ಕಿನ್ನರಯ್ಯನಿಂದಲೇ ಗುರು ಎನಿಸಿಕೊಂಡ ಕಲಕೇತಯ್ಯ.
ಹನ್ನೆರಡನೆಯ ಶತಮಾನದ ಶರಣರ ಸಮೂಹದಲ್ಲಿ ಸಕಲ ವಿದ್ಯೆಗಳಲ್ಲಿ ಪಾರಾಂಗತರಾದವರನ್ನು ಕಾಣುತ್ತೇವೆ. ಮದ್ದಳೆ ಬಾರಿಸುವ, ನಾಟ್ಯಮಾಡುವ, ನಾಟಕದ ಕಲೆ ಮೈಗೂಡಿಸಿಕೊಂಡವರು, ಕಿನ್ನರಿ ನುಡಿಸುವ ಮತ್ತು ಜಾನಪದ ಕಲೆಯಲ್ಲಿ ಪರಿಣಿತರಾದವರು ಹೀಗೆ ಅನೇಕರು. ಅಂಥ ಕಲಾಕಾರರಾದ ಶರಣರಲ್ಲಿ ಕಲಕೇತಯ್ಯನವರು ಒಬ್ಬರು.
ಕಲಕೇತ ಬೊಮ್ಮಯ್ಯ,ಕಲಕೇತ ಮಾರಯ್ಯ ಹಾಗೂ ಕಲಕೇತಯ್ಯ ಎಂಬ ಹೆಸರುಗಳಿಂದ ಇವರನ್ನು ವಿಧ್ವಾಂಸರು ಗುರುತಿಸಿದ್ದನ್ನು ಕಾಣುತ್ತೇವೆ. ಬಸವ ಪುರಾಣದಲ್ಲಿ ಕಲಕೇತಯ್ಯನ ಉಲ್ಲೇಖ ಇರುವುದನ್ನು ಶರಣ ಚರಿತಾಮೃತದಲ್ಲಿ ಸಿದ್ದಯ್ಯ ಪುರಾಣಿಕರು ದಾಖಲಿಸಿದ್ದಾರೆ. ಶಿವಶರಣರ ವಚನ ಸಂಪುಟ ೭ರಲ್ಲಿ ಕಲಕೇತಯ್ಯನವರ ಕಿರು ಪರಿಚಯ ಇರುವುದನ್ನು ಗುರುತಿಸುತ್ತೇವೆ.
ಕಲಕೇತ ಬೊಮ್ಮಯ್ಯನವರ ೧೧ ವಚನಗಳು ದೊರೆತಿವೆ.
ಕುಣಿತದ ಕಾಯಕವನ್ನು ಹೊಂದಿದ ಕಲಕೇತಯ್ಯ ಜನಪದ ಕಲಾವಿದನು ಹೌದು. ಕಿಳ್ಳಿಕ್ಯಾತ ಕುಣಿತವನ್ನು ಮಾಡುತ್ತಾ, ತಲೆಯ ಮುಂಭಾಗದ ಕೂದಲು ಕಟ್ಟಿ, ಹಣೆಯಲ್ಲಿ ವಿಭೂತಿಯನ್ನು ಧರಿಸಿ, ಕಾವಿ ಬಟ್ಟೆಯನ್ನು ಉಟ್ಟು ,ಕಾಲಿಗೆ ಗೆಜ್ಜೆಯನ್ನ ಕಟ್ಟಿಕೊಂಡು ಟಗರಿನ ಕೋಡನ್ನು ಒಂದು ಕೈಯಲ್ಲಿ ,ಕೋಲೊಂದನ್ನ ಇನ್ನೊಂದು ಕೈಯಲ್ಲಿ ಹಿಡಿದುಕೊಂಡು ಕೋಲನ್ನ ತಿರುಗಿಸುತ್ತಾ ತನ್ನ ಕೈಚಳಕವನ್ನ ತೋರುತ್ತಿದ್ದ. ಗಾಳಿಯಲ್ಲಿ ತಿರುಗುವ ಕೋಲಿನಲ್ಲಿಯೇ ವಿವಿಧ ಆಕರ್ಷಕ ಭಂಗಿಗಳನ್ನು ಮಾಡುತ್ತಾ ಬೃಂಗೀಶರನಂತೆ ಕೋಡಂಗಿ ಆಟವನ್ನು ಆಡುತ್ತ ಶಿವಭಕ್ತರನ್ನು ಖುಷಿಪಡಿಸುತ್ತಿದ್ದ. ಈತನ ಕಲೆಯಿಂದ ಹರ್ಷಿತರಾದ ಶಿವಭಕ್ತರು ಈತನಿಗೆ ಕಾಣಿಕೆ ನೀಡುತ್ತಿದ್ದರು. ಭಕ್ತರಿಂದ ಬಂದ ಅಲ್ಪ ಕಾಣಿಕೆಯನ್ನು ಸ್ವೀಕರಿಸಿ ಅದನ್ನು ಬಡವರಿಗೆ ನಿರ್ಗತಿಕರಿಗೆ ಹಂಚಿ ತನ್ನ ಒಂದು ಹೊತ್ತಿನ ಗಂಜಿಗಾಗುವಷ್ಟು ಧಾನ್ಯವನ್ನು ಮಾತ್ರ ಇಟ್ಟುಕೊಳ್ಳುತ್ತಿದ್ದ. ಸತ್ಯ ಶುದ್ಧ ನಿಸಂಗ್ರಹ ವ್ಯಕ್ತಿತ್ವದ ಕಲಕೇತ ಬೊಮ್ಮಯ್ಯನ ಗುಣ ಕಂಡ ಕಿನ್ನರಯ್ಯ ಈ ವಿಷಯದಲ್ಲಿ ನೀನು ನನಗಿಂತ ಮಿಗಿಲು ಎಂದು ಹೇಳಿ ಕಲಕೇತನನ್ನು ತನ್ನ ಗುರು ಎಂದು ಹೇಳಿದ ಎಂಬ ವಿಚಾರ ಶರಣ ಸಾಹಿತ್ಯದಲ್ಲಿ ಮೂಡಿ ಬಂದದ್ದನ್ನು ನೋಡುತ್ತೇವೆ.
“ಜಗಕ್ಕಹುದಾದುದನಿತ್ತು ಜಗಕ್ಕಲ್ಲವಾದುದ ಕೊಟ್ಟು ಜಗ ಹಿಡಿದುದ ಬಿಟ್ಟು, ಜಗ ಒಲ್ಲದುದ ತೊಟ್ಟು ತಾನರಿದುದ ಮರದು, ಆ ಮರವೆಗೆ ಒಡಲಾದುದನರಿದು ಉಭಯದ ಕೋಡ ಕಿತ್ತು, ನಲಿದೊಲವಿನ ಹೊಲನ ಬಿಟ್ಟು ಕೊಂಬಿನಿರಿಕೆಯಲ್ಲಿ ಒಲದಾಡುವೆ. ಜಗಭಂಡರ ಅಂಗಳದಲ್ಲಿ ತುಳಿದಾಡುತ್ತಲಿರಬೇಕು ಮೇಖಲೇಶ್ವರಲಿಂಗ ಒಡಗೂಡುತ್ತಲಿರಬೇಕು.”
ಪ್ರಪಂಚಕ್ಕೆ ಯಾವುದರ ಅವಶ್ಯಕತೆ ಇದೆಯೋ ಅದನ್ನು ನೀಡಬೇಕು ಪ್ರಪಂಚಕ್ಕೆ ಯಾವುದರ ಅನವಶ್ಯಕತೆ ಇದೆಯೋ ಅದನ್ನು ತೆಗೆದು ಹಾಕಬೇಕು ಒಳ್ಳೆಯದೆನ್ನುವುದು ಮಾತ್ರ ಜಗತ್ತಿನಲ್ಲಿ ಶಾಶ್ವತವಾಗಿರಬೇಕು ಅರಿವು ತಿಳಿವಳಿಕೆ ಪ್ರಪಂಚಜ್ಞಾನ ಇದೆಲ್ಲವನ್ನು ಹೊಂದಿದವ ಮಾತ್ರ ಲಿಂಗದ ಮಹತ್ವವನ್ನ ಅರಿಯಬಲ್ಲ ,ಒಳ್ಳೆಯದನ್ನು ಮಾತ್ರ ಆಯ್ಕೆ ಮಾಡಿಕೊಂಡು ಇಲ್ಲ ಸಲ್ಲದನ್ನು ದೂರಸರಿಸಿ ಬದುಕ ಮುನ್ನಡೆಸಬೇಕು. ಸದಾ ಇಷ್ಟಲಿಂಗ ಆರಾಧನೆ ಶಿವ ಶರಣರ ಸಂಘ ಸತ್ಯ ಶುದ್ಧ ಕಾಯಕದಲ್ಲಿ ನಿರತರಾಗುವುದು ದಾಸೋಹ ಪರಂಪರೆಯನ್ನು ಮುನ್ನಡೆಸುವುದು ಇವು ಶಿವಶರಣರು ಅನುಸರಿಸಿಕೊಂಡು ಬಂದ ನಿಯಮಗಳು. ಶಿವಶರಣರ ವಿಚಾರಧಾರೆಗಳಿಗೆ ಗೌರವವನ್ನು ಕೊಟ್ಟು ಅಂತಹ ಜೀವನವನ್ನು ಮುನ್ನಡೆಸಿಕೊಂಡು ಬಂದವರು ಕಲಕೇತ ಬೊಮ್ಮಯ್ಯನವರು. ಕಲಕೇತ ಬೊಮ್ಮಯ್ಯನವರ ಮಹಿಮೆ ತಿಳಿದ ಬಸವಣ್ಣ ಅವರನ್ನು ಗೌರವಿಸುತ್ತಾರೆ.ತಮ್ಮ ವಚನದಲ್ಲಿಯೂ ಕೂಡ ಕಲಕೇತಯ್ಯನವರನ್ನ ಉಲ್ಲೇಖಿಸುತ್ತಾರೆ. ಅಪ್ಪ ಬಸವಣ್ಣನವರಿಂದಲೇ ಸೈ ಎನಿಸಿಕೊಂಡ ಕಲಕೇತ ಬೊಮ್ಮಯ್ಯ ತಮ್ಮ ಒಂದು ವಚನದಲ್ಲಿ ಹೀಗೆ ಹೇಳುತ್ತಾರೆ
“ಬೇಡಲೇತಕ್ಕೆ ಕಾಯಕವ ಮಾಡಿಹೆನೆಂದು ?
ಕೊಡದೊಡೆ ಒಡಗೂಡಿ ಒಯ್ಯಲೈತಕ್ಕೆ ? ಭಕ್ತರು ಮಾಡಿಹರೆಂದು ಗಡಿತಡಿಗಳಲ್ಲಿ ಕವಾಟ ಮಂದಿರಗಳ ಮುಂದೆ ಗೊಂದಿಗಳಲ್ಲಿ ನಿಂದು ಕಾಯಲೇತಕ್ಕೆ? ಈ ಗುಣ ಕಾಯಕದಂದವೇ? ಈ ಗುಣ ಹೊಟ್ಟೆಗೆ ಕಾಣದ ಸಂಸಾರದ ಪಟ್ಟುವನ ಇರುವು ಉಭಯ ಭ್ರಷ್ಟಂಗೆ ಕೊಟ್ಟ ದ್ರವ್ಯ ಮೇಖಲೇಶ್ವರ ಲಿಂಗಕ್ಕೆ ಮುಟ್ಟದೆ ಹೋಯಿತು”
ಕಾಡಿ ಬೇಡಿ ಮಾಡುವುದು ಕೂಲಿ ಎನಿಸಿಕೊಳ್ಳುತ್ತದೆ ಹೊರತು ಅದು ಕಾಯಕವೇನಿಸಿಕೊಳ್ಳುವುದಿಲ್ಲ . ನಾನೇ ಮಾಡಿದೆ ನಾನೇ ಮಾಡುತ್ತೇನೆ ಎಂಬ ಭಾವ ನಮ್ಮ ಮನಸ್ಸಿನಲ್ಲಿ ಹುಟ್ಟಿದರೆ ಅದು ಕರ್ಮವಾಗುತ್ತದೆ ಹೊರತು ಕಾಯಕವಾಗಲಾರದು. ಬಯಸದೆ, ಇಚ್ಚಿಸದೆ ಯಾವುದೇ ಭ್ರಮೆಯನ್ನು ಇಟ್ಟುಕೊಳ್ಳದೆ ಭಕ್ತಿಯಿಂದ ಮಾಡುವ ಪ್ರತಿಯೊಂದು ಕಾರ್ಯವು ನಿಜವಾದ ಕಾಯಕವೇನಿಸಿಕೊಳ್ಳುತ್ತದೆ. ಕಾಯಕಕ್ಕೆ ಬೆಲೆ ಇದೆ ಹೊರತು ಕರ್ಮಕ್ಕಲ್ಲ.ಹೀಗಾಗಿ ನಾನು ಶ್ರೇಷ್ಠವಾದ ಕಾಯಕವನ್ನೇ ಮಾಡುತ್ತೇನೆ ಎಂಬ ಭಾವ ಕಲಕೇತರ ಈ ವಚನದಲ್ಲಿ ಮೂಡಿ ಬಂದದ್ದನ್ನು ಗುರುತಿಸುತ್ತೇವೆ.
ನಿಜವಾದ ಕಾಯಕದ ಮಹತ್ವವನ್ನು ತಿಳಿಸಿಕೊಟ್ಟ ಕಲಕೇತಯ್ಯ ಶ್ರೇಷ್ಠ ಕಾಯಕಯೋಗಿ ಎಂದರೆ ತಪ್ಪಾಗಲಾರದು ಇಂತಹ ಕಾಯಕಯೋಗಿ ಕಲ್ಯಾಣದ ಶರಣರೊಡಗೂಡಿ ತನ್ನ ಕಾಯಕದೊಂದಿಗೆ ನಿತ್ಯದಾಸೋಹವನ್ನು ಮಾಡುತ್ತ ಬಂದವರು. ಕೊನೆಗೆ ಕಲಿಕೇತಯ್ಯನವರು ಕಲ್ಯಾಣದಲ್ಲಿಯೇ ಐಕ್ಯರಾಗುತ್ತಾರೆ. ಹೀಗೆ ಕಲ್ಯಾಣದ ಕಲಕೇತಯ್ಯ ನಿಜಶರಣರಿಗೆ ಮಾರ್ಗದರ್ಶಕರಾಗಿದ್ದರು. ಇಂತಹ ಅಪ್ರತಿಮ ಶರಣರೊಬ್ಬರು ತಮ್ಮ ಕಾಯಕದೊಂದಿಗೆ ದಾಸೋಹ ಮಾಡುತ್ತ ಬಸವಣ್ಣನವರ ಪ್ರೀತಿಗೆ ಪಾತ್ರರಾಗಿದ್ದರು ಎಂದು ತಿಳಿದುಕೊಳ್ಳುವಂತೆ ಮಾಡಿದ ಅಕ್ಕನ ಅರಿವು ಸಂಘಟನೆಗೆ ಹಾಗೂ ಡಾ. ಪಟ್ಟಣ ಸರ್ ಅವರಿಗೆ ನನ್ನ ಧನ್ಯವಾದಗಳು ನನ್ನ ಅಲ್ಪಮತಿಗೆ ತಿಳಿದ ವಿಷಯವನ್ನು ತಮ್ಮ ಮುಂದೆ ಇಟ್ಟಿರುವೆ ತಮಗೆ ಗೊತ್ತಿರುವ ವಿಷಯವನ್ನು ನನಗೆ ತಿಳಿಸಿದರೆ ಮುಂದಿನ ಲೇಖನದಲ್ಲಿ ಅಳವಡಿಸಿಕೊಳ್ಳುವೆ. ತಪ್ಪುಗಳೆನಾದರೂ ಇದ್ದರೆ ತಿಳಿಸಿರಿ ತಿದ್ದಿಕೊಳ್ಳುವೆ.
ಚಿತ್ರ ಕೃಪೆ : ಅಂತರ್ಜಾಲ
ಡಾ.ಪ್ರಿಯಂವದಾ .ಅಥಣಿ.
ಸದಸ್ಯರು ಅಕ್ಕನ ಅರಿವು
ವಚನ ಅಧ್ಯಯನ ವೇದಿಕೆ
ಬಸವಾದಿ ಶರಣರ ಚಿಂತನಕೂಟ.