spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಏಲೇಶ್ವರ ಕೇತಯ್ಯನವರು

ಕರ್ನಾಟಕದ ಮಹತ್ ಸಾಧನೆಯ ಇತಿಹಾಸದಲ್ಲಿ ಶಿವಶರಣರ ಸ್ಥಾನ ಪೂಜನನೀಯವಾದುದು. ಯುಗ ಪ್ರವರ್ತಕ ಶಕ್ತಿಯಾಗಿ ಸ್ಥಾವರ ಮೌಲ್ಯಗಳನ್ನು ಅಲುಗಿಸಿ, ಚಲನ ಶೀಲ ಮೌಲ್ಯದ ಪ್ರತೀಕವೆನಿಸಿದವರು ಶಿವ ಶರಣರು. ದಲಿತರು, ಶೋಷಿತರು, ಕೆಳವರ್ಗದವರು ಮೊದಲ ಬಾರಿಗೆ ವಾಸ್ತವಕ್ಕೆ ಸ್ಪಂದಿಸಿ ಸಾಹಿತ್ಯದ ಮುಖಾಂತರ ತಮ್ಮ ಅನಿಸಿಕೆಯನ್ನು ಸ್ಪಷ್ಟಪಡಿಸಿದ್ದು ಇದೇ ಸಂದರ್ಭದಲ್ಲಿ.

ಅರಮನೆ ರಾಜಾಶ್ರಯಗಳಲ್ಲಿ ಮರೆತು ನಿಂತ ಪಂಡಿತರ, ಪುರೋಹಿತಶಾಹಿಗಳ ಕಪಿಮುಷ್ಠಿಯಿಂದ ಪಾರಾಗಿ ಕನ್ನಡ ಸಾಹಿತ್ಯ ಸಹಜವಾಗಿ ಉಸಿರಾಡಿದ್ದು,ಜನಸಾಮಾನ್ಯರ ನೋವು ನಲಿವುಗಳಿಗೆ ನಾಲಿಗೆಯಾಗಿದ್ದು,ದುಡಿಯುವ ವರ್ಗದ ಜನರ ಮೊದಲ ತೊದಲು ನುಡಿಯಾಗಿ ಹೊರಹೊಮ್ಮಿ ಬಂದದ್ದು ವಚನ ಸಾಹಿತ್ಯವೆನಿಸಿದ್ದು.
,”ಭಕ್ತಿ ಶುಭಾಶಯ ನುಡಿವೆ,ನುಡಿದಂತೆ ನಡೆವೆ” ಎಂಬುದು ಬಸವಣ್ಣನಾದಿ ಬಹು ಶಿವಶರಣರ ಆತ್ಮವಿಶ್ವಾಸದ ನುಡಿ. ಅವರ ಬದುಕಿನಲ್ಲಿ ಮಾತೆಂಬುದು ಜ್ಯೋತಿರ್ಲಿಂಗ. ಗುಹೇಶ್ವರನ ಶರಣರು ನುಡಿದು ಸೂತಕಿಗಳಾಗರು. ವಚನಕಾರರು ನಂಬಿದ್ದ ನಿಷ್ಠೆ, ಸದ್ಭಕ್ತಿ ,ವ್ರತ,ನೈತಿಕ ನಿಲುವು ಮುಂತಾದವು ಶರಣರ ಬದುಕಿನ ಆದ್ಯ ಆಶಯಗಳಾಗಿದ್ದವು.
ನೇಮ,ನಿಷ್ಠೆ, ವ್ರತವನ್ನು ಪ್ರಬಲವಾಗಿ ಪ್ರತಿಪಾದಿಸಿದ ಶರಣ ಶರಣೆಯರಲ್ಲಿ ಏಲೆಶ್ವರ ಕೇತಯ್ಯನವರು ಅಗ್ರಗಣ್ಯರು.

- Advertisement -

ಚಾರಿತ್ರಿಕ ಹಿನ್ನೆಲೆ
ಆಂಧ್ರಪ್ರದೇಶದ ಏಲೇಶ್ವರ ಇವರ ಹುಟ್ಟೂರು ಪತ್ನಿ ಸಾಯಿ ದೇವಮ್ಮ. ಬಸವಕಾಲದ ಶರಣರು ಎಂಬ ದಾಖಲೆ ನಮಗೆ ದೊರೆಯುತ್ತದೆ. ಅತ್ಯಂತ ಕಠಿಣ ವಾಗಿ ಕೇತಯ್ಯ 64 ಶೀಲಗಳನ್ನು ಪರಿಪಾಲಿಸುತ್ತಾ ಜೀವನ ಸಾಗಿಸುತ್ತಿದ್ದ ಶಿವಶರಣ ಕೇತಯ್ಯ “ಆಚರಣೆ ತನುವಿಗಾಶ್ರಯ,ಅರಿವು ಮನಕಾಶ್ರಯ” ಎಂದು ಬಾಳಿದವರು.”ಏಲೇಶ್ವರ ಲಿಂಗ”-ಎಂಬುದು ಇವರ ವಚನಾಂಕಿತ.

ಈ ಮುದ್ರಿಕೆಯಲ್ಲಿ ಅವರ 74 ವಚನಗಳು ಇದುವರೆಗೆ ಲಭ್ಯವಾಗಿವೆ. ಇದೇ ವಚನಾಂಕಿತಕ್ಕೆ ಹೋಲುವ “ಆಚಾರವೇ ಪ್ರಾಣವಾದ ರಾಮೇಶ್ವರ ಲಿಂಗ”-ಎನ್ನುವದು ಶರಣೆ ಅಕ್ಕಮ್ಮಳ ಅಂಕಿತದಲ್ಲಿ. ಆದರೆ ಅಕ್ಕಮ್ಮ ಕಲ್ಬುರ್ಗಿ ಜಿಲ್ಲೆಯ ಯಾದಗಿರಿ ತಾಲೂಕಿನ ಏಲೇರಿ ಗ್ರಾಮದವಳಾಗಿರಬಹುದು ಎಂಬ ಸಂದೇಹವಿದೆ. ಅವಳು ಕೂಡ ಆಚರಣೆ, ನೇಮ, ನಿಷ್ಠೆ, ವ್ರತ ಶೀಲಗಳಿಗೆ , ಏಕದೇವೋ ಉಪಾಸನೆ ಸಮರ್ಥಿಸಿಕೊಳ್ಳುತ್ತಾಳೆ. ಅವಳ ದೃಷ್ಟಿಯಲ್ಲಿ ಗುರುಲಿಂಗ ಜಂಗಮಕ್ಕೆ ಮಾಡುವ ಸೇವೆಯೇ ಆಚಾರವಾಗಿದೆ.
ಇನ್ನು ಇವರಿಬ್ಬರ ಕಾಲದ ಬಗ್ಗೆ ಹೇಳಬಹುದಾದರೆ ಇಬ್ಬರೂ ತಮ್ಮ ವಚನಗಳಲ್ಲಿ ಬಸವಾದಿ ಶಿವಶರಣರನ್ನು ಸ್ಮರಿಸುತ್ತಾರಲ್ಲದೆ ನಿಜಗುಣ ರನ್ನು ಕುರಿತು ಪ್ರಸ್ತಾಪಿಸುತ್ತಾರೆ.

ನಿಜಗುಣರು 15ನೇ ಶತಮಾನದಲ್ಲಿ ಆಗಿ ಹೋದವರು. ಹೀಗಾಗಿ ಇವರಿಬ್ಬರ ಕಾಲದ ಬಗ್ಗೆ ,ಬಸವಕಾಲಿನ ಶರಣರೋ ಅಥವಾ ಬಸವೋತ್ತರ ಕಾಲದ ಶರಣರೋ ಎಂಬ ಗೊಂದಲ ಉಂಟಾಗುತ್ತದೆ. ಬಸವ ಯುಗದ ಕಾಲದ ಶರಣರೆಂದೇ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

- Advertisement -

ಏಲೇಶ್ವರ ಶರಣರ ಸಮಗ್ರ ವಚನಗಳನ್ನು ಪರಿಶೀಲಿಸಿದಾಗ ನಮಗೆ ಅವರೊಬ್ಬರು ಮಹಾನ್ ಸಾಧಕರು. ಘನ ವಾದ ನಿಲುವಿನವರು. ಕಠೋರವಾದ ನಿಷ್ಠೆಗಳಿಂದ, ಆತ್ಮನಿರೀಕ್ಷಣೆಯಿಂದ ಬದುಕಿದವರು, ಅವರ ವಚನಗಳಿಂದಲೇ ಅವರ ಆತ್ಮಕಥೆಯನ್ನು ಕಟ್ಟಿಕೊಳ್ಳಬಹುದು. ಅವರ ಕೆಲವು ವಚನಗಳನ್ನು ಪರಿಶೀಲಿಸೋಣ,

ನಿಜಭಕ್ತ ಹೇಗಿರಬೇಕು ?
ಅಂಗಕ್ಕೆ ಆಚರಣೆ, ಮನಕ್ಕೆ ನಿರ್ಮಲ ಮನೋಹರವಾಗಿ
ಸಕಲ ದ್ರವ್ಯ ಪದಾರ್ಥಂಗಳ
ಬಾಹ್ಯದಲ್ಲಿ ಕಂಡು, ಅಂತರಂಗದಲ್ಲಿ ಪ್ರಮಾಣಿಸಿ,
ತನ್ನ ಭಾವಕ್ಕೆ ಒಪ್ಪಿದುದ ಒಪ್ಪಿ, ಅಲ್ಲದುದ ಬಿಟ್ಟ ನಿಶ್ಚಯ ನಿಜ ವೃತಾಂಗಿ
ಜಗದ ಹೆಚ್ಚು ಕುಂದಿ ನವರ ಭಕ್ತರೆಂದು ಒಪ್ಪುವನೆ?
ಏಳೇಶ್ವರ ಲಿಂಗವಾಯಿತ್ತಾದಡೂ ಕಟ್ಟಳೆಯ ವೃತಕ್ಕೆ ಕೃತ್ಯದೊಳಗಾಗಿರಬೇಕು.

ಈ ವಚನದಲ್ಲಿ ಕೇತಯ್ಯನವರು, ಭೌತಿಕ ಶರೀರ ಎಲ್ಲ ಕಾಯ ಗುಣಗಳಿಂದ ಅತೀತವಾಗಿರಬೇಕು, ಅರಿಷಡ್ವರ್ಗಗಳ ಹಂಗು ಹರಿದಿರಬೇಕು. ಕಾಯವನ್ನು ಪ್ರಸಾದೀಗೊಳಿಸಿಕೊಂಡಿರಬೇಕು. ಮನವನ್ನು ನಿರ್ಮಲವಾಗಿರಿಸಿಕೊಂಡು ಲಿಂಗ ಸುಖಿಯಾಗಿರಬೇಕು. ಎಲ್ಲ ಲೌಕಿಕ ವಿಚಾರಗಳನ್ನು ನೋಡಿ ಕಂಡು ಅಂತರಂಗದಲ್ಲಿ ಅವುಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸಿ ಒಪ್ಪಿತವಾದುದನ್ನು ಅಪ್ಪಿಕೊಂಡು , ಅಲ್ಲದುದನ್ನು ಚಿತ್ತದಿಂದ ಬಾಹ್ಯಗೊಳಿಸಿದವನು ಮಾತ್ರ ನಿಜವಾದ ಭಕ್ತನು. ಅದಿಲ್ಲದಿದ್ದರೆ ಸ್ವತಃ ಏಲೇಶ್ವರ ಲಿಂಗವಾದರೂ ಕೂಡ ಕಟ್ಟುನಿಟ್ಟಿನ ವ್ರತಕ್ಕೆ, ಕ್ರಿಯೆಗೆ ಭದ್ಧನಾಗಿರಬೇಕು.

ನಿಜ ನಿಷ್ಠೆಗೆ ಯಾವುದು ಭಂಗ ?
ಅಂಗವಾರು ಗುಣದಲ್ಲಿ ಹರಿದಡೆ, ಮೂರೆಂದುಕಂಡರಡೆ, ಆತ್ಮ ಹಲವೆಂದು ನೋವಕಂಡಡೆ, ಎನ್ನ ವೃತಕ್ಕೆ ಅದೇ ಭಂಗ.
ಒಂದ ದೃಢವೆಂದು ಹಿಡಿದಲ್ಲಿ ನಾನಾ ವೃತ ನೇಮ ಅಲ್ಲಿ ಸಂದಪ್ಪವು ಇದಕ್ಕೆ ಸಂದೇಹವಿಲ್ಲ, ಏಲೇಶ್ವರ ಲಿಂಗದಾಣತಿ.
ಕಾಮ,ಕ್ರೋಧ,ಲೋಭ,ಮೋಹ,ಮದ ಮತ್ಸರ ಕಾಯದಲ್ಲಿ ಇದ್ದರೆ, ಆತ್ಮಲಿಂಗ ಭಾವಲಿಂಗ ಪ್ರಾಣ ಲಿಂಗಗಳಲ್ಲಿ ಐಕ್ಯತೆ ಇಲ್ಲದಿದ್ದರೆ, ಹಲವಾರು ಜನ್ಮಗಳು ಉಂಟೆಂದು ಪರಿತಪಿಸಿದರೆ ಅದು ನನ್ನ ವ್ರತಕ್ಕೆ ಭಂಗ. ಪರಮ ಘನ ಏಲೇಶ್ವರ ಲಿಂಗ ಒದೆಂದು ಪರಿಭಾವಿಸಿದಲ್ಲಿ ಎಲ್ಲ ವೃತನೇಮಗಳು ಅಲ್ಲಿಯೇ ಬಂದೊದಗುವವು ಇದಕ್ಕೆ ಯಾವುದೇ ಸಂಶಯವಿಲ್ಲ.

ವೃತಿಯಾದವನು ಹೇಗಿರಬೇಕು ?
ಮನಕ್ಕೆ ವೃತವ ಮಾಡಿ. ತನುವಿಗೆ ಕ್ರಿಯೆ ಮಾಡಬೇಕು.
ಇಂದ್ರಿಯಂಗಳಿಗೆ ಕಟ್ಟನಿಕ್ಕಿ,ಆತ್ಮನ ಸಂದೇಹ ಬಿಡಿಸಿ ಕ್ರಿಯೆ ಮಾಡಬೇಕು’
ಹೀ೦ಗಲ್ಲದೆ ವೃತಾ ಚಾರಿಯಲ್ಲ.
ಮನಕ್ಕೆ ಬಂದಂತೆ ಹರಿದು ‘ಬಾಯಿಗೆ ಬಂದಂತೆ ನುಡಿದು ಇಂತಿ ನಾ ವೃತಿಯೆ೦ದರೆ ಮೂಗನರಿಯದೆ ಮಾಣ ಏಲೇಶ್ವರ ಲಿಂಗನು .

ಮನವು ಅಚಲವಾಗಿರಬೇಕು. ತನು ಸತ್ಕಾರ್ಯಗಳಲ್ಲಿ ತೊಡಗಬೇಕು.ಇಂದ್ರಿಯಗಳನ್ನು ನಿಗ್ರಹಿಸಿಕೊಂಡಿರಬೇಕು. ಆತ್ಮ ಪರಮಾತ್ಮಗಳನ್ನು ಒಂದು ಮಾಡಬೇಕು. ಹೀಗೆ ಮಾಡದಿದ್ದವನು ವೃತಾಚಾರಿಯಲ್ಲ. ಮನಬಂದ ಕಡೆಗೆ ಲಂಗು ಲಗಾಮು ಇಲ್ಲದೆ ಮನಸ್ಸನ್ನು ಹರಿಬಿಟ್ಟುಬಾಯಿಗೆ ಬಂದಂತೆ ಮಾತನಾಡಿ ಅಹಂಕಾರದಿಂದ ನಾನು ಪರಮ ವೃತಿಯೆಂದರೆ ಏಲೇಶ್ವರ ಲಿಂಗನು ಶಿಕ್ಷೆಯನ್ನು ಕೊಡದೆ ಬಿಡಲಾರನು
ಮುಂದುವರೆದು
ವೃತ ಶುದ್ಧವಾಗಿ ನಡೆವಾತನೇ ಎನಗೆ ಅಧೀನದರಸು’
ಪ೦ಚಾಚಾರ ಶುದ್ಧವಾಗಿ ನಡೆವಾತನೇ ನನಗೆ ಸದ್ಗುರು ಮೂರ್ತಿ ‘
ಆವಾವನೇಮಕ್ಕೂ ಭಾವ ಶುದ್ಧವಾಗಿ ಇಪ್ಪ ಮಹಾಭಕ್ತನೆ ಏಲೇಶ್ವರ ಲಿಂಗವು ತಾನೇ.
ಎಂದು ಆರುಹುತ್ತಾರೆ.

“ಗಂಡ ಹೆಂಡಿರಾದರೂ ಅವರವರ ಸಾಧನೆ ವೈಯಕ್ತಿಕ ” ಗಂಡನೇ ತನ್ನ ಪಾಲಿನ ದೈವವೆಂದು ಭಾವಿಸಿ.ಪತಿಯ ಸೇವೆಯಿಂದ ತಾನುಸದ್ಗತಿಯನ್ನು ಪಡೆಯಬಹುದೆಂಬ ಹೆಂಡತಿಯನ್ನು ಹಾಗೂ ಅವಳ ಈ ಪರಿಕಲ್ಪನೆಯನ್ನು ಜಾರಿಯ ನೇಮ ಮೂತ್ರದ ದ್ವಾರಕ್ಕೆ ಈಡು ಎಂದು ಕಟು ಶಬ್ದಗಳಲ್ಲಿ ಏಲಯ್ಯನವರು ಜರೆಯುತ್ತಾರೆ.

ಹೆಂಡತಿ ಗಂಡನ ಒಡೆಯರೆಂದು ಕೂಡಿಕೊಂಡು
ಉಂಡೆಹೆನೆಂಬ ಜಗಬಂಡೆಯ ನೋಡಾ,
ಕೂಟಕ್ಕೆ ಪುರುಷನಾಗಿ ನೇಮಕ್ಕೆ ಒಡೆತನ ವುಂಟೆ ?
ಇಂತಿ ಜಾರಿಯ ನೇಮ ಮೂತ್ರದ ದ್ವಾರಕ್ಕೆ ಈಡು
ಇಂತಿ ಸಂಸಾರದ ಘಾತಕತನದ ವ್ರತ
ಮೀಸಲ ಶುನಕ ಮುಟ್ಟಿದಂತೆ
ಅದು ಏಲೇಶ್ವರ ಲಿಂಗಕ್ಕೆ ದೂರ.

ಹೀಗೆ ಅತ್ಯಂತ ಕಠಿಣ ವೃತಾಚಾರಿಯಾದ ಏಲಯ್ಯ ನವರು ಬಸವಣ್ಣನವರ ,ಚನ್ನ ಬಸವಣ್ಣನವರ,ಪ್ರಭುದೇವರ, ಮಡಿವಾಳ ಮಾಚಿದೇವರ ,ಅಜಗಣ್ಣರ, ಸಿದ್ದರಾಮಯ್ಯರ, ನಿಜಗುಣರ, ಚಂದಯ್ಯರ, ಗಟ್ಟಿವಾಳಯ್ಯರ ಮೋಳಿಗೆಯ ಮಹಾದೇವರ, ಮಹದೇವಿಯಕ್ಕಗಳ ಶೀಲ ನಿಷ್ಠೆಗಳನ್ನು ಕೊಂಡಾಡುತ್ತಾ ತಮಗೆ ಅವರೆಲ್ಲರಲ್ಲಿಇರುವ ಅಚಲ “ವಿಶ್ವಾಸ ಗುಣವನ್ನು”ಕೊಟ್ಟದು ದಕ್ಕಾಗಿ ಏಲೇಶ್ವರ ಲಿಂಗನನ್ನು ಮನದುಂಬಿ ಸ್ಮರಿಸುತ್ತಾರೆ.

ಬಸವೇಶ್ವರಂಗೆ ಸರ್ವ ಗುಣಶೀಲ ‘
ಚನ್ನಬಸವಣ್ಣಂಗೆ ದಿವ್ಯ ಜ್ಞಾನ ಗುಣಶೀಲ .
ಪ್ರಭುದೇವರಿಗೆ ಬಸವಣ್ಣ ಚನ್ನಬಸವಣ್ಣನ ಉಭಯ ಗುಣಶೀಲ
ಮಡಿವಾಳಯ್ಯ0ಗೆ ವೀರ ಗುಣಶೀಲ
ಅಜಗಣ್ಣಂಗೆ ಐಕ್ಯ ಗುಣ ಶೀಲ.
ಸಿದ್ದರಾಮಯ್ಯ0ಗೆ ಯೋಗಗುಣ ಶೀಲ.
ನಿಜಗುಣಂಗೆ ಆತ್ಮಗುಣ ಶೀಲ’
ಚಂದಯ್ಯ 0ಗೆ ವೈರಾಗ್ಯ ಗುಣಶೀಲ .
ಫಟ್ಟಿವಾಳಂಗೆ ತ್ರಿವಿಧ ಗುಣಶೀಲ
ಮೋಳಿಗೆಯ್ಯಂಗೆ ಭೇದಗುಣ ಶೀಲ.
ಅಕ್ಕಗಳಿಗೆ ಅವರನಿರ್ವಾಣ ಗುಣಶೀಲ ‘
ಮಿಕ್ಕಾದ ಪ್ರಮಥರಿಗೆಲ್ಲಕ್ಕೂ ಸ್ವತಂತ್ರ ಗುಣಶೀಲ .
ಎನಗೆ ಏಲೇಶ್ವರ ಲಿಂಗವು ಕೊಟ್ಟುದೊಂದೆ ವಿಶ್ವಾಸ ಗುಣಶೀಲ .

ಇಲ್ಲಿ ಏಲೇಶ್ವರ ಕೇತಯ್ಯನವರು 15ನೇ ಶತಮಾನದಲ್ಲಿ ಆಗಿ ಹೋದಂತಹ ನಿಜಗುಣ ಶಿವಯೋಗಿಗಳನ್ನು ಉಲ್ಲೇಖಿಸಿರುವುದರಿಂದ ಅವರ ಕಾಲ ಬಸವೋತ್ತರ ಕಾಲವೆಂಬ ಸಂದೇಹ ಬರಬಹುದು.ವಚನ ಸಂಸ್ಕರಣೆಯ ವೇಳೆಯಲ್ಲಿ ನಿಜಗುಣ ಶಿವಯೋಗಿಗಳ ಬಗ್ಗೆ ಬರೆದ ಸಾಲು ಆಮೇಲೆ ಸೇರಿಸಿರಬಹುದು ಎಂಬ ಸಂದೇಹವೂ ಬರುತ್ತದೆ ಆದರೆ ಸದ್ಯ,ಬಸವಕಾಲದ ಶಿವಶರಣರೆಂದೇ ಗುರುತಿಸಲಾಗಿದೆ.

ಪ್ತೊ.ಶಾರದಾ ಎಸ್. ಪಾಟೀಲ (ಮೇಟಿ).                 ವಿಶ್ರಾಂತ ಪ್ರಾಧ್ಯಾಪಕರು, ಬಾದಾಮಿ                         ಅಕ್ಕನ ಅರಿವು ವವನ ಅಧ್ಯಯನ ವೇದಿಕೆ             ಬಸವಾದಿ ಶರಣರ ಚಿಂತನ ಕೂಟ

- Advertisement -
- Advertisement -

Latest News

ಮನ ಸೆಳೆದ ಶಾಂತಲಾ ಆರ್ಟ್ ಗ್ರೂಪ್ ಶೋ

ಕಲಾವಿದನು ಮೂಲತಃ ಸೌಂದರ್ಯ ಆರಾಧಕ ಹಾಗೂ ಸೌಂದರ್ಯವನ್ನು ಪ್ರೀತಿಸುವವನು. ಪ್ರಕೃತಿ ಸೌಂದರ್ಯಮಯ ಕಲೆ ಆನಂದಮಯ ಅನ್ನುವಂತೆ ಕಲಾವಿದನು ದೃಶ್ಯಗಳ ನಕಲನ್ನು ಮಾಡಲಾರ ಹಾಗೂ ತನ್ನೊಳಗಿನ ವಿಚಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group