ರೋಟರಿ ಐವರಿ ಸಿಟಿ ವತಿಯಿಂದ ದಸರಾ ಅಂಗವಾಗಿ ವಿಶೇಷ ದಾಂಡಿಯಾ ನೃತ್ಯ ಪ್ರದರ್ಶನ

0
108

ಮೈಸೂರು -ನಗರದ ರೋಟರಿ ಐವರಿ ಸಿಟಿ ವತಿಯಿಂದ ಅ.೪ರಂದು ದಸರಾ ಹಬ್ಬದ ಪ್ರಯುಕ್ತ ವಿಶೇಷ ದಾಂಡಿಯಾ ನೃತ್ಯ ಪ್ರದರ್ಶನವನ್ನು ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರೋಟರಿ ಸಂಸ್ಥೆಯ ಜಿಲ್ಲೆ ೩೧೮೧ರ ರಾಜ್ಯಪಾಲರು ಹಾಗೂ ಮಾಜಿ ಸೈನಿಕರಾದ ವಿಕ್ರಂ ದತ್ತರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ರೋಟರಿ ಸಂಸ್ಥೆಯು ನೊಂದ ಕುಟುಂಬಗಳನ್ನು ಗುರುತಿಸಿ ಅವರಿಗೆ ನೆರವು ನೀಡುವ ಉದ್ದೇಶವನ್ನು ಹೊಂದಿದೆ. ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು, ಸಮಾಜದ ಸಮುದಾಯದ ಕೆಲಸಗಳಿಗೆ ಸ್ಪಂದಿಸುವುದು ಇದರ ಮೂಲ ಧ್ಯೇಯವಾಗಿದೆ. ಮನುಷ್ಯ ನಿಸ್ವಾರ್ಥಿಗಳಾಗಿ, ಸೇವಾ ಮನೋಭಾವನೆ ಹೊಂದಿ, ತಮ್ಮ ಕೈಲಾದ, ಸಹಕಾರ ನೀಡಿದಾಗ ಜೀವನ ಸಾರ್ಥಕವೆನಿಸುತ್ತದೆ. ಈಗಾಗಲೇ ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡದಲ್ಲಿ ಒಟ್ಟು ೮೮ ರೋಟರಿ ಕ್ಲಬ್‌ಗಳಿದ್ದು, ೩,೭೫೦ಕ್ಕೂ ಹೆಚ್ಚು ಸದಸ್ಯರು ಸೇವಾ ಕಾರ್ಯಕ್ರಮದಲ್ಲಿ ತೊಡಗಿರುವುದು ಶ್ಲಾಘನೀಯವಾದ ವಿಚಾರ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದ ರೋಟರಿ ಐವರಿ ಸಿಟಿಯ ಅಧ್ಯಕ್ಷರಾದ ರೊ.ಕೆ.ಶಶಿಧರ್ ಅವರು ನವರಾತ್ರಿ ಸಂಭ್ರಮದಲ್ಲಿರುವ ನಾವುಗಳು ಒಂದಾಗಿ ಸೇರಿ, ನಾಡಿನ ಅಭಿವೃದ್ಧಿ ಹಾಗೂ ಶ್ರೇಯಸ್ಸಿಗಾಗಿ ಆಚರಿಸುವ ಹಬ್ಬವೇ ದಾಂಡಿಯಾ ನೃತ್ಯ. ಭಾರತದ ಗುಜರಾತ್‌ನ ಸಾಂಪ್ರದಾಯಿಕ ಜಾನಪದ ನೃತ್ಯ ದಾಂಡಿಯಾ ಜನರ ಬದುಕು ಹಾಗೂ ಸಂಭ್ರಮವನ್ನು ಪ್ರತಿಬಿಂಬಿಸುವ ಭಾವೈಕ್ಯತೆಯನ್ನು ಬೆಸೆಯುವ ಸಾಮರಸ್ಯದ ಸಂಕೇತವಾಗಿದೆ. ಇಂತಹ ಹಬ್ಬಗಳನ್ನು ಆಚರಿಸುವುದರಿಂದ ನೊಂದ ಮನಸ್ಸುಗಳಿಗೆ ಸಮಾಜದ ಬಡ ಕುಟುಂಬಗಳಿಗೆ ಸಹಾಯ ಮಾಡಲು ಅನುಕೂಲವಾಗುತ್ತದೆ. ಈ ದಿನ ಬಂದ ೮ ಲಕ್ಷದ ೬೦ ಸಾವಿರ ರೂ.ಗಳನ್ನು ಜಯಲಕ್ಷಿಪುರಂನಲ್ಲಿರುವ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಬಡ ಮಕ್ಕಳ
ವಿದ್ಯಾಭ್ಯಾಸ, ಶೈಕ್ಷಣಿಕ ಕೆಲಸ ಕಾರ್ಯಗಳಿಗೆ ನೀಡಲಾಗಿದೆ ಎಂದರು.

ವೇದಿಕೆಯಲ್ಲಿ ರೋಟರಿ ಸಹಾಯಕ ರಾಜ್ಯಪಾಲರಾದ ರೊ.ಡಾ.ಕೆ.ಎ.ಪ್ರಹ್ಲಾದ್, ರೊ.ಆರ್.ವೆಂಕಟೇಶ್, ಕಾರ್ಯದರ್ಶಿ ರೊ.ಶೋಭಾ ನಾಗರಾಜ್, ರೊ.ಸುನಿಲ್ ಬಾಳಿಗಾ, ರೊ.ಡಾ.ಸಚ್ಚಿದಾನಂದ, ರೊ.ಇಫ್ತಿಕಾರ್ ಅಹಮದ್, ರೊ.ಪೂಜಾ ಬಾಳಿಗ, ರೊ.ಬಾಬು, ರೊ.ಎಂ.ಕೆ.ಮುಖೇಶ್, ರೊ.ಕೇಶವ್ ಬಿ.ಕಾಂಚನ್ ಉಪಸ್ಥಿತರಿದ್ದರು.