಿರುವ ಕವಿತೆಗಳನ್ನು ನೋಡಿದರೆ, ಅವರು ಹೇಗೆ ಅಡಿಗರಿಂದ ಭಿನ್ನವಾಗಿ ಬರೆಯುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ.

“ನವ್ಯಕಾವ್ಯದಿಂದಾಗಿ ರೂಪುಗೊಂಡ ಮುಕ್ತ ಛಂದಸ್ಸು, ವಾಸ್ತವ ಮುಖತೆ, ಸಾಮಾಜಿಕ ಎಚ್ಚರ, ವ್ಯಂಗ್ಯ – ವಿಡಂಬನೆಗಳನ್ನು ಕಣವಿ ಅವರ ಕವಿತೆ ಹಿಡಿದುಕೊಂಡಿತಾದರೂ, ಕಣವಿಯವರು ತಮ್ಮ ವ್ಯಕ್ತಿತ್ವದ ಮೂಲದ್ರವ್ಯಗಳಾದ ನಿಸರ್ಗಪ್ರಿಯತೆ, ಅನುಭಾವಿಕ ದೃಷ್ಟಿ, ಮಾನವೀಯ ತೆ, ಮೌಲ್ಯಪ್ರಜ್ಞೆ ಇತ್ಯಾದಿಗಳನ್ನು ಬಿಟ್ಟು ಕೊಡಲಿಲ್ಲ” ಎಂಬ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಹೇಳಿದ್ದು ಕಣವಿಯವರ ಕಾವ್ಯದ ಕನ್ನಡಿಯಂತಿದೆ.

೧೯೬೦ರಲ್ಲಿ ‘ಮಣ್ಣಿನ ಮೆರವಣಿಗೆ’ ಯಲ್ಲಿ ವಿಡಂಬನೆಯ ಜೋರು ಹೆಚ್ಚಾಗಿದೆ.ಆದರೆ ಬಹು ಮುಖ್ಯ ಅಂಶವೆಂದರೆ ಕೆಲವು ಮೂಲಭೂತವಾದ ಮತ್ತು ಸಾರ್ವಕಾಲಿಕ ಎನ್ನಬಹುದಾದ ವಸ್ತುಗಳನ್ನು ತಮ್ಮ ವೈಯಕ್ತಿಕ ಅನುಭವದ ನೆಲೆಯಲ್ಲಿ ಕಣವಿ ಅವರು ಆಳವಾಗಿ ಶೋಧಿಸ ತೊಡಗುತ್ತಾರೆ. ಈ ಶೋಧನೆ ೧೯೬೫ರಲ್ಲಿ ಪ್ರಕಟಗೊಂಡ ‘ನೆಲಮುಗಿಲು’ ಸಂಗ್ರಹದಲ್ಲೂ ಮುಂದುವರೆಯುತ್ತದೆ.`ಮಣ್ಣಿನ ಮೆರವಣಿಗೆ’, ‘ಶಿಶು ಕಂಡ ಕನಸು’, ‘ಕಾಲ ನಿಲ್ಲುವುದಿಲ್ಲ’ ಮೊದಲಾದುವು ಈ ನೆಲೆಯಲ್ಲಿ ಬಂದ ಕಣವಿ ಅವರ ಮಹತ್ವದ ಪ್ರಯೋಗಗಳಾಗಿವೆ.‘ಕಾಲ ನಿಲ್ಲುವುದಿಲ್ಲ’ ಕವಿತೆಯಲ್ಲಿ ನಾಗರಿಕತೆಯ ಇತಿಹಾಸವನ್ನೇ ಕಣವಿ ಅವರು ಪ್ರತಿಮೀಕರಿಸಿದ್ದಾರೆ.ಇಡೀ ಕವಿತೆ ಕಾಲದೊಂದಿಗೆ ಸಾಗಿ ಬಂದ ಮನುಷ್ಯನ ಗತಿಶೀಲವಾದ ಬದುಕಿ ನ ಹೋರಾಟದ ಅಭಿವ್ಯಕ್ತಿಯಾಗಿದೆ.ಜೊತೆಗೆ ಸಾಹಿತ್ಯ ಪರವಾದ ಅರ್ಥವೂ ಕವಿತೆಗಿದೆ.ತಮ್ಮ ವೈಯಕ್ತಿಕ ಕಾವ್ಯದ ಮತ್ತು ಬದುಕಿನ ನಿಲುವುಗಳನ್ನು ಕಣವಿ ವ್ಯಕ್ತಪಡಿಸಿದ್ದಾರೆ.ಇದಕ್ಕೆ ಉದಾಹರಣೆಯಾಗಿ ‘ಕಾಲ ನಿಲ್ಲುವುದಿಲ್ಲ’ ಕವನದ ಈ ಸಾಲುಗಳನ್ನು ಗಮನಿಸಬಹುದು.

“ಮಾಡಿ ಉಂಡಿದ್ದೇವೆ ನಮ ನಮಗೆ ಸೇರಿದ ಅಡಿಗೆ ಇರಬಹುದು ಇದರಲ್ಲಿ ಕೆಲಭಾಗ ಜೀವನ ಸತ್ವ ಕಡಿಮೆ ಇದ್ದ ಶಕ್ತಿಯಲ್ಲಿ ತುಸುದೂರ ನಡೆದಿದ್ದೇವೆ. ರೂಢಿಯಾಗಿದೆ ಒಬ್ಬೊಬ್ಬರಿಗೂ ಒಂದೊಂದು ಬಗೆಯ ನಡಿಗೆ ಮುಖ್ಯ ಬೇಕಾದದ್ದು ಜೀವಂತ ಗತಿ, ಹೊಸ ನೆತ್ತರಿನ ಕೊಡುಗೆ”
ಕಣವಿ ಅವರು ಬರೆದ ‘ಅಪರಾವತಾರ’ದಂಥ ಕವಿತೆಗಳಲ್ಲಿ ರಾಜಕೀಯ ಭ್ರಷ್ಟಾಚಾರದ ಬಗ್ಗೆ ಕಠೋರವಾದ ವ್ಯಂಗ್ಯ ಕಂಡು ಬರುತ್ತದೆ ನಿಜ.

ಆದರೆ ರಾಷ್ಟ್ರಜೀವನದಲ್ಲಿ ಯೋಗ್ಯವಾದ ರಾಜಕೀಯ ನಡೆಗಳನ್ನು ಒಪ್ಪಿ, ಮುಜುಗರವಿಲ್ಲದೆ ಆ ಬಗ್ಗೆ ಹೃದಯ ಬಿಚ್ಚಿ ಅವರು ಬರೆದದ್ದು ವಿಶೇಷವಾಗಿದೆ.‘ನೆಹರೂ ನಿವೃತ್ತರಾಗುವುದಿಲ್ಲ’ ಎಂಬ ಅಡಿಗರ ಕವಿತೆಯೊಂದಿಗೆ ಕಣವಿ ಅವರ ‘ರಾಷ್ಟ್ರದ ಕರೆ’, ‘ಇಂದೇ ಸೀಮೋಲ್ಲಂಘನ’, ‘ನೆಹರೂ ಶ್ರದ್ಧಾಂಜಲಿ’, ‘ಭಾರತ ಸುಪುತ್ರನ ಕೊನೆಯ ಬಯಕೆ’ ಮೊದಲಾದ ಪದ್ಯಗಳನ್ನು ಹೋಲಿಸಿ ನೋಡಿದಾಗ ಈ ಇಬ್ಬರು ಕವಿಗಳ ಮನೋಧರ್ಮದ ಅಂತರ ಸ್ಪಷ್ಟವಾಗುತ್ತದೆ.

ಸುನೀತಗಳ ಕವಿ

ಇಂಗ್ಲೀಷಿನ ಸಾನೆಟ್ಟಿನ ಕಾವ್ಯಬಂಧ ಕಣವಿಯವರಿಗಿದೆ.‘ಕಾವ್ಯರಚನೆಯ ಪ್ರಾರಂಭದಿಂದಲೂ ನನ್ನ ಮನಸ್ಸನ್ನಾಕರ್ಷಿಸಿದ ಕಾವ್ಯ ಪ್ರಕಾರ ಸಾನೆಟ್’ ಎಂದು ‘ಎರಡು ದಡ’ದ ಮುನ್ನುಡಿಯಲ್ಲಿ ಸ್ವತಃ ಕಣವಿ ಅವರೆ ಹೇಳಿಕೊಂಡಿದ್ದಾರೆ.

“ಕಣವಿಯವರು ತಮ್ಮ ತತ್ವಜ್ಞಾನವನ್ನೆಲ್ಲಾ, ಜೀವನದ ಮೇಲಿದ್ದ ತಮ್ಮ ಭರವಸೆ ಯನ್ನೆಲ್ಲಾ ಈ ಸುನೀತದಲ್ಲಿ ಅತ್ಯಂತ ಪ್ರಭಾವಿಯಾಗಿ ಮಿಡಿಸಿದ್ದಾರೆ” ಎಂಬ ಶಾಂತಿನಾಥ ದೇಸಾಯಿಯವರ ಮಾತು ಇಲ್ಲಿ ಉಲ್ಲೇಖನೀಯ.ಕಷ್ಟಸಾಧ್ಯವಾದ ಈ ಕಾವ್ಯ ಶೈಲಿಯನ್ನು ವಶಪಡಿಸಿಕೊಂಡ ಕಣವಿ ಚೆಲುವಾದ ಅನೇಕ ಸುನೀತಗಳನ್ನು ರಚಿಸಿದ್ದಾರೆ.

ಈ ದೃಷ್ಟಿ ಯಿಂದ ತಮ್ಮ ಸುನೀತಗಳ ಮೂಲಕ ಕಣವಿ, ಕನ್ನಡಕ್ಕೆ ಮಹತ್ವದ ಕಾವ್ಯಕಾಣಿಕೆಯನ್ನು ನೀಡಿದ್ದಾರೆಂದು ನಿಸ್ಸಂಶಯವಾಗಿ ಹೇಳಬಹುದು. ಶಾಂತಿನಾಥ ದೇಸಾಯಿ ಅವರು ಉಲ್ಲೇಖಿಸಿ ರುವ ಹಾಗೆ “ ಸ್ವಾತಂತ್ರ್ಯ ಸಂಗ್ರಾಮದಂಥ ಸಾರ್ವಜನಿಕ ವಿಷಯದ ಮೇಲೆ ಬರೆಯುವ ಪ್ರಸಂಗ ಬಂದಾಗಲಾಗಲಿ, ಗಾಂಧಿ, ಶಾಸ್ತ್ರಿ, ಶ್ರೀ ಅರವಿಂದರಂತಹ ಮಹಾತ್ಮರ ಬಗ್ಗೆ ಬರೆಯಬೇಕಾದಾಗಲಾಗಲಿ, ಇನ್ನೂ ಹತ್ತಿರದ ಹಿರಿಯರಾದ ಬೇಂದ್ರೆ, ಮುಗಳಿ, ತೀ.ನಂ.ಶ್ರೀ ಮುಂತಾದ ಆತ್ಮೀಯರ ಬಗ್ಗೆ ಬರೆಯುವ ಪ್ರಸಂಗ ಬಂದಾಗಲಾಗಲಿ ಕಣವಿಯವರಿಗೆ ಸಾನೆಟ್ಟು ಒಂದು ಅತ್ಯಂತ ಪ್ರಭಾವಿ ಯಾದ ಅಭಿವ್ಯಕ್ತಿ ಮಾಧ್ಯಮವಾಯಿತು.“

ಜನತೆಗೆ ತಲುಪಿದ ಕವಿ.

ಚನ್ನವೀರ ಕಣವಿ ಅವರು ರಚಿಸಿರುವ ಗೀತೆಗಳಲ್ಲಿ ಅವರ ಗಂಭೀರ ಕಾವ್ಯದ ಆಸಕ್ತಿಗಳೇ ಸರಳ ರೂಪದಲ್ಲಿ ಅಭಿವ್ಯಕ್ತಿ ಪಡೆಯುತ್ತವೆ. ಈ ಮೂಲಕ ಅವರು ಜನತೆಯ ಕವಿ ಎನ್ನಿಸಿಕೊಳ್ಳುತ್ತಾರೆ.ಕಾವ್ಯಬಂಧದಲ್ಲಿ ಅರ್ಥಪುಷ್ಟಿಗಿಂತ ನಾದ ಮಾಧುರ್ಯಕ್ಕೆ ಹೆಚ್ಚು ಒತ್ತು ಬೀಳುತ್ತದೆ.

ಗೀತೆಗಳ ಸ್ವರೂಪವೇ ಅದು.ಭಾವ ಮತ್ತು ನಾದಗಳಲ್ಲಿ ರಮಿಸಲಾಗದ ಮನಸ್ಸು ಪಾಯಶಃ ಗೀತೆಗಳ ರಚನೆಗೆ ಸಮರ್ಥವಾಗುವುದಿಲ್ಲ.ಕಣವಿ ಅವರ ಗೀತೆಗಳಲ್ಲಿ ಸಹಜ ಕವಿಯೊಬ್ಬ ಬರೆದಾಗ ಮಾತ್ರ ಕಾಣಿಸಿಕೊಳ್ಳಬಲ್ಲ ಅನೇಕ ಕಾವ್ಯಾತ್ಮಕ ಹೊಳಹುಗಳು ವಿಶೇಷವಾಗಿ ಕಂಡು ಬರುತ್ತವೆ.

  • ವಿಶ್ವಭಾರತಿಗೆ ಕನ್ನಡದಾರತಿ
  • ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ
  • ಹೂವು ಹೊರಳುವುವು ಸೂರ್ಯನ ಕಡೆಗೆ
  • ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ

ಮೊದಲಾದ ಅವರ ಜನಪ್ರಿಯ ಗೀತೆಗಳನ್ನು ಈ ದೃಷ್ಟಿಯಿಂದಲೇ ಲಕ್ಷಿಸಬೇಕಾಗುತ್ತದೆ.ಇಂಥ ರಚನೆಗಳನ್ನು ಸಾಪೇಕ್ಷ ಕಾವ್ಯ ಎಂದು ಪು.ತಿ.ನ ಕರೆಯುತ್ತಾರೆ. ಪು.ತಿ.ನ, ಕೆ.ಎಸ್.ನ, ಜಿ.ಎಸ್.ಎಸ್ ಮೊದಲಾದವರು ಬೆಳೆಸಿಕೊಂಡು ಬಂದಿರುವ ಈ ಗೀತ ರಚನಾ ಪರಂಪರೆಗೆ ಕಣವಿ ಅವರದ್ದೂ ಬೆಲೆಯುಳ್ಳ ಕಾಣಿಕೆಯಾಗಿದೆ.ಐವತ್ತು ವರ್ಷಗಳ ಕಾಲ ಕಾವ್ಯ ಸಲ್ಲಿಸಿದ ನಂತರದಲ್ಲಿ ಕೂಡಾ ‘ಶಿಶಿರದಲ್ಲಿ ಬಂದ ಸ್ನೇಹಿತ’ ಅಂತಹ ಕವನ ಸಂಕಲನಗಳಲ್ಲಿ ಕಣವಿಯವರ ಯಾವುದೇ ಅಬ್ಬರವಿಲ್ಲದ ಮೆಲುದನಿಯ ಕವಿತೆಗಳಿವೆ.ಕವಿಯ ಕಾವ್ಯಜೀವನದ ಮಾಗುವಿಕೆ ಈ ಕವಿತೆಗಳಲ್ಲಿ ತನಗೆ ತಾನೇ ಸ್ಪಷ್ಟವಾಗುವ ಅಂಶ.ಮಳಲು ಹಾಡುತ್ತದೆ, ಹಲ್ಲಿಗಳ ಸಹವಾಸ, ಕನಸಿನ ಗೊಮ್ಮಟ, ಈಗಿನ ಮಕ್ಕಳು ಅಂತಹ ಕವಿತೆಗಳು ಕೊಡುವ ಚಿತ್ರಗಳು ಹೊಸವು.ಅಂತರಂಗದ ಗತಿಗೆ ಹೊರ ಜಗತ್ತಿನ ಸಂಗತಿಗಳು ಅಪ್ರಯತ್ನಕವೆಂಬಷ್ಟು ಸಹಜವಾಗಿ, ಪ್ರತೀಕವಾಗಿ ನಿಲ್ಲುವ ಬಗೆಯಿಂದ ಇವು ಸಹಜ ಕಾವ್ಯದ ಮಾದರಿಗಳಾಗಿವೆ.

ಕಣವಿಯವರು ಸಾಹಿತ್ಯ

  • ಕಾವ್ಯಾಕ್ಷಿ,ಭಾವಜೀವಿ
  • ಆಕಾಶಬುಟ್ಟಿ
  • ಮಧುಚಂದ್ರ
  • ಮಣ್ಣಿನ ಮೆರವಣಿಗೆ
  • ದಾರಿ ದೀಪ
  • ನೆಲ ಮುಗಿಲು
  • ಎರಡು ದಡ
  • ನಗರದಲ್ಲಿ ನೆರಳು
  • ಜೀವಧ್ವನಿ
  • ಕಾರ್ತೀಕದ ಮೋಡ
  • ಜೀನಿಯಾ
  • ಹೊಂಬೆಳಕು
  • ಶಿಶಿರದಲ್ಲಿ ಬಂದ ಸ್ನೇಹಿತ
  • ಚಿರಂತನ ದಾಹ (ಆಯ್ದ ಕವನಗಳು)
  • ಹೂವು ಹೊರಳುವವು ಸೂರ್ಯನ ಕಡೆಗೆ…

ವಿಮರ್ಶಾಲೇಖನಗಳು ಹಾಗು ಪ್ರಬಂಧ ಸಂಕಲನಗಳು:

  • ಸಾಹಿತ್ಯಚಿಂತನ
  • ಕಾವ್ಯಾನುಸಂಧಾನ
  • ಸಮಾಹಿತ
  • ಮಧುರಚೆನ್ನ
  • ಸಮತೋಲನ.

ಮಕ್ಕಳ ಕವಿತೆ:

  • ಹಕ್ಕಿ ಪುಕ್ಕ
  • ಚಿಣ್ಣರ ಲೋಕವ ತೆರೆಯೋಣ.

ಸಂಪಾದನೆ.
ಕನ್ನಡದ ಕಾಲು ಶತಮಾನ,ಸಿದ್ಧಿ ವಿನಾಯಕ ಮೋದಕ ಕವಿತೆಗಳು.

ಸಂಪಾದನೆ (ಇತರರೊಂದಿಗೆ)

  • ನವಿಲೂರು ಮನೆಯಿಂದ
  • ನವ್ಯಧ್ವನಿ
  • ನೈವೇದ್ಯ
  • ನಮ್ಮೆಲ್ಲರ ನೆಹರೂ
  • ಜೀವನ ಸಿದ್ಧಿ
  • ಆಧುನಿಕ ಕನ್ನಡ ಕಾವ್ಯ,
  • Modern Kannada Poetry
  • ಸುವರ್ಣ ಸಂಪುಟ
  • ರತ್ನ ಸಂಪುಟ
  • ಬಾಬಾ ಫರೀದ.

ಕಣವಿಯವರಿಗೆ ದೊರೆತಿರುವ ಪ್ರಶಸ್ತಿ ಪುರಸ್ಕಾರಗಳು.

  • ಇವರ “ಜೀವಧ್ವನಿ” ಎಂಬ ಕೃತಿಗೆ ೧೯೮೧ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
  • ೧೯೯೬ರಲ್ಲಿ ಹಾಸನದಲ್ಲಿ ನಡೆದ ಅರವತ್ತೈದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಣವಿಯವರು ಅಧ್ಯಕ್ಷರಾಗಿದ್ದರು.
  • ಆಳ್ವಾಸ್ -ನುಡಿಸಿರಿ ೨೦೦೮ ರ ಸಮ್ಮೇಳನದ ಅಧ್ಯಕ್ಷರಾಗಿದ್ದರು.
  • ಜೀವಧ್ವನಿ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
  • ರಾಜ್ಯೋತ್ಸವ ಪ್ರಶಸ್ತಿ
  • ಪಂಪ ಪ್ರಶಸ್ತಿ
  • ಬಸವ ಗುರು ಕಾರುಣ್ಯ ಪ್ರಶಸ್ತಿ
  • ನಾಡೋಜ ಪ್ರಶಸ್ತಿ
  • ಕರ್ನಾಟಕ ಕವಿರತ್ನ ಪ್ರಶಸ್ತಿ
  • ಅನಕೃ ನಿರ್ಮಾಣ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು
  • ಕಣವಿಯವರ ಸಾಧನೆಗೆ ಸಿಕ್ಕ ಗೌರವಗಳು.
  • ನಾಡೋಜ ಮತ್ತು ಪಂಪ ಪ್ರಶಸ್ತಿ ವಿಜೇತರು’. ಸೆಪ್ಟೆಂಬರ್, ೧, ೨೦೦೩.

ಇಂಥ ಸಮನ್ವಯ ಕವಿಯ ಜನ್ಮದಿನ ಇಂದು. ಕನ್ನಡ ಸಾಹಿತ್ಯ ಲೋಕ ಅವರಿಂದ ತುಂಬು ಶ್ರೀಮಂತವಾಗಿದೆ. ಅವರು ಬೆಳಗಿಸಿರುವ ಸಾಹಿತ್ಯ ದೀಪ ಅನವರತ ಬೆಳಗುತ್ತಿರುತ್ತದೆ.

ಎಮ್ ವೈ ಮೆಣಸಿನಕಾಯಿ, ಬೆಳಗಾವಿ

- Advertisement -
- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!