ಪ್ರಸಾದಿ ಭೋಗಣ್ಣ
ಭಕ್ತಿಯೆಂಬುದು ಬೇರು, ವಿರಕ್ತಿಯೆಂಬುದೆ ಮರ,
ಫಲವೆಂಬುದೆ ಜ್ಞಾನ. ಪಕ್ವಕ್ಕೆ ಬಂದಿತ್ತೆಂಬಾಗಲೆ ಅವಧಿಜ್ಞಾನ. ತೊಟ್ಟು ಬಿಟ್ಟಲ್ಲಿಯೆ ಪರಮಜ್ಞಾನ.
ಸವಿದಲ್ಲಿಯೆ ಅಂತರೀಯಜ್ಞಾನ.
ಸುಖ ತನ್ಮಯವಾದಲ್ಲಿಯೆ ದಿವ್ಯಜ್ಞಾನ.
ದಿವ್ಯ ತೇಜಸ್ಸು ಹಿಂಗದಲ್ಲಿಯೆ ಪರಿಪೂರ್ಣಜ್ಞಾನ.
ಅದು ಮಹದೊಡಲೆಂಬುದಕ್ಕೆ ಎಡೆಯಿಲ್ಲ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನ ಲಿಂಗವು ಅಪ್ರಮಾಣಾದ ಕಾರಣ.
ಪ್ರಸಾದಿ ಭೋಗಣ್ಣ
ವಚನ ಅನುಸಂಧಾನ
ಅಪ್ಪ ಬಸವಾದಿ ಶರಣರು ಈ ಭೂಮಿಯ ಮೇಲೆ ಎಲ್ಲರ ಹಾಗೆ ಹುಟ್ಟಿಬಂದವರಾದರೂ ಎಲ್ಲರಂತೆ; ಹೆಣ್ಣು ಮಣ್ಣು ಹೊನ್ನಿಗೆ ಆಶೆಪಟ್ಟು ಬಡಿದಾಡುತ್ತ ಬಾಳಿ ಸತ್ತುಹೋದವರಲ್ಲ. ಶರಣರು; ತಮ್ಮ ತತ್ವ ಸಿದ್ಧಾಂತಗಳ ವೈಚಾರಿಕ ಪ್ರಜ್ಞೆಯ ಕ್ರಿಯಾತ್ಮಕವಾದ ಬದುಕಿಗೆ ನಿಷ್ಠೆಯಿಟ್ಟು ಅಷ್ಟೇ ಬದ್ಧತೆಯಿಂದ ಇದ್ದು, ತಮ್ಮ ಒಳಹೊರಗಿರುವ ಶುದ್ಧವನ್ನ ಸದಾ ಎಚ್ಚರದ ಅರಿವಿನ ಬಿಸಿನೀರಿನ ಜಳಕವ ಮಾಡು ತ್ತಾ ನಿರ್ಮಾಲ್ಯವಾಗಿ ಪರಿಶುದ್ಧಗೊಂಡು, ತಣ್ಣಗೆ ಬೆಳಗುತ್ತಾ, ತಮ್ಮ ಸತ್ಯುಳ್ಳ ನಡೆ ನುಡಿ ಸಾಂಗತ್ಯ ದಲ್ಲಿ ಒಂದಾಗಿದ್ದು, ಇಹಪರವನ್ನ ಏಕಾಗಿ ಬೆಸೆದು ಹೊಸ ತೆರನಾದ ಬೆಳಗಿನ ಬಾಳನು ಬಾಳಿ, ಜಗದ ಜಡವ ಜಳಜಳ ಬೆಳಗಿದವರು! ಇಂಥ ಶರಣರು; ತಮ್ಮ ಅನುಭವ ಮತ್ತು ಅನುಭಾವದ ದಿವ್ಯಹದ ಭರಿತ ರಸಾನುಭೂತಿಯಿಂದ ಕನ್ನಡ ಭಾಷೆಯಲ್ಲಿ ರಚಿಸಿದ ವಚನ ವಾಙ್ಮಯವು; ಧಾರ್ಮಿಕ, ನೈತಿಕ ವಿಚಾರಗಳ ಹೇಳುವ ಹಾಗೆ ಕಂಡರೂ ಕೂಡಾ, ಅದು ಪ್ರಖರವಾದ ವೈಚಾರಿಕ, ವೈಜ್ಞಾನಿಕ ಮತ್ತು ಮಾನವೀಯ ಸಾಮಾಜಿಕ ಬದುಕಿನ ನಿಜ ಜ್ಞಾನ ಸುಧೆಯೇ ಆಗಿದೆ. ಈಗ ಇಲ್ಲಿ ಪ್ರಸಾದಿ ಭೋಗಣ್ಣ ಶರಣರ ಈ ಮೇಲಿನ ವಚನದ ಅನುಸಂಧಾನವ ಮಾಡುವ ಮೂಲಕ, ಮೇಲೆ ಪ್ರಸ್ತಾಪಿಸಿದ ಎಲ್ಲಾ ವಿಷಯವನ್ನು ಇಲ್ಲಿ ಮನಗಾಣುವ ಪ್ರಯತ್ನವನ್ನ ಮಾಡಿ ನೋಡೋಣ.
ಪ್ರಸಾದಿ ಭೋಗಣ್ಣ ಶರಣರ ಪ್ರಸ್ತುತ ಈ ವಚನ; ಶರಣ ಸಿದ್ಧಾಂತದ ತತ್ವವನ್ನು, ಸತ್ವವನ್ನು, ಹಾಗೂ ಅದರ ಮಹತ್ವವನ್ನ ಅತ್ಯಂತ ಅರ್ಥಪೂರ್ಣವಾ ಗಿ ಮತ್ತು ಕಾವ್ಯಾತ್ಮಕವಾದ ರೂಪಕದ ಭಾಷೆಯ ಲ್ಲಿ ಒಂದು ಮರದ ಸುಂದರವಾದ ದೃಷ್ಟಾಂತದ ಮೂಲಕ ಸಾದರ ಪಡಿಸುತ್ತದೆ. ಅದನ್ನು ಇನ್ನಷ್ಟು ವಿಸ್ತೃತವಾಗಿಯೇ ಅರಿಯಲು ವಚನದ ಸಾಲುಗ ಳ ಆಳಕ್ಕೆ ಇಳಿದು ಪರಿಶೀಲಿಸಿ ನೋಡೋಣ.
ಭಕ್ತಿಯೆಂಬುದು ಬೇರು,ವಿರಕ್ತಿಯೆಂಬುದೆ ಮರ, ಫಲವೆಂಬುದೆ ಜ್ಞಾನ. ಪಕ್ವಕ್ಕೆ ಬಂದಿತ್ತೆಂಬಾಗಲೆ ಅವಧಿಜ್ಞಾನ. ತೊಟ್ಟು ಬಿಟ್ಟಲ್ಲಿಯೆ ಪರಮಜ್ಞಾನ.
ಶರಣ ಧರ್ಮದಲ್ಲಿ; ಭಕ್ತಿ, ವಿರಕ್ತಿ,ಮತ್ತು ಜ್ಞಾನ ಈ ಮೂರು ವಿಚಾರಗಳು ಬಹು ಮುಖ್ಯ ಹಾಗೂ ಮಹತ್ವದ ಸಂಗತಿಗಳಾಗಿವೆ. ಇವುಗಳನ್ನು ತ್ರಿವಿಧ ಗಳಾದಂಥ ತನು, ಮನ, ಭಾವಕ್ಕೆ ಹೊಂದಿಸಿದರೆ; ತನುವಿಗೆ ಭಕ್ತಿಯನ್ನು, ಮನಕ್ಕೆ ವಿರಕ್ತಿಯನ್ನು, ಹಾಗೂ ಭಾವಕ್ಕೆ ಜ್ಞಾನವನ್ನು ಅಳವಡಿಸಿಕೊಂಡು ಅದನ್ನ ಪರಿಭಾವಿಸಿ ನೋಡಬೇಕಾಗಿದೆ. ಈಗಿಲ್ಲಿ ಪ್ರಸ್ತುತ ವಚನದಲ್ಲಿ ಪ್ರಸಾದಿ ಭೋಗಣ್ಣನವರು; ಮನುಷ್ಯನ ಬದುಕಿಗೆ ‘ಮರ’ ವನ್ನು ಸಮೀಕರಿಸಿ, ತುಂಬಾ ಅರ್ಥಗರ್ಭಿತವಾಗಿ ಶರಣ ಸಿದ್ಧಾಂತವ ನ್ನು ಈ ದೃಷ್ಟಾಂತದಲ್ಲಿ ಇಂಬಿಟ್ಟುಕೊಂಡು ಹೇಳಿ ರುವುದು ಗಮನೀಯ ಸಂಗತಿಯಾಗಿದೆ ಹಾಗೂ ಅದು ಮನನೀಯವೂ ಆಗಿದೆ. ವಿಚಾರ ಮತ್ತು ಆಚಾರ ಶರಣ ತತ್ವದ ನಾಣ್ಯಕ್ಕೆ ಇರುವ ಎರಡು ಮುಖಗಳು. ಹಾಗಾಗಿ,ಇಲ್ಲಿ ಮರಕ್ಕೆ ಬೇರು ಬಹು ಮುಖ್ಯವಾದ ಆಚಾರದ ಅಂಗವಾಗಿದೆ ಹಾಗೂ ಶರಣ ಧರ್ಮಕ್ಕೆ ಭಕ್ತಿಯ(ಬೇರು) ಬಹುಮುಖ್ಯ ವಾದ ಅಂಗ ಎಂಬುದ ಮನಗಂಡರೆ, ಉಳಿದಂತೆ ವಚನದ ವಿವರಗಳು ತಂತಾವೇ ಸ್ಪಷ್ಟವಾಗುತ್ತವೆ ವಿರಕ್ತಿ ಎಂಬುದು ಮರವಾದರೆ, ಫಲ ವೆಂಬುದು ಜ್ಞಾನವಾಗುತ್ತದೆ. ಅದೇ ಫಲವು ಪಕ್ವಗೊಂಡರೆ; ಅದು ನಿಗದಿತ ಸಮಯದ ಜ್ಞಾನದ ದ್ಯೋತಕವಾ ಗುತ್ತದೆ. ಹಾಗೆಯೇ ಇನ್ನೇನು ಫಲ ತೊಟ್ಟು ಬಿಟ್ಟು ಬೀಳುತ್ತದೆ ಅಂದುಕೊಂಡಾಗ,ಅಪ್ಪ ಬಸವಣ್ಣರ ವಚನದ ಸಾಲಿನ ಪ್ರಕಾರ “ಕೂಡಲಸಂಗಯ್ಯ ತನಗೆ ಬೇಕೆಂದು ಎತ್ತಿ ಕೊಂಡ..” ಎನ್ನುವಂತಾಗಿ, ಆವಾಗದು ಪರಮಜ್ಞಾನ ಎಂದು ವಚನದ ಈ ಸಾಲುಗಳು ಬಿಂಬಿಸುತ್ತವೆ.
ಸವಿದಲ್ಲಿಯೆ ಅಂತರೀಯಜ್ಞಾನ ಸುಖ ತನ್ಮಯವಾದಲ್ಲಿಯೆ ದಿವ್ಯಜ್ಞಾನ ದಿವ್ಯತೇಜಸ್ಸು ಹಿಂಗದಲ್ಲಿಯೆ ಪರಿಪೂರ್ಣಜ್ಞಾನ.
ಈ ಹಂತದಲ್ಲಿ ಅರಿವುಗೊಂಡಂಥಾ ಮನವು; ಆ ಅರಿವಿನ ಸತ್ಫಲವನ್ನು ತಾನೇ ಸವಿದರೆ, ಆಗದು ಆಂತರ್ಯದ ಜ್ಞಾನ ಎನ್ನುವರು. ಇನ್ನು ಸವಿದ ಆ ಸುಖವು ತನ್ನಲ್ಲಿಯೇ ತನ್ಮಯವಾದಲ್ಲಿ ಅದು “ದಿವ್ಯಜ್ಞಾನ” ಎನ್ನುವರು. ಅಂಥ ದಿವ್ಯ ಜ್ಞಾನದ ತೇಜಸ್ಸು ಹಿಂಗಿ ಹೋಗದೇ ತನು ಮನದಲ್ಲಿಯೇ ತದ್ಗತವಾಗುಳಿದರೆ ಅದುವೇ ಪರಿಪೂರ್ಣಜ್ಞಾನ ಎಂದು ಕರೆಯಲ್ಪಡುವದು ಎನ್ನುತ್ತಾರೆ ಪ್ರಸಾದಿ ಭೋಗಣ್ಣ ಶರಣರು.
ಅದು ಮಹದೊಡಲೆಂಬುದಕ್ಕೆ ಎಡೆಯಿಲ್ಲ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನ ಲಿಂಗವು ಅಪ್ರಮಾಣಾದ ಕಾರಣ.
ಹೀಗೆ ಅರಿವು ಅಂಗಗುಣವಾಗಿ;ಅದು ಜ್ಞಾನದ ಫಲವಾಗಿ, ಮನಕ್ಕೆ ಅದರ ಸವಿ ಸುಖದ ಆಚಾರ ಸಮ್ಮೇಳನವಾದಲ್ಲಿ ಆಗ ಅದು ಮಹದೊಡಲು ಎಂದು ಸಾಬೀತು ಪಡಿಸಿ ಹೇಳಲು ಆಸ್ಪದವಿಲ್ಲ! ಯಾಕೆಂದರೆ, ಚನ್ನಬಸವಣ್ಣಪ್ರಿಯ ಭೋಗಮಲ್ಲಿ ಕಾರ್ಜುನ ಲಿಂಗವು ಪ್ರಮಾಣಿಸಲಿಕ್ಕೆ ಬಾರದ್ದು!! ಅಂದರೆ ಶರಣರ ಶಿವ ಅದು ಅಪ್ರಮಾಣ ಎಂಬ ಕಾರಣಕ್ಕೆ ಎಂದು ಹೇಳುವ ಮೂಲಕ ಪ್ರಸ್ತುತ ಈ ವಚನವು; ಅರಿವು ಆಚಾರ, ಅಂಗ ಲಿಂಗ, ಮನ ಮತ್ತು ಮಹಾಲಿಂಗದ ಸಂಗ ಸುಖದ ನಡುವಿನ ಅವಿನಾಭಾವ ಸಂಬಂಧದ ಆಧ್ಯಾತ್ಮಿಕ ಅನುಭಾ ವದ ಸೂಕ್ಷ್ಮಗಳನ್ನು ಅತ್ಯದ್ಭುತವಾಗಿ ಮನಗಾಣಿ ಸುತ್ತಲೇ ದಿವ್ಯ ಪರಿಣಾಮವನ್ನು ಬೀರುತ್ತದೆ.
ಸಂಕ್ಷಿಪ್ತ ಪರಿಚಯ
(ಚಿತ್ರ ಸಾಂದರ್ಭಿಕ ಮಾಹಿತಿ ಅಂತರ್ಜಾಲ ಕೃಪೆ)
ಪ್ರಸಾದಿ ಭೋಗಣ್ಣ ಅನುಭವ ಮಂಟಪದ ೭೭೦ ಅಮರ ಗಣಂಗಳಲ್ಲೊಬ್ಬ ವಚನಕಾರ ಶರಣರು. ‘ಚೆನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನ ಲಿಂಗ’ ವಚನಾಂಕಿತದಲ್ಲಿ ರಚಿಸಿದ ಇವರ ೧0೩ ವಚನಗಳು ದೊರೆತಿವೆ. ಅವುಗಳು; ತತ್ವಭೋಧೆ ಪ್ರಧಾನವಿದ್ದು, ಶರಣಸ್ತುತಿ, ಭಕ್ತನ ಲಕ್ಷಣ ಮತ್ತು ಲಿಂಗಾಂಗ ಸಾಮರಸ್ಯದ ಸ್ವರೂಪ,ವೇದ ಆಗಮ ಶಾಸ್ತ್ರ ಪುರಾಣಗಳ ನಿರಾಕರಣೆ ಇತ್ಯಾದಿ ವಿವರ ಗಳನ್ನು ಹೊಂದಿವೆ. ‘ದ್ವೈತಾದ್ವೈಗಳನ್ನ ನಿನ್ನಲ್ಲೇ ನೀ ತಿಳಿಯುವ ಪ್ರಯತ್ನವ ಮಾಡು’ ಎನ್ನುವರು. ಇವರ ಜೀವನದ ಇತರೆ ವಿವರಗಳು ಲಭ್ಯವಿಲ್ಲ.
ಅಳಗುಂಡಿ ಅಂದಾನಯ್ಯ