ವೀರ ಗಣಾಚಾರಿ ಮಡಿವಾಳ ಮಾಚಿದೇವರು
ಲೋಕದಂತೆ ಬಾರರು ಲೋಕದಂತೆ ಇರರು ಲೋಕದಂತೆ ಹೋಹರು ನೋಡಯ್ಯ ಪುಣ್ಯದಂತೆ ಬಪ್ಪರು ಜ್ಞಾನದಂತೆ ಇಪ್ಪರು ಮುಕ್ತಿಯಂತೆ ಹೋಹರು ನೋಡಯ್ಯ ನಿಮ್ಮ ಶರಣರು ಉರಿಲಿಂಗ ದೇವ ಉಪಮಾತೀತರಾಗಿ ಉಪಮಿಸಬಾರದು
ಪ್ರಸ್ತುತ ವಚನದಲ್ಲಿ ಶರಣ ಉರಿಲಿಂಗ ದೇವರು ಶರಣರು ಹೇಗೆ ಈ ಜಗತ್ತಿಗೆ ಬರುತ್ತಾರೆಂದು ಮಾರ್ಮಿಕವಾಗಿ ಹೇಳಿದ್ದಾರೆ. ಲೋಕ ತೊಂದರೆಯಿಂದ ನಲುಗುವಾಗ ಜಗದ ರಕ್ಷಣೆಗಾಗಿ ಸರ್ವಜೀವಿಗಳ ಲೇಸನ್ನು ಬಯಸಲು ಶರಣರು ಕಾಯಧಾರಿಗಳಾಗಿ ಈ ಭೂಮಿಗೆ ಆಗಮಿಸುತ್ತಾರೆ ಎಂಬುದು ಅವರ ಆಶಯವಾಗಿದೆ. ಅಂತೆಯೇ ಅಪ್ಪ ಬಸವ ತಂದೆ ಕಟ್ಟಿದ ಕಲ್ಯಾಣದ ಅನುಭವ ಮಂಟಪಕ್ಕೆ ದೇಶವಿದೇಶದ ಸಾವಿರಾರು ಅನುಭಾವಿಗಳು ಬಂದರು. ಹಾಗೆಯೇ ವೀರ ಗಣಾಚಾರಿ ಮಡಿವಾಳ ಮಾಚಿ ತಂದೆಯವರು ಓರ್ವ ದಿಟ್ಟ ಶರಣರಾಗಿ ಆಗಮಿಸುತ್ತಾರೆ.
ಮಾಚಿದೇವರ ಜೀವನ-
ಇಂದಿನ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವರ ಹಿಪ್ಪರಗಿ ಎಂಬ ಗ್ರಾಮದಲ್ಲಿ ಜನಿಸುತ್ತಾರೆ. ಇವರ ತಂದೆ ಪರ್ವತಯ್ಯ ಮತ್ತು ತಾಯಿ ಸುಜ್ಞಾನಾಂಬೆ. ಈಗ ಉಪಲಬ್ಧವಿರುವ ಇತಿಹಾಸದ ದಾಖಲೆಗಳ ಪ್ರಕಾರ ಇವರ ಮನೆತನ ಬಟ್ಟೆ ತೊಳೆಯುವ ಮಡಿವಾಳ ಕಾಯಕವನ್ನು ಮಾಡುತ್ತಿತ್ತು. ಎಂಬುದು ಕಂಡುಬರುತ್ತದೆ. ಆದರೆ ಮಾಚಿದೇವರ ಪಾಲಕರು ತಮ್ಮ ಮಗನಿಗೆ ಆ ಕಾಲಘಟ್ಟದಲ್ಲಿ ಶಿಕ್ಷಣವನ್ನು ಕೊಡಿಸಿರುವುದು ವಿಶೇಷ. ಅದರಲ್ಲೂ ಔಪಚಾರಿಕ ಶಿಕ್ಷಣದ ಜೊತೆಗೆ ಯುದ್ಧ ಕಲೆಗಳನ್ನು ಹಾಗೂ ಶಸ್ತ್ರ ವಿದ್ಯೆಯನ್ನೂ ಕೊಡಿಸಿರುವುದು ಅತ್ಯಂತ ಖುಷಿಯ ಸಂಗತಿ. ಏಕೆಂದರೆ ಮಡಿವಾಳ ವೃತ್ತಿ ಮಾಡುವವರನ್ನು ಶೂದ್ರರೆಂದೇ ಭಾವಿಸಿದ ಆ ಕಾಲಘಟ್ಟದಲ್ಲಿ ಮಗನಿಗೆ ಎಲ್ಲ ರೀತಿಯ ಶಿಕ್ಷಣ ದೊರಕಿಸಿರುವುದು ತಂದೆ ತಾಯಿಗಳ ಮಹತ್ವದ ಪರಿಶ್ರಮ ಎಂದರೆ ತಪ್ಪಾಗಲಾರದು.
ಬೆಳೆದು ದೊಡ್ಡವನಾದಂತೆ ಮಾಚಿದೇವರ ಮನಸ್ಸು ಹಲವಾರು ಪ್ರಶ್ನೆಗಳ ಉಗಮಕ್ಕೆ ಕಾರಣವಾಯಿತು. ಈ ಲೋಕ ಏಕೆ ಇಷ್ಟು ಮೌಢ್ಯದಿಂದ ಕೂಡಿದೆ ದೇವರ ವಿಷಯದಲ್ಲಿ ಏಕೆ ಇಷ್ಟು ಭಯ ಹಾಗೂ ಈ ದೇಹ ಬಂದ ಪರಿ ಯಾವುದು ನಾನು ಎಲ್ಲಿಂದ ಬಂದೆ ಮತ್ತು ಮುಂದೆ ಹೋಗುವ ಠಾವಾವುದು ಎಂಬಿತ್ಯಾದಿ ಯೋಚನೆಗಳು ಮನದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿದವು. ಆ ಸಮಯಕ್ಕೆ ಕಲ್ಯಾಣದಲ್ಲಿ ಅಪ್ಪ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಆನುಭಾವಿಕ ವಚನಗಳು ಆ ಭಾಗದಲ್ಲಿ ಪ್ರಸಾವಾಗತೊಡಗಿದ್ದವು. ಆಗ ಮಡಿವಾಳ ಮಾಚಿದೇವರ ಮನಸಿಗೆ ಅನ್ನಿಸಿತು, ನನ್ನ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ ಆ ಬಸವ ತಂದೆಯ ಅನುಭವ ಮಂಟಪದಲ್ಲಿ ಎಂಬ ಸತ್ಯ ಮಾಚಿ ತಂದೆಯವರಿಗೆ ಗಟ್ಟಿಯಾಗಿ ಹೊಳೆಯಿತು. ಅಂತೆಯೇ ಒಂದುದಿನ ಗಟ್ಟಿ ನಿರ್ಧಾರ ಮಾಡಿ ಕಲ್ಯಾಣಕ್ಕೆ ಹೊರಟೇ ನಿಂತರು. ಆ ಸಮಯದಲ್ಲಿ ಭೀಮಾನದಿ ತುಂಬಿ ಹರಿಯುತ್ತಿತ್ತು. ಆ ನದಿಯನ್ನು ಈಜಿದಾಟಿ ಮಾಚಿದೇವರು ಬಸವಕಲ್ಯಾಣಕ್ಕೆ ಬರುತ್ತಾರೆ.
ಇಲ್ಲಿ ನನಗೊಂದು ಕುತೂಹಲ ಮತ್ತು ಸಂದೇಹ ಅಧ್ಯಯನಶೀಲರಾದ ತಮ್ಮೊಂದಿಗೆ ಈ ವಿಚಾರ ವ್ಯಕ್ತಪಡಿಸುತ್ತೇನೆ, ಅದೇನೆಂದರೆ 12ನೇ ಶತಮಾನದ ಆ ಕಾಲಘಟ್ಟದಲ್ಲಿ ಶೂದ್ರರಿಗೆ ಶಿಕ್ಷಣ ಮರೀಚಿಕೆಯಾಗಿತ್ತು. ಅತ್ಯಂತ ಕೆಟ್ಟ ಪರಿಸ್ಥಿತಿ ಜಾತೀಯತೆ, ಆಸ್ಪೃಶ್ಯತೆ ಸೇರಿದಂತೆ ಹಲವಾರು ತೊಂದರೆಗಳು ಇದ್ದರೂ ಮಾಚಿದೇವರು ಎಲ್ಲ ರೀತಿಯ ಶಸ್ತ್ರ ಮತ್ತು ಶಾಸ್ತ್ರ ಪರಿಣಿತಿಯನ್ನು ಅಂದರೆ ಸೈನಿಕ ಮತ್ತು ಔಪಚಾರಿಕ ಎರಡು ಶಿಕ್ಷಣವನ್ನು ಪಡೆದುಕೊಂಡಿದ್ದರು ಎಂದರೆ ಅವರು ಓರ್ವ ಮಾಂಡಲೀಕ ರಾಗಿದ್ದರು ಎಂಬ ಭಾವ ನನ್ನದು. ಬಹುಶಃ ಅವರು ಕಲ್ಯಾಣಕ್ಕೆ ಬಂದ ಮೇಲೆ ಶರಣರ ಬಟ್ಟೆ ತೊಳೆಯುವ ಕಾಯಕ ಆಯ್ಕೆ ಮಾಡಿಕೊಂಡಿರಬಹುದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಈ ಕುರಿತು ತಮ್ಮ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳಿರೆಂದು ಈ ಮೂಲಕ ಭಕ್ತಿಯಿಂದ ಭಿನ್ನವಿಸಿಕೊಳ್ಳುತ್ತೇನೆ. ಕಾರಣ ಬಸವ ತಂದೆ ಒಂದು ವಚನದಲ್ಲಿ “ಮಡಿವಾಳನೆಂಬೆನೆ ಮಾಚಯ್ಯನ”? ಎಂದು ಹೇಳಿದ್ದಾರೆ. ಏನೇ ಆಗಲಿ ಅವರು ಬಟ್ಟೆ ತೊಳೆಯುವ ಕಾಯಕ ಮಾಡಿರುವುದಂತೂ ನಿಜ ಸಂಗತಿ.ಅದೂ ಕೂಡಾ ಕಲ್ಯಾಣದ ಶರಣರ ಬಟ್ಟೆಗಳನ್ನು ಮಾತ್ರ ಶುಚಿಗೊಳಿಸುವ ಕಾಯಕ ಅವರದಾಗಿತ್ತು.
ತನ್ನೂರಿನಿಂದ ಭೋರ್ಗರೆದು ಹರಿಯುವ ನದಿಯನ್ನು ಈಜಿ ದಾಟಿ ಕಲ್ಯಾಣಕ್ಕೆ ಬಂದ ಮಾಚಯ್ಯನವರು ಅನುಭವ ಮಂಟಪಕ್ಕೆ ಬರುತ್ತಾರೆ. ಮುಂದೆ ಕಲ್ಯಾಣದ ಕ್ರಾಂತಿಯಾಗಿ ಉಳವಿಯವರೆಗೆ ವಚನಗಳ ರಕ್ಷಣೆಯ ಹೊಣೆಯನ್ನು ಸಮರ್ಥವಾಗಿ ನಿಭಾಯಿಸುವ ತನಕ ಅವರ ಬದುಕು ತುಂಬಾ ಸಾಹಸಮಯವಾಗಿದೆ.
ಮಾಚಿ ತಂದೆಯವರು ಅನುಭವ ಮಂಟಪದ ಸಕ್ರಿಯ ಶರಣಾಗಿದ್ದರು. ಕಲ್ಯಾಣದಲ್ಲಿ ಶರಣರ ಬಟ್ಟೆ ತೊಳೆಯುವುದು ಅವರ ಬಹುಮುಖ್ಯ ಕಾಯಕವಾಗಿತ್ತು. ಮಾಚಿದೇವರು ಬಟ್ಟೆ ತೊಳೆದುಕೊಂಡು ಬರುತ್ತಿದ್ದರೆಂದರೆ ಆ ಮಾರ್ಗದಲ್ಲಿ ಯಾರೂ ನಿಂತಿರುತ್ತಿರಲಿಲ್ಲ ಅಷ್ಟು ಭಯ ಭಕ್ತಿ ಮಾಚಿದೇವರನ್ನು ಕಂಡರೆ. ಹಾಗಾಗಿ ಅವರ ಗಂಟೆಯನಾದ ಎಲ್ಲೆಡೆ ಕೇಳುತ್ತಿತ್ತು.
ವೀರ ಘಂಟೆಯನಾದ ಕೇರಿ ಕೇರಿಗೆ ತಲುಪಿ ಸಾರಿ ಮಾಚಯ್ಯ ಬರುವನು! ಶರಣರಿಗೆ ಬೀರಿ ಕಾಯಕದ ಹೊತ್ತನ್ನು
ಎಂಬ ಈ ಜನಪದ ವಾಣಿ ಅವರ ಕಾಯಕ ನಿಷ್ಠೆಯನ್ನು ತೋರಿಸುತ್ತದೆ. ಕೇವಲ ಬಟ್ಟೆ ತೊಳೆಯುವ ಕಾಯಕ ಮಾತ್ರಮಾಡದೆ, ಅನುಭವ ಮಂಟಪದಲ್ಲಿ ಎಲ್ಲ ಶರಣರೊಡಗೂಡಿ ಅನುಭಾವದಲ್ಲಿ ಪಾಲ್ಗೊಳ್ಳುತ್ತಿದ್ದರು. ಅತ್ಯಂತ ನೇರನುಡಿ, ನ್ಯಾಯನಿಷ್ಠೆ ಅವರಲ್ಲಿತ್ತು. ಹಾಗಾಗಿ ತಮ್ಮದೇ ಆದ ಅನುಭಾವಿಕ ನೆಲೆಯಲ್ಲಿ ವಚನಗಳನ್ನು ರಚಿಸುತ್ತಾರೆ. ಅವರ ವಚನಗಳಲ್ಲಿ ಶಿವ ಯೋಗ, ಮೂಢನಂಬಿಕೆಯ ವಿರೋಧ, ಮಾನವ ಬದುಕಿನ ಗುರಿ, ಅರಿವು ಆಚಾರ ಅನುಭಾವ ಕಾಯಕ ಸೇರಿದಂತೆ ಹಲವಾರು ವಿಚಾರಧಾರೆಗಳನ್ನು ವ್ಯಕ್ತಪಡಿಸಿದ್ದಾರೆ.
ಕಲ್ಯಾಣದ ಕ್ರಾಂತಿಯ ಸಂದರ್ಭದಲ್ಲಿ ಮಾಚಿದೇವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಯಾವಾಗ ಬಸವ ತಂದೆ ಕಲ್ಯಾಣದಿಂದ ಕೂಡಲಸಂಗಮಕ್ಕೆ ಹೊರಟು ನಿಂತರೋ ಆ ಕ್ಷಣದಿಂದ ಮುಂದೆ ಸಂಪೂರ್ಣ ಕ್ರಾಂತಿಯ ಮುಂದಾಳತ್ವವನ್ನು ವಹಿಸಿಕೊಳ್ಳುತ್ತಾರೆ. ಬಸವ ತಂದೆಗೆ ಮಾತುಕೊಡುತ್ತಾರೆ ನನ್ನ ಪ್ರಾಣದ ಹಂಗುತೊರೆದು ವಚನಗಳನ್ನು ಉಳಿಸುತ್ತೇನೆ. ವಚನಗಳಿಗೆ ತೊಂದರೆ ಬಂದಾಗ ಖಡ್ಗ ಹಿಡಿದು ರಕ್ಷಿಸುತ್ತೇನೆ ಎಂದು ಗುರು ಬಸವಣ್ಣನವರಿಗೆ ಮಾಚಿ ತಂದೆಯವರು ಕಲ್ಯಾಣ ಬಿಡುವಾಗ ಹೇಳುತ್ತಾರೆ.
ಮಾಚಿ ತಂದೆಯವರಿಗೆ ಬಸವಣ್ಣನವರೆಂದರೆ ತುಂಬಾ ಅಭಿಮಾನ
“ಅಯ್ಯಾ ನಿಮ್ಮ ಧ್ಯಾನದಲ್ಲಿರಿಸಲೊಲ್ಲದೆ ಬಸವಣ್ಣನ ಧ್ಯಾನದಲ್ಲಿ ಇರಿಸಯ್ಯ ಎನ್ನನು” ಎಂಬ ಅವರ ಮಾತು ಆ ಪರವಸ್ತುವಿಗಿಂತಲೂ ಬಸವಣ್ಣನವರಿಗೇ ಹೆಚ್ಚು ಪ್ರಾಮುಖ್ಯತೆ ಕೊಟ್ಟಿರುವುದು ಕಂಡುಬರುತ್ತದೆ. ಅಂತೆಯೇ ಅಪ್ಪ ಬಸವಣ್ಣನವರು ಮಾಚಿದೇವರನ್ನು ಕುರಿತು
“ಎನ್ನ ತನು ಶುದ್ಧ ಮಾಡಿದಾತ ಮಡಿವಾಳಯ್ಯ ಎನ್ನ ಮನವ ನಿರ್ಮಲ ಮಾಡಿದಾಗ ಮಡಿವಾಳ ಎನ್ನ ಅಂತರಂಗವ ಬೆಳಗಿದಾತ ಮಡಿವಾಳ ಕೂಡಲಸಂಗಮದೇವ ಎನ್ನ ನಿಮಗೆ ಯೋಗ್ಯವ ಮಾಡಿದಾತ ಮಡಿವಾಳ”
ಎಂದು ತುಂಬಾ ಅಭಿಮಾನದಿಂದ ಹೇಳಿದ್ದಾರೆ.
ಹಾಗಾಗಿ ಬಸವತಂದೆಯ ಮೇಲಿನ ಆ ನಿಷ್ಠೆ ಮುಂದೆ ಕಲ್ಯಾಣ ಕ್ರಾಂತಿಯಾದಾಗ ವಚನಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅವರು ತೋರಿದ ಅಪ್ರತಿಮ ಸಾಹಸ ಇಂದಿಗೂ ಅದು ಐತಿಹಾಸಿಕ ದಾಖಲೆಯಾಗಿದೆ. ನಮಗೆಲ್ಲ ತಿಳಿದಂತೆ ಕಲ್ಯಾಣದಿಂದ ಉಳವಿಯವರೆಗೆ ಮಾಚಿ ತಂದೆಯವರು ಶರಣರ ದಂಡಿನ ಮುಂದಾಳತ್ವ ವಹಿಸಿಕೊಂಡು ವಚನಗಳನ್ನು ಉಳಿಸುವ ಬರದಲ್ಲಿ ಖಡ್ಗ ಹಿಡಿದು ಹೋರಾಡಿದ ಆ ರಕ್ತ ಕ್ರಾಂತಿ ಒಂದು ಅದ್ವಿತೀಯ ಕಾರ್ಯವಾಗಿದೆ. ಅವರು ನೇತೃತ್ವ ವಹಿಸಿಕೊಂಡಿದ್ದರೆಂಬುದಕ್ಕೆ ಈ ಕೆಳಗಿನ ಜನಪದ ಸಾಕ್ಷಿ
“ತುಂಡು ಜಂಗಮದಂಡು ದಂಡನಾಯಕ ಮಾಚ ಕಂಡ ಕಂಡಲ್ಲಿ ವೈರಿಗಳ! ಚೆಲ್ಲಿದರು
ಚಂಡ ಕಳಕೊಂಡ ಮರಿಅರಸ”
ಹಾಗೆಯೇ ಕಾದರವಳ್ಳಿಯಲ್ಲಿ ಗಣ ಘೋರವಾದ ಯುದ್ಧ ಜರುಗುತ್ತದೆ ಅದಕ್ಕಿಂತ ಮುಂಚೆ ಮುರಗೋಡದಲ್ಲಿ ಒಂದು ನಿರ್ಣಾಯಕ ಕಾಳಗವಾಗುತ್ತದೆ ಅದು ಕೂಡ
“ಕಾದರೊಳ್ಳಿಯ ಮುಂದೆ ಕಾದಿಹರು ಜಂಗಮರು ಖಾದಿ ಹೆಮ್ಮೆಟ್ಟಿ ಅರಿಗಳನ್ನು! ಮುರಗೋಡ ಹಾದಿಯಲ್ಲಿ ಮುರಿದ ಮಾಚಯ್ಯ” ಎಂಬ ಈ ಜನಪದದಿಂದ ಕಂಡುಬರುತ್ತದೆ. ಹೀಗೆ ಮಾಚಿ ತಂದೆಯವರು ವಚನಗಳನ್ನು ಉಳಿಸಲು ಉಳವಿಯವರೆಗೆ ಹೋಗಿ ಸಂರಕ್ಷಿಸುವ ಕಾರ್ಯವನ್ನು ಮಾಡಿರುವುದು ಇತಿಹಾಸ. ಹಾಗಾಗಿಯೇ
“ಬೆನ್ನ ಹತ್ತಿದ ವೈರಿ ತಣ್ಣಗಾಯಿತು ಚದುರಿ ಮಣ್ಣುಗೂಡಿಸಿದ ಮಾಚಯ್ಯ! ಕೈಯೆತ್ತಿ ಚಿನ್ನ ಉಳಿಸಿದನು ಲಿಂಗಿಗಳ”
ಎಂದು ಜನ ಅಭಿಮಾನದಿಂದ ಹಾಡಿರುವರು. ಆ ನಿಟ್ಟಿನಲ್ಲಿ ಅತ್ಯಂತ ಕ್ಲಿಷ್ಟಕರವಾದ ಸಂದರ್ಭದಲ್ಲಿ ಉಳವಿಯ ಘೋರಾರಣ್ಯದಲ್ಲಿ ಉಳಿದು ಶರಣರು ಮತ್ತು ವಚನಗಳನ್ನು ಸಂರಕ್ಷಿಸಿ ಪುನಃ ಮತ್ತೆ ಕಲ್ಯಾಣದತ್ತ ಬರಲಾರಂಭಿಸುತ್ತಾರೆ. ಆಗ ಮಾರ್ಗ ಮಧ್ಯದಲ್ಲಿ ಬಿಜ್ಜಳನ ಸೈನಿಕರು ಮಾಚಿ ತಂದೆಯವರಿಗೆ ಹಿಂದುಗಡೆಯಿಂದ ಬಂದು ಚೂರಿ ಹಾಕುತ್ತಾರೆ. ಅಷ್ಟಾದರೂ ಧೃತಿಗೆಡದ ಮಾಚಿದೇವರು ಎಲ್ಲ ಶರಣರು ಅವರವರ ಸ್ವಸ್ಥಾನಂಗಳಲ್ಲಿ ಲಿಂಗೈಕ್ಯ ರಾಗಿರುವ ವಿಷಯ ತಿಳಿಯುತ್ತಾರೆ. ಆನಂತರ ಮಾಚಿ ತಂದೆಯವರು ರಾಮದುರ್ಗ ತಾಲೂಕಿನ ಗೊಡಚಿಯಲ್ಲಿ ಲಿಂಗೈಕ್ಯರಾಗುತ್ತಾರೆ. ಇಲ್ಲಿಯೂ ಕೂಡ ಒಂದು ಗೊಂದಲವಿದೆ. ಸಮದತ್ತಿ ತಾಲೂಕಿನ ಕಾರಿ ಮನಿ ಎಂಬ ಗ್ರಾಮದಲ್ಲಿ ಲಿಂಗೈಕ್ಯರಾಗಿದ್ದಾರೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟರೆ ಇನ್ನೂ ಕೆಲವರು ಗೊಡಚಿಯಲ್ಲಿ ಲಿಂಗೈಕ್ಯರಾಗಿರುವರೆಂದು ಹೇಳುತ್ತಾರೆ. ಏನೇ ಆಗಲಿ ಓರ್ವ ಶ್ರೇಷ್ಠ ಶರಣರಾದ ವೀರ ಗಣಾಚಾರಿ ಮಡಿವಾಳ ಮಾಚಿ ತಂದೆಯವರು ಸಾಮಾನ್ಯರಂತೆ ಜನಿಸಿ ಬಂದರೂ ಅಸಾಮಾನ್ಯ ವ್ಯಕ್ತಿತ್ವದೊಂದಿಗೆ ನ್ಯಾಯ ನಿಷ್ಠುರಿ ವೀರರಾಗಿ ಮಹಾಲಿಂಗಾನುಭಾವಿಗಳಾಗಿ ಬದುಕಿ ಸಾಹಸಮಯವಾಗಿ ಜೀವಿಸಿ ಲಿಂಗೈಕ್ಯ ರಾಗಿರುವುದು ನಮಗೆ ಕಂಡುಬರುತ್ತದೆ. ಅವರ ಒಂದು ವಚನವನ್ನು ಈ ಮುಂದಿನಂತೆ ಅರಿಯುವ ಪ್ರಯತ್ನ ಮಾಡೋಣ
ಅಯ್ಯಾ ತನ್ನ ತಾನರಿಯದೆ ತನ್ನ ಇಷ್ಟಲಿಂಗದ ಹೊಲಬು ತಿಳಿಯದೆ ಕಾಮವ ತೊರೆಯದೆ ಹೇಮವ ಜರಿಯದೆ ತಾವು ಹರ ಗುರು ಚರ ಷಟ್ ಸ್ಥಲದ ವಿರಕ್ತರೆಂಬುದ ಚೆನ್ನಾಗಿ ನುಡಿದುಕೊಂಡು ಕಾವಿ ಕಾಷಾಯಾಂಬರವ ಹೊದ್ದು ಕೂಳಿಗಾಗಿ ನಾನಾ ದೇಶವ ತಿರುಗಿ ಕಾಂಚನಕ್ಕಾಗಿ ಕೈಯೊಡ್ಡುವ ಪಂಚ ಮಹಾಪಾತಕರನ್ನು ಕಾಗೆಯ ಗರ್ಭದಲ್ಲಿ ಹುಟ್ಟಿಸಿ,ಕಾ ಕಾ ಎಂದು ಕೂಗಿಸುತ್ತಿರ್ಪನು ಕಾಣಾ ಕಲಿದೇವರದೇವಾ
ಪ್ರಸ್ತುತ ವಚನದಲ್ಲಿ ಮಾಚಿದೇವರು ನಾವು ಯಾರನ್ನು ಗುರುಗಳು ಸ್ವಾಮಿಗಳು ವಿರಕ್ತರು ಎಂದು ತಿಳಿದಿರುವೆವೋ ಅವರನ್ನು ಕುರಿತು ಮಾರ್ಮಿಕವಾಗಿ ಹೇಳಿದ್ದಾರೆ.
ಯಾರು ತನ್ನ ತಾ ತಿಳಿದಿಲ್ಲವೋ ಅಂದರೆ ತನ್ನ ಅಂತರಂಗದ ಸಾಧನೆ ಮಾಡದೆ ತನ್ನ ತಾ ತಿಳಿಯುವುದು ಅಸಾಧ್ಯ ಈ ನಿಟ್ಟಿನಲ್ಲಿ ಲಿಂಗದ ನಿಜದರಿವು ಸಾಧಿಸದೆ, ಕಾಮವನ್ನು ತೊರೆಯದೆ ಹೇಮದ ಆಸೆಯನ್ನು ಬಿಡದೆ ನೀವು ಹೇಗೆ ಹರ ಗುರು ಚರಮೂರ್ತಿಗಳಾದಿರೆಂದು ಮಾಚಿದೇವರು ಖಾರವಾಗಿ ಪ್ರಶ್ನಿಸುತ್ತಾರೆ.
ಕಾವಿಯನ್ನು ಹದ್ದು ಹಣಕ್ಕಾಗಿ ಕೈಚಾಚುವ. ಹಣಕ್ಕಾಗಿ ತತ್ವವನ್ನೇ ಮರೆಮಾಚುವ, ಅನ್ನಕ್ಕಾಗಿ ಕೈಚಾಚುವ ನೀವು ಗುರುಗಳು ಹೇಗಾದಿರಿ? ಲಿಂಗ ಪಥವನರಿಯದೆ ಡಂಬಾಚಾರವನ್ನು ಬಿಡದೆ ನಾವೇ ವಿರಕ್ತರು ಎಂದು ಬೀಗುವ ನೀವು ಎಂಥ ವಿರಕ್ತರು ಎಂದು ವಿರಕ್ತರನ್ನು ಎಚ್ಚರಿಸುತ್ತಾರೆ. ಅಮುಗೆ ರಾಯಮ್ಮ ಕೂಡ ಒಂದು ವಚನದಲ್ಲಿ “ಕೇವಲ ನಾಮವ ಹೊತ್ತುಕೊಂಡು ತಿರುಗುವ ಗಾವಿಲರ ಮುಖವ ನೋಡಲಾಗದು” ಎಂದು ಹೇಳಿದ್ದಾಳೆ.
ಶರಣರು ಕೇವಲ ಬಹಿರಂಗದ ಕ್ರಿಯೆಗಳಿಗೆ ಮಹತ್ವ ಕೊಡದೆ ಅಂತರಂಗ ಮತ್ತು ಬಹಿರಂಗದ ಶುದ್ದಿಗೆ ಪ್ರಾಮುಖ್ಯತೆ ಕೊಟ್ಟವರು ಹಾಗಾಗಿ ಮಡಿವಾಳ ಮಾಚಿ ತಂದೆಯವರು ಈ ವಚನದಲ್ಲಿ ಯಾರು ಈ ಧರ್ಮವನ್ನು ಪ್ರಸಾರ ಪ್ರಚಾರ ಮಾಡಲು ಮೀಸಲಿದ್ದೇವೆ ಎಂದುಕೊಂಡಿರುವರು ಅವರಿಗೆ ನೇರವಾಗಿ ತಮ್ಮ ತೀಕ್ಷ್ಣ ಮಾತುಗಳ ಮುಖಾಂತರ ಹೇಳಿದ್ದಾರೆ. ಒಳ್ಳೆಯ ಮಾತುಗಾರರಾಗಿ ಕೇವಲ ದುಡ್ಡಿನಾಸೆಗಾಗಿ ಪ್ರಶಸ್ತಿ ಪದವಿಗಳಿಗಾಗಿ ತತ್ವವನ್ನು ಮರೆತು ಕೇವಲ ಪ್ರಚಾರಕ್ಕಾಗಿ ತಮ್ಮ ಸ್ವಹಿತ ಸಾಧನೆಗೆ ಬೆನ್ನು ಹತ್ತಿರುವವರನ್ನು ಕಂಡು ಈ ಮಾತುಗಳನ್ನಾಡಿದ್ದಾರೆ ಪ್ರಸ್ತುತ ವಚನ ಈ ಸಂದರ್ಭದಲ್ಲಿ ತುಂಬಾ ಅನ್ವಯಿಕವಾಗಿದೆ. ಇಂದು ಇಂತಹ ಎಷ್ಟೋ ಅವಾಂತರಗಳನ್ನು ನಾವು ನೋಡುತ್ತಿದ್ದೇವೆ.ಗುರು ಎನಿಸಿಕೊಂಡವರೇ ಎಷ್ಟೊಂದು ಅವಾಂತರಗಳನ್ನು ಸೃಷ್ಟಿಸಿದ್ದಾರೆ ಮತ್ತು ತತ್ವವನ್ನು ತಿರುಚುವ ಮಾತಿನ ಮಲ್ಲರನ್ನೂ ನಾವು ಕಾಣುತ್ತೇವೆ. ಇಲ್ಲಿ ಕಂಡು ಬರುವ ಕೊರತೆ ಎಂದರೆ ಇಂಥವರಿಗೆ ಲಿಂಗಪಥ ಅಥವಾ ಲಿಂಗ ತತ್ವ ಅರ್ಥವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅಥವಾ ಅರ್ಥವಾದರೂ ಉದ್ದೇಶಪೂರ್ವಕವಾಗಿ ತಪ್ಪಾಗಿ ಸಮಾಜಕ್ಕೆ ಸುದ್ದಿ ಮುಟ್ಟಿಸುತ್ತಿರುವರೆಂದು ಸಂಶಯ ಬರುತ್ತಿದೆ. ಏನೇ ಆಗಲಿ ಬಸವ ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ಸಾಗದೆ ತತ್ವವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾರದೆ ಅನೇಕ ಅವಾಂತರಗಳನ್ನು ಸೃಷ್ಟಿಸಿದವರಿಗೆ ನಾಯಕ ನರಕ ತಪ್ಪಿದ್ದಲ್ಲ ಎಂದು ವೀರಗಣಾಚಾರಿ ಮಡಿವಾಳ ಮಾಚಿ ತಂದೆಯವರು ತಮ್ಮ ನೇರ ನುಡಿಗಳನ್ನು ಈ ವಚನದಲ್ಲಿ ತಿಳಿಸಿರುತ್ತಾರೆ. ಹೀಗೆ ಮಾಚಿದೇವರು ಓರ್ವ ವಚನಕಾರರಾಗಿ ಅನುಭಾವಿಕ ನೆಲೆಯಲ್ಲಿ ವಚನಗಳನ್ನು ರಚಿಸಿರುವುದು ಕಂಡುಬರುತ್ತದೆ. ಕಲಿ ದೇವರ ದೇವಾ ಅವರ ವಚನಗಳ ಅಂಕಿತವಾಗಿದೆ. ಇಷ್ಟು ಅಪ್ಪ ಮಾಚಿತಂದೆಗಳ ಸಂಕ್ಷಿಪ್ತ ಬದುಕನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಅವಕಾಶ ಕೊಟ್ಟ ಎಲ್ಲ ಹಿರಿಯರಿಗೆ ನನ್ನ ಅನಂತ ಶರಣು ಶರಣಾರ್ಥಿಗಳು
ಜಯ ಗುರು ಬಸವ ( ಚಿತ್ರ ಕೃಪೆ : ಅಂತರ್ಜಾಲ )
ಮಂಜುನಾಥ ಮ.ಮಡಿವಾಳರ
ಅಕ್ಕನ ಅರಿವು
ವಚನ ಅಧ್ಯಯನ ವೇದಿಕೆ
ಬಸವಾದಿ ಶರಣರ ಚಿಂತನಕೂಟ