ದೀಪದ ಗೊಗ್ಗವ್ವೆ
ಉದ್ದವನೇರುವುದಕ್ಕೆ ಗದ್ದುಗೆಯಿಲ್ಲದೆ ಎಯ್ದಬಾರದು. ಚಿದ್ರೂಪನನರಿವುದಕ್ಕೆ
ಅರ್ಚನೆ ಪೂಜನೆ ನಿತ್ಯ ನೇಮವಿಲ್ಲದೆ ಕಾಣಬಾರದು. ಅದ ಸತ್ಯದಿಂದ ಮಾಡಿ
ಅಸತ್ಯವ ಮರೆದಡೆ ಇದೇ ಸತ್ಯ ನಾಸ್ತಿನಾಥ.
ಧೂಪದ ಗೊಗ್ಗವ್ವೆ
ಶರಣರು ಸತ್ಯದ ಕೂರಲಗನ್ನು ಹಿಡಿದು ಭವವನ್ನ ಗೆದ್ದರೆಂದು ಹೇಳಿದ್ದಾರೆ. ಹಾಗಾಗಿ ಸತ್ಯದ ಖಡ್ಗವು ಶರಣರ ಬಹು ದೊಡ್ಡ ಧೀಃಶಕ್ತಿಯಾಗಿ ಗುರುತಿಸ ಲ್ಪಟ್ಟಿದೆ. ಈ ವಿಷಯದ ಕುರಿತಾಗಿ ಆಗಿನ ಅನೇಕ ಶರಣರು ತಮ್ಮ ವಚನಗಳಲ್ಲಿ ಚೆನ್ನಾಗಿ ಅಭಿವ್ಯಕ್ತಿ ಮಾಡಿದ್ದಾರೆ. ಅದರಂತೆಯೇ ವಚನಕಾರ್ತಿ ಶರಣೆ ಧೂಪದ ಗೊಗ್ಗವ್ವೆ ಈ ಮೇಲಿನ ವಚನದಲ್ಲಿ ಸತ್ಯ ವನ್ನೇ ಎತ್ತಿ ಹಿಡಿದು ಆ ಸತ್ಯವನ್ನು ಕುರಿತಾಗಿಯೇ ಮಾತನಾಡಿರುವರು. ಇದನ್ನು ಪ್ರಸ್ತುತ ಈ ವಚನ ಅನುಸಂಧಾನವನ್ನು ಮಾಡುವ ಮೂಲಕ ಹೆಚ್ಚು ಸ್ಪಷ್ಟವಾಗಿ ಕಂಡುಕೊಳ್ಳಲು ಪ್ರಯತ್ನವನ್ನ ಮಾಡಿ ನೋಡೋಣ.
ಉದ್ದವನೇರುವುದಕ್ಕೆ ಗದ್ದುಗೆಯಿಲ್ಲದೆ ಎಯ್ದಬಾರದು. ಚಿದ್ರೂಪನನರಿವುದಕ್ಕೆ
ಅರ್ಚನೆ ಪೂಜನೆ ನಿತ್ಯ ನೇಮವಿಲ್ಲದೆ ಕಾಣಬಾರದು.ಅದ ಸತ್ಯದಿಂದ ಮಾಡಿ
ಅಸತ್ಯವ ಮರೆದಡೆ ಇದೇ ಸತ್ಯ ನಾಸ್ತಿನಾಥ.
ಸಾಮಾನ್ಯವಾಗಿ; ಉದ್ದವಾಗಿರುವಂಥಾ ಮತ್ತು ಎತ್ತರವಾದಂಥಾ ಕಂಭ/ಗಳವನ್ನ ಏರಬೇಕಾದರೆ ಅದರ ತಳಭಾಗದಲ್ಲಿ ಗಟ್ಟಿಯಾದ ನೆಲೆಗಟ್ಟನ್ನು ಹೊಂದಿರಬೇಕಾಗುತ್ತದೆ ಎನ್ನುವುದು ಸಾಮಾನ್ಯ ಲೋಕಜ್ಞಾನವಾಗಿದೆ. ಇದನ್ನೇ ಪ್ರಸ್ತುತ ಈ ವಚನ ದಲ್ಲಿ ಶರಣೆ ಧೂಪದ ಗೊಗ್ಗವ್ವೆ ಅರ್ಥಪೂರ್ಣ ವಾಗಿ ಬಳಸಿಕೊಂಡು ಹೇಳಿದ್ದಾರೆ. ಹಾಗಾಗಿಯೇ ಎತ್ತರದ ಯಾವುದೇ ‘ಉದ್ದವನ್ನು ಏರುವುದಕ್ಕೆ ಅದರ ಆ ತಳಭಾಗದಲ್ಲಿ ಗದ್ದುಗೆಯಿಲ್ಲದೆ ಏರಲು ಬಾರದು’ ಎಂದು ಎತ್ತರದ ಮೇಲೇರಿ ಹೋಗುವ ವಸ್ತುವಿನ ತಳಭಾಗದಲ್ಲಿ ಗದ್ದುಗೆ ರೀತಿ ಅಗಲ ವಾಗಿದ್ದರೆ ಮಾತ್ರವೇ ಆ ಎತ್ತರದ ಉದ್ದವಾದ ವಸ್ತುವನ್ನು ಅತ್ತಿತ್ತ ವಾಲದೆ ಹೊಯ್ದಾಡದಂತೆ ತಳವನ್ನ ಭದ್ರವಾಗಿ ಹಿಡಿದಿರುವದರಿಂದಾಗಿ, ಅದನ್ನು ಏರಲು ಸುಲಭವಾಗುತ್ತದೆ. ಇದೊಂದು ಸಾಮಾನ್ಯ ಜನಮಾನಸವು ಕಂಡುಕೊಂಡಂಥಾ ಅರಿವಿನ ಅರ್ಥದ ಅಸಮಾನ್ಯ ನೋಟವಾಗಿದೆ. ಈ ಅರ್ಥವನ್ನು ಹೊಳೆಸುತ್ತಲೇ ವಚನದ ಈ ಸಾಲುಗಳು, ಮತ್ತೊಂದು ಅರ್ಥದ ಜಾಡಿನತ್ತಲೇ ತೋರುಬೆರಳನ್ನು ತೋರುತ್ತಿರುವಂತೆ ನಿಜಕ್ಕೂ ಭಾಸವಾಗುತ್ತದೆ.
ಅದಕ್ಕೆ ಈ ವಚನದ ಮುಂದುವರಿದ ಸಾಲುಗಳು ಹೇಳುವ ಹಾಗೆ ಇಲ್ಲಿ; ಆ ಚಿದ್ರೂಪನನರಿವುದಕ್ಕೆ ಇಷ್ಟಲಿಂಗಾರ್ಚನೆಯನ್ನು ತಳಗದ್ದುಗೆಯನ್ನಾಗಿ ಮಾಡಿಕೊಂಡು, ಊರ್ಧ್ವ/ಮೇಲ್ಮುಖವಾಗಿ ಈ ಷಟಸ್ಥಳದ ಕಂಭವನ್ನು ಏರಲು ಸಾಧನೆಯನ್ನು ಮಾಡಬೇಕಾಗುತ್ತದೆ. ಹಾಗಾಗಿ ಷಟಸ್ಥಳ ಎನ್ನುವ ತಳಗದ್ದುಗೆಯಂಥಾ ಸಾಧನೆಯನ್ನ ಪ್ರತಿನಿತ್ಯವೂ ವ್ಯವಸ್ಥಿತವಾಗಿ ಮಾಡದೇ ಹೋದರೆ ಬಯಲಿನ ಆ ಚಿದ್ರೂಪವ ಕಾಣಲು ಖಂಡಿತಾ ಸಾಧ್ಯವಿಲ್ಲ. ಹಾಗಾಗಿ, ಇದನ್ನ ಅತ್ಯಂತ ನಿಷ್ಠೆಯಿಂದ ನಿತ್ಯವೂ ಆತ್ಮಸಾಕ್ಷಿಯ ನಿಜವಾದ ನೆಲೆಯಲ್ಲಿ ಸತ್ಯವಾದ ಸಾಧನೆಯಿಂದ ಮಾಡಿ, ಅಸತ್ಯವನ್ನು ಜೈಸಿದಲ್ಲಿ, ಸಿಗುವ ಪರಿಣಾಮಕ್ಕೆ ಇದೇ ಸತ್ಯ ನಾಸ್ತಿನಾಥ ಎಂದೆನ್ನುವರು. ಹಾಗಾಗಿ, ಈ ಅಂಗದಲ್ಲಿಯೇ ಅಂತರ್ಗವಾಗಿರುವ ಆ ಚಿದ್ರೂಪವ ಅರಿವುದಕ್ಕೆ; ಇಷ್ಟಲಿಂಗ ಪೂಜೆ ಮಾಡಿಕೊಳ್ಳುತ್ತ ಅಂತರಂಗದಿ ಅನುಸಂಧಾನದ ಸಂಗ ಸುಖದಲ್ಲಿ ಷಟಸ್ಥಳಗಳ ಸಾಧನೆಯನ್ನ ಅತ್ಯಂತ ಸತ್ಯ ಶುದ್ಧವಾದ ನಿಷ್ಠೆಯ ವ್ಯವಸ್ಥಿತ ರೀತಿಯ ಗಟ್ಟಿಯಾದ ತಳಪಾಯದ ಮೂಲಕವಾಗಿ ನಿತ್ಯ ಜೀವನದಲ್ಲಿ ಇಷ್ಟಲಿಂಗದ ಅನುಸಂಧಾನವನ್ನು ಸತ್ಯ ಶುದ್ಧವಾಗಿ ಮಾಡುವ ದಕ್ಕೋಸ್ಕರ; ಇಲ್ಲಿ ವಚನಕಾರ್ತಿ ಶರಣೆ ಧೂಪದ ಗೊಗ್ಗವ್ವೆ ಅರಿವು ಮತ್ತು ಪರಿಶುದ್ಧವದ ಆಚರಣೆ ಗೇನೇ, ಅರ್ಚನೆ ಪೂಜನೆ ನಿತ್ಯ ನೇಮವೆಂದು ಹೇಳಿದ್ದಾಳೆ.
ಇವು ಇಲ್ಲದೇ ಆ ಚಿದ್ರೂಪವನ್ನಂತು ಕಾಣಲು ಬರುವುದೇ ಇಲ್ಲವೆಂದು ಸ್ಪಷ್ಟವಾಗೇ ಹೇಳಿದ್ದಾಳೆ. ಇದನ್ನೆಲ್ಲವನ್ನು ಸತ್ಯದಿಂದ ಮಾಡಿ, ಅಸತ್ಯವನ್ನು ಮರೆತರೆ ನಿಜಕ್ಕೂ ಇದೇ ಸತ್ಯವು ಎಂದು ತಮ್ಮ ಇಷ್ಟಲಿಂಗವಾದಂಥ ನಾಸ್ತಿನಾಥನ ಸನ್ನಿಧಿಯಲ್ಲಿ ನಿವೇದನೆಯನ್ನ ಮಾಡಿಕೊಂಡಿದ್ದು ಶರಣತತ್ವ ಸಿದ್ಧಾಂತವನ್ನ ಇಷ್ಟಲಿಂಗ ಸಾಕ್ಷಿಯಲ್ಲಿ; ಷಟಸ್ಥಳದ ಸಾಧನೆಯನ್ನ ನಿತ್ಯವೂ ಅತ್ಯಂತ ಸತ್ಯ ಶುದ್ಧವಾಗಿ ಮಾಡುವುದು ಅತ್ಯಗತ್ಯವಾಗಿದೆ ಎಂದು ಪ್ರಸ್ತುತ ವಚನದಲ್ಲಿ ಪ್ರತಿಪಾದಿಸಿದ್ದಾರೆ.
ಸಂಕ್ಷಿಪ್ತ #ಪರಿಚಯ
(ಚಿತ್ರ ಸಾಂದರ್ಭಿಕ ಮಾಹಿತಿ ಅಂತರ್ಜಾಲ ಕೃಪೆ)
ಧೂಪದ ಗೊಗ್ಗವ್ವೆ ಮೂಲತಃ ಕೇರಳ ಮೂಲದ ‘ಅಮೂ(ವಲೂ)ರು’ ಇಲ್ಲಿಂದ ಕಲ್ಯಾಣಕ್ಕೆ ಬಂದರೆಂದು ಹೇಳಲಾಗಿದೆ.ಬಾಲ್ಯದಿಂದಲೂ ಇವರದು ವಿಶಿಷ್ಟವಾದ ಶಿವಭಕ್ತಿ. ಇವರ ಜೀವನವು ಒಂದು ಬಗೆಯ ಹೋರಾಟದಿಂದ ಕೂಡಿದೆ. ಹೆತ್ತವರು ಇವರ ವಿವಾಹ ಮಾಡಲು ಬಯಸಿದಾಗ,ಆ ಬಗ್ಗೆ ಆಸಕ್ತಿ ಇರದ ಇವರು ‘ಗೊಗ್ಗಳೇಶ್ವರ’ ದೇಗುಲದ ಲ್ಲಿ ಅಡಗಿ ಕುಳಿತು ವಿವಾಹ ಸಂದರ್ಭವ ತಪ್ಪಿಸಿ ಕೊಂಡರಂತೆ.ಇವರಿಗೆ ವಿವಾಹದಲ್ಲಿ ಆಸಕ್ತಿಯಿಲ್ಲ ಎಂದು ತಿಳಿದ ಹಿರಿಯರು ಇವರನ್ನಿವರ ಪಾಡಿಗೆ ಇರಲು ಬಿಟ್ಟು ಬಿಡುತ್ತಾರೆ. ಗೊಗ್ಗಳೇಶ್ವರ ದೇವಾ ಲಯದಲ್ಲಿ ಧೂಪ ಹಾಕುವ ಕಾಯಕ ಮಾಡುತ್ತಿದ್ದ ಕಾರಣ ಇವರನ್ನು ‘ಧೂಪದ ಗೊಗ್ಗವ್ವೆ’ ಯೆಂದೇ ಜನ ಕರೆಯುವರು.
ಆ ನಂತರದಲ್ಲಿ ಈ ಗೊಗ್ಗವ್ವೆ ಕಲ್ಯಾಣಕ್ಕೆ ಬಂದು ನೆಲೆಸಿ,ಅನುಭವ ಮಂಟಪದ ೭೭೦ ಅಮರ ಗಣಂಗಳಲ್ಲೊಬ್ಬ ವಚನಕಾರ್ತಿ ಶರಣೆಯಾಗಿ ‘ನಾಸ್ತಿನಾಥಾ’ ವಚನಾಂಕಿತದಲ್ಲಿ ವಚನಗಳನ್ನು ರಚಿಸಿದ್ದು, ಇವರ ೬ ವಚನಗಳು ಲಭ್ಯವಾಗಿವೆ. ಲಿಂಗಾಂಗ ಸಾಮರಸ್ಯ, ಸ್ತ್ರೀ ಪುರುಷರ ಸಮಾನತೆಯ ಚಿಂತನೆ ಈ ವಚನಗಳ ಲ್ಲಿದ್ದು, ಅವು ಸರಳವಾದ ವೃತ್ತಿ ಪರಿಭಾಷೆಯ ಬಳಕೆಯಕಾರಣದಿಂದಾಗಿಯೇ ಈ ವಚನಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಜಂಗಮ ಸೇವೆಗಾಗಿ ಗೊಗ್ಗವ್ವೆ ತಮ್ಮ ಇಡೀ ಬದುಕನ್ನರ್ಪಿಸಿ ಕೊಂಡ ‘ವೈರಾಗ್ಯನಿಧಿ’ ಯಾಗಿಯೂ ಪ್ರಖರವಾಗಿ ಕಂಗೊಳಿಸುತ್ತಾರೆ.
**
ಅಳಗುಂಡಿ ಅಂದಾನಯ್ಯ