ಸಿಂದಗಿ -ಶಿಕ್ಷಣ ನಮ್ಮ ಬದುಕಿಗೆ ಎಷ್ಟು ಮುಖ್ಯವೋ ಸಂಸ್ಕಾರವೂ ಕೂಡ ಅಷ್ಟೇ ಮುಖ್ಯವಾದದ್ದು, ಹಾಗಾಗಿ ಶಾಲೆ ಮತ್ತು ಕುಟುಂಬದಲ್ಲಿ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ರೂಪಿಸುವುದು ಅತ್ಯಂತ ಮಹತ್ವದ ಕೆಲಸ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಂಥ ಸ್ವಾಭಿಮಾನದ ವೀರರು ಪ್ರತಿಯೊಂದು ಮನೆಯಲ್ಲಿ ಜನಿಸುವಂತಾಗಬೇಕು ಎಂದು ಸಿದ್ಧರಾಮನಂದಪುರಿ ಸ್ವಾಮೀಜಿ ಹೇಳಿದರು.
ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಸಿಂದಗಿ ತಾಲೂಕಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ವತಿಯಿಂದ ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಯಂತ್ಯುತ್ಸವ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎನ್ ಎಚ್ ನಾಗೂರ ರವರು, ಪ್ರತಿಯೊಂದು ತಾಲೂಕಿನಲ್ಲಿ ಇಂತಹ ಕಾರ್ಯಕ್ರಮಗಳು ಜರುಗುವಂತಾಗಬೇಕು. ಇದರಿಂದ ಮಕ್ಕಳಿಗೆ ಇನ್ನಷ್ಟು ಪ್ರೇರಣೆ ನೀಡಿದಂತಾಗುತ್ತದೆ ಮಾತ್ರವಲ್ಲ; ಅವರ ಪ್ರತಿಭೆಗೆ ನಾವು ಗೌರವಿಸಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎ ಆರ್ ಹೆಗ್ಗಣದೊಡ್ಡಿ ರವರು ಮಾತನಾಡಿ, ಇದೊಂದು ಅಭೂತಪೂರ್ವ ಕಾರ್ಯಕ್ರಮ, ಇದೊಂದು ಮಕ್ಕಳ ಪ್ರತಿಭೆಗೆ ನೀಡಿದ ವಿಶೇಷ ಗೌರವ ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಶಿಕ್ಷಕರಾದ ಬಿ ಟಿ ಗೌಡರ ರವರು ರಾಯಣ್ಣನ ಶೌರ್ಯ ಅವನ ಸ್ವಾಭಿಮಾನದ ಬದುಕು ನಮಗೆಲ್ಲ ಆದರ್ಶಮಯ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಜಕ್ಕಣ್ಣ ಮಾಸ್ತರ ಮೀಸಿ ರವರು ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ಗೌರವಿಸುವ ಇಂತಹ ಕಾರ್ಯಕ್ರಮಗಳು ಬರುವ ದಿನಮಾನಗಳಲ್ಲಿ ಇನ್ನಷ್ಟು ಮೂಡಿ ಬರಲಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷರಾದ ರಾಯಪ್ಪ ಇವಣಗಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ರಾಯಣ್ಣ ದೇಶಕ್ಕಾಗಿ ಹೋರಾಡಿದ ಅಪ್ರತಿಮ ವೀರ ಎಂದರು. ಮಕ್ಕಳ ಭವಿಷ್ಯದ ಬದುಕು ಇನ್ನಷ್ಟು ಉಜ್ವಲವಾಗಿ ಬೆಳಗಲಿ ಎಂದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಜಯಪುರ ಜಿಲ್ಲಾ ವಿಭಾಗಿಯ ನಿಯಂತ್ರಣಾಧಿಕಾರಿಯಾದ ನಾರಾಯಣಪ್ಪ ಕುರುಬರ, ಕೆ ಪಿ ಟಿ ಸಿ ಎಲ್ ನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆದ ಡಿ ಎಮ್ ಮೂಲಿಮನಿ, ಪಶುವೈದ್ಯಾಧಿಕಾರಿಗಳಾದ ಎಂ ಎಂ ತಡಲಗಿ, ವೈದ್ಯಾಧಿಕಾರಿಗಳಾದ ಬಿ ಎಸ್ ಅಳ್ಳಿಚಂಡಿ, ಪೊಲೀಸ್ ಉಪನಿರೀಕ್ಷಕರಾದ ಬಿ ವೈ ಗೌಡರ, ಇಂಡಿ ತಾಲೂಕಿನ ಶಿಕ್ಷಕರ ಸಂಘದ ಅಧ್ಯಕ್ಷರಾದ ವೈ ಟಿ ಪಾಟೀಲ, ವಿಜಯಪುರ ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವಾನಂದ ಹಿರೆಕುರುಬರ, ಶಿಕ್ಷಕರಾದ ಎಸ ಎಲ್ ಮಾನೆ, ಎ ಎಲ್ ಗಂಗೂರ, ಬಿ ಎಸ್ ಶೇಖಣ್ಣವರ, ಎಸ್ ವೈ ಬೀರಗೊಂಡ, ಎಂ ವೈ ಪೂಜಾರಿ, ಎ ಆರ್ ಮಾಶಾಳ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಂಘದ ಸರ್ವ ಪದಾಧಿಕಾರಿಗಳು ಹಾಗೂ ನೌಕರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 64 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ನಿವೃತ್ತ ನೌಕಕರು ಹಾಗೂ ಹೊಸದಾಗಿ ನೇಮಕಗೊಂಡ ನೌಕರರಿಗೆ ಸನ್ಮಾನಿಸಲಾಯಿತು.
ಶ್ರೀಮತಿ ಗೀತಾ ಅಥಣಿ ಪ್ರಾರ್ಥಿಸಿದರು. ಎಸ್ ಎಸ್ ಸಾತಿಹಾಳ ಸ್ವಾಗತಿಸಿದರು. ಆರ್ ಕೆ ಪಾಟೀಲ ಸನ್ಮಾನಿಸಿದರು. ಪಿ ಎಸ್ ಅಗ್ನಿ ವಂದಿಸಿದರು.