ಬಳ್ಳೇಶ ಮಲ್ಲಯ್ಯ
12ನೇ ಶತಮಾನದಲ್ಲಿ ಜೈನ ಧರ್ಮ ಲಿಂಗಾಯತ ಧರ್ಮ ವೈಷ್ಣವ ಧರ್ಮವೆಂದು ಭೇದವಿಲ್ಲದ ಸಮನ್ವಯ ಧರ್ಮಗಳನ್ನು ಕೆಲವು ಕಾಲ ಕಾಣಬಹುದಾಗಿತ್ತು. ಇಲ್ಲಿ ಧರ್ಮವನ್ನು ಒಪ್ಪಿಕೊಳ್ಳುವುದಕ್ಕಿಂತ ಶಿವ ತತ್ವವನ್ನು ಒಪ್ಪಿ ನಡೆದ ಶಿವಶರಣರನ್ನು ಕಾಣಬಹುದು. ಬಸವಣ್ಣನವರ ಸಮತಾವಾದ ನೆಲಗಟ್ಟು ಇದಕ್ಕೆ ಕಾರಣವಾಗಿತ್ತು ಎನ್ನಬಹುದು. ಬಸವಣ್ಣನವರ ವರ್ಣ, ಲಿಂಗಭೇದ, ಆಶ್ರಮ ಭೇದಗಳನ್ನು ಕಿತ್ತುಹಾಕಬೇಕೆಂಬ ಆಶಯದಡಿ ಸಮಾನತೆಯನ್ನು ಅನುಷ್ಠಾನಗೊಳಿಸಲು ಶರಣ ಧರ್ಮವನ್ನು ಸ್ಥಾಪಿಸಿದರು. ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮ, ಎಂಬ ನಿಯಮದಡಿ ಜನಸಾಮಾನ್ಯರ ಹತ್ತಿರ ಬಂದಂತಹ ಮುಕ್ತ ಧರ್ಮ ಇದಾಗಿತ್ತು.
ಸಮಾಜದ ಎಲ್ಲ ಸ್ತರದವರು ಸೇರುವುದಕ್ಕೆ ಅನುಭವ ಮಂಟಪ ಕೇಂದ್ರವಾಗಿತ್ತು. ಈ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದವರು ಸವಣರು ಮತ್ತು ಶ್ರವಣರಾಗಿದ್ದರು. ಇವರಲ್ಲಿ ಆದಯ್ಯನ ಹೆಂಡತಿ , ಮನಮುನಿ ಗುಮ್ಮಟ ದೇವ, ಬಳ್ಳೇಶ ಮಲ್ಲಯ್ಯ, ಮುಂತಾದ ಜೈನ ಶಿವಶರಣರನ್ನು ಕಾಣಬಹುದಾಗಿದೆ. ಶರಣ ಧರ್ಮಕ್ಕೆ ಸೇರ್ಪಡೆಯಾಗಿ ಅದರ ಪರಿಪಾಲಕರಾಗಿ ವಚನಗಳನ್ನು ರಚಿಸಿ ಅನುಭವ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಹೀಗೆ ಅನೇಕ ಶಿವಶರಣರನ್ನು ನೋಡಬಹುದು. ಇದರಲ್ಲಿ ಬಳ್ಳೇಶ ಮಲ್ಲಯ್ಯ ಶರಣರು ಕೂಡ ಒಬ್ಬನಾಗಿದ್ದಾನೆ.
ಮೂಲತಃ ಬಳ್ಳೇಶ ಮಲ್ಲಯ್ಯ ಬಳ್ಳಾರಿಯ ಒಂದು ಪುಟ್ಟ ಗ್ರಾಮದವರು. ಬಳ್ಳ ಎಂದರೆ ಕಾಳು, ಕಡಿ, ದವಸ, ಧಾನ್ಯಗಳನ್ನು ಅಳೆಯುವ ಮಾಪನ. ಇದನ್ನು ದೇಸಿ ಭಾಷೆಯಲ್ಲಿ ‘ಸೇರು, ಸವಾ ಸೇರು’ ಎಂದೆನ್ನುತ್ತಾರೆ. ಬಳ್ಳಯ್ಯನವರು ತಾನು ಹೊತ್ತು ಸಾಗುವ ಸರಕು ಸಾಗಾಣಿಕೆಯ ಜೊತೆಗೆ ಬಳ್ಳದ ಅವಶ್ಯಕತೆ ಹೆಚ್ಚಾಗಿ ಇದ್ದ ಕಾರಣ ಅದನ್ನು ಜೊತೆಯಲ್ಲಿಯೇ ಒಯ್ಯುತ್ತಿದ್ದರು. ಊರಿಂದ ಊರಿಗೆ ಅಲೆದಾಡಿ ದವಸ ಧಾನ್ಯಗಳನ್ನು ಮಾರಿ ಉಪಜೀವನ ನಡೆಸುತಿದ್ದರು. ತನ್ನ ವ್ಯಾಪಾರದಲ್ಲಿ ಬಳಸುವ “ಬಳ್ಳ”ವನ್ನೇ ದೇವರೆಂದು ಗುಪ್ತವಾಗಿ ಪೂಜಿಸುತ್ತಿದ್ದರು.
ಬಳ್ಳಾರಿಯ ಗುಡ್ಡದ ಗುಹೆಯ ಗುಡಿಯ ಆವರಣದಲ್ಲಿ ಅವರ ಈ ಬಳ್ಳದ ಪೂಜೆ ಪ್ರತಿನಿತ್ಯ ನಡೆಯುತ್ತಿತ್ತು. ತನ್ನ ದುಡಿಮೆಯ ಆಧಾರವೆಂದು ನಂಬಿದ್ದವರು. ಮತ್ತು ಬೆಲೆ ತರುವ ಬಳ್ಳವನ್ನು ಲಿಂಗವೆಂದು ಪರಿಭಾವಿಸಿ ಪೂಜಿಸ ಹತ್ತಿದರು. ಇವರ ಈ ಕಾಯಕವನ್ನು ನೋಡಿದ ಜನಪದರು ಬಳ್ಳೇಶ ಮಲ್ಲಯ್ಯ ಎಂದು ಕರೆಯತೊಡಗಿದರು. ಸರಕು ಸಾಗಿಸುವ ಕಾಯಕ ಮಾಡುತ್ತಿದ್ದ ಬಳ್ಳೇಶ ಮಲ್ಲಯ್ಯನು “ಬಳ್ಳೇಶ್ವರ ಲಿಂಗ” ಅಂಕಿತದಲ್ಲಿ ವಚನ ಬರೆದಿದ್ದಾರೆ.
ಮೂಲತಃ ಜೈನನಾದ ಇವರು ಆನಂತರ ವೀರಶೈವ ಧರ್ಮದ ಅನುಯಾಯಿಯಾದರೂ. ಮಲ್ಲಯ್ಯನ ತನ್ನ ಮುಗ್ಧ ಭಕ್ತಿಯಿಂದ ಧಾನ್ಯಗಳನ್ನು ಅಳೆಯುವ “ಬಳ್ಳ”ವನ್ನೇ ಪೂಜಿಸಿದರು. ಇದರಿಂದ ಆ ಬಳ್ಳವೇ ಲಿಂಗವಾಯಿತು. ಅಂದಿನಿಂದ ಈತ ಬಳ್ಳೇಶ ಮಲ್ಲಯ್ಯನಾದ. ಬಳ್ಳಾರಿಯ ಹತ್ತಿರವಿರುವ ಗುಡ್ಡದ ದೇವಾಲಯದಲ್ಲಿ ಬಳ್ಳವನ್ನು ಪೂಜಿಸುತ್ತಿರುವ ಮತ್ತು ಬಳ್ಳವು ಲಿಂಗವಾದದರ ಚಿತ್ರವಿದೆ ಎಂಬುದು ತಿಳಿದು ಬರುತ್ತದೆ. ಬಳ್ಳೇಶ ಮಲ್ಲಯ್ಯನ ಬೆಡಗಿನ ವಚನಗಳಲ್ಲಿ ಬೆಡಗು ಸೊಗಸಾಗಿದ್ದು ಶಿವಾನಭವ ತತ್ವಗಳನ್ನು ವಿವರಿಸಿ ಹೇಳುತ್ತವೆ. ಈತನ ವಚನಗಳಲ್ಲಿ ಕಾವ್ಯ ಅಂಶ ಕಡಿಮೆ ಎನಿಸಿದರು ರಚನೆಯಲ್ಲಿ ವಿಶಿಷ್ಟತೆ ತೋರಿ ಬರುತ್ತದೆ. ವಚನಗಳ ಅಂತ್ಯದಲ್ಲಿ ಬರುವ “ಬಳ್ಳೇಶ್ವರ ಲಿಂಗದ ಡಂಗುರ” “ಬಳ್ಳೇಶ್ವರನ ಕನ್ನಡ ಹೇಳುವಡೆ ಯುಗ ಸಂಖ್ಯೆ” “ಬಳ್ಳೇಶ್ವರನ ಕನ್ನಡ ವಿಪರೀತ” “ಬಳ್ಳೇಶ್ವರ ಡಂಗುರವ” “ಬಳ್ಳೇಶ್ವರ ವೀರಭದ್ರಾವತಾರ” ಎಂಬ ಉಕ್ತಿಗಳು ಬರುತ್ತವೆ. ಒಟ್ಟು 9 ವಚನಗಳನ್ನು ರಚಿಸಿರುತ್ತಾರೆ ಇವರ ಎರಡು ವಚನಗಳನ್ನು ಈ ಕೆಳಗಿನಂತೆ ವಿವೇಚಿಸಬಹುದಾಗಿದೆ.
ಆವ ಪ್ರಾಣಿಗೆಯು ನೋವ ಮಾಡಬೇಡ
ಪರನಾರಿಯರ ಸಂಗಬೇಡ, ಪರಧನಕ್ಕಳು ಪಡಬೇಡ, ಪರದೈವಕ್ಕೆರಗಬೇಡ
ಈ ಚತುರ್ವಿಧ ತವಕವ ಮಾಡುವಾಗ ಪರರು ಕಂಡಾರು, ಕಾಣರು ಎಂದೆನ ಬೇಡ
ಬಳ್ಳೇಶ್ವರ ಲಿಂಗಕಾರು ಮರೆಮಾಡಬಾರದಾಗಿ ಅಘೋರನರಕದಲ್ಲಿಕ್ಕುವ ll
ಈ ವಚನವನ್ನು ಗಮನಿಸಿದಾಗ ಬಸವಣ್ಣನವರ ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ ,ಎಂಬ ವಚನದ ಮಾದರಿಯನ್ನು ಕಾಣಬಹುದಾಗಿದೆ. ಮಲ್ಲಯ್ಯ ತನ್ನ ವಚನದಲ್ಲಿ ಚತುರ್ವಿಧಗಳನ್ನು ಗುರುತಿಸುತ್ತಾರೆ. ಯಾವ ಪ್ರಾಣಿಗೆ ಹಿಂಸೆ ಮಾಡುವ, ಪರನಾರಿಸಂಗ ಮಾಡುವ, ಪರಧನಕ್ಕೆ ಆಸೆ ಪಡುವ, ಪರದೈವಕ್ಕೆ ಭಕ್ತಿ ತೋರಿಸುವುದರ ಬಗ್ಗೆ ಹೇಳಿದ್ದಾರೆ. ಹೀಗೆ ಈ ನಾಲ್ಕನ್ನು ಅನುಸರಿಸುವ ತವಕದಲ್ಲಿ ಬೇರೆಯವರು ಕಾಣುತ್ತಾರೆ ಅಥವಾ ಕಾಣುವುದಿಲ್ಲ ಎಂದು ಯೋಚಿಸದೆ ಕಾರ್ಯಕ್ಕೆ ಮುಂದಾಗುತ್ತಾರೆ. ಆದರೆ ಬಳ್ಳೇಶ್ವರ ಲಿಂಗವು ನಾವು ಎಷ್ಟೇ ಮರೆಮಾಡಿದರು ನಮ್ಮನ್ನು ನೋಡುತ್ತಲೇ ಇರುತ್ತಾನೆ. ಆದ ಕಾರಣ ನಾವು ಮಾಡಿದ ಪಾಪಗಳಿಗೆ ಅಘೋರ ಶಿಕ್ಷೆಯನ್ನು ನರಕದಲ್ಲಿ ಕೊಡುತ್ತಾನೆ. ಎನ್ನುವ ವಿವರಣೆಯನ್ನು ಕೊಡುವಂತಿದೆ.
ಹೌದು ಈ ವಚನದಲ್ಲಿ ಮನುಷ್ಯನು ಇಂದು ವಿಕೃತಿಯನ್ನು ಬೆಳೆಸಿಕೊಳ್ಳುತ್ತಿದ್ದಾನೆ. ಕಾರಣ ತನ್ನ ಸುಖಕೋಸ್ಕರ ಇತರರನ್ನು ಪ್ರಾಣಿಯಂತೆ ಕಾಣುವಂತಹ ಮನೋಭಾವವನ್ನು ಬೆಳೆಸಿಕೊಳ್ಳುತ್ತಿದ್ದಾನೆ. ಅವರಿಗೆ ಬಾಹ್ಯವಾಗಿ ಆಂತರಿಕವಾಗಿ ದೇಹಕ್ಕೂ ಮತ್ತು ಮನಸ್ಸಿಗೂ ನೋವನ್ನು ಕೊಡುವ ಗುಣವನ್ನು ಮೈಗೂಡಿಸಿಕೊಳ್ಳುತ್ತಿದ್ದಾನೆ. ಹೆಣ್ಣನ್ನು ಪೂಜ್ಯನೀಯ ಭಾವದಲ್ಲಿ ನೋಡುವ ನಮ್ಮ ನೆಲದಲ್ಲಿ, ಮೋಹಕ್ಕೆ ಪರವಶನಾಗಿ ಬೇರೆ ಹೆಣ್ಣಿನ ಸಹವಾಸಕ್ಕೆ ಬಲಿಯಾಗುತ್ತಿದ್ದಾನೆ. ಆ ಕಾರಣಕ್ಕಾಗಿ ತನ್ನತನವನ್ನು ಕಳೆದುಕೊಳ್ಳಲು ಸಿದ್ದನಿದ್ದಾನೆ. ಅಲ್ಲದೇ ತನ್ನದಲ್ಲದ ಹಣಕ್ಕೆ ಆಸೆ ಪಡುವಂತಹ ಕೆಟ್ಟ ದುರ್ಗುಣವನ್ನು ಬಳಸಿಕೊಂಡಿದ್ದಾನೆ. ತಾನು ದುಡಿದದ್ದೆ ತನ್ನೊಟ್ಟಿಗೆ ಇರದಿರುವ ಸಂದರ್ಭದಲ್ಲಿ ಇತರರ ಹಣಕ್ಕಾಗಿ ಆಸೆ ಪಡುವುದರಲ್ಲಿ ಅರ್ಥವಿಲ್ಲ. ಅಂತೆಯೇ ಮನೆದೇವರನ್ನು ಮರೆತು ಬೇರೆ ದೈವಕ್ಕೆ ಭಕ್ತಿ ಪ್ರದರ್ಶನ ಮಾಡುತಿದ್ದಾನೆ. ತನ್ನ ಕಷ್ಟಗಳನ್ನು ಕಡಿಮೆ ಮಾಡಿಕೊಳ್ಳುವ ಆಲೋಚನೆಗೆ ಬಿದ್ದಿದ್ದಾನೆ ಮನೆಯನ್ನು ಮನೆಯವರನ್ನು ಮನದೈವವನ್ನು ಮರೆತು ಬದುಕನ್ನು ಕಟ್ಟಿಕೊಳ್ಳುವ ತವಕದಲ್ಲಿದ್ದಾನೆ. ಆ ಭರದಲ್ಲಿ ಈ ಮೇಲಿನ ನಾಲ್ಕು ಕೆಲಸ ಮಾಡುವಾಗ ಕಂಡರೂ ಕಾಣದಿದ್ದಂತೆ ವರ್ತಿಸುತಿದ್ದಾನೆ. ಆದರೆ ಬಳ್ಳೇಶ್ವರ ಲಿಂಗನು ಇದನ್ನು ಮರೆಯಾಗಿ ನೋಡಿ ತಮ್ಮ ಪಾಪಗಳಿಗೆ ತಕ್ಕಂತೆ ಶಿಕ್ಷೆಯನ್ನು ನರಕದಲ್ಲಿ ಸಿದ್ದ ಮಾಡುತ್ತಾನೆ. ಎಂಬುದನ್ನು ಮಾರ್ಮಿಕವಾಗಿ ಹೇಳಿದ್ದಾರೆ.
ಶುದ್ಧ ಸಾಳಂಗಗತಿ ಗಮಕವೆಡದ ರಾಗದಲ್ಲಿ ಪರಿಠಾಯಕದಳ ಕಮ್ಮಟನು ಪೂಜಿತನು
ರಸವನಾಲಿಸುತ ಗಜಗಮನೆಯರು ಆಡಿ ಹಾಡಿ ರುದ್ರ ವೀಣೆಯ ಬಾರಿಸುವಲ್ಲಿ
ಬಧಿರ ಮೂಕ ಅಂಧಕರ ಮುಂದೆ ನೃತ್ಯ ತೋರಬಹುದೆ ?
ಹಜ್ಜೆಯ ಹರಿಣ ಭುಜಂಗ ಜಂಬುಕ ಹುಲ್ಲೆಯ
ತೋಳ ಹುಲಿ ಕರಡಿ ಒಬ್ಬಳಿಯಾಗಿ ನೆರೆದಡೆ ದೇವ ಸಭೆಯಾಗಬಲ್ಲದೆ ? ಶುದ್ಧಧವಳಿತ ಭಾನುಕೋಟಿತೇಜ ಪ್ರಭೇ ಮಂಡಲವ ರವಿಉದಯ ಒಬ್ಬನೆನಬಹುದೆ ?
ದೇವ ಬಳ್ಳೇಶ್ವರ ವೀರಭದ್ರಾವತಾರವಾ? ll
ಈ ವಚನದಲ್ಲಿ ಮಲ್ಲಯ್ಯನು ವೈಚಾರಿಕತೆಯನ್ನು ಕುರಿತು ವಿವರಿಸ ಹೊರಟಿದ್ದಾರೆ. ಸಂಗೀತದಲ್ಲಿ ಶುದ್ಧಸಾಳಂಗ ಎಂಬುದು ಶ್ರೇಷ್ಠವಾದ ರಾಗ. ಈ ರಾಗವನ್ನು ಗಮಕವನ್ನ ವಾಚಿಸುವಾಗ ಬಳಸುವಂತದ್ದಾಗಿದೆ. ಗಮಕವನ್ನ ಒಂದು ಕಮ್ಮಟದಲ್ಲಿ ಪೂಜನೀಯವಾಗಿ ಹಾಡುತಿದ್ದರೆ ಅದರ ನವರಸಗಳನ್ನು ಆಲಿಸುವಂತಹ ಗಜಗಮನೆಯರು ಹಾಡಿಗೆ ರುದ್ರ ವೀಣೆ ಬಾರಿಸುತ್ತಿದ್ದರೆ ಹೇಗಿರುತ್ತದೆ ಈ ಸಂಗೀತ ಸಭೆ ಎಂತಹರ ಅದರ ರಾಗಕ್ಕೆ ತಕ್ಕ ನೃತ್ಯ ಮಾಡಿದರೆ ಹೇಗಿರುತ್ತದೆ. ಈ ಸಂದರ್ಭ ಯಾರ ಮುಂದೆ ಸಾಗಬೇಕು ಎಂಬುದನ್ನು ತಿಳಿಸುತ್ತಿದ್ದಾನೆ. ಅಂದರೆ ಸಂಗೀತದ ಆಸಕ್ತಿ ಇದ್ದಲ್ಲಿ ಅದರ ರುಚಿ ಉಂಡವರಿಗೆ ಅದರ ಆನಂದ ಅನಂತವೆಂದು ಅರ್ಥವಾಗುತ್ತದೆ. ಬದಲಿಗೆ ಕಿವುಡನ ಮುಂದೆ ಮೂಕನ ಮುಂದೆ ಕುರುಡನ ಮುಂದೆ ಹಾಡಿ ನೃತ್ಯ ಮಾಡಿ ತೋರಿಸಿದರೆ ಹೇಗೆ ಅರ್ಥವಾದೀತು ? ದೇವಸಭೆ ಎಂದೆನಿಸಿಕೊಳ್ಳಬೇಕಾದರೆ ಇಂದ್ರನ ಮುಂದೆ ರಾಜರು, ಮಹಾರಾಜರು, ರಾಜ ಋಷಿಗಳು ಎಲ್ಲರೂ ಸೇರಿದಾಗ ಸಭೆ ಏರ್ಪಡಾಗಿರುತ್ತದೆ. ಆ ಸಭೆಯಲ್ಲಿ ಇಂದ್ರನೇ ಮುಖ್ಯಸ್ಥನಾಗಿರುತ್ತಾನೆ. ಅಲ್ಲಿ ಒಂದು ವಿಷಯದ ಕುರಿತು ಚರ್ಚಿತವಾಗುತಿರುತ್ತದೆ. ಇಂತಹ ಸಭೆಯನ್ನು ದೇವಸಭೆ ಎಂದು ಹೇಳಲಾಗುತ್ತದೆ. ಆದರೆ ಇಂತಹ ದೇವ ಸಭೆಯಲ್ಲಿ ಜಿಂಕೆ ಹಾವು ನರಿ ತೋಳ ಹುಲಿ ಕರಡಿ ಈ ಪ್ರಾಣಿಗಳೆಲ್ಲ ಒಂದೆಡೆ ಸೇರಿದರೆ ಅದನ್ನು ದೇವ ಸಭೆ ಎಂದು ಹೇಗೆ ಕರೆಯಲಾಗುತ್ತದೆ. ಮತ್ತು ನಭೋ ಮಂಡಲದಲ್ಲಿ ಸೂರ್ಯನೇ ಏಕಾಂಗಿ ಅವನ ಕೋಟಿ ಕೋಟಿ ತೇಜಸ್ಸಿನ ಪ್ರಭೇ ಈ ಭೂಮಿಗೆ ಬೀಳುತ್ತದೆ ಆದರೆ ಬೆಳಕು ಅವನೊಬ್ಬನಿಂದಲೇ ಎಂದು ಹೇಳಲು ಸಾಧ್ಯವಿದೆಯೇ? ಹಾಗೆ ದೇವ ಬಳ್ಳೇಶ್ವರನ ವೀರಭದ್ರಾವತಾರವ ಕುರಿತಾಗಿ ಹೇಳುವಾಗ ಈ ಎಲ್ಲಕ್ಕೂ ಒಡೆಯನವನು ಅವನ ಅವತಾರದ ಮುಂದೆ ಎಲ್ಲವೂ ಕ್ಷುಲ್ಲಕವಾಗುತ್ತದೆ ಎಂಬುದನ್ನು ಈ ವಚನದಲ್ಲಿ ಹೇಳಿದ್ದಾರೆ. (ಚಿತ್ರ ಕೃಪೆ : ಪೇಸ್ ಬುಕ್ )
ಅಂಜಲಿದೇವಿ ಎಂ. ಕನ್ನಡ ಉಪನ್ಯಾಸಕರು. ಸ.ಪ್ರ.ದ. ಕಾಲೇಜು, ಹಾವೇರಿ