ಕಾಯಕನಿಷ್ಠ ಶರಣ ದಂಪತಿಗಳು, ಕುಂಬಾರ ಗುಂಡಯ್ಯ ಮತ್ತು ಕೇತಲಾದೇವಿ
12 ನೆಯ ಶತಮಾನವು ಜಾಗತಿಕ ಮಟ್ಟದಲ್ಲಿಯೇ ಮೊಟ್ಟಮೊದಲು ಸಮಸಮಾಜದ ಪರಿಕಲ್ಪನೆಯನ್ನು ಬೆಳಗಿಸಿದ ಕಾಲ. ಜಾತಿರಹಿತ, ವರ್ಗರಹಿತ, ವರ್ಣರಹಿತ, ಲಿಂಗಭೇದವಿಲ್ಲದ, ಸಾಂಸ್ಥೀಕರಣವಲ್ಲದ ಸಮ ಸಮಾಜವನ್ನು ಕಟ್ಟಿ ಬೆಳೆಸಿದ ಕೀರ್ತಿ ವಿಶ್ವಗುರು ಬಸವಣ್ಣ ಹಾಗೂ ಬಸವಾದಿ ಶರಣರಿಗೆ ಸಲ್ಲುತ್ತದೆ. ಬೆವರಿನ ಹನಿಗಳ ಮೂಲಕ ಬದುಕು ಕಟ್ಟಿಕೊಂಡು, ಅಧ್ಯಾತ್ಮದ ಉತ್ತುಂಗ ಶೀಖರವನ್ನೇರಿದ ಶರಣ ಶರಣೆಯರ ಕಾಲವದು. ಎಲ್ಲ ವೃತ್ತಿಗಳನ್ನು ಮಾಡುತ್ತಿದ್ದ, ಶರಣ ಶರಣೆಯರಾದ ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣ, ಅಂಬಿಗರ ಚೌಡಯ್ಯ, ನೂಲಿಯ ಚೆಂದಯ್ಯ, ಗಾಣಿಗರ ಕಣ್ಣಪ್ಪ, ಕನ್ನಡಿ ಕಾಯಕದ ಅಮ್ಮಿದೇವಮ್ಮ, ಕನ್ನಡಿ ಕಾಯಕದ ರೇಮಮ್ಮ, ಡೋಹರ ಕಕ್ಕಯ್ಯ, ತಳವಾರ ಕಾಮಿದೇವಯ್ಯ ಶರಣೆ ಶರಣೆಯರು ವೈಚಾರಿಕವಾಗಿ ಅತ್ಯದ್ಬುತವಾದ ಸಾಧನೆಯನ್ನು ಮಾಡಿದರು.
ಕಾಯಕ ಹಾಗೂ ದಾಸೋಹ ಪರಿಕಲ್ಪನೆಗಳ ಮೂಲಕ ತಮ್ಮ ಬದುಕನ್ನು ಗಟ್ಟಿಗೊಳಿಸಿದವರು. ಅಲ್ಲದೇ, ಅನೇಕ ಶರಣ ದಂಪತಿಗಳಾಗಿ ಸಾಮರಸ್ಯದ ಬದುಕನ್ನು ಸಾಗಿಸಿದ ದಾಖಲೆಗಳಿವೆ ಸಮಗಾರ ಹರಳಯ್ಯ ಮತ್ತು ಕಲ್ಯಾಣಮ್ಮ, ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮ, ಉರಿಲಿಂಗಪೆದ್ದಿ ಮತ್ತು ಕಾಳವ್ವೆ, ಮೋಳಗಿ ಮಾರಯ್ಯ ಮತ್ತು ಮಹಾದೇವಿ, ಕುಂಬಾರ ಗುಂಡಯ್ಯ ಮತ್ತು ಕೇತಲಾದೇವಿ ಮುಂತಾದವರು ದಾಂಪತ್ಯದೊಂದಿಗೆ ಅನುಭಾವದ ಮೇಟ್ಟಿಲೇರಿದವರು.
ಆದಾಗ್ಯೂ ಬಸವಪೂರ್ವಯುಗ, ಬಸವಯುಗದ ಅನೇಕ ಶರಣ-ಶರಣೆಯರ ಕಾಲ-ದೇಶ, ಪರಿಸರ, ಅವರ ಬದುಕಿನ ಜೀವನ ಮೌಲ್ಯಗಳನ್ನು ಕುರಿತು ಇತಿಹಾಸ ಪುಟಗಳಲ್ಲಿ ಇನ್ನೂ ಸ್ಪಷ್ಟ ಚಿತ್ರಣವಿಲ್ಲ. ಈ ಹಿನ್ನೆಲೆಯಲ್ಲಿ ಇನ್ನೂ ಸಂಶೋಧನೆಯ ಅಗತ್ಯವೂ ಇದೆ.ನಮ್ಮೆಲ್ಲ ಪುರಾಣ, ಕಾವ್ಯ, ಶಾಸನ, ಸಾಹಿತ್ಯಗಳಲ್ಲಿ ವರ್ಣಿಸಲ್ಪಟ್ಟ, ಕನ್ನಡ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಜನಾನುರಾಗಿಯಾಗಿ, ಜನಮಾನಸದಲ್ಲಿರುವ ಕುಂಬಾರ ಗುಂಡಯ್ಯ ಮತ್ತು ಆತನ ಹೆಂಡತಿ ಶರಣೆ ಕೇತಲದೇವಿ ಚರಿತ್ರೆಯ ಕಾಲಗರ್ಭದಲ್ಲಿ ಎಲೆಮರೆಯ ಕಾಯಿಯಾಗಿ ನಿಂತಿರುವುದನ್ನು ಕಾಣಬಹುದು.
ಗುಂಡಯ್ಯ ̧ಸಂಸ್ಕೃತಿಯ ಪ್ರತೀಕವಾಗಿ ಕಂಗೊಳಿಸಿದ್ದರೆ, ಕೇತಲದೇವಿ ವಚನಕಾರ್ತಿಯಾಗಿ ಕಂಗೊಳಿಸಿದ್ದಾಳೆ. ಅವಳ ಜೀವನದ ವೃತ್ತಾಂತವನ್ನು ಕುರಿತು ಸಿಕ್ಕಿರುವ ಆಕರಗಳ ಹಿನ್ನೆಲೆಯಲ್ಲಿ ಬೆಳಕು ಚೆಲ್ಲುವ ಪ್ರಯತ್ನವೇ ಈ ಲೇಖನವಾಗಿದೆ.
ಸತಿಪತಿಗಳೊಂದಾದ ಭಕ್ತಿಯು ಹಿತವಪ್ಪುದು ಶಿವಂಗೆ ಎಂಬ ಶಿವಶರಣರ ಹೇಳಿಕೆಯಂತೆ ಬದುಕು ನಡೆಸಿದವರು ಕಾಯಕನಿಷ್ಠ ಶರಣ ದಂಪತಿಗಳಾದ ಕುಂಬಾರ ಗುಂಡಯ್ಯ ಮತ್ತು ಕೇತಲಾದೇವಿ .
ಬೇಡೆನಗೆ ಕೈಲಾಸ, ಬಾಡುವುದು ಕಾಯಕವು
ನೀಡೆನಗೆ ಕಾಯಕವ – ಕುಣಿದಾಡಿ
ನಾಡ ಹಂದರಕೆ ಹಬ್ಬಿಸುವೆ!
ಹೀಗೆಂದು ಶಿವ ಶರಣ ಕುಂಬಾರ ಗುಂಡಯ್ಯ ಕೈಲಾಸವನ್ನೂ ನಿರಾಕರಿಸಿ ನನಗೆ ಕಾಯಕವೇ ಇರಲಿ ಎಂದು ಬೇಡುತ್ತಾನೆ. ಕಾಯಕವೇ ಕೈಲಾಸ ಎನ್ನುವುದು ಶರಣಪರಂಪರೆಯ ಧ್ಯೇಯ. ಕುಂಬಾರ ಗುಂಡಯ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕಾಯಕಕ್ಕೆ ಕೈಲಾಸಕ್ಕಿಂತಲೂ ಹೆಚ್ಚು ಮನ್ನಣೆ ನೀಡುತ್ತಾನೆ. ಶರಣ ಕುಂಬಾರ ಗುಂಡಯ್ಯನ ಕುರಿತ ಈ ವಿವರಣೆ ಸಿಗುವುದು ಜನಪದ ಕವಿ ಸಾವಳಿಗೇಶನ ಕೃತಿಯಲ್ಲಿ.
ಕುಂಬಾರ ಗುಂಡಯ್ಯ ಜೀವಿಸಿದ್ದು ಬೀದರದ ಭಲ್ಲುಕೆಯಲ್ಲಿ (ಇಂದಿನ ಭಾಲ್ಕಿ). ಇವನ ಬದುಕೇ ಕಾಯಕಕ್ಕೆ ಸಮರ್ಪಿತವಾಗಿತ್ತು. ಹರಿಹರ ಕವಿಯು ತನ್ನ ಕುಂಬಾರ ಗುಂಡಯ್ಯನ ರಗಳೆಯಲ್ಲಿ ವಿವರಿಸಿದಂತೆ;
ಆಧಾರಮೆಯಾಧಾರಮದಾಗಿರೆ
ಮಿಗೆ ಷಟ್ಚಕ್ರಮೆ ಚಕ್ರಮದಾಗಿರೆ
ಸೊಗಯಿಪ ನಾಭಿಯೆ ನಾಭಿಯದಾಗಿರೆ
ಕನಸಿನ ಕಾಯಂ ಮೃತ್ತಿಕೆಯಾಗಿರೆ
ನೆನಹುಂ ಚಟದಾರಂಗಳವಾಗಿರೆ
ನಷಿ್ಠೆಯೆ ತಿರುಹುವ ದಂಡವದಾಗಿರೆ
ಮಾಡುವ ಭಕ್ತಿ ಕಟಾಹಮದಾಗಲು
ಕೂಡಿದ ಕರಣದೆ ಮರ್ದಿಸುತಾಗಲು
ಮಿಗೆ ಶೋಷಣದಾತಪದಿಂದಾರಿಸಿ
ಬಗೆ ಮಿಗಲುದರಾಗ್ನಿಗಳಿಂದಹಿಸಿ
ಇಂತೊಳಗಣ ಘಟಕಾಕಮೊಪ್ಪಲು
ಸಂತತ ಹೊರಗಣ ಮಾಟಮದೊಪ್ಪಲು ಕುಂಬರ ನೆನೆಸಿರ್ಪಂ ಗುಂಡಯ್ಯಂ
~ ಕುಂಬಾರ ಗುಂಡಯ್ಯ ಒಳಗಣ ಕಾಯಕ ಮತ್ತು ಹೊರಗಣ ಕಾಯಕಗಳೆರಡರನ್ನೂ ಸಮನಾಗಿ, ಜೊತೆಜೊತೆಯಾಗಿ ನಿರ್ವಹಿಸುತ್ತಿದ್ದ ಬಗೆಯನ್ನಿದು ಹೇಳುತ್ತದೆ.
ಹೊರಗೆ ಚಕ್ರಕ್ಕೆ ಆಧಾರವಾಗಿ ಹುಗಿದ ಮರದ ತುಂಡೇ ಅವನಿಗೆ ಆಧಾರ ಚಕ್ರ; ಅದರ ಮೇಲಿನ ತಿಗರಿಯೇ ಅವನ ಷಟ್ಚಕ್ರ; ತಿಗರಿಯಲ್ಲಿಯ ಮೂಳೆ ನೆಡುವ ರಂಧ್ರವೇ ಅವನ ನಾಭಿ (ಮಣಿಪೂರಕ ಚಕ್ರ); ಶರೀರವೇ ಮಡಕೆ ಮಾಡುವ ಮಣ್ಣು; ನಿಷ್ಠೆಯೇ ದಂಡ; ಅದರಿಂದ ತಿರುಗಿಸಿ ಮಾಡಿದ ಮಡಕೆಗಳನ್ನು ನೆನಹೆಂಬ ಚಟಿದಾರಗಳಿಂದ ಕೊಯ್ದು, ಕರಣಗಳಿಂದ ತಿದ್ದಿ ಬಡಿದು, ಆರಿಸಿ, ಭಕ್ತಿಯೆಂಬ ಆವಿಗೆಯಲ್ಲಿ ಹಾಕಿ, ಉದರಾಗ್ನಿಗಳಿಂದ ಸುಟ್ಟು ಗಟ್ಟಿ ಮಾಡಿಡುತ್ತಿದ್ದ. ಆ ಮಡಕೆಗಳನ್ನೇ ಬಾರಿಸುತ್ತ ಕುಣಿದಾಡುತ್ತಿದ್ದ.
ಮಡಕೆಗಳ ಬಾರಿಸುತ ತೊಡಗಿದ್ದ ಕುಣಿತದೊಳು
ಹೆಡೆಯೆತ್ತಿ ನಾಗಮಣಿಯಂತೆ – ಗುಂಡಯ್ಯ
ತಡೆತಡೆದು ಹೆಜ್ಜೆ ಹಾಕುತಲಿ
ಇದು ಅವನ ನಿತ್ಯ ಕಾಯಕವಾಗಿತ್ತು. ಅವನ ಪಾಲಿಗೆ
ಕಾಯಕವೆ ಶಿವಭಕ್ತಿ, ಕಾಯಕವೆ ಶಿವಭಜನೆ
ಕಾಯಕವೆ ಲಿಂಗ ಶಿವಪೂಜೆ – ಶಿವಯೋಗ
ಕಾಯಕವೆ ಕಾಯ್ವ ಕೈಲಾಸ.
ಇಂಥಾ ಕುಂಬಾರ ಗುಂಡಯ್ಯ ನಮ್ಮ ಜನಪದದ ಬೇರುಗಳಲ್ಲಿ ಭದ್ರವಾಗಿದ್ದಾನೆ. ಹರಿಹರ ಕವಿ, ಶಿವ ಬಂದು “ಕೈಲಾಸಕ್ಕೆ ಬಾ” ಎಂದು ಕರೆದಾಗ ಗುಂಡಯ್ಯ ಹೊರಟುಬಿಡುತ್ತಾನೆಂದು ಹೇಳಿದರೆ, ಜನಪದ ಕವಿ ಸಾವಳಗೇಶನು, ಅವನು ಕಾಯಕದ ಕಾರಣವಿಟ್ಟು ತಾನು ಬರುವುದಿಲ್ಲ ಅನ್ನುತ್ತಾನೆಂದು ಹಾಡಿದ್ದಾನೆ.
ಕಾಯಕಪ್ರೇಮಿ ಕುಂಬಾರ ಗುಂಡಯ್ಯ, ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಇಂದಿಗೂ ಜನಜೀವನದ ಭಾಗವಾಗಿದ್ದಾನೆ. ಒಕ್ಕಲಿಗರು ತಮ್ಮ ಬೆಳೆಗಳ ರಕ್ಷಣೆಗಾಗಿ ಹೊಲಗಳಲ್ಲಿ ಒಂದು ಕೋಲಿಗೆ ಗಡಿಗೆ ಮಗುಚಿ ಹಾಕಿ, ಸುಣ್ಣ ಬಳಿದು, ‘ಬೆದರು ಬೊಂಬೆ’ಯನ್ನು ಮಾಡಿ ನಿಲ್ಲಿಸುತ್ತಾರೆ. ಆ ಗಡಿಗೆಯನ್ನು ಅವರು “ಗುಂಡ”ನೆಂದು ಕರೆದು, ಕುಂಬಾರ ಗುಂಡಯ್ಯ ರಕ್ಷಣೆ ಮಾಡುತ್ತಾನೆಂದು ನಂಬುತ್ತಾರೆ.
ಬೆಚ್ಚುಹಾಕಿದ ಗಡಿಗಿ ಮುಚ್ಚಿಟ್ಟ ಹೊಲ ಹುಲುಸು
ಬಚ್ಚಾದ ಬೆಳೆಯ ಕಣವುಕ್ಕಿ – ಗುಂಡಯ್ಯ
ಹೆಚ್ಚಾಯ್ತು ನಿನ್ನ ಶಿವಭಕ್ತಿ
ಎಂದು ಹಾಡುವ ಜನಪದರು, “ಗುಂಡಯ್ಯನ ಗಡಿಗೆ ಹೊಲವನ್ನು ಕಾಯುವುದು ಮಾತ್ರವಲ್ಲ, ಚಳಿಗಾಲದಲ್ಲಿ ಬೆಳೆಗಳಿಗೆ ಬೆಚ್ಚನೆಯ ಹಿತಕರವಾದ ಗಾಳಿಯನ್ನು ಬೀಸಿ ತರುತ್ತಾನೆ” ಎಂದೂ ನಂಬುತ್ತಾರೆ. ಆ ಚಳಿಗಾಲದ ಗಾಳಿಯನ್ನು “ಕುಂಬಾರನ ಗಾಳಿ”ಯೆಂದೇ ಕರೆಯುತ್ತಾರೆ.
ಆ ರಸಗಾಳಿ ವರ್ಷಕ್ಕೊಮ್ಮೆ ಬೀಸಿದರೆ, ಕುಂಬಾರ ಗುಂಡಯ್ಯನ ಭಕ್ತಿರಸ ಗಾಳಿ ಹಗಲಿರುಳು ಬೀಸುತ್ತದೆ, ಬೀಸುತ್ತಿರಲಿ ಎನ್ನುವ ಆಶಯ ಜನಪದರ ಹಾಡಿನಲ್ಲಿ ತೋರಿಬರುತ್ತದೆ. ಹೀಗೆ ಕುಂಬಾರ ಗುಂಡಯ್ಯ ತನ್ನ ಶಿವಭಕ್ತಿಯಿಂದ ಜನಮಾನಸದಲ್ಲಿ ಅಮರವಾಗಿದ್ದಾನೆ.
ಕುಂಬಾರ ಗುಂಡಯ್ಯನ ಧರ್ಮಪತ್ನಿ ಕೇತಲದೇವಿ
ಮಡಕೆ ಮಾಡುವ ಕಾಯಕದಲ್ಲಿ ನಿರತನಾಗಿದ್ದ ಕುಂಬಾರ ಗುಂಡಯ್ಯನ ಧರ್ಮ ಪತ್ನಿಯೇ ಕೇತಲಾದೇವಿ. ಈಕೆ ಬಸವಣ್ಣನವರ ಸಮಕಾಲೀನಳಾಗಿದ್ದು, ಈಕೆಯ ಕಾಲ ಸುಮಾರ ಸಾ.ಶ ಸು. 1160. ಶರಣೆ ಕೇತಲೆ ಮೂಲತಃ ಬೀದರ್ ಜಿಲ್ಲೆಯ ಭಾಲ್ಕಿ (ಭಳ್ಳುಂಕೆ)ಗೆ ಸೇರಿದವಳು. ಕುಂಬಾರಿಕೆ ಅವರ ಉದ್ಯೋಗವಾಗಿತ್ತು. “ಕುಂಭೇಶ್ವರ” ಎಂಬ ಅಂಕಿತನಾಮದಿಂದ ಬರೆಯುವ ಈಕೆ ತನ್ನ ಎರಡೂ ವಚನಗಳಲ್ಲಿ ವ್ರತಾಚಾರನಿಷ್ಠೆಗೆ ಸಂಬಂಧಿಸಿದಂತೆ ಹೆಚ್ಚು ಒತ್ತು ನೀಡುತ್ತಾಳೆ. ಭಾಲ್ಕಿಯಲ್ಲಿ ಕುಂಭೇಶ್ವರ ದೇವಾಲಯವಿದೆ. ಈ ದೇವಾಲಯವು ಕುಂಬಾರ ಓಣಿಯಲ್ಲಿದೆ. “ಕುಂಭೇಶ್ವರಾ” ಎಂಬುದೇ ಕೇತಲದೇವಿಯ ವಚನಾಂಕಿತವಾಗಿರುವುದರಿಂದ, ಭಾಲ್ಕಿಯ ಕುಂಭೇಶ್ವರ ದೇವಾಲಯದ ಮಹತ್ವ ಗೊತ್ತಾಗುತ್ತದೆ.
ಕೇತಲಾದೇವಿಯ ಕಾಯಕ ಅವಳ ಗಂಡನಂತೆಯೇ ಇತ್ತು. ಗಂಡ ಹೆಂಡತಿ ಇಬ್ಬರೂ ಸೇರಿ ಮಡಕೆ ಮಾಡುವ ಕಾಯಕವನ್ನು ಅನುಸರಿಸುತ್ತಿದ್ದರು. ತಕ್ಕಮಟ್ಟಿಗೆ ವಿದ್ಯಾವಂತಳಾಗಿದ್ದಳು. ಇತರ ಶರಣರ ಪ್ರಭಾವದಿಂದ, ಕೇತಲಾದೇವಿಯು ವಚನಗಳನ್ನು ಬರೆಯುವುದನ್ನು ಮಾತ್ರವಲ್ಲದೆ, ಶೂದ್ರರಿಗೆ ನಿಷೇಧಿತ ಫಲವಾಗಿದ್ದ ಸಂಸ್ಕೃತವನ್ನು ಓದಲು ಕಲಿತರು, ಕೇತಲದೇವಿಗೆ ಹೇಳಲಾದ ಎರಡು ವಚನಗಳಲ್ಲಿ, ಒಂದರಲ್ಲಿ ಸಂಸ್ಕೃತ ಶ್ಲೋಕವಿದೆ,
ಬಹುಪಾಲು ಮಹಿಳಾ ಲೇಖಕಿಯರ ವಚನಗಳಂತೆ ಕೇತಲದೇವಿಯವರ ವಚನಗಳು ಸಹ ಭಕ್ತಿ ಮತ್ತು ವಚನ ಪಾಲನೆಯ ವಿಷಯದೊಂದಿಗೆ ವ್ಯವಹರಿಸುತ್ತವೆ. ಒಬ್ಬರ ಪ್ರಾಣದ ಉಸಿರಿನಷ್ಟೇ ವ್ರತವೂ ಒಳ್ಳೆಯದು ಎಂಬುದು ಆಕೆಯ ವಚನಗಳಲ್ಲಿ ವ್ಯಕ್ತವಾಗುತ್ತದೆ.
”ಕೇತಲದೇವಿಯ ಎರಡು ವಚನಗಳು ಪ್ರಕಟವಾಗಿವೆ. ಕುಂಭೇಶ್ವರಾ, ಕುಂಭೇಶ್ವರಲಿಂಗ ಎಂಬ ಅಂಕಿತಗಳಲ್ಲಿ ಈ ವಚನಗಳಿವೆ. “ಲಿಂಗವಂತ” ಎಂಬ ಪದ ಈಕೆಯ ವಚನದಲ್ಲಿ ಬಳಕೆಯಾಗಿದೆ. ಲಿಂಗವಂತರ ಅಂಗಳಕ್ಕೆ ಹೋಗಿ ಲಿಂಗಾರ್ಪಿತವ ಮಾಡುವಾಗ ಸಂದೇಹವಿಲ್ಲದಂತಿರಬೇಕೆಂದು ಕೇತಲದೇವಿ ತನ್ನ ವಚನದಲ್ಲಿ ಸ್ಪಷ್ಟಪಡಿಸಿದ್ದಾಳೆ,”
ಭುವನಕೋಶದಲ್ಲಿ ಈಕೆಯ ವ್ರತನಿಷ್ಠೆಗೆ ಸಂಬಂಧಿಸಿದಂತಹ ಒಂದು ಉಲ್ಲೇಖವಿದೆ. ಕೇತಲದೇವಿ ನಿತ್ಯವೂ ಲಿಂಗಕ್ಕೆ ಪಾವುಡವನ್ನು ಹಾಕುವ ನಿಯಮ ಹೊಂದಿದ್ದಳೆಂದೂ, ಒಂದು ದಿನ ಅದು ಸಿಗದೇ ಹೋದಾಗ, ತನ್ನ ಎದೆಯ ಚರ್ಮವನ್ನೇ ತೆಗೆದು ಪಾವುಡ ಮಾಡಿ ಶಿವಲಿಂಗಕ್ಕೆ ಧರಿಸಲು, ಶಿವನು ಇವಳ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾದನೆಂಬ ಕತೆಯಿದೆ. ಈ ಪವಾಡಕತೆಯ ಸತ್ಯಾಸತ್ಯತೆ ಏನೇ ಇರಲಿ, ಕೇತಲದೇವಿ ಮಾತ್ರ ಮಹತ್ವದ ಶರಣೆಯಾಗಿದ್ದಳೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಜನಪದ ಕಾವ್ಯದಲ್ಲಿ ಈ ದಂಪತಿಗಳನ್ನು ಕುರಿತಂತೆ ಅನೇಕ ತ್ರಿಪದಿಗಳು ಪ್ರಕಟವಾಗಿವೆ. ಡಾ.ಬಿ.ಎಸ್.ಗದ್ದಗಿಮಠ ಅವರ “ಕನ್ನಡ ಜಾನಪದ ಗೀತೆಗಳು” ಕೃತಿಯಲ್ಲಿ ಈ ತ್ರಿಪದಿಗಳನ್ನು ನೋಡಬಹುದಾಗಿದೆ.
“ಕುಂಬಾರ ಗುಂಡಯ್ಯನ ಮಡದಿ ಕಡಗದ ಕೈಯಾಕಿ
ಕೊಡದ ಮ್ಯಾಲೇನು ಬರದಾಳ| ಕಲಬುರಗಿ
ಶರಣಬಸವನ ಚಿತ್ರ ಬರದಾಳ||”
“ಮಡದಿ ಕೇತಲದೇವಿ ಒಡನಾಡಿ ಗಂಡನಿಗೆ ಎಡೆಬಿಡದೆ ಸೇವೆ ಮಾಡುತಲಿ| ಬತ್ತಿಯೊಳು
ಬಿಡದೇರಿ ಎಣ್ಣೆಯುರಿದಂತೆ||”
– ಕನ್ನಡ ಜಾನಪದ ಗೀತೆಗಳು, ಪು-305, ಕ.ವಿ.ವ, ಧಾರವಾಡ, 1963
ಈ ಎರಡು ತ್ರಿಪದಿಗಳನ್ನು ಗಮನಿಸಿದಾಗ ಕೇತಲದೇವಿಯ ವ್ಯಕ್ತಿತ್ವವನ್ನು ಜನಪದರು ಕಂಡ ರೀತಿ ಸ್ಪಷ್ಟವಾಗುತ್ತದೆ. ಕೈಯಲ್ಲಿ ಕಡಗ ಹಾಕಿಕೊಂಡು, ಟೊಂಕದ ಮೇಲೆ ಕೊಡ ಹೊತ್ತುಕೊಂಡು ಪತಿ ಗುಂಡಯ್ಯ ತುಳಿಯುವ ಮಣ್ಣಿಗೆ ನೀರನ್ನು ತಂದು ಹಾಕುತ್ತಿದ್ದಳು. ಗುಂಡಯ್ಯ ಮಣ್ಣನ್ನು ತುಳಿದು ಹದಮಾಡಿ ಮಡಕೆಗಳನ್ನು ಮಾಡುತ್ತಿದ್ದ. ಈ ಮಡಕೆ ಕಾಯಕ ಮಾಡುತ್ತಿದ್ದ ಈ ದಂಪತಿಗಳು ಪವಾಡಕತೆಯ ಮೂಲಕ ಪ್ರಸಿದ್ಧಿಯಾಗಿದ್ದಾರೆ. ಗಂಡನ ನೆರಳಾಗಿದ್ದ ಕೇತಲದೇವಿಯನ್ನು ಜನಪದರು ಒಡನಾಡಿಯೆಂದು ಕರೆದಿದ್ದಾರೆ. ಎಡೆಬಿಡದೆ ಕಾಯಕದಲ್ಲಿ ನಿರತಳಾಗಿದ್ದ ಕೇತಲೆ ಎಣ್ಣೆಯಲ್ಲಿ ಉರಿಯುತ್ತಿದ್ದ ಬತ್ತಿಯಂತಿದ್ದಳೆಂದು ಜನಪದರು ಈಕೆಯ ಮಹಾವ್ಯಕ್ತಿತ್ವವನ್ನು ಮೂರು ಸಾಲುಗಳ ತ್ರಿಪದಿಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಈಕೆಯ ಕುಂಭದ ಗತಿಗೆ ಶಿವನೇ ಕೈಲಾಸದಿಂದಿಳಿದು ಓಡೋಡಿ ಬಂದು ಕುಣಿಯುತ್ತಿದ್ದನೆಂದು ಪವಾಡಕತೆಗಳು ಹೇಳುತ್ತವೆ.
ಕೇತಲದೇವಿಯ ಎರಡು ವಚನಗಳು ಪ್ರಕಟವಾಗಿವೆ. ಕುಂಭೇಶ್ವರಾ, ಕುಂಭೇಶ್ವರಲಿಂಗ ಎಂಬ ಅಂಕಿತಗಳಲ್ಲಿ ಈ ವಚನಗಳಿವೆ. “ಲಿಂಗವಂತ” ಎಂಬ ಪದ ಈಕೆಯ ವಚನದಲ್ಲಿ ಬಳಕೆಯಾಗಿದೆ. ಲಿಂಗವಂತರ ಅಂಗಳಕ್ಕೆ ಹೋಗಿ ಲಿಂಗಾರ್ಪಿತವ ಮಾಡುವಾಗ ಸಂದೇಹವಿಲ್ಲದಂತಿರಬೇಕೆಂದು ಕೇತಲದೇವಿ ತನ್ನ ವಚನದಲ್ಲಿ ಸ್ಪಷ್ಟಪಡಿಸಿದ್ದಾಳೆ.
ಲಿಂಗವಂತರ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ
ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು
ಅದೆಂತೆಂದಡೆ:
‘ಭಕ್ತಸ್ಯ ಮಂದಿರಂ ಗತ್ವಾ |ಭಿಕ್ಷಲಿಂಗಾರ್ಪಿತಂ ತಥಾ
ಜಾತಿ ಜನ್ಮ ರಜೋಚ್ಫಿಷ್ಟಂ | ಪ್ರೇತಸೂತಕ ಐವಿವರ್ಜಿತಃ ||’
ಇಂತೆಂದುದಾಗಿ, ಕಾಣದುದನೆ ಚರಿಸದೆ, ಕಂಡುದನು ನುಡಿಯದೆ, ಕಾಣದುದನು ಕಂಡುದನು ಒಂದೆ ಸಮವೆಂದು ಅರಿಯಬಲ್ಲರೆ ಕುಂಭೇಶ್ವರ ಲಿಂಗವೆಂಬೆನು.
ಈ ಮೇಲಿನ ವಚನದಲ್ಲಿ ಸಂಸ್ಕೃತ ಶ್ಲೋಕವೊಂದು ಈಕೆಯ ವಚನದಲ್ಲಿ ಉಲ್ಲೇಖವಾಗಿದೆ. ಕೇತಲದೇವಿ ಕಾಯಕನಿಷ್ಠೆ ಉಳ್ಳವಳಾಗಿರುವುದರ ಜತೆಗೆ ಪಂಡಿತಳೂ ಆಗಿದ್ದಳೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ವಚನದಲ್ಲಿ ಲಿಂಗನಿಷ್ಠೆ ಎದ್ದು ಕಾಣುತ್ತದೆ. ಲಿಂಗಾಚಾರಿಗಳು ಲಿಂಗವಂತರ ಮನೆಯ ಅಂಗಳಕ್ಕೆ ಹೋಗುವಾಗ ಯಾವುದೇ ರೀತಿಯ ಸಂದೇಹವಿಲ್ಲದಿರಬೇಕು. ಒಟ್ಟು ಶಿವಭಕ್ತರನ್ನು ಸಂದೇಹಿಸುವುದು ಸರಿಯಲ್ಲ, ಕಾಣದೇ ಇರುವುದನ್ನು ಕಂಡದ್ದನ್ನು ಒಂದೇ ಸಮವೆಂದು ಅರಿಯಬೇಕೆಂದು ಈಕೆ ತನ್ನ ವಚನದಲ್ಲಿ ಹೇಳುತ್ತಾ, ಕೇತಲಾದೇವಿ ಸಂಸ್ಕೃತ ವಾಕ್ಯಗಳನ್ನು ತನ್ನ ಕನ್ನಡದ ವಚನದಲ್ಲಿ ಬಳಸಿದ್ದಾಳೆ. ಕೆಳವರ್ಗದ ಕಾಯಕನಿರತ ವಚನಕಾರ್ತಿಯರ ನಡುವೆ ಸಾಮಾಜಿಕವಾಗಿ, ಆರ್ಥಿಕವಾಗಿ ಅತ್ಯುತ್ತಮ ಹಿನ್ನೆಲೆಯಿಂದ ಈಕೆ ಬಂದಿರಬಹುದೆಂದು ಊಹಿಸಬಹುದು. ಆದರೆ ಎಲ್ಲ ವಚನಕಾರ್ತಿಯರ ನಿಲುವು – ಧರ್ಮಾಸಕ್ತಿ, ವ್ರತನಿಷ್ಠೆ, ಹಾಗೂ ಅಚಲಭಕ್ತಿ ಎಂಬುದು ವ್ಯಕ್ತವಾಗುತ್ತದೆ. ಅದರಂತೆ ಕೇತಲೆಯ ಇನ್ನೊಂದು ವಚನದಲ್ಲಿ ವ್ರತಹೀನರ ಸಹವಾಸದಿಂದ ದೂರವಿರಲು ಎಚ್ಚರಿಸುತ್ತಾಳೆ.
ಹದ ಮಣ್ಣಲ್ಲದೆ ಮಡಕೆಯಾಗಲಾರದು
ವ್ರತಹೀನನ ಬೆರೆಯಲಾಗದು
ಬೆರೆದಡೆ ನರಕತಪ್ಪದು
ನಾನೊಲ್ಲೆ ಬಲ್ಲೆನಾಗಿ, ಕುಂಭೇಶ್ವರಾ
– ಸ.ವ.ಸಂ.5, ವ-772, 1993
ಈ ವಚನದಲ್ಲಿ ತನ್ನ ವೃತ್ತಿಪ್ರತಿಮೆಯ ಮೂಲಕ ಕೇತಲದೇವಿ ಮಾತನಾಡಿದ್ದಾಳೆ. ಮಣ್ಣನ್ನು ಸರಿಯಾಗಿ ತುಳಿದು ಹದ ಮಾಡದೆ, ಅದು ಮಡಕೆಯಾಗದು, ಹದದ ಮಣ್ಣಿನಲ್ಲಿ ಮಾಡಿದ ಮಡಿಕೆ ಹೆಚ್ಚು ಕಾಲ ಬಾಳಿಕೆಗೆ ಬರುತ್ತದೆ. ಪ್ರಯೋಜನಕಾರಿಯಾಗುತ್ತದೆ. ಎಂಬ ಮಾತನ್ನು ತನ್ನ ವೃತ್ತಿ ಅನುಭವದ ಹಿನ್ನಲೆಯಲ್ಲಿ ಹೇಳುತ್ತ, ವ್ರತಹೀನನನ್ನು ಬೆರೆಯಬಾರದೆಂದು, ವ್ರತಭ್ರಷ್ಟರ ಸಹವಾಸ, ಸಂಪರ್ಕ ಬೆಳೆಸಿದರೆ ನರಕತಪ್ಪದೆಂದು ಸ್ಪಷ್ಟಪಡಿಸಿದ್ದಾಳೆ.
ಕುಂಬಾರ ಗುಂಡಯ್ಯನದ್ದೆಂದು ಹೇಳುವ ಉಬ್ಬು ಶಿಲ್ಪವೊಂದು ಭಾಲ್ಕಿಯಲ್ಲಿ ದೊರೆತಿದ್ದು ಈ ದಂಪತಿಗಳು ಭಾಲ್ಕಿಯಲ್ಲಿಯೇ ಲಿಂಗೈಕ್ಯರಾಗಿರಬಹುದಾಗಿದೆ. ಒಟ್ಟಾರೆ ಕಾಯಕವನ್ನೇ ತಮ್ಮ ನಿಷ್ಠೆ , ವ್ರತವನ್ನಾಗಿಸಿಕೊಂಡು ಅಪ್ಪಟ ಶರಣಜೀವಿಗಳಾಗಿ ಬಾಳಿ ಬದುಕಿದ ಈ ಶರಣ ದಂಪತಿಗಳು ನಮಗೆಲ್ಲ ದಾರಿದೀಪವಾಗಿದ್ದಾರೆ. (ಚಿತ್ರ ಕೃಪೆ : ಅಂತರ್ಜಾಲ)
ಡಾ ದಾನಮ್ಮ. ಚನಬಸಪ್ಪ. ಝಳಕಿ.
ಬೆಳಗಾವಿ
ಆಧಾರ ಗ್ರಂಥಗಳು
1. ಶರಣ ಚರಿತಾಮೃತ
2. ಶಿವಶರಣೆಯರ ಸಾಹಿತ್ಯ ಚರಿತ್ರೆ – ವಿಜಯಶ್ರೀ ಸಬರದ
3. ಬಸವೇಶ್ವರರ ಸಮಕಾಲೀನರು, ಬಸವ ಸಮಿತಿ ಬೆಂಗಳೂರು.