ಮೂಡಲಗಿ: ಗಂಡ-ಹೆಂಡತಿಯ ನಡುವೆ ಭಿನ್ನಾಭಿಪ್ರಾಯಗಳು ಉಂಟಾದ ಹಿನ್ನೆಲೆ ತವರು ಮನೆ ಸೇರಿ ಜೀವನಾಂಶ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದ ಎರಡು ಜೋಡಿಗಳು ಶನಿವಾರ ಮೂಡಲಗಿಯ ದಿವಾಣಿ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ನಡೆದ ಮೆಗಾ ಲೋಕ ಅದಾಲತ್‍ನಲ್ಲಿ ಮತ್ತೆ ಒಂದಾಗಿರುವ ಘಟನೆ ನಡೆದಿದೆ.
ಪಟ್ಟಣದಲ್ಲಿ ಶನಿವಾರ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಲೋಕ ಅದಾಲತ್‍ನಲ್ಲಿ ಪತ್ನಿ ಬಸವ್ವ ಹೆಗಡೆ ತನ್ನ ಪತಿ ವಿಠ್ಠಲ ಹೆಗಡೆ ಮೇಲೆ ಜೀವನಾಂಶ ನೀಡಬೇಕೆಂದು ಪ್ರಕರಣ ದಾಖಲಿಸಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು. ಮತ್ತು ಪತ್ನಿ ಸ್ನೇಹಾ ಯಾದವ್ ತನ್ನ ಪತಿ ಮೇಲೆ ಮಹಿಳೆಯರ ಮೇಲೆ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಆದರೆ ನ್ಯಾಯಾಧೀಶರ ಸಲಹೆ ಹಾಗೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಗಂಡ-ಹೆಂಡತಿ ಮತ್ತೆ ಒಂದಾಗಿ ಬಾಳುತ್ತೇವೆ ಎಂದು ನಿರ್ಧರಿಸಿ ನ್ಯಾಯಾಧೀಶೆ ಜ್ಯೋತಿ ಪಾಟೀಲ ಅವರ ಸಮ್ಮಖದಲ್ಲಿ ಮತ್ತೆ ಒಟ್ಟಿಗೆ ಸಂಸಾರ ಮಾಡುವ ಸಂಕಲ್ಪದೊಂದಿಗೆ ಹಾರ ಬದಲಿಸಿಕೊಂಡರು.
ನ್ಯಾಯಾಧೀಶೆ ಜ್ಯೋತಿ ಪಾಟೀಲ ಮಾತನಾಡಿ, 32 ಚೆಕ್ ಪ್ರಕರಣಗಳಲ್ಲಿ 31 ಪ್ರಕರಣಗಳು ಇತ್ಯರ್ಥಗೊಂಡು ಸುಮಾರು 49ಲಕ್ಷ ಹಣವನ್ನು ರಿಕವರಿ ಮಾಡಿಕೊಡಲಾಗಿದೆ. ಜಮೀನು ವಿವಾದ 30 ಪ್ರಕರಣಗಳಲ್ಲಿ 29 ಪ್ರಕರಣಗಳು ಇತ್ಯರ್ಥಗೊಂಡಿವೆ ಇನ್ನು ಕ್ರಿಮಿನಲ್ 1194 ಪ್ರಕರಣಗಳಲ್ಲಿ 1190 ಪ್ರಕರಣಗಳು ಇತ್ಯರ್ಥಗೊಂಡು ಸುಮಾರು 1 ಲಕ್ಷ ದಂಡವಿಧಿಸಲಾಗಿದೆ. ಕಂದಾಯ ಇಲಾಖೆಯ ಮತ್ತು ಇತರರ ತೆರಿಗೆಗಳಗೆ(ಪಿಎಲ್‍ಟಿ) ಸಂಬಂಧಪಟ್ಟಂತೆ ಸುಮಾರು 36ಕೋಟಿ ಸಂದಾಯವಾಗಿದೆ. ಜನನ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ದಾಖಲಾತಿ 104ಪ್ರಕರಣಗಳಲ್ಲಿ 103 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಶನಿವಾರ ನಡೆದ ಲೋಕ್ ಅದಾಲತ್‍ದಲ್ಲಿ 1377 ಪ್ರಕರಣಗಳಿಗೆ ಸಂಬಂಧಿಸಿದಂತೆ 1369 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಹೇಳಿದರು.
ಲೋಕ ಅದಾಲತನಲ್ಲಿ ಸಾರ್ವಜನಿಕರು ಪ್ರಕರಣಗಳನ್ನು ಇತ್ಯರ್ಥ ಪಡಿಸುಕೊಳ್ಳುವದರಿಂದ ಸಮಯ ಹಾಗೂ ತಮ್ಮ ಖರ್ಚು ವೆಚ್ಚ ಉಳಿಯುವದರೊಂದಿಗೆ ಸಮಾಜದಲ್ಲಿ ಸಂಬಂಧಗಳು ಗಟ್ಟಿಗೊಳ್ಳುತ್ತವೆ ಎಂದರು.