spot_img
spot_img

ಕೊರೋನಾ ಮತ್ತು ಜಂಗಮ ವಾಣಿ (ಮೊಬೈಲ್)

Must Read

- Advertisement -

ಕೊರೋನಾ ಇಡೀ ಜಗತ್ತನ್ನು ತನ್ನ ಕಬಂಧ ಬಾಹುವಿನಿಂದ ಅಪ್ಪಿಕೊಂಡು ಆಳುತ್ತಿದೆ. ಸುಮಾರು ನೂರು ವರ್ಷಗಳ ಹಿಂದೆ ಇಂತಹ ಕಾಯಿಲೆ ಜಗತ್ತನ್ನು ಆಳಿತ್ತೆಂದು ಓದುತ್ತಿದ್ದೇವೆ. ಬಹುಶಃ ಈ ರೋಗ ಬಾರದೇ ಹೋಗಿದ್ದರೆ ಆಧುನಿಕ ಜಗತ್ತಿನಲ್ಲಿ ಕೆಲವು ವಸ್ತುಗಳು ಅಪರೂಪದ ವಸ್ತುಗಳಾಗಿ ಕಂಡುಬರುತ್ತಿದ್ದವು. ಮುಖಗವಸು (ಮಾಸ್ಕ್) ಕೇವಲ ವೈದ್ಯರು ಹಾಕುವ ಅದರಲ್ಲೂ ಶಸ್ತ್ರಚಿಕಿತ್ಸೆ ಮಾಡುವ ವೈದ್ಯರು ಹಾಕುವುದಾಗಿತ್ತು.ಆದರೆ ಇಂದು ಜನ ತಮ್ಮ ಅವಶ್ಯಕ ವಸ್ತುಗಳ ಖರೀದಿಯನ್ನು ಮರೆತು ಇದನ್ನು ಖರೀದಿಸಲು ಮುಂದಾಗಿದ್ದಾರೆ.

ಇಂದಿನ ದಿನಗಳಲ್ಲಿ ಜಗತ್ತನ್ನು ಕೇವಲ ಬೆರಳುಗಳ ಮಧ್ಯೆ ನೋಡುವ ಮತ್ತೊಂದು ಪ್ರಮುಖ ವಸ್ತು ಮೊಬೈಲ್. ಕನ್ನಡದ ಜಂಗಮ ವಾಣಿ,ಚರ ದೂರವಾಣಿ, ಸಂಚಾರಿ ವಾಣಿ ಇತ್ಯಾದಿ. ಇಲ್ಲಿ ಕನ್ನಡ ಪದಗಳಿಗಿಂತ ಹೆಚ್ಚು ಆಂಗ್ಲ ಪದ ಬಳಕೆ ಮಾಡುತ್ತಿರುವೆ‌. ಓದುಗ ದೊರೆಗಳಲ್ಲಿ ಒಂದು ಮನವಿ. ದಯವಿಟ್ಟು ಕ್ಷಮಿಸಿ. ಇಂದಿನ ದಿನಗಳಲ್ಲಿ ನಮಗೆ ಅತ್ಯಂತ ಬೇಕಾದ ವಸ್ತುಗಳ ಪಟ್ಟಿಯಲ್ಲಿ ಮೊಬೈಲ್ ಇದೆ. ಇದನ್ನು ಬಿಟ್ಟರೆ ಬೇರೆ ಪ್ರಪಂಚ ಇಲ್ಲ, ಎಂಬುವಷ್ಟರ ಮಟ್ಟಿಗೆ ಬದಲಾಗಿದ್ದೇವೆ. ಇನ್ನು ಮಕ್ಕಳ ಹಂತಕ್ಕೆ ಬಂದರೆ.ಅವರಿಗೆ ಇದೇ ಎಲ್ಲವೂ ಆಗಿದೆ. ಒಂದು ಕಾಲಕ್ಕೆ ಅಳುವ ಮಕ್ಕಳಿಗೆ ಗಿಲಕಿ ಕೊಟ್ಟ ಸಮಾಧಾನಪಡಿಸುವ ಕಾಲ ಇತ್ತು. ಇಂದು ಮೊಬೈಲ್ ಕೊಟ್ಟು ಅವರ ಅಳು ನಿಲ್ಲಿಸುವ ಮಟ್ಟಿಗೆ ಬಂದಿದ್ದೇವೆ.

ಎಲ್ಲೋ ಸಾಮಾಜಿಕ ಜಾಲತಾಣಗಳಲ್ಲಿ ಓದಿದ ಒಂದು ನೆನಪು.ಒಂದು ಶಾಲೆಯಲ್ಲಿ ಶಿಕ್ಷಕರೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ನಿಮ್ಮ ಮುಂದಿನ ಗುರಿ ಏನು? ನಾಳೆ ಉತ್ತರ ಬರೆದುಕೊಂಡು ಬನ್ನಿ ಎಂದರು.ಎಲ್ಲ ಮಕ್ಕಳ ಉತ್ತರ ಬದಲಾಗಿತ್ತು. ಒಂದು ಮಗು ನಾನು ಸ್ಮಾರ್ಟ್ ಫೋನ್ ಆಗಬೇಕು ಎಂದು ಉತ್ತರ ನೀಡಿತ್ತು. ಶಿಕ್ಷಕನ ಕಣ್ಣಂಚಿನಲ್ಲಿ ನೀರಿತ್ತು.ಕಾರಣ ಮಗು ಉತ್ತರ ನಮ್ಮ ಮನೆಯಲ್ಲಿ ನನಗಿಂತ ಚೆನ್ನಾಗಿ ನಮ್ಮ ತಂದೆ ತಾಯಿ ಸ್ಮಾರ್ಟ್ ಫೋನ್ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಬರೆದ ಸಾಹಿತಿಗೆ ಹೃದಯ ಪೂರ್ವಕ ನುಡಿನಮನ.ನಮಗೆ ನಮ್ಮ ವೈಯಕ್ತಿಕ ಜೀವನಕ್ಕಿಂತ ಅದರಲ್ಲೂ ಕುಟುಂಬದ ಸದಸ್ಯರಿಗಿಂತ ಸ್ಮಾರ್ಟ್ ಫೋನ್ ಅವಶ್ಯಕತೆ ಇದೆ. ನಮ್ಮ ಜೀವನವೂ ಸ್ಮಾರ್ಟ್ ಫೋನ್ ಆಗಿದೆ. ಕಾರಣ ಇದಕ್ಕೆ ಆಗಾಗ ಚಾರ್ಜ್ ಹಾಕಬೇಕು. ಡಾಟಾ ಪ್ಯಾಕ್‌ ಎಲ್ಲವನ್ನೂ ಪೂರೈಸುತ್ತೇವೆ.ಆದರೆ ನಮ್ಮ ಮನೆಯ ಸದಸ್ಯರಿಗೆ ಮಾತ್ರ ಕುಳಿತು ಮಾತನಾಡಲು ವೇಳೆ ಇಲ್ಲ. ಕಮೆಂಟ್, ಲೈಕ್ ಇದರಲ್ಲಿ ಕಾಲ ಕಳೆಯುತ್ತೇವೆ. ಅದರಲ್ಲೂ ವಿಶೇಷವಾಗಿ ಈ ಕೊರೋನಾ ವೇಳೆಯಲ್ಲಿ ಜನರೊಂದಿಗೆ ಅಥವಾ ಮನೆಯ ಸದಸ್ಯರೊಂದಿಗೆ ಮಾತನಾಡಿದುದಕ್ಕಿಂತ ಮೊಬೈಲ್ ನೊಂದಿಗೆ ಕಾಲ ಕಳೆದದ್ದೆ ಹೆಚ್ಚು.

- Advertisement -

ಇನ್ನೂ ಶಾಲಾ ಮಕ್ಕಳ ವಿಷಯಕ್ಕೆ ಸಂಬಂಧಿಸಿದಂತೆ ನೋಡುವುದಾದರೆ, ಮಕ್ಕಳಿಗೆ ಶಾಲೆ ಎಂಬುದು ಐತಿಹಾಸಿಕ, ಪ್ರೇಕ್ಷಣೀಯ, ಗತಕಾಲದ ವಸ್ತು ಸಂಗ್ರಹಾಲಯ ಎಂದರೆ ತಪ್ಪಾಗಲಾರದು. ಏಕೆಂದರೆ ಕಳೆದ ಒಂದೂವರೆ ವರ್ಷಗಳ ಕಾಲದಿಂದ ಶಾಲೆ ಎಂದರೆ ಕನಸಾಗಿದೆ. ಶಿಕ್ಷಕರು ಗತಕಾಲದ ವೈಭವವನ್ನು ನೆನಪಿಗೆ ತರುವ ಬೊಂಬೆಗಳಾಗಿದ್ದಾರೆ. ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ತಂದೆ ತಾಯಿ ನಡುವಿನ ಸಂಬಂಧದಂತಿತ್ತು. ಜೊತೆಗೆ ಎಲ್ಲವನ್ನೂ ಹಂಚಿಕೊಳ್ಳಲು ಅವಕಾಶ ಇತ್ತು. ನಂತರದ ದಿನಗಳಲ್ಲಿ ಈ ಮಹಾ ಮಾರಿ ರೋಗ ಎಲ್ಲವನ್ನೂ ಹಾಳುಮಾಡಿತು.

ತಂದೆ ತಾಯಿಯರು ಈಗಿನ ತಮ್ಮ ಮಕ್ಕಳಷ್ಟು ಓದಿದವರಲ್ಲ(ಕೆಲವರು) ಅವರಿಗೆ ಆಧುನಿಕ ಜೀವನ ಶೈಲಿ ಯಾವುದು ಸರಿಯಾಗಿ ಗೊತ್ತಿಲ್ಲ. ಅವರ ಕೆಲಸ ದುಡಿಮೆ ಮಾತ್ರ. ನಮ್ಮ ಮಕ್ಕಳು ನಮ್ಮಂತಾಗದೇ ಇರಲೆಂದು ಬಯಸುತ್ತಾರೆ. ಮಕ್ಕಳ ಇತಿಮಿತಿಗಳನ್ನು ಅರಿತುಕೊಂಡು ಅವರು ಬದುಕುತ್ತಿದ್ದಾರೆ. ಇದ್ಯಾವುದರ ಪರಿವೆ ಇಲ್ಲದೇ ಮಕ್ಕಳು ಮೋಜು ಮಸ್ತಿಗೆ ಇಳಿದಿದ್ದಾರೆ. ಈ ಕೊರೋನಾ ವೇಳೆಯಲ್ಲಿ ಶಾಲೆಗೆ ಹೋಗದೇ ಉತ್ತೀರ್ಣರಾಗಿ ಮುಂದಿನ ತರಗತಿಗೆ ಹಾಜರಾಗುತ್ತಿದ್ದಾರೆ.

ಅಂತರ್ಜಾಲಾಧಾರಿತ ಪಾಠ ಪ್ರವಚನಗಳು ನಡೆಯುತ್ತಿವೆ. ಈ ಪಾಠಗಳು ಎಷ್ಟರಮಟ್ಟಿಗೆ ನಮ್ಮ ಮಕ್ಕಳಿಗೆ ಅರ್ಥವಾಗುತ್ತವೆ?ಎಂಬುದನ್ನು ನಾವು ಆಲೋಚಿಸಿಲ್ಲ.ಮಕ್ಕಳಿಗೆ ಬೇಕಾಗಿರುವುದು ಮೊಬೈಲ್ ಮಾತ್ರ. ಮೊಬೈಲ್ ಕೊಟ್ಟ ಮಾತ್ರಕ್ಕೆ ಸಾಕಾಗಲಿಲ್ಲ ಅದಕ್ಕೆ ಡಾಟಾ ಪ್ಯಾಕ್ ಎಸ್ ಎಮ್ ಎಸ್ ಪ್ಯಾಕ್,ಎಲ್ಲವನ್ನೂ ನೋಡುತ್ತಾರೆ. ನಮ್ಮ ಪಾಲಕರ ಗುರಿ ಒಂದೇ. ನಮ್ಮ ಮಕ್ಕಳು ಎತ್ತರಕ್ಕೆ ಬೆಳೆಯಬೇಕು. ಆದರೆ ಮಕ್ಕಳು ತಮ್ಮ ಪಾಲಕರು ಕೊಡಿಸಿದ ಸ್ಮಾರ್ಟ್ ಫೋನ್ ಅನ್ನು ಶಾಲೆಯ ತಮ್ಮ ವಿದ್ಯಾಭ್ಯಾಸಕ್ಕೆ ಬಳಸದೆ ಅತಿ ಹೆಚ್ಚು ಬೇರೆ ಕೆಲಸಗಳಿಗೆ ವಿನಿಯೋಗಿಸುತ್ತಿದ್ದಾರೆ. ಮಕ್ಕಳ ಕಣ್ಮನ ಸೆಳೆಯುವ ವಿವಿಧ ಯಾಪಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಮಾರಕವಾಗಿವೆ.ಮಕ್ಕಳು ಫೇಸ್ ಬುಕ್, ಟ್ವಿಟರ್, ಇನ್ಸ್ತಗ್ರಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಇನ್ನೂ ಯೂಟ್ಯೂಬ್ ನಂತಹ ಜಾಲತಾಣಗಳಲ್ಲಿ ಅಶ್ಲೀಲ ವಿಷಯಗಳ ಬಗ್ಗೆ ಗಮನ ಸೆಳೆಯುವ ಚಿಕ್ಕ ಮಕ್ಕಳು ಅಪರಾಧಿಗಳಾಗುತ್ತಿದ್ದಾರೆ.

- Advertisement -

ಮನೆಯಲ್ಲಿ ಪಾಲಕರು ಇಲ್ಲದಿರುವ ವೇಳೆಯಲ್ಲಿ ತಮ್ಮ ಸಹಪಾಠಿಗಳ ಜೊತೆಗೆ ಹಾಳು ಹರಟೆ ಹೊಡೆಯುತ್ತಾರೆ. ಮಾದಕ ವ್ಯಸನಿಗಳಾಗುತ್ತಿದ್ದಾರೆ.ಇನ್ನೂ ಕೆಲವು ಸಂದರ್ಭಗಳಲ್ಲಿ ಮಕ್ಕಳು ತಮ್ಮ ಕಲಿಸುವ ಗುರುಗಳಿಗೆ ಅಶ್ಲೀಲ ಸಂದೇಶ ಕಳುಹಿಸಿ ಕೊಟ್ಟಿದ್ದಾರೆ. ಹಾಗಾದರೆ. “ಗುರು ಬ್ರಹ್ಮ ಗುರುರ್ವಿಷ್ಣು ಗುರುದೇವ ಮಹೇಶ್ವರ. ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ” ಎನ್ನುವ ಶ್ಲೋಕ ಕಣ್ಮರೆಯಾಗಿ ಗುರು ಏನು ಮಹಾ ಎನ್ನುವ ಹಂತಕ್ಕೆ ಬರುತ್ತಿದ್ದಾರೆ. ಒಂದು ಕಾಲದಲ್ಲಿ ಗುರುವಿಗೆ ತಲೆಬಾಗಿ ನಮಿಸುತ್ತಿದ್ದರು. ಇಂದು ಗುರು ಎದುರಿಗೆ ಬಂದರು ಸುಮ್ಮನೆ ಹೋಗುವ ಕಾಲ ಬಂದಿದೆ. ಕಾರಣ ನಾವುಗಳು ತುಂಬ ಮುಂದುವರಿದ ನಾಗರಿಕರಾಗಿದ್ದೇವೆ.ಜೊತೆಗೆ ಸಂಪೂರ್ಣ ಜ್ಞಾನ ಪಡೆದ ಮಹಾ ಪಂಡಿತರಾಗಿದ್ದೇವೆ.ಒಂದು ನೆನಪಿರಲಿ ಯಾರು ಎಷ್ಟೇ ಸಾಧಿಸಿದ್ದರು ಅದು ಒಬ್ಬ ಗುರುವಿನ ಪರಿಶ್ರಮದಿಂದ ಎನ್ನುವುದನ್ನು ಮರೆಯಬಾರದು.

ಇವತ್ತಿನ ಮಕ್ಕಳಿಗೆ ಮೊಬೈಲ್ ಗುರುವಾಗಿದೆ.ನಮ್ಮ ಪಾಲಕರಿಗೆ ಮಕ್ಕಳ ಮೇಲೆ ಜವಾಬ್ದಾರಿ ಕಡಿಮೆ ಆಗುತ್ತಿದ್ದು.ಮುಂದೊಂದು ದಿನ ಮಕ್ಕಳು ಅಧಃಪತನಕ್ಕೆ ಈಡಾಗುತ್ತಾರೆ. ಅವರ ಆ ಪರಿಸ್ಥಿತಿಗೆ ಕಾರಣ ನಾವೇ.ಏಕೆಂದರೆ ಮಗು ಏನೆಲ್ಲ ಕೇಳಿದರು ಕೊಟ್ಟಿದ್ದೇವೆ. ಆದರೆ ಅದರ ಸರಿಯಾದ ಮೇಲುಸ್ತುವಾರಿ ಮಾಡುತ್ತಿಲ್ಲ. ಇದು ಇಂದಿನ ದುಸ್ಥಿತಿ.ಮಕ್ಕಳು ಅನೇಕ ಬಗೆಯ ಯಾಪ್ ಗಳು ಮೂಲಕ ಸಕಾರಾತ್ಮಕ ವಿಮರ್ಶೆಗಳನ್ನು ಮಾಡದೇ ನಕಾರಾತ್ಮಕ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ.

ಮಕ್ಕಳಲ್ಲಿ ಆತ್ಮ ವಿಶ್ವಾಸದ ಕೊರತೆ ಉಂಟಾಗುತ್ತದೆ.ಇಂದಿನ ಬಹುತೇಕ ಎಲ್ಲ ವಿದ್ಯಾರ್ಥಿಗಳನ್ನು ಮತ್ತು ಪಾಲಕರನ್ನು ಕಾಡುತ್ತಿರುವ ಪ್ರಶ್ನೆ ಇದು.ಹೌದು ನಮ್ಮ ಮಕ್ಕಳು ಒಂಭತ್ತನೆಯ ತರಗತಿ ವರೆಗೆ ಚೆನ್ನಾಗಿ ಇರುತ್ತಾರೆ. ಯಾವಾಗ ಹತ್ತನೇ ತರಗತಿಗೆ ಬಂದರೋ,ಪಾಲಕರಲ್ಲಿ ಭಯ, ಉದ್ವೇಗ ಹೆಚ್ಚಾಗುತ್ತಾ ಹೋಗುತ್ತದೆ. ಕಾರಣ ನಮ್ಮ ಮಕ್ಕಳು ಹತ್ತನೇ ತರಗತಿಯಲ್ಲಿ ಓದುತ್ತಿದ್ದಾರೆ ಎಂದು. ನಮ್ಮ ಮಕ್ಕಳಿಗೆ ನಾವು ಕೇವಲ ಉರು ಹೊಡೆದು ಉತ್ತೀರ್ಣರಾಗಲು ಪ್ರೋತ್ಸಾಹ ಕೊಟ್ಟಿದ್ದೇವೆ ಹೊರತು,ಅದರಿಂದ ಆಚೆಗೆ ಇನ್ನೊಂದು ಜೀವನ ಇದೆ ಎಂದು ನಾವು ಯಾವತ್ತು ನಮ್ಮ ಮಕ್ಕಳಿಗೆ ಹೇಳಿಲ್ಲ.

ನಾವು ಹೇಳಿದ್ದು ಆ ಹುಡುಗಿ ನೋಡಿ ಕಲಿ,ಈ ಹುಡುಗ ಓದುವುದನ್ನು ನೋಡಿ ಕಲಿ ಎಂದು ಶುರು ಮಾಡಿಬಿಡುತ್ತೇವೆ.ಮಕ್ಕಳಿಗೆ ಅಪರಾಧಿ ಪ್ರಜ್ಞೆ ಬೆಳೆಯುವುದೇ ಆಗ.ನಾನು ಅವನಂತೆ ಅಥವಾ ಅವಳಂತೆ ಓದದಿದ್ದರೆ,ನಮ್ಮಪ್ಪ ಅಮ್ಮ ನಮ್ಮನ್ನು ದೂರ ಹಾಕುತ್ತಾರೆ.ಎಂದು ಪದೆ ಪದೇ ಮಕ್ಕಳು ಹಿಂಸೆಗೆ ಒಳ ಪಡುತ್ತಾರೆ.

ಪಾಲಕರು ಸಾಮಾನ್ಯವಾಗಿ ಮಕ್ಕಳು ಕಂಡ ತಕ್ಷಣ ಹಾ ಓದು ಈ ವರ್ಷ ಎಸ್ ಎಸ್ ಎಲ್ ಸಿ ಗೊತ್ತಲ್ಲ ಬೋರ್ಡ್ ಎಕ್ಸಾಮ್ ಸರಿಯಾಗಿ ಓದಿದರೆ ಮುಂದೆ ಓದಿಸುವೆ.ಇಲ್ಲವಾದರೆ ಇಲ್ಲ ಅಷ್ಟೇ. ನನ್ನ ಕೋಪ ಗೊತ್ತಲ್ಲ.ಎಂದು ಬೆದರಿಸುವ ಅಪ್ಪ. ಅಮ್ಮ ಮಗ ನೀನು ಚೆನ್ನಾಗಿ ಓದು ಆಯಿತಾ ಎನ್ನುವ ಬುದ್ಧಿ ಮಾತು.ಒಂದು ಕೋಪದ ಆಟಾಟೋಪ ಇನ್ನೊಂದು ಶಾಂತಿಯ ಗಣಿ. ಇವೆರಡರ ಮಧ್ಯದಲ್ಲಿ ಒಂದು ಜೀವ ತೊಳಲಾಡುತ್ತಿರುತ್ತದೆ. ಆಗ ಮಗು ಓದುವುದನ್ನು ಬಿಟ್ಟು ಅನುತ್ತೀರ್ಣನಾದರೆ ಹೇಗೆಂದು ಯೋಚಿಸುತ್ತ ಕೂರುತ್ತದೆ.

ಹಾಗಾದರೆ ನಾನು ಬದುಕಿದರೆ ಅದೂ ಅನುತ್ತೀರ್ಣನಾಗಿ ನಮ್ಮಪ್ಪ ಸಾಯಿಸಿ ಬಿಡುತ್ತಾನೆ ಎನ್ನುವ ಭಯ ಕಾಡುತ್ತ ಮಗು ಆತ್ಮ ಹತ್ಯೆಗೆ ಯತ್ನಿಸುತ್ತದೆ. ಇನ್ನು ಪಾಲಕರಾದ ನಾವು ಮಕ್ಕಳ ಮೇಲೆ ಪ್ರಭಾವ ಬೀರುತ್ತೇವೆ. ನಮ್ಮ ನಡೆ ನುಡಿ, ಸಂಸ್ಕ್ರತಿ, ಇವೆಲ್ಲವನ್ನೂ ಮಗು ಗಮನಿಸಿ ಅದರಂತೆ ತಾನು ಮುನ್ನಡೆಯಲು ಸಿದ್ದವಾಗಿರುತ್ತದೆ.ನಮ್ಮ ಮಕ್ಕಳ ಎದುರಿನಲ್ಲಿ ಕೆಟ್ಟ ಅಭ್ಯಾಸಗಳನ್ನು ಮಾಡುವುದನ್ನು ಮುಂದುವರಿಸಿದರೆ, ಮಗುವಿನ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ.

ನಮ್ಮಪ್ಪ ಅಮ್ಮನೇ ಹೀಗೆ, ನಾನು ಹೇಗಿದ್ದರೆ ಏನು? ಎನ್ನುವ ಮನೋಭಾವ ಬೆಳೆಯುತ್ತದೆ. ಕಾಲಾಂತರದಲ್ಲಿ ಮಗು ಕೂಡ ಅದೇ ಮಾರ್ಗದಲ್ಲಿ ಮುನ್ನಡೆಯುತ್ತದೆ. ಮಕ್ಕಳಲ್ಲಿ ನಾವು ಆತ್ಮ ವಿಶ್ವಾಸ ತುಂಬುವ ಪ್ರಯತ್ನ ಮಾಡಬೇಕೆ ವಿನಃ ಆತ್ಮ ಹತ್ಯೆ ಮಾಡಿಕೊಡುವ ಹಂತಕ್ಕೆ ತಲುಪಬಾರದು. ಮಕ್ಕಳಿಗೆ ಎಸ್ ಎಸ್ ಎಲ್ ಸಿ ಎನ್ನುವುದು ಕೇವಲ ಒಂದು ಹಂತ. ಅದರಲ್ಲಿ ಮುಗ್ಗರಿಸಿದರೆ ಜೀವನ ಹಾಳಾಗುತ್ತದೆ ಎಂದಲ್ಲ.ಮಕ್ಕಳಿಗೆ ಸಾಹಸಿಗಳು, ಸಾಧಕರ ಕಥೆಗಳನ್ನು ಹೇಳುವುದಕ್ಕಿಂತ,ಸೋತು ಗೆದ್ದವರ ಕಥೆಗಳನ್ನು ಹೇಳಿ.

ಅವರಿಗೆ ಆತ್ಮ ವಿಶ್ವಾಸ ಬೆಳೆಯುತ್ತದೆ. ಮಕ್ಕಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ,ಆದರೆ ಜೀವನ ಎನ್ನುವ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಹೇಗೆ ಎಂದು ತಿಳಿಸಿ ಕೊಡಿ. ನಮ್ಮ ಮಕ್ಕಳನ್ನು ಮತ್ತೊಬ್ಬ ಮಕ್ಕಳ ಎದುರಿಗೆ ನಿಂತು ಹೋಲಿಸಬೇಡಿ. ನಮ್ಮ ಮಕ್ಕಳ ಸಾಮರ್ಥ್ಯ ಏನು ಎಂಬುದು ನಮಗೆ ಗೊತ್ತಿರುತ್ತದೆ. ಅದನ್ನು ಇನ್ನೊಬ್ಬ ಮಗುವಿನ ಜೊತೆಗೆ ಹೋಲಿಸಿದರೆ ನಮ್ಮ ಮಕ್ಕಳು ಆತ್ಮ ವಿಶ್ವಾಸ ಕಳೆದುಕೊಂಡು ಆತ್ಮ ಹತ್ಯೆಯ ದಾರಿಹಿಡಿಯುತ್ತವೆ.ಮಕ್ಕಳಿಗೆ ಮನೋಬಲವನ್ನು ತುಂಬಬೇಕು.

ನಾವಿದ್ದೇವೆ ಮಕ್ಕಳೇ ಅನಾಹುತ ಮಾಡಿಕೊಳ್ಳಬೇಡಿ.ಜೀವನ ಎಂದರೆ ಕೇವಲ ಪರೀಕ್ಷೆಯಲ್ಲ. ಅದೊಂದು ಮುಂದಿನ ತರಗತಿಗೆ ಭಡ್ತಿ ಅಷ್ಟೇ.ಎಂದು ತಿಳಿಸಿದರೆ ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಿ ಅದೊಂದು ಸಾಮಾನ್ಯ ಪ್ರಕ್ರಿಯೆ ಎಂದು ಸುಲಭವಾಗಿ ತೆಗೆದುಕೊಳ್ಳುತ್ತಾರೆ. ನಾವೇ ನಮ್ಮ ಮಕ್ಕಳಿಗೆ ಪರೀಕ್ಷೆ ಅದೊಂದು ಭಯಾನಕ ಚಿತ್ರ ಎನ್ನುವಂತೆ ಕಲ್ಪಿಸಿದರೆ,ಮಗು ಮಾನಸಿಕವಾಗಿ ಸೋತು ಹೋಗುತ್ತದೆ.

ಆತ್ಮ ಸ್ಥೈರ್ಯ ಕಳೆದುಕೊಂಡು ಮಗು ಆತ್ಮ ಹತ್ಯೆಯ ದಾರಿ ಹಿಡಿಯುತ್ತದೆ. ಮಗುವಿನಲ್ಲಿ ಇದೊಂದು ಚಿಕ್ಕ ಪರೀಕ್ಷೆ ,ಇದರಲ್ಲಿ ನೀನು ಅನುತ್ತೀರ್ಣನಾಗಿದ್ದೀಯಾ? ಮುಂದೆ ಜೀವನ ಎನ್ನುವ ಪರೀಕ್ಷೆಯಲ್ಲಿ ಉತ್ತೀರ್ಣನಾಗು. ನಿನ್ನ ಜೀವನ ಹಸನಾಗುತ್ತದೆ.ಎಂದು ಆತ್ಮ ವಿಶ್ವಾಸ ತೋರಿಸಿದರೆ ಮಗು ನಿಜವಾಗಿಯೂ ತನ್ನ ಎಲ್ಲಾ ಪರೀಕ್ಷೆಗಳಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣನಾಗಿ ತನ್ನನ್ನು ತಾನು ಆ ಕೆಟ್ಟ ಆಲೋಚನೆಯಿಂದ ಹೊರಬರುತ್ತದೆ. ಪಾಲಕರಾದ ನಾವುಗಳು ಕೂಡ ಆತ್ಮ ವಿಶ್ವಾಸ ಹೊಂದಿರಬೇಕು. ನಮ್ಮ ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ.

ಮಗನೆ/ಳೇ ನೀನು ಪರೀಕ್ಷೆಯಲ್ಲಿ ಉತ್ತೀರ್ಣನಾ/ಳಾಗುತ್ತಿಯ ಎನ್ನುವ ಧನಾತ್ಮಕ ಚಿಂತನೆ ಮಾಡಬೇಕು ‌ಮಕ್ಕಳನ್ನು ಧನಾತ್ಮಕ ಚಿಂತನೆ ಮಾಡಲು ತಿಳಿಸಬೇಕು. ಯಾವತ್ತು ಋಣಾತ್ಮಕ ಚಿಂತನೆಯಲ್ಲಿ ನಾವಿದ್ದರೆ ನಮ್ಮ ಮಕ್ಕಳು ಕೂಡ ಋಣಾತ್ಮಕ ಚಿಂತನೆಯನ್ನು ಮಾಡಿ ಆತ್ಮ ಹತ್ಯೆ ಮಾಡಿಕೊಳ್ಳುತ್ತವೆ.ಅದಕ್ಕೆ ಜೀವನ ಕೊನೆಗೊಳ್ಳುವುದು,ಆತ್ಮ ಹತ್ಯೆಯಿಂದಾಗಿದ್ದರೆ ಯಾರೂ ಈ ಪ್ರಪಂಚದಲ್ಲಿ ಬದುಕಿರುತ್ತಿರಲಿಲ್ಲ.ಆತ್ಮ ಹತ್ಯೆಗಿಂತ ಜೀವನ ದೊಡ್ಡದು.


ಶ್ರೀ ಇಂಗಳಗಿ ದಾವಲಮಲೀಕ
ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group