ಡೋಹರ ಕಕ್ಕಯ್ಯ
12ನೆಯ ಶತಮಾನ ಒಂದು ಕ್ರಾಂತಿಯ ಕಾಲ. ಶ್ರೇಣಿಕೃತ ಸಮಾಜ ವ್ಯವಸ್ಥೆಯಲ್ಲಿ ವರ್ಗ ವರ್ಣ ಲಿಂಗಭೇದಗಳೆಂಬ ಕಂದಕಗಳು ನಿರ್ಮಾಣವಾಗಿ ಉಚ್ಚ –ನೀಚ ಶ್ರೇಷ್ಠ- ಕನಿಷ್ಠ ಬಡವ- ಶ್ರೀಮಂತ ಸ್ಪೃಶ್ಯ- ಅಸ್ಪೃಶ್ಯ ಹೆಣ್ಣು– ಗಂಡು ಪ್ರಭು- ಪ್ರಜೆ ಎಂಬ ದ್ವೈತ ಕಲ್ಪನೆ ಉಲ್ಬಣಗೊಂಡು ಇಡೀ ಸಮಾಜವನ್ನು ಮಾನವೀಯ ಸಂಬಂಧಗಳಿಂದ ಕಡಿದು ಹಾಕಿತ್ತು. ಆ ಸ್ಥಿತಿಯನ್ನು ಕಂಡು ಸಮ ಸಮಾಜವನ್ನು ನಿರ್ಮಾಣ ಮಾಡುವ ವಿಚಾರಗಳಿಂದ ಬಸವಣ್ಣನವರು ಸಮಾನತೆ, ಸ್ವಾತಂತ್ರ್ಯ ಎಂಬ ಜೀವನ ಮೌಲ್ಯಗಳ ಆಧಾರದ ಮೇಲೆ ಸಮ ಸಮಾಜದ ಸುಂದರ ಸೌದ ನಿರ್ಮಿಸಲು ಮುಂದಾದರು.
ಕೆಳ ವರ್ಗದವರನ್ನು ಅತ್ಯಂತ ಹೀನಾಯವಾಗಿ ಕಾಣುತ್ತಿದ್ದ ಅಂದಿನ ಸಮಾಜದಲ್ಲಿ ಮೇಲ್ಜಾತಿಯಲ್ಲಿ ಜನಿಸಿದ ಬಸವಣ್ಣನವರು ಯಾವುದೇ ಅಹಂಕಾರ ತೋರಿಸದೆ, ತಮ್ಮ ಮೇಲರಿಮೆಯನ್ನು ನಿರಸನಗೊಳಿಸಿಕೊಂಡು ಅತಿ ಕನಿಷ್ಠವೆನಿಸಿದ ಅಸ್ಪೃಶ್ಯರ ಜೊತೆ ತಮ್ಮನ್ನು ಸಮೀಕರಿಸಿಕೊಂಡು *ಅಪ್ಪನು ನಮ್ಮ ಮಾದಾರ ಚೆನ್ನಯ್ಯ* *ಬೊಪ್ಪನು ನಮ್ಮ ಡೋಹರ ಕಕ್ಕಯ್ಯ**ಎಂದು ಹೇಳುತ್ತಾ ಅವರೊಡನೆ ಬೆರೆತು ಅವರಲ್ಲಿ ಆತ್ಮ ವಿಶ್ವಾಸವನ್ನು ತುಂಬಿದವರು ಬಸವಣ್ಣನವರು.
12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಮಹಾಕ್ರಾಂತಿ ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವುದೇ ಆಗಿತ್ತು. ಮಾನವ ಕುಲದ ಕಲ್ಯಾಣಕ್ಕಾಗಿ ಸಮತೆ, ಸ್ವಾತಂತ್ರ್ಯ, ಬಂದುತ್ವ, ಮಾನವೀಯತೆಯ ತಳಹದಿಯ ಮೇಲೆ ಪ್ರಜಾಪ್ರಭುತ್ವ ಮಾದರಿಯ ಅನುಭವ ಮಂಟಪ ನಿರ್ಮಿಸಿ, ಜಾತಿ ವರ್ಗ ವರ್ಣ ಲಿಂಗಬೇಧ ರಹಿತವಾದ ಸರ್ವ ಸಮಾನತೆಯ ಸಮಾಜ ವನ್ನು ಕಟ್ಟಲು ಬಸವಣ್ಣನವರು ಮುಂದಾದರು. ಅವರ ಕೀರ್ತಿ ಎಲ್ಲ ಕಡೆ ಹರಡಿತ್ತು. ಆ ಸಮಯದಲ್ಲಿ ಬಸವಣ್ಣನವರ ಕಾರ್ಯವನ್ನು ಅವರ ಕೀರ್ತಿಯನ್ನು ಕೇಳಿ ದೇಶದ ಬೇರೆ ಬೇರೆ ಭಾಗದಿಂದ ಸಾಕಷ್ಟು ಜನರು ಕಲ್ಯಾಣಕ್ಕೆ ಬಂದರು. ಅವರಲ್ಲಿ ಡೋಹರ ಕಕ್ಕಯ್ಯನವರು ಒಬ್ಬರು.
ಡೋಹರ ಕಕ್ಕಯ್ಯನವರು ಚಂಡಾಲರಲ್ಲಿ ಒಂದು ಪಂಗಡವಾದ ಡೋಹರ ಪಂಗಡಕ್ಕೆ ಸೇರಿದವರು. ಚರ್ಮವನ್ನು ಹದ ಮಾಡುವುದು ಆತನ ವೃತ್ತಿಯಾಗಿತ್ತು. ಆತ ಬಸವಣ್ಣನವರ ಮತ್ತು ಬೇರೆ ಶರಣರ ಆಚಾರ ವಿಚಾರಗಳಿಂದ ಪ್ರಭಾವಿತನಾಗಿ ಲಿಂಗ ದೀಕ್ಷೆಯನ್ನು ಹೊಂದಿ ತನ್ನ ಆಚಾರ ಮತ್ತು ಸಂಪನ್ನತೆಯಿಂದ ಒಳ್ಳೆಯ ಹೆಸರನ್ನು ಪಡೆದುಕೊಂಡನು .ಹೀಗಾಗಿ ಬಸವಣ್ಣನವರಿಗೆ ಕಕ್ಕಯ್ಯನವರ ಬಗ್ಗೆ ವಿಶೇಷವಾದ ಗೌರವವಿತ್ತು. ಕಕ್ಕಯ್ಯನಿಗೆ ಬಸವಣ್ಣನವರ ಬಗ್ಗೆ ಅಪಾರ ಅಭಿಮಾನ ಮತ್ತು ಗೌರವವಿತ್ತು.
*ಡೋಹರ ಕಕ್ಕಯ್ಯನವರು ಅಭಿನವ ಮಲ್ಲಿಕಾರ್ಜುನ* ಎಂಬ ಅಂಕಿತನಾಮದಿಂದ ವಚನ ರಚನೆ ಮಾಡಿದ್ದಾರೆ.ಅವರ ವೈಯಕ್ತಿಕ ಜೀವನದ ಕುರಿತು ಹೆಚ್ಚಿನ ಮಾಹಿತಿಗಳು ದೊರಕುವುದಿಲ್ಲ.ಕೇವಲ ಆರು ವಚನಗಳು ಮಾತ್ರ ನಮಗೆ ಸಿಗುತ್ತವೆ.
ಕೆಳ ವರ್ಗದಿಂದ ಬಂದ ಡೋಹರ ಕಕ್ಕಯ್ಯನಿಗೆ ಬಸವಣ್ಣನವರು ಅವನ ಮನದಲ್ಲಿರುವ ಕೀಳರಿಮೆಯನ್ನು ತೊಡೆದು ಹಾಕಿ ಇಷ್ಟ ಲಿಂಗವನ್ನು ಅನುಗ್ರಹಿಸಿದರು, ಅದನ್ನು ನೆನೆದು ಕಕ್ಕಯ್ಯನವರು ಬರೆದ ವಚನ ಒಂದು ಹೀಗಿದೆ.
*ಎನ್ನ ಕಷ್ಟ ಕುಲದ ಸೂತಕ*
*ನಿಮ್ಮ ಹಸ್ತ ಮುಟ್ಟಿದಲ್ಲಿ ಹೋಯಿತು*
*ಶುಕ್ಲಶೋಣಿತ ದಿಂದಾದ ಸೂತಕ*
*ನಿಮ್ಮ ಮುಟ್ಟಲೊಡನೆ ಬಯಲಾಯಿತು*
*ತಟ್ಟಿದ ಮುಟ್ಟಿದ ಸುಖಂಗ ಳನೆಲ್ಲವ*
*ಲಿಂಗ ಮುಖಕ್ಕೆ ಅರ್ಪಿಸಿದನಾಗಿ*
*ಎನ್ನ ಪಂಚೇಂದ್ರಿಯಗಳು ಬಯಲಾದವು*
*ಎನ್ನ ಅಂತ ರಂಗದಲ್ಲಿ ಜ್ಞಾನಜ್ಯೋತಿ ಎಡೆಗೊಂಡು ದಾಗಿ*
*ಒಳಗೂ ಬಯಲಾಯಿತು*
*ಸಂಸಾರ ಸಂಗದ ಅವಸ್ಥೆಯ ಮೀರಿದ ಕ್ರಿಯೆಯಲ್ಲಿ*
*ತರಹ ರವಾಯಿತ್ತಾಗಿ ಬಹಿರಂಗ ಬಯಲಾಯಿತು*
*ಅಭಿನವ ಮಲ್ಲಿಕಾರ್ಜುನ*
*ನಿಮ್ಮ ಮುಟ್ಟಿದ ಕಾರಣ ನಾನು ಬಯಲಾದೆ*
ಎಂದು ಬಸವಣ್ಣನವರನ್ನು ಕೊಂಡಾಡಿದ್ದಾರೆ. ಡೋಹರರು ಊರಲ್ಲಿ ಬರುವುದೇ ಒಂದು ಅಪರಾಧ ಎನ್ನುವ ಕಾಲದಲ್ಲಿ ಬಸವಣ್ಣನವರು ಡೋಹರ ಕಕ್ಕಯ್ಯನನ್ನು ಅಪ್ಪಿಕೊಂಡರು ಒಪ್ಪಿಕೊಂಡರು. ಕಕ್ಕಯ್ಯನಿಗೆ ಇಷ್ಟಲಿಂಗ ಕೊಟ್ಟು ಅವರನ್ನು ಕುಲಜರೆನಿಸಿದರು ಅವರ ಕಾರುಣ್ಯದಿಂದಲೇ ನಾನು ಪ್ರಭುದೇವರ ಪಾದಸ್ಪರ್ಶ ಮಾಡಲು ಅವಕಾಶ ದೊರೆಯಿತು ಎಂದು ಕಕ್ಕಯ್ಯನವರು ತಮ್ಮ ಒಂದು ವಚನದಲ್ಲಿ ಈ ರೀತಿ ಹೇಳುತ್ತಾರೆ
*ಎನ್ನ ಕಷ್ಟ ಕುಲದಲ್ಲಿ ಹುಟ್ಟಿದೆ ಎಂಬ ಕರ್ಮ ಕಳೆದು*ಮುಟ್ಟಿ ಪಾವನವ ಮಾಡಿ*
ಕೊಟ್ಟನಯ್ಯ ಎನ್ನ ಕರಸ್ಥಲಕ್ಕೆ ಲಿಂಗವೇ
ಆ ಲಿಂಗ ಬಂದು ಸೋಂಕಲೊಡನೆ
ಎನ್ನ ಸರ್ವಾಂಗದ ಅವಲೋಹ ವಳಿತ್ತಿಯ್ಯಾ
ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿದ
ಎನ್ನ ಮನದಲ್ಲಿ ಜಂಗಮವ ನೆಲೆಗೊಳಿಸಿದ
ಎನ್ನ ಅರುಹಿನಲ್ಲಿ ಪ್ರಸಾದವ ನೆಲೆಗೊಳಿಸಿದ
ಇಂತಿ ತ್ರಿ ವಿದ ಸ್ಥಾನವ ಶುದ್ಧವ ಮಾಡಿ
ಚತುರ್ವಿಧ ಸಾರಾಯಸ್ಥಲವ ಸಂಬಂಧವ ಮಾಡಿದ
ಸಂಗನ ಬಸವಣ್ಣನ ಕರುಣದಿಂದ
ಪ್ರಭುದೇವರ ಶ್ರೀಪಾದವ ಕಂಡು ಬದುಕಿದೆನು ಕಾಣ ಅಭಿನವ ಮಲ್ಲಿಕಾರ್ಜುನ
ಎಂದು ಕಷ್ಟ ಕುಲದಲ್ಲಿ ಹುಟ್ಟಿದ ತನ್ನ ಕರ್ಮ ಕಳೆದು ನನ್ನನ್ನು ಮುಟ್ಟಿ ಇಷ್ಟಲಿಂಗ ಕೊಟ್ಟು ಪಾವನ ಗೊಳಿಸಿದ ಬಸವಣ್ಣನನ್ನು ಬಾಯಿ ತುಂಬಾ ಹೊಗಳುತ್ತಾನೆ.ಅಲ್ಲದೇ ಪ್ರಭುದೇವರ ಕರುಣೆಯಿಂದ ಬದುಕಿದೆ ಎಂದು ಮತ್ತೊಂದು ವಚನದಲ್ಲಿ ಈ ರೀತಿ ಹೇಳುತ್ತಾನೆ.
*ಆಸೆಯಾಮಿಷ ವಳಿದು ಹುಸಿ ವಿಷಯಾಂಗಳಲ್ಲಾ ಹಿಂಗಿ*
ಸಂಶಯ ಸಂಬಂಧ ನಿಸ್ಸ ಸಂಬಂಧವಾಯಿತಯ್ಯ
ಎನ್ನ ಮನದೊಳಗೆ ಘನ ಪರಿಣಾಮ ಕಂಡು ಮನ ಮಗ್ನವಾಯುತ್ತಯ್ಯ
ಅಭಿನವ ಮಲ್ಲಿಕಾರ್ಜುನ
ಪ್ರಭುದೇವರ ಕರುಣದಿಂದಾನು ಬದುಕಿದೆನು
ಎಂದು ಬಸವಣ್ಣನವರನ್ನು, ಅಲ್ಲಮ ಪ್ರಭುಗಳನ್ನು ಕೊಂಡಾಡುತ್ತಾನೆ.
ಅವರ ಮತ್ತೊಂದು ವಚನ..
*ನೆನೆಯಲರಿಯೇ ನಿರ್ಧರಿಸಲರೇ ಮನವಿಲ್ಲವಾಗಿ*
*ಭಾವಿಸಲರಿಯೇ ಬೆರೆಸಲರಿಯೆ ಭಾವ ನಿರ್ಬಾವವಾಯಿತ್ತಾಗಿ*
*ಧ್ಯಾನ ಮೌನವ ನರಿಯೇ*
*ಅದ್ಯಾನತೀತ ತಾನೇ ಯಾಯಿತ್ತಾಗಿ*
*ಜಾತೃ ಜ್ಞಾನ ಜ್ಞೇಯಂಗಳೆಲ್ಲವ ಮೀರಿ ಅಭಿನವ ಮಲ್ಲಿಕಾರ್ಜುನನಲ್ಲಿ ಪರಮ ಸುಖಿಯಾಗಿರ್ದೆ*
ಎಂದು ತನು ಮನ ಭಾವ ಈ ಮೂರು ನೆಲೆಯಲ್ಲಿ ಕಕ್ಕಯ್ಯ ನವರು ವಿಚಾರ ವ್ಯಕ್ತ ಪಡಿಸಿದ್ದಾರೆ
ಯಾವುದೇ ಸಂಕಲ್ಪ ಮಾಡಲಿ, ಯಾವುದೇ ಕೆಲಸ ಮಾಡಲಿ, ನೆನೆಸಲು, ನಿರ್ಧರಿಸಲು ಎಲ್ಲದಕ್ಕೂ ಮನಸ್ಸು ಬೇಕು. ಅದೇ ಇಲ್ಲವಾದಾಗ, ಭಾವಿಸಲು ಅರಿಯೇ, ಬೆರಸಲು ಅರಿಯೇ, ಭಾವ ನಿರ್ಭಾವವಾಗಿತ್ತು. ಪರಮಾತ್ಮನ ಕುರಿತು ಚಿಂತನೆಗೂ ಮನಸ್ಸು ಬೇಕು. ಅನನ್ಯ ಚಿಂತನೆ ಯಾಗಲಿ, ಅಂತರ್ಮುಖಿತ್ವ ವಾಗಲಿ ನಡೆಯ ಬೇಕಾದರೆ ಮನಸ್ಸು ಬೇಕು, ಆ ಮನಸ್ಸು ಪರಮಾತ್ಮನ ಧ್ಯಾನ ದಲ್ಲಿ ಮುಳುಗಿರುವಾಗ ಜ್ಞಾತ್ರು, ಜ್ಞಾನ, ಜ್ಞೇಯ ಗಳನ್ನು ಮೀರಿ ಮಲ್ಲಿಕಾರ್ಜುನನಲ್ಲಿ ಪರಮ ಸುಖಿಯಾಗಿದ್ದೇನೆ , ಅಲ್ಲಿ ಆನಂದವೇ ಆನಂದ ಎಂದು ಹೇಳುವಲ್ಲಿ ಶರಣ ಮಾರ್ಗದ ದಿವ್ಯ ಸಾಧನೆಯ ಪರಿಪಕ್ವದ ಅಧ್ಯಾತ್ಮದ ಉನ್ನತಿಯನ್ನು ತೋರಿಸುತ್ತದೆ.
ಡೋಹರ ಕಕ್ಕಯ್ಯನು ತನ್ನ ಸಮಕಾಲೀನರಾದ ಹಿರಿಯ ಶರಣರನ್ನು ನೆನೆಯುತ್ತಾನೆ.
*ಏನಗೆ ಗುರು ಸ್ಥಳವ ತೋರಿದಾತ ಸಂಗನ ಬಸವಣ್ಣನು*
*ಎನಗೆ ಲಿಂಗಸ್ಥಲವ ತೋರಿದಾತ ಚೆನ್ನಬಸವಣ್ಣನು*
*ಎನಗೆ ಜಂಗಮ ಸ್ಥಲವ ತೋರಿದಾತ ಸಿದ್ದರಾಮಯ್ಯನು*
*ನನಗೆ ಪ್ರಸಾದಿ ಸ್ಥಳವ ತೋರಿದಾತ ಬಿದ್ದ ಬಾಚಯನು*
*ನನಗೆ ಪ್ರಾಣ ಲಿಂಗಸ್ಥಲವ ತೋರಿದಾತ ಚೆಂದಯ್ಯನು*
*ಯನಗೆ ಶರಣವ ತೋರಿದಾತ ಸೊಡ್ಡಳ ಬಾಚರಸನು*
*ಏನಗೆ ಐಕ ಸ್ಥಳವ ತೋರಿದಾತ ಅಜಗಣ್ಣನು*
*ಎನಗೆ ನಿಜ ಸ್ಥಲವ ತೋರಿದಾತ ಪ್ರಭುದೇವರು*
*ಇಂತಿ ಸ್ಥಳಗಳ ಕಂಡು ಏಳು ನೂರಾ ಎಪ್ಪತ್ತು*
*ಅಮರಗಣಂಗಳ ಶ್ರೀ ಪಾದಕ್ಕೆ ಶರಣೆಂದು ಬದುಕಿದೆನು ಕಾಣ ಅಭಿನವ ಮಲ್ಲಿಕಾರ್ಜುನ*
ಎಂದು ತನ್ನ ಉನ್ನತಿಗೆ, ಶರಣತ್ವಕ್ಕೆ ಕಾರಣ ರಾದವರನ್ನು ನೆನೆಯುತ್ತಾನೆ. ಷಟ್ ಸ್ಥಲಗಳ ಮಾರ್ಗ ಕಂಡುಕೊಂಡುದಲ್ಲದೆ, ಎಲ್ಲಾ ಶರಣರಿಗೆ ತಲೆಬಾಗುವ ನಮ್ರತೆಯನ್ನು ತೋರಿಸುತ್ತಾನೆ.
ಗಣಾಚಾರಿ ಯಾದ ಕಕ್ಕಯ್ಯನವರು ಕಲ್ಯಾಣ ಕ್ರಾಂತಿಯಲ್ಲೂ ಭಾಗವಹಿಸಿದ್ದು ತಿಳಿದು ಬರುತ್ತದೆ. ಉಳವಿ ಕಡೆ ಹೊರಟ ಶರಣರ ರಕ್ಷಣೆಗಾಗಿ ಆತನು ಹೋರಾಟ ನಡೆಸಿದನು. ಕಾತರವಳ್ಳಿ ಕಾಳಗದ ನಂತರ ವೈರಿಗಳನ್ನು ಬೇರೆ ಸೆಳೆದು ಬೆಳಗಾವಿಯ ಕಕ್ಕೇರಿಯ ಕಡೆ ತಿರುಗಿಸಿದನು. ಕಕ್ಕೇರಿಯ ಬಳಿ ಆತ ಹೋರಾಡುತ್ತಾ ಹುತಾತ್ಮನಾದನು ಎಂಬುದು ತಿಳಿದು ಬರುತ್ತದೆ. ಆತನ ಹೆಸರಿನಲ್ಲಿ ಬಾವಿಕೆರೆಗಳು ಅಲ್ಲಿವೆ. ಆತನ ಸಮಾಧಿಯು ಕೂಡ ಅಲ್ಲಿಯೇ ಇದೆ. ವಚನ ಸಾಹಿತ್ಯ ಮತ್ತು ಅದರ ರಕ್ಷಣೆಗಾಗಿ ಹೋರಾಟ ಮಾಡಿ ಅತ್ಮಾರ್ಪಣೆ ಮಾಡಿದ ಹಿರಿಯ ಶರಣ ಡೋಹರ ಕಕ್ಕಯ್ಯ.
ಡಾ. ಶರಣಮ್ಮ ಗೊರೆಬಾಳ
ಪ್ರಾಚಾರ್ಯರು
ಸದಸ್ಯರು ಅಕ್ಕನ ಅರಿವು ಮತ್ತು ಬಸವಾದಿ ಶರಣರ ಚಿಂತನ ವೇದಿಕೆ.