spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ದಿಟ್ಟ ಶರಣ ಧೀರ ಗಣಾಚಾರಿ ಕಿನ್ನರಿ ಬ್ರಹ್ಮಯ್ಯ

ಹನ್ನೆರಡನೆಯ ಶತಮಾನದ ದಿಟ್ಟ ಶರಣ ಧೀರ ಗಣಾಚಾರಿ ಕಿನ್ನರಿ ಬ್ರಹ್ಮಯ್ಯ ಅವಿರಳ ಅನುಭಾವಿ ವಚನಕಾರ . ಕಿನ್ನರಿ ಬ್ರಹ್ಮಯ್ಯನು ಮೂಲತಃ ಆಂಧ್ರಪ್ರದೇಶದ ಪೂದೂರ (ಊಡೂರು) ಗ್ರಾಮಕ್ಕೆ ಸೇರಿದ ಈತ ಅಲ್ಲಿ ಅಕ್ಕಸಾಲಿಗನಾಗಿದ್ದು, ಈತನ ತಾಯಿ ಕಲಿದೇವಿ ಎಂದು ತಿಳಿದು ಬರುತ್ತದೆ. ಅಕ್ಕಸಾಲಿಗ ವೃತ್ತಿಯನ್ನು ಬಿಟ್ಟು ಆಧ್ಯಾತ್ಮಿಕ ಹಸಿವಿಗೆ ಕಲ್ಯಾಣಕ್ಕೆ ಬಂದು ತ್ರಿಪುರಾಂತಕೇಶ್ವರನ ಮುಂದೆ ಕಿನ್ನರಿ ನುಡಿಸುವ ಕಾಯಕವನ್ನು ಕೈಕೊಳ್ಳುತ್ತಾನೆ. ಅಂತೆಯೇ ಕಿನ್ನರಿ ನುಡಿಸುವ ಈತನನ್ನು ಕಿನ್ನರಿ ಬ್ರಹ್ಮಯ್ಯ ಎಂದು ಕರೆಯಲಾಗುತ್ತದೆ.

ಈತನು ಇಂದಿನ ಹುಮನಾಬಾದ ತಾಲೂಕಿನ ಹಳ್ಳಿಖೇಡದಲ್ಲಿ ತನ್ನ ವೃತ್ತಿ ಮತ್ತು ಸಾಧನೆಯನ್ನು ಕೈಕೊಂಡ ನೇರ ನಿಷ್ಟುರ ಸ್ವಭಾವದ ಶರಣನು.ಹಳ್ಳಿಖೇಡದಲ್ಲಿ ಈಗಲೂ ಕಿನ್ನರಿ ಬ್ರಹ್ಮಯ್ಯನ ದಿಬ್ಬವನ್ನು ಮತ್ತು ಸುಮಾರು ಕಿನ್ನರಿ ಬ್ರಹ್ಮಯ್ಯನ ಆರು ಕಲ್ಲಿನ ಮೂರ್ತಿಗಳನ್ನು ನಾವು ಕಾಣಬಹುದು. ಉತ್ತಮ ಮಾಟದ ಕಿನ್ನರಿ ಈತನ ಸಂಗಾತಿಯಾಗಿತ್ತು. ಅನುಭವ ಮಂಟಪಕ್ಕೆ ಬರುವ ಸಾಧಕರನ್ನು ಮಂಗಳಮಯ ಕಿನ್ನರಿಯ ವಾದ್ಯ ಸಂಗೀತದೊಂದಿಗೆ ಬರಮಾಡಿಕೊಳ್ಳುವುದು ಈತನ ವೃತ್ತಿಯಾಗಿತ್ತು.

- Advertisement -

ಕಲ್ಯಾಣ ಕ್ರಾಂತಿಯ ನಂತರದ ದಿನಗಳಲ್ಲಿ ಚೆನ್ನ ಬಸವಣ್ಣನವರ ಜೊತೆಗೆ ಕೊನೆವರೆಗೂ ನಿಂತು ವಚನಗಳನ್ನು ಉಳಿಸಿಕೊಟ್ಟ ಧೀಮಂತ ಶರಣನು.ಕಿನ್ನರಿ ಬ್ರಹ್ಮಯ್ಯನು ಹದಿನೆಂಟು ( 18 ) ವಚನಗಳನ್ನು ರಚಿಸಿದ್ದಾನೆ.ಈತನ ವಚನಗಳ ಅಂಕಿತವು – ತ್ರಿಪುರಾಂತಕ ಲಿಂಗ .ಈತನ ವಚನಗಳಲ್ಲಿ ವಿನಯತೆ ಭ್ರತ್ಯಾಚಾರ ಸರಳತೆ ದೇವನೊಲಿಮೆಯ ಬಗೆ ಆಕಾರ ನಿರಾಕಾರ ಕಾಯಗುಣ ಕಾಣಬಹುದು. ತನು ಮನ ಧನ ಶುಚಿತ್ವ ಬೆಡಗುಗಳಿಂದ ಮತ್ತು ಉತ್ಕೃಷ್ಟ ಭಾವದ ಅನುಭಾವವನ್ನ ಕಿನ್ನರಿ ಬ್ರಹ್ಮಯ್ಯನ ವಚನಗಳಲ್ಲಿ ನೋಡುತ್ತೇವೆ.

ಹುಟ್ಟಿತ್ತಲ್ಲಾ ಉಂಟೆನಿಸಿತ್ತಲ್ಲಾ.
ಕರುವಿಟ್ಟಿತ್ತಲ್ಲಾ ರೂಪಾಯಿತ್ತಲ್ಲಾ.
ನೋಡ ನೋಡ ವಾಯುಗುಂದಿತ್ತಲ್ಲಾ.
ನೋಡ ನೋಡ ಭಾವಗುಂದಿತ್ತಲ್ಲಾ.
ಅರಿವು ವಿಕಾರದಲ್ಲಿ ಆಯಿತ್ತು, ಹೋಯಿತ್ತು,
ಮಹಾಲಿಂಗ ತ್ರಿಪುರಾಂತಕಾ, ನಿಮಗೆರಗದ ತನು.

ಪಿಂಡಾಂಡ ಹುಟ್ಟಿತು ,ಕಾರಣಕ್ಕೆ ಉಂಟೆನಿಸಿತ್ತಲ್ಲಾ. ಜೀವ ಜಾಲದ ಮಧ್ಯೆ ಗಣನೆಗೆ ತೆಗೆದುಕೊಳ್ಳುವ ಹಾಗಾಯಿತು ಜೀವ. ಮುಂದೆ ಈ ಜೀವ ಇನ್ನೊಂದು ಜೀವವನ್ನು ಸೃಷ್ಟಿಸಿತು ವಂಶಾಭಿವೃದ್ಧಿಯಾಯಿತು ಕರುವಿಟ್ಟಿತ್ತಲ್ಲಾ ರೂಪಾಯಿತ್ತಲ್ಲಾ. ಆ ಹುಟ್ಟಿದ ಕರುವಿಂಗೆ ರೂಪ ವಿಶೇಷಣ ನೀಡಿ ಮಾಂಸ ಪಿಂಡಕ್ಕೆ ರೂಪ ಕಾರಣ ಕೊಡುವ ಕಾರ್ಯ ನಡೆಯುತ್ತದೆ. ಸಾಂಸಾರಿಕ ಪ್ರಾಪಂಚಿಕ ಮಡುವಿನಲ್ಲಿ ಸಿಕ್ಕುಕೊಳ್ಳುವ ಭಕ್ತನು . ಹಾಗಾದಲ್ಲಿ ನೋಡು ನೋಡುತ್ತಲೇ ವಾಯುಗುಣದಿ ಭಾವಗುಂದಿ ಮರಣ ಹೊಂದುವ ಆವಸ್ಥೆಯಲ್ಲಿ ಅರಿವೇ ವಿಕಾರವಾಗಿಹೋಗುತ್ತದೆ . ತ್ರಿಪುರಾಂತಕ ಲಿಂಗವೆಂಬ ಸಮಷ್ಟಿಯನ್ನು ಅರಿಯದ ಕಾಯ ತನುವು ಸಮಾಜಕ್ಕೆ ರಾಗದ ದೇಹವು ವ್ಯರ್ಥವಾಗುವುದು ಎಂದು ಮರುಗಿದ್ದಾನೆ. ಕಿನ್ನರಿ ಬ್ರಹ್ಮಯ್ಯ.ಮನುಷ್ಯನ ಹುಟ್ಟಿನ ಸಾರ್ಥಕತೆ ಆತನ ಸಮಾಜಮುಖಿ ಚಟುವಟಿಕೆಯಿಂದ ರೂಪಗೊಳ್ಳಬೇಕು, ಇಲ್ಲದಿದ್ದರೆ ಅಂತಹ ಕಾಯವು ರೋಗ ರುಜಿನಕ್ಕೆ ತುತ್ತಾಗಿ ವ್ಯರ್ಥವಾಗಿ ಹೋಗುತ್ತದೆ.

- Advertisement -

ಆಕಾರವೆಂಬೆನೆ ನಿರಾಕಾರವಾಗಿದೆ
ನಿರಾಕಾರವೆಂಬೆನೆ ಅತ್ತತ್ತ ತೋರುತ್ತದೆ.
ತನ್ನನಳಿದು ನಿಜವುಳಿದ
ಮಹಾಲಿಂಗ ತ್ರಿಪುರಾಂತಕನ ನಿಲವ ಕಂಡು ಒಳಕೊಂಡ
ಮರುಳಶಂಕರದೇವರ ಮೂರ್ತಿಯ ನಿಮ್ಮಿಂದ ಕಂಡು
ಬದುಕಿದೆನು ಕಾಣಾ ಸಂಗನಬಸವಣ್ಣಾ.

ನಿರಾಕಾರ ತತ್ವವನು ಅರಿಯಲು ಲಿಂಗವೆಂಬ ಆಕಾರ ಕುರುಹು ಕರಸ್ಥಳಕ್ಕಿಡಲು ಆ ಲಿಂಗವು ನಿರಾಕರವಾಗಿತ್ತು,ಅದನ್ನು ನಿರಾಕರವೆಂದು ಪರಿಗಣಿಸಿದರೆ ಅದು ಅತ್ತತ್ತ ನೋಡುತ್ತದೆ, ವ್ಯಕ್ತಿ ತನ್ನನಳಿದು ನಿಜವುಳಿದ ಮಹಾಲಿಂಗ ತ್ರಿಪುರಾಂತಕನ ನಿಲುವ ಕಂಡು ಒಳಕೊಂಡ ಮರುಳ ಶಂಕರ ದೇವರ ಮೂರ್ತಿಯ ನಿಮ್ಮಿಂದ ಕಂಡು ಬದುಕಿದೆನು .ಆಕಾರ ನಿರಾಕಾರ ಅಳಿದು ತನ್ನ ತಾನರಿವ ಮಹಾಗಣ ಜ್ಞಾನವ ಪಡೆವುದೇ ಯೋಗ. ಅಂತಹ ಒಬ್ಬ ಕ್ರಿಯಾ ಮೂರ್ತಿಯಾದ ಮರುಳ ಶಂಕರ ದೇವರು . ಅಂಗ ಹಂಗು ತೊರೆದು ಲಿಂಗ ಭಾವಕ್ಕೆ ಅಂಟಿಕೊಳ್ಳದೆ ಅನಾಮಿಕರಾಗಿ ಸೇವೆಯೇ ಪರಮ ಗುರಿಯೆಂದು ನಂಬಿದ ಮರುಳ ಶಂಕರ ದೇವರ ಗಂಜಿಯ ಗುಂಡದಲ್ಲಿ ಯಾರಿಗೂ ಗೊತ್ತಿರದೆ ಹತ್ತು ವರುಷವಿದ್ದರೆಂದು ತಿಳಿದು ಬರುತ್ತದೆ .ಅಂತಹ ಮಹಾ ಮಣಿಹ ಮರಳು ಶಂಕರ ದೇವರನ್ನು ಅಲ್ಲಮರು ಗುರುತಿಸಿ ಗುಂಡದಿಂದ ಹೊರ ತೆಗೆದರೆಂದು ಪುರಾಣ ಹೇಳುತ್ತವೆ. ಬಸವಣ್ಣ ಮತ್ತು ಅಲ್ಲಮರ ಸಂವಾದದಲ್ಲಿ ಆಕಾರ ನಿರಾಕಾರ ಹೊರತು ಪಡಿಸಿ ನಿಜ ಜಂಗಮ ತತ್ವಗಳನ್ನು ಪಾಲಿಸಿದ ಮರುಳ ಶಂಕರ ದೇವರ ನಿಲುವು ಘನವಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿ ಅಲ್ಲಮರೊಂದಿಗೆ ಬಸವಣ್ಣ ಮತ್ತು ಮರುಳ ಶಂಕರದೇವರನ್ನು ಕಿನ್ನರಿ ಎಂಬ ಮಂಗಳ ವಾದ್ಯ ಬಾರಿಸುತ್ತ ಅನುಭವ ಮಂಟಪಕ್ಕೆ ಕರೆ ಕಿನ್ನರಿ ಬ್ರಹ್ಮಯ್ಯ ತರುತ್ತಾರೆ.

ನಿರ್ಮಲ ಮನಸ್ಸಿನ ಅಕ್ಕನ ಬಗ್ಗೆ ಅರ್ಥವಿಲ್ಲದ ವಿಷಯಗಳನ್ನು ದಾಖಲಿಸಿ ಅವಳನ್ನು ಬೆತ್ತಲೆಗೊಳಿಸಿದ್ದು ಇತಿಹಾಸಕ್ಕೆ ಮಾಡಿದ ಅಪಚಾರ .ಅಕ್ಕ ದೇವನನ್ನು ಶೋಧಿಸುತ್ತ ಅರಸುತ್ತ ಕಲ್ಯಾಣಕ್ಕೆ ಬರುವಳು .ಅಲ್ಲಿ ಕಿನ್ನರಿ ಬ್ರಹ್ಮಯ್ಯ ದೈಹಿಕ ಪರೀಕ್ಷೆ ಮಾಡುತ್ತಾನೆ . ಅವಳ ತಲೆ ಮುಟ್ಟಿ ಉದರ ಮುಟ್ಟಿ ಗುಹ್ಯ ಮುಟ್ಟಿ ಹೀಗೆ ದೇಹದ ವಿವಿಧ ಭಾಗಗಳನ್ನು ಕಿನ್ನರಿ ಬ್ರಹ್ಮಯ್ಯ ಮುಟ್ಟಿದಾಗ ಲಿಂಗ ಚೈತನ್ಯದ ಅನುಭಾವ ಕಂಡು ಬಂತು ಎಂದು ಕಿನ್ನರಿ ತನ್ನ ವಚನವೊಂದರಲ್ಲಿ ಹೇಳಿಕೊಂಡಿದ್ದು ಆ ವಚನದ ಖಚಿತತೆ ಮತ್ತು ಸತ್ಯತೆಯ ಬಗ್ಗೆ ಪರಾಮರ್ಶೆ ಮಾಡುವುದು ಈಗ ಅಗತ್ಯ ಮತ್ತು ಅನಿವಾರ್ಯವಾಗಿದೆ . ಅದು ಕೇವಲ ಮೌಖಿಕ ಮತ್ತು ತಾತ್ವಿಕ ವಾಗ್ವಾದ ಚರ್ಚೆ . ಇದನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಏನೇನೋ ಕಲ್ಪಿಸಿ ಅಕ್ಕನ ಮಾನ ಹರಣಕ್ಕೆ ಮುಂದಾಗಿದ್ದಾರೆ .ಶೂನ್ಯ ಸಂಪಾದನೆಯ ಕೃತಿಯಲ್ಲಿ ಇದನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಬಿಂಬಿಸಿದ್ದಾರೆ.

ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕಿನ್ನರಿ ಬ್ರಹ್ಮಯ್ಯನು ತನ್ನ ಒಂದು ವಚನದಲ್ಲಿ ಹೇಳಿದ್ದಾರೆ .

ಶರಣಾರ್ಥಿ ಶರಣಾರ್ಥಿ ಎಲೆ ನಮ್ಮವ್ವ,
ಶರಣಾರ್ಥಿ ಶರಣಾರ್ಥಿ ಕರುಣ ಸಾಗರ ನಿಧಿಯೆ,
ದಯಾಮೂರ್ತಿ ತಾಯೆ, ಶರಣಾರ್ಥಿ!
ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕು,
ನೀವು ಬಿಡಿಸಿದರಾಗಿ ನಿಮ್ಮ ದಯದಿಂದ
ನಾನು ಹುಲಿನೆಕ್ಕಿ ಬದುಕಿದೆನು ಶರಣಾರ್ಥಿ ಶರಣಾರ್ಥಿ ತಾಯೆ.

ಅಕ್ಕ ಮಹಾದೇವಿ ತಾಯಿಯೇ ಶರಣಾರ್ಥಿ ದಯಾಮೂರ್ತಿ ಕರುಣಾಸಾಗರ ನಿಧಿಯೇ ಪ್ರಾಪಂಚಿಕ ಬದುಕಿನಲ್ಲಿ ಪಾರಮಾರ್ಥಿಕ ತೊಡಕನ್ನು ಬಿಡಿಸಿದ ವೈರಾಗ್ಯ ಮೂರ್ತಿ ಅಕ್ಕ ಮಹಾದೇವಿ ಶ್ರೀಪಾದ ದಯೆಯಿಂದ ನಾನು ಹುಲಿಯ ಜೊತೆ ಸೆಣಸಾಡಿ ಅದನ್ನು ಹೆಕ್ಕಿ ಬದುಕಿದೆನು ಶರಣಾರ್ಥಿ ತಾಯಿ ಎಂದು ಕಿನ್ನರಿ ಬ್ರಹ್ಮಯ್ಯನು ಅತ್ಯಂತ ವಿನಮ್ರ ಭಾವದಿಂದ ಅಕ್ಕ ಮಹಾದೇವಿಯ ಬಗ್ಗೆ ಗೌರವಪೂರ್ವಕವಾಗಿ ಹೇಳಿದ್ದಾನೆ.

ಕಾಯದಲ್ಲಿ ಕಳವಳವಿರಲು,
ಪ್ರಾಣದಲ್ಲಿ ಮಾಯೆಯಿರಲು,
ಏತರ ಗಮನ ಏತರ ನಿರ್ವಾಣ.
ಮಹಾಲಿಂಗ ತ್ರಿಪುರಾಂತಕ ನಿನ್ನ ಸಂಹಾರಿ ಎಂಬನಲ್ಲದೆ
ಸಜ್ಜನೆಯೆಂದು ಕೈವಿಡಿವನಲ್ಲ.

ಕಿನ್ನರಿ ಬ್ರಹ್ಮಯ್ಯನವರ ಅತ್ಯಂತ ಅರ್ಥಪೂರ್ಣ ವಚನವಿದು . ಶರೀರದಲ್ಲಿ ಸಾಂಸಾರಿಕ ಕಳವಳವಿರಲು ಪ್ರಾಣದಲ್ಲಿ ಮಾಯೆಯ ಆಶೆ ಆಮಿಷವಿರಲು ಏತರ ಗಮನ ಏತರ ನಿರ್ವಾಣ ಮಹಾಲಿಂಗ ತ್ರಿಪುರಾಂತಕ ವಿಷಯಗಳ ಸಂಹಾರಿಯಲ್ಲದೆ ನಿಜ ಸಜ್ಜನವು ಕೈವಿಡಿವನಲ್ಲ ಎಂದಿದ್ದಾರೆ ಕಿನ್ನರಿ ಬ್ರಹ್ಮಯ್ಯನವರು.ವಿಷಯ ಆಮಿಷ ಕಾಯದ ಕಳವಳಿಸಲು ಚಿತ್ತ ಚಂಚಲವಾಗಿ ಪ್ರಾಣದಲ್ಲಿ ಮಾಯೆಗೆ ಹಂಬಲಿಸುವೊಡೆ ಸಜ್ಜನ ಸದ್ಗುಣ ಅನುಭವ ಅನುಭೂತಿ ಹೇಗೆ ಸಾಧ್ಯ ಎಂದಿದ್ದಾನೆ ಕಿನ್ನರಿ ಬ್ರಹ್ಮಯ್ಯ.
.

ಕಲ್ಯಾಣ ಕ್ರಾಂತಿಯ ನಂತರದಲ್ಲಿ ಕಿನ್ನರಿ ಬ್ರಹ್ಮಯ್ಯನವರ ಪಾತ್ರ

ಕಲ್ಯಾಣ ಕ್ಷಿಪ್ರ ಕ್ರಾಂತಿಯ ನಂತರ ನಡೆದ ಹೋರಾಟದಲ್ಲಿ ಕಿನ್ನರಿ ಬ್ರಹ್ಮಯ್ಯನು ಚೆನ್ನಬಸವಣ್ಣನವರೊಂದಿಗೆ ನಿಂತು ವಚನಗಳ ಕಟ್ಟುಗಳನ್ನು ಅನೇಕ ಶರಣರ ಮೇಲೆ ಹೊರಿಸಿ ಅವುಗಳನ್ನು ಸನಾತನವಾದಿಗಳಿಂದ ರಕ್ಷಿಸಲು ಕಿನ್ನರಿ ಬ್ರಹ್ಮಯ್ಯನ . ಮುರುಗೋಡ ಕಾದ್ರೊಳ್ಳಿ ಲಿಂಗನಮಠ ಕಕ್ಕೇರಿ ಜಗಳಬೆಟ್ಟ ಹೆಣಕೊಳ್ಳದ ಮಾರ್ಗವಾಗಿ ಕಿನ್ನರಿ ಬ್ರಹ್ಮಯ್ಯನು ಕಳಚೂರ್ಯರ ಸೇನೆಯೊಂದಿಗೆ ಯುದ್ಧ ಮಾಡುತ್ತಾ ಸೆಣೆಸಾಡುತ್ತಾ ವಚನಗಳ ಕಟ್ಟುಗಳನ್ನು ಉಳವಿಯ ದಟ್ಟ ಅರಣ್ಯದ ಮಧ್ಯೆ ಸಾಗಿಸಲು ನೆರವಾದನು . ಒಂದು ಹಂತದಲ್ಲಿ ಸೇನೆಗಳ ಪ್ರಬಲ ಶಕ್ತಿ ಹೆಚ್ಚಾಗಲು ಶರಣರ ತಂಡದಲ್ಲಿ ಕೆಲವೇ ಕೆಲವರು ಉಳಿದುಕೊಂಡಿರಲು ಸೈನಿಕರ ಆಕ್ರಮಣದ ಭೀತಿ ಶರಣರನ್ನು ಕಾಡತೊಡಗುತ್ತದೆ. ಆಗ ರಾತ್ರಿಯೆಲ್ಲ ನದಿಯ ತಿರುವನ್ನೇ ಬೇರೆ ಕಡೆಗೆ ತಿರುವಿ ಸೋವಿದೇವನ ಸೈನಿಕರಿಗೆ ನದಿಯನ್ನು ದಾಟಲಾಗದ ಹಾಗೆ ಮಾಡಿ ಅವರನ್ನು ನಿಯಂತ್ರಿಸುತ್ತಾನೆ .

ದಿಟ್ಟ ಗಣಾಚಾರಿ ಕಿನ್ನರಿ ಬ್ರಹ್ಮಯ್ಯನು ಅನೇಕ ದಿನಗಳವರೆಗೆ ಉಳವಿಯಲ್ಲಿ ಇದ್ದು ವಚನಗಳ ಕಟ್ಟುಗಳನ್ನು ರಕ್ಷಿಸುತ್ತಾನೆ. ಕಿನ್ನರಿ ಬ್ರಹ್ಮಯ್ಯನವರ ಸಮಾಧಿಯು ಉಳವಿಯಲ್ಲಿಯೇ ಇದೆ. ಸಮಾಧಿ ಹೊರಗೆ ಶಿವನ ತ್ರಿಶೂಲಾಕಾರದ ಚಿತ್ರವಿದೆ. ಕೆಲವು ವರುಷಗಳ ಹಿಂದೆ ಆ ಸಮಾಧಿಯ ಗುಡಿಯ ಮೇಲೆ ಕಿನ್ನರಿ ಬ್ರಹ್ಮಯ್ಯನ ಸಮಾಧಿಯೆಂದು ಕೆತ್ತನೆ ಇತ್ತು ಈಗ ಅದು ಸಂಪೂರ್ಣ ನಶಿಸಿ ಹೋಗಿದೆ.ಕಿನ್ನರಿ ಬ್ರಹ್ಮಯ್ಯನವರ ಬಗ್ಗೆ ಅನೇಕ ಊಹಾಪೋಹಗಳ ಕಟ್ಟುಕಥೆಗಳಿವೆ .ಅವುಗಳಿಗೆ ಹೊರತಾಗಿ ಒಂದು ಸದೃಢ ಮನಸಿನ ಕ್ರಿಯಾಶೀಲತೆಯನ್ನು(Irony) ಹೊಂದಿದ ಶ್ರೇಷ್ಠ ವಚನಕಾರ ಯೋಧ ಶರಣನು.

ಡಾ. ಶಶಿಕಾಂತ.ರುದ್ರಪ್ಪ ಪಟ್ಟಣ ಪುಣೆ
9552002338

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group