ಕಂಬದ ಮಾರಿತಂದೆ
12ನೇ ಶತಮಾನದ ವಚನಕಾರ. ಬಸವಣ್ಣನವರ ಸಮಕಾಲೀನ. ಇವನು ತನ್ನ ವಚನದಲ್ಲಿ ಬಸವಣ್ಣ, ಅಲ್ಲಮಪ್ರಭು, ಚನ್ನಬಸವಣ್ಣ ಇವರನ್ನು ಸ್ಮರಿಸಿದ್ದಾನೆ . ಕದಂಬ ರಾಜ್ಯದ ಇಂದಿನ ಪೊಂಡ ತಾಲೂಕಿನ ಕಾವಳೆ ಎನ್ನುವ ಹಳ್ಳಿಯವನು. ವೃತ್ತಿಯಲ್ಲಿ ಮೀನುಗಾರ. ಈತನ ವಚನದಲ್ಲಿ ಮತ್ಸ್ಯ, ತೆಪ್ಪ, ಮಡು, ಸುಳಿ ಮೊದಲಾದ ಪದಗಳಿರುವದರಿಂದ ಮೀನುಗಾರನಾಗಿದ್ದ ಎನ್ನುವದು ಇನ್ನೂ ಸ್ಪಷ್ಟವಾಗುತ್ತದೆ.
‘ಕದಂಬ ಲಿಂಗ’ ಎಂಬ ಅಂಕಿತದಲ್ಲಿ ಈತನು ಬರೆದ 11ವಚನಗಳು ದೊರಕಿವೆ. ಬಸವಾದಿ ಶರಣರ ಅನುಭಾವದ ಪ್ರಭಾವಕ್ಕೊಳಗಾಗಿ ಕಲ್ಯಾಣಕ್ಕೆ ಬರುತ್ತಾನೆ . ಇವನ ವಚನಗಳಲ್ಲಿ ವೃತ್ತಿಗೆ ಸಂಬಂಧಪಟ್ಟ ಪ್ರತಿಮೆಗಳನ್ನು ಬಳಸಿರುವನು . ಅಧ್ಯಾತ್ಮದ ನೆಲೆಯನ್ನು ತಿಳಿಸುವ ಹಲವು ಬೆಡಗಿನ ವಚನಗಳನ್ನು ಬರೆದಿದ್ದಾನೆ . ಇವನ ವಚನಗಳು ಕಾವ್ಯತ್ಮಕ ಭಾಷೆಯ ಸರಳ, ಸುಂದರ ವಚನವಾಗಿವೆ.
ನಾನಾ ಜನ್ಮಂಗಳಲ್ಲಿ ಬಂದಡೂ,
ನಾನಾ ಯುಕ್ತಿಯಲ್ಲಿ ನುಡಿದಡೂ
ನಾನಾ ಲಕ್ಷಣಂಗಳಲ್ಲಿ ಶ್ರುತ ದೃಷ್ಟ ಅನುಮಾನಂಗಳ ಲಕ್ಷಿಸಿ ನುಡಿವಲ್ಲಿ
ಏನನಹುದು, ಏನನಲ್ಲಾಯೆಂಬ ಠಾವನರಿಯಬೇಕು
ಮಾತ ಬಲ್ಲೆನೆಂದು ನುಡಿಯದೆ
ನೀತಿವಂತನೆಂದು ಸುಮ್ಮನಿರದೆ
ಆ ತತ್ಕಾಲದ ನೀತಿಯನರಿದು
ಸಾತ್ವಿಕ ಲಕ್ಷಣದಲ್ಲಿಪ್ಪಾತನ ಲಕ್ಷಣವೇ ನಿರೀಕ್ಷಣ ಕದಂಬ ಲಿಂಗಾ
ನಾವು ಆಡುವ ಮಾತುಗಳು ಸತ್ಯ, ಶುದ್ಧ, ವಾಸ್ತವದ ತಿಳಿವಳಿಕೆಯಿರುವ, ಹಿತಮಿತವಾದ ನುಡಿಗಳಾಗಿರಬೇಕು ಎಂಬುದನ್ನು ಈ ವಚನದ ಸಾಲುಗಳಲ್ಲಿ ಹೇಳಲಾಗಿದೆ.
ಮಾತನಾಡುವದಕ್ಕೆ ಮೊದಲು ಯಾವುದು ಸರಿ, ಯಾವುದು ತಪ್ಪು, ವಾಸ್ತವ ಸತ್ಯ ಯಾವುದು ಎನ್ನುವ ಸಂಗತಿಗಳನ್ನು ಅರಿತುಕೊಂಡು ಮಾತನಾಡಬೇಕು. ಮಾತು ಬಲ್ಲೆನೆಂದು ಇನ್ನೊಬ್ಬರ ಮೆಚ್ಚಿಸುವ, ಆಕರ್ಷಿಸುವ, ಚತುರತೆಯನ್ನು ತೋರುವದಕ್ಕಾಗಿ ಮಾತನಾಡಬಾರದು. ತಾನು ನೀತಿವಂತನೆಂದೂ, ಇತರರಿಗಿಂತ ಶ್ರೇಷ್ಠ ಎನ್ನುವ ಒಳಮಿಡಿತದಿಂದ ಕೂಡಿ, ಕಣ್ಮುಂದೆ ನಡೆಯುವ ಯಾವುದೇ ಪ್ರಸಂಗಗಳಿಗೆ ಪ್ರತಿಕ್ರಿಯೆ ತೋರಿಸದೇ ಸುಮ್ಮನಿರಬಾರದು. ಸಮಾಜದಲ್ಲಿ ಒಳ್ಳೆ ಯ ಕಾರ್ಯಕ್ಕೆ ಬೆಂಬಲಿಸಬೇಕು. ಕೆಟ್ಟ ಕೆಲಸಗಳು ಕಣ್ಮುಂದೆ ನಡೆದಾಗ ಅದನ್ನು ಪ್ರತಿರೋಧಿಸುವ ವ್ಯಕ್ತಿಯಾಗಿ ನಡೆದುಕೊಳ್ಳಬೇಕು. ಸಾತ್ವಿಕ ಲಕ್ಷಣದಲ್ಲಿರುವಾತನ ಲಕ್ಷಣವೆಂದರೆ, ಸರಳ, ಪ್ರಾಮಾಣಿಕ, ಹಿತಮಿತ ನಡೆನುಡಿಗಳಿಂದ ಕೂಡಿ ಬಾಳುವ ಜೀವನವೇ ಒಳ್ಳೆಯದು ಎಂಬುದನ್ನು ಅರಿತುಕೊಂಡಿರಬೇಕು ಎನ್ನುವ ಅರ್ಥವತ್ತಾದ ವಿಚಾರಗಳು ಈ ವಚನದಲ್ಲಿವೆ. ಸಾತ್ವಿಕ ಲಕ್ಷಣದಲ್ಲಿರುವಾತನ ಲಕ್ಷಣವೆಂದರೆ, ಸರಳ, ಪ್ರಾಮಾಣಿಕ, ಹಿತಮಿತ ನಡೆನುಡಿಗಳಿಂದ ಕೂಡಿ ಬಾಳುವ ಜೀವನವೇ ಒಳ್ಳೆಯದು ಎಂಬುದನ್ನು ಅರಿತುಕೊಂಡಿರಬೇಕು ಎನ್ನುವ ಅರ್ಥವತ್ತಾದ ವಿಚಾರಗಳು ಈ ವಚನದಲ್ಲಿವೆ.
‘ಕಾಯಕದಿಂದ ಕರ್ಮವ ಕಂಡು
ಭಾವದಿಂದ ಲಿಂಗವ ಕಂಡು
ಲಿಂಗದಿಂದ ಸ್ವಾನುಭಾವವಾಗಿ
ಅಂಗದ ಸಂಗಕ್ಕೆ ಹೊರಗಾಯಿತ್ತು ಕದಂಬ ಲಿಂಗವನರಿಯಲಾಗಿ ಜಂಗಮ ತತ್ವ,
ಲಿಂಗಪ್ರಜ್ಞೆ ಅರಿಯದೇ ದೇಹಕ್ಕೆ ಲಿಂಗವ ಕಟ್ಟಿದರೆ ಪ್ರಯೋಜನವಿಲ್ಲ. ತನ್ನ ಕಾಯ (ದೇಹ )ದಿಂದ ಕಾಯಕವ ಮಾಡಿ, ಭಾವದಿಂದ ಲಿಂಗಪ್ರಜ್ಞೆಯ ಕಂಡು, ಲಿಂಗದಿಂದ ಸ್ವಾನುಭಾವವಾಗಿ, ಅಂತಹ ಸ್ವಾನುಭವದ ಅರಿವಿನ ಕುರುಹು ಅಂಗಕ್ಕೆ ಸೊಂಕಿದಾಗ, ಸಮಾಜದ ಹಿತನರಿಯದೆ, ಲಿಂಗತ್ವವನರಿಯದೆ, ಲಿಂಗವ ಕಟ್ಟಿದರೆ ಅದು ಅಂಗದ ಸಂಗಕ್ಕೆ ಹೊರಗಾಯಿತ್ತು ಎಂದು ಹೇಳುತ್ತಾನೆ.
ಜಂಗಮತತ್ವ, ಲಿಂಗಪ್ರಜ್ಞೆ ಅರಿಯದೇ ದೇಹಕ್ಕೆ ಪ್ರಯೋಜನವಿಲ್ಲ ಎಂದು ಎಚ್ಚರಿಸುವ ಮೂಲಕ ಸ್ಥಾವರ ಭಾವದಿಂದ ಜಂಗಮ ಪ್ರಜ್ಞೆಗೆ ಕರೆದೊಯ್ಯುವ ದಿಟ್ಟ ಶರಣರ ಆಶಯ ಮಹತ್ತರವಾದದ್ದು. ಭಾವಲಿಂಗ ಪ್ರಾಣಲಿಂಗವಾಗಿ ಬದುಕು ನಡೆಸುವ ಶರಣರ ಜೀವನವೇ ಲಿಂಗಮಯವಾಗಿದೆ.
( Referance -ಡಾ ಶಶಿಕಾಂತ ಪಟ್ಟಣ ಅವರ ‘ಕಂಬದ ಮಾರಿತಂದೆ ಜೀವನ ಚರಿತ್ರೆಯ ಮೇಲೆ ಹೊಸಬೆಳಕು ‘ ಲೇಖನ)
ಡಾ. ಗೀತಾ ಡಿಗ್ಗೆ
ಸೋಲಾಪುರ