spot_img
spot_img

ಧನ್ವಂತರಿ ಕ್ಷೇತ್ರ ಕೊಕ್ಕಡ ವೈದ್ಯನಾಥೇಶ್ವರ ಕ್ಷೇತ್ರ

Must Read

ಇತ್ತೀಚೆಗೆ ಮನೆಯವರೆಲ್ಲರೂ ಧರ್ಮಸ್ಥಳ. ಕುಕ್ಕೆ ಸುಬ್ರಮಣ್ಯಕ್ಕೆ ಹೋಗುವುದೆಂದು ನಿರ್ಧರಿಸಿ ನಮ್ಮ ಕಾರಿನಲ್ಲಿ ಪ್ರಯಾಣ ಬೆಳೆಸಿದೆವು. ಸಿಗಂದೂರು ಚೌಡೇಶ್ವರಿ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರವನ್ನು ದರ್ಶನ ಮಾಡಿ ಶೃಂಗೇರಿಯಲ್ಲಿ ವಾಸ್ತವ್ಯ ಮಾಡಿದೆವು. ಆ ದಿನ ರಾತ್ರಿ ನನ್ನ ಮಗ ಆತ್ಮಾನಂದನ ಸ್ನೇಹಿತ ಸಾಯಿ ಪ್ರತೀಕ ನಾಯ್ಕ ಕರೆ ಮಾಡಿ ಧರ್ಮಸ್ಥಳದಿಂದ ಕುಕ್ಕೆ ಹೋಗುವ ಮಾರ್ಗದಲ್ಲಿ ಸೌತಡ್ಕ ಗಣಪತಿ ಮತ್ತು ವೈದ್ಯನಾಥೇಶ್ವರ ದೇವಾಲಯಗಳಿಗೆ ಹೋಗಿರಿ ಎಂದು ಹೇಳಿದನು. ಅದರಂತೆ ಧರ್ಮಸ್ಥಳ ಮಂಜುನಾಥೇಶ್ವರನ ಸನ್ನಿಧಿಯಲ್ಲಿ ದರ್ಶನ ಮತ್ತು ಪ್ರಸಾದ ಪಡೆದು ನಂತರ ಸೌತಡ್ಕ ಗಣಪತಿ ದರ್ಶನ ಮುಗಿಸಿಕೊಂಡು ಮುಂದೆ ವೈದ್ಯನಾಥೇಶ್ವರ ದೇವಾಲಯಕ್ಕೆ ಪ್ರಯಾಣ ಬೆಳೆಸಿದೆವು. ಕೊಕ್ಕಡ ಗ್ರಾಮ ಪ್ರವೇಶಿಸುತ್ತಲೇ ವೈದ್ಯನಾಥೇಶ್ವರ ದೇವಾಲಯಕ್ಕೆ ಹೊರಡುವ ಮಾರ್ಗವನ್ನು ಕೇಳಿದಾಗ ಅಲ್ಲಿನ ಜನ ನೇರವಾಗಿ ಒಂದೇ ದಿಕ್ಕಿನ ರಸ್ತೆಯಲ್ಲಿ ಚಲಿಸಿ ಎಡಕ್ಕೆ ತಿರುಗಿದರೆ ವೈದ್ಯನಾಥೇಶ್ವರ ದೇಗುಲ ಕಾಣುತ್ತದೆ ಎಂದರು.

ನಮ್ಮ ಪ್ರಯಾಣ ದೇವಾಲಯದತ್ತ ಸಾಗಿದಾಗ ಧರ್ಮಸ್ಥಳದಿಂದ ೧೫ಕಿ.ಮೀ ಅಂತರದಲ್ಲಿ ಈ ದೇವಾಲಯ ಕಾಣತೊಡಗಿತು. ತೆಂಗು ಅಡಕೆ ಮರಗಳ ಹಸಿರು ಸಿರಿಯ ವಿಶಾಲ ಪ್ರಾಂಗಣ ಹೊಂದಿದ ದೇಗುಲ ಈಗ ಜೀರ್ಣೋದ್ಧಾರ ನಡೆಯುತ್ತಿರುವ ಸನ್ನಿವೇಶ ಗಮನಿಸುತ್ತಲೇ ಕಾರಿನಿಂದ ಇಳಿದು ದೇವಾಲಯದ ಕಡೆಗೆ ಗಮನ ಹರಿಸಿದೆ. ಮೊದಲಿಗೆ ಪುಷ್ಕರಣಿಯನ್ನು ಒಳಗೊಂಡ ದೇಗುಲ ಕಾಣಿಸಿತು. ಅಲ್ಲಿ ನಮ್ಮ ವಾಹನ ನಿಲ್ಲಿಸಿ ದೇಗುಲಕ್ಕೆ ಹೊರಡಬೇಕೆನ್ನುವಷ್ಟರಲ್ಲಿ ಓರ್ವ ಮಹಿಳೆ ನಮ್ಮನ್ನು ಕಂಡು ಮೊದಲು ಪುಷ್ಕರಣಿಯತ್ತ ಬನ್ನಿ ಎಂದು ಕರೆದರು. ನಾನಾಗ ಅವರ ಪರಿಚಯ ಕೇಳಿದೆ. ಬಬಿತ ಅಂತ ತಮ್ಮ ಪರಿಚಯ ಹೇಳಿಕೊಂಡು. ಇಲ್ಲಿ ಹೊಸದಾಗಿ ಬರುವ ಯಾತ್ರಿಕರಿಗೆ ದೇವಾಲಯದ ಕುರಿತು ಮಾಹಿತಿ ನೀಡುವುದು ನನ್ನ ಕರ್ತವ್ಯ ಇದು ಕೂಡ ಸೇವಾರೂಪದಲ್ಲಿ ಎಂದು ತಮ್ಮನ್ನು ಪರಿಚಯಿಸಿಕೊಂಡರು.ಚರ್ಮದ ಕಾಯಿಲೆ ಉಸಿರಾಟದ ಕಾಯಿಲೆ ಹೀಗೆ ವಿವಿಧ ಕಾಯಿಲೆಗಳು ಈ ಪುಷ್ಕರಣಿಯ ತೀರ್ಥ ಸೇವಿಸುವುದರಿಂದ ಸ್ನಾನ ಮಾಡುವುದರಿಂದ ಗುಣಮುಖವಾಗುತ್ತವೆ ಎಂದು ಹೇಳುತ್ತ ಅವರು ನಮ್ಮನ್ನು ಪುಷ್ಕರಣಿಯತ್ತ ಕರೆದುಕೊಂಡು ಹೋಗಿ ಅಲ್ಲಿನ ತೀರ್ಥದ ಮಹತ್ವ ತಿಳಿಸಿ ಅಲ್ಲಿನ ತೀರ್ಥವನ್ನು ಮನೆಗೆ ತೆಗೆದುಕೊಂಡು ಹೋಗುವಂತೆ ಹೇಳಿದಾಗ ಬಾಟಲಿಯಲ್ಲಿ ಆ ತೀರ್ಥವನ್ನು ಸಂಗ್ರಹಿಸಿ ದೇವಾಲಯದತ್ತ ಹೊರಟೆವು. ದೇವಾಲಯದ ಮುಂದೆ ಶಿಲಾಶಾಸನವಿದೆ. ಇಲ್ಲಿನ ಶಾಸನದ ಪ್ರಕಾರ ಧ್ವಜಸ್ತಂಭ ಮತ್ತು ಕೆರೆಯ ನಡುವಿನ ನೀಲಕಂಠ ಲಿಂಗವನ್ನು ನರಸಿಂಹ ದೇವರಾಯನೆಂಬ ರಾಜ ಯುದ್ಧ ಗೆದ್ದಾಗ ಪ್ರತಿಷ್ಠಾಪಿಸಿದ್ದನೆಂಬ ದಾಖಲೆ ಹೊಂದಿದೆ.

ಮಹಾದ್ವಾರದ ಬದಿಯಲ್ಲಿ ದೇವಾಲಯದ ಅರ್ಚನೆ ಇತ್ಯಾದಿ ಮಾಡಿಸಲು ಅವರದೇ ಆದ ವ್ಯವಸ್ಥೆ ಇದ್ದು ಅಲ್ಲಿ ಅರ್ಚನೆಯ ಪಾವತಿ ಪಡೆದು ಒಳ ನಡೆದೆವು. ಇದು ಧರ್ಮಸ್ಥಳದ ಬೆಳ್ತಂಗಡಿ ತಾಲೂಕಿನ ಊರು ಕೊಕ್ಕಡ.ಕುಕ್ಕಟಪುರ ಎಂಬುದು ಕೊಕ್ಕಡ ಆಯಿತೆಂದು ಸ್ಥಳನಾಮ ವಿವರಣೆ ನೀಡಿದರು.

ಬರಗಾಲದ ಸಂದರ್ಭದಲ್ಲಿ ಮಧ್ವಾಚಾರ್ಯರು ಕೊಕ್ಕಡಕ್ಕೆ ಬಂದು ಪರ್ಜನ್ಯ ಜಪ ಮಾಡಿದ್ದರಂತೆ ಆಗ ಇಲ್ಲಿ ಮಳೆಯಾಗಿತ್ತಂತೆ.,ಇಂದಿಗೂ ಕೂಡ ಇಲ್ಲಿ ಪರ್ಜನ್ಯ ಜಪ ಮಾಡಿದರೆ ಮಳೆ ಆಗುತ್ತದೆ ಎಂದು ಪ್ರತೀತಿ ಇದೆ ಎಂಬುದನ್ನು ಹೇಳುತ್ತ ದೇವಾಲಯದ ಕುರಿತು ಮಾಹಿತಿ ನೀಡಿದರು.

ಅಲ್ಲಿ ಅರ್ಚಕ ರಮಾನಂದ ಭಟ್ ಕುಳಿತಿದ್ದರು.ಅವರ ಬಳಿಗೆ ಹೋಗಿ ಅರ್ಚನೆ ಪಾವತಿ ನೀಡಿದಾಗ ನಮ್ಮ ಮನೆಯ ಎಲ್ಲಾ ಸದಸ್ಯ ರ ಹೆಸರು ಕೇಳಿ ಸಂಕಲ್ಪ ಮಾಡಿದರು. ಬಬಿತಾ ಅವರು ದೇವಾಲಯದ ಪ್ರಾಂಗಣದಲ್ಲಿ ಇರುವ ಎಲ್ಲಾ ದೇವಾಲಯ ಉದ್ಬವ ನಂದಿ ಮಾಹಿತಿಯನ್ನು ನೀಡತೊಡಗಿದರು.

ಈ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಲ್ಲಿನ ದೇವರು ಭಕ್ತರ ಅನಾರೋಗ್ಯ ದೂರ ಮಾಡಿ ಆರೋಗ್ಯ ಕೊಡುವುದರಿಂದ ಆತನನ್ನು ವೈದ್ಯನಾಥೇಶ್ವರ ಎನ್ನಲಾಗುತ್ತದೆ. ಆತನ ಅಪಾರ ಪವಾಡಗಳಿಂದಾಗಿ ಈ ದೇವಾಲಯಕ್ಕೆ ಡಾಕ್ಟರ್ಸ್ ಟೆಂಪಲ್ ಎಂದೂ ಕೂಡ ಹೇಳುವರು ಎಂಬ ಸಂಗತಿಯನ್ನು ತಿಳಿಸಿದರು. ಸರ್ವ ವೈದ್ಯರಿಗೂ ವೈದ್ಯನೆನಿಸಿಕೊಂಡಿದ್ದಾನೆ ವೈದ್ಯನಾಥೇಶ್ವರ. ಸರ್ವ ರೋಗ ಹರನಾಗಿದ್ದಾನೆ. ಎಲ್ಲಿಯೂ ಗುಣವಾಗದ ಕಾಯಿಲೆಗಳು ಇಲ್ಲಿನ ದೇವರಲ್ಲಿ ಹರಕೆ ಹೇಳಿಕೊಂಡಾಗ ನಿವಾರಣೆಯಾಗಿ ಅಚ್ಚರಿ ಮೂಡಿಸಿವೆ. ವೈದ್ಯನಾಥನ ಹೊರತಾಗಿ ಇಲ್ಲಿ ಗಣಪತಿ, ವಿಷ್ಣು, ದೈವಗಳು, ಪಂಜುರ್ಳಿ ಸೇರಿದಂತೆ ಬಹಳಷ್ಟು ದೇವರಿಗೆ ಪೂಜೆ ನಡೆಯುತ್ತದೆ. ಎಂದು ದೇವಾಲಯದ ಪ್ರಾಂಗಣದಲ್ಲಿ ನಮಗೆ ಮಾಹಿತಿಯನ್ನು ನೀಡಿದರು. ಗರ್ಭಗುಡಿ ಎಡಭಾಗದಲ್ಲಿ ಗಣಪತಿ, ಬಲಭಾಗದಲ್ಲಿ ಉಳ್ಳಾಲ್ತಿ. ದೇಗುಲದ ಹೊರಗೆ ಎಡಭಾಗದಲ್ಲಿ ವಿಷ್ಣುಮೂರ್ತಿ ಗುಡಿ. ಕಲ್ಯಾಣಿಯ ಪಕ್ಕದಲ್ಲೇ ಅಣ್ಣಪ್ಪನ ಕಟ್ಟೆ. ದೇಗುಲದ ಎದುರಿನಲ್ಲಿ ನಿಜ ಬನದೊಳಗೆ ನಾಗಬನ ವಿಶೇಷ. ರಂಗಪೂಜೆ ಮತ್ತು ಏಕಾದಶರುದ್ರ ಇಲ್ಲಿನ ವಿಶೇಷ ಸೇವೆಗಳು ಎಂಬ ಸಂಗತಿಯನ್ನು ಹೇಳುತ್ತಾ ಪ್ರಾಂಗಣದಲ್ಲಿ ಇರುವ ಬಾವಿಯನ್ನು ತೋರಿಸಿ ಅದು ಕೂಡ ಮಹತ್ವದ್ದು ಎಂಬ ವಿಚಾರ ತಿಳಿಸಿದರು.

ಇತಿಹಾಸ:

ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ದ್ವಾಪರ ಯುಗದ ಉದ್ಭವ ಲಿಂಗದ ದರ್ಶನ ಪಾಂಡವರಿಗೆ ಆಗಿತ್ತು ಎಂಬಲ್ಲಿಂದ, ಸ್ವತಃ ಪಾಂಡವರಿಗೇ ವೈದ್ಯನಾಥೇಶ್ವರ ಔಷಧಿ ಕೊಟ್ಟಿದ್ದ; ಇಲ್ಲಿರುವ ಕಲ್ಯಾಣಿಯನ್ನು ಸ್ವತಃ ಭೀಮನೇ ನಿರ್ಮಿಸಿದ್ದ ಎಂಬ ಐತಿಹ್ಯವಿದೆ.

ಶಿಶಿಲೇಶ್ವರನ ತಲೆಗೆ ಗಾಯವಾಗಿದ್ದಾಗ ಇದೇ ವೈದ್ಯನಾಥೇಶ್ವರ ಮದ್ದು ಕೊಟ್ಟು ಗುಣಪಡಿಸಿದ್ದ. ಆಗ ಉಂಟಾದ ಗೊಂದಲದಲ್ಲಿ ಶಿಶಿಲೇಶ್ವರ ಶಾಪ ಕೊಟ್ಟಿದ್ದರಿಂದಲೇ ಇಂದಿಗೂ ಕ್ಷೇತ್ರದ ಕಲ್ಯಾಣಿಯ ಮೀನುಗಳು ಚಿಕ್ಕದಾಗಿವೆ ಎಂಬ ಸಂಗತಿಯನ್ನು ಗಮನಿಸಿದೆನು.

ಮಧ್ವಾಚಾರ್ಯರು:

ಹಿಂದೆ ಇಲ್ಲಿ ಬರಗಾಲ ಬಂದಾಗ ಮಧ್ವಾಚಾರ್ಯರು ಇಲ್ಲಿ ಪರ್ಜನ್ಯ ಜಪ ಮಾಡಿದ್ದರು. ನಂತರ ವರುಣ ಒಲಿದು ಕ್ಷೇತ್ರ ಪ್ರಸಿದ್ಧಿ ಪಡೆಯಿತು . ಇಂದಿಗೂ ಮಳೆ ಕೊರತೆಯಾದಾಗ ಇಲ್ಲಿ ಪರ್ಜನ್ಯ ಹೋಮ ನಡೆಸಲಾಗುತ್ತದೆ.

ಅನಾರೋಗ್ಯ ನಿವಾರಿಸುವ ದೇವರು:

ಹಿಂದೆ ಚಿಕನ್‌ಗೂನ್ಯಾ ರೋಗ ಉಲ್ಬಣಿಸಿ ದಾಗ ಗ್ರಾಮದ ಪ್ರತಿಯೊಬ್ಬರೂ ವೈದ್ಯನಾಥೇಶ್ವರನಿಗೆ ಎಳನೀರು ಅರ್ಪಿಸುವುದಾಗಿ ಹೇಳಿಕೊಂಡರಂತೆ. ಪವಾಡವೆಂಬಂತೆ ಪ್ರತಿಯೊಬ್ಬರೂ ಸಂಪೂರ್ಣ ಚೇತರಿಸಿಕೊಂಡರಂತೆ. ಸೀಯಾಳ ಅಭಿಷೇಕ ಮಾಡಿಸುವುದು ಇಲ್ಲಿ ಜನಪ್ರಿಯವಾಗಿದೆ. ತಮ್ಮ ಕಾಯಿಲೆಗಳ ನಿವಾರಣೆಗಾಗಿ ಪ್ರಾರ್ಥನೆ ಮಾಡುವವರು ವೈದ್ಯನಾಥೇಶ್ವರನಿಗೆ ಎಳನೀರು ಅಭಿಷೇಕ ಮಾಡಿಸುತ್ತಾರೆ ಎಂಬ ಸಂಗತಿಯನ್ನು ತಿಳಿಸಿದರು.

ಅಸ್ತಮಾ, ಉಸಿರಾಟ ಸಮಸ್ಯೆ, ಉಬ್ಬಸವಿರುವವರು ತಮಗೆ ಗುಣವಾದರೆ ಇಲ್ಲಿ ಬಂದು ಹಗ್ಗ ಸಮರ್ಪಿಸುವುದಾಗಿ ಹೇಳಿಕೊಳ್ಳಬೇಕು. ಅವು ಗುಣವಾಗುವುದು ಮಾತ್ರವಲ್ಲ, ಮತ್ತೆಂದೂ ಆ ಕಾಯಿಲೆಗಳು ಕಾಣಸಿಕೊಳ್ಳುವುದಿಲ್ಲ.

ಇನ್ನು ಕುಷ್ಠ ರೋಗ ಸೇರಿದಂತೆ ಚರ್ಮದ ಯಾವುದೇ ರೋಗಗಳಿರುವವರು.ಇಲ್ಲಿ ಭೀಮಸೇನ ನಿರ್ಮಿಸಿರುವ ಕಲ್ಯಾಣಿಯಲ್ಲಿ ಮುಳುಗೆದ್ದರೆ, ಆ ತೀರ್ಥ ಪ್ರೋಕ್ಷಣೆ ಮಾಡಿಕೊಂಡರೆ ಗುಣಮುಖರಾಗುತ್ತಾರೆ. ವೈದ್ಯರಿಂದಲೂ ಗುಣಪಡಿಸಲಾಗದ ಕಾಯಿಲೆಗಳನ್ನು ಈ ಕಲ್ಯಾಣಿಯ ಔಷಧಯುಕ್ತ ನೀರು ಗುಣಪಡಿಸಿದೆ ಎಂಬುದು ಗಮನಾರ್ಹ. ಇದು ಕೇವಲ ಮನುಷ್ಯರಿಗೆ ಮಾತ್ರ ವಲ್ಲದೆ ಜಾನುವಾರುಗಳಿಗೂ ಅನಾರೋಗ್ಯ ಕಾಡಿದಾಗ ಸ್ಥಳೀಯರು ದೇವರಿಗೆ ಹಸಿರು ಹುಲ್ಲನ್ನು ಸಮರ್ಪಿಸುವುದಾಗಿ ಹೇಳಿಕೊಂಡು. ನಂತರ ದೇವಾಲಯ ಆಡಳಿತದ ಭತ್ತದ ಗದ್ದೆಗೆ ಹಸಿರು ಹುಲ್ಲು ಕೊಡುವ ಜೊತೆಗೆ ತಮ್ಮ ಜಾನುವಾರುವನ್ನು ಇಲ್ಲಿಗೆ ಕರೆದುಕೊಂಡು ಬರುತ್ತಾರೆ. ಇಷ್ಟು ಮಾಡಿದರೆ ಜಾನುವಾರುಗಳು ಸಂಪೂರ್ಣ ಹುಷಾರಾಗುತ್ತವೆ. ಆಗ ಭಕ್ತರಿಗೆ ಇಲ್ಲಿನ ಗದ್ದೆಯ ಮಣ್ಣು ಹಾಗೂ ನೀರನ್ನೇ ತೀರ್ಥ ಪ್ರಸಾದವಾಗಿ ವಿತರಿಸಲಾಗುತ್ತದೆ. ಔಷಧ

ಸಾಮಾನ್ಯವಾಗಿ ವೈದ್ಯನಾಥೇಶ್ವರನಿಗೆ ಅಭಿಷೇಕ ನಡೆಸುವ ತೈಲವನ್ನೇ ಮದ್ದಾಗಿ ಇಲ್ಲಿ ಕೊಡುತ್ತಾರೆ.

ಹೀಗೆ ಹತ್ತು ಹಲವು ಮಾಹಿತಿಯನ್ನು ನೀಡಿದರು.

ಅಣ್ಣಪ್ಪ ಗುಡಿ:

ಕೈಲಾಸದಿಂದ ವೈದ್ಯನಾಥೇಶ್ವರನ ಜತೆ ಕೊಕ್ಕಡಕ್ಕೆ ಬಂದು ಧರ್ಮಸ್ಥಳಕ್ಕೆ ಮುನಿಸಿಕೊಂಡು ಹೋಗಿದ್ದ ಅಣ್ಣಪ್ಪ, ಮತ್ತೆ ಬರಬೇಕೆಂದರೆ ಕ್ಷೇತ್ರದಲ್ಲಿ ಅನ್ನದಾನ ನಡೆಯಬೇಕು ಎಂದು ಹೇಳಿದ್ದನಂತೆ. ಅದರಂತೆ ಈಗ ಇಲ್ಲಿ ಭೋಜನ ಶಾಲೆ ಮತ್ತು ಅಣ್ಣಪ್ಪ ಗುಡಿ ನಿರ್ಮಾಣವಾಗುತ್ತಿದೆ. ಭಕ್ತಾದಿಗಳು ತಮಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯ ನೀಡಬಹುದು ಎಂದು ಹೇಳಿದಾಗ ಮಹಾದ್ವಾರದ ಬಳಿ ಇರುವ ಅರ್ಚನೆ ಪಾವತಿ ಪಡೆದ ಕೌಂಟರ್ ನಲ್ಲಿ ನನ್ನ ಸಹಾಯ ಧನ ಪಾವತಿ ಮಾಡಿಸಿ ದೆನು.ಕೊನೆಗೆ ಈ ದೇವಾಲಯದಿಂದ ನಿರ್ಗಮಿಸುವ ಮುನ್ನ ಇನ್ನೂ ಹೆಚ್ಚಿನ ಮಾಹಿತಿಗಾಗಿ ತಮ್ಮನ್ನು ಸಂಪರ್ಕಿಸುವುದಾಗಿ ತಿಳಿಸಿದಾಗ ತಮ್ಮ ಪೋನ್ ನಂಬರ್ ನೀಡಿದರು. ನಾವು ಕುಕ್ಕೆ ಸುಬ್ರಹ್ಮಣ್ಯ ಸನ್ನಿಧಿಗೆ ಹೊರಟ ಕಾರಣ ಇಲ್ಲಿಂದ ನಿರ್ಗಮಿಸಿದೆವು. ಗೂಗಲ್ ನಲ್ಲಿ ಈ ಕುರಿತು ಮಾಹಿತಿಯನ್ನು ಕಲೆ ಹಾಕಿದೆ ಅಲ್ಲಿ ಬಬಿತಾ ಅವರು ಹೇಳಿದ ಮಾಹಿತಿ ಜೊತೆಗೆ ಇನ್ನಷ್ಟು ಮಾಹಿತಿ ಗಮನಿಸಿದೆ. ಗರ್ಭಗುಡಿಯ ಎದುರು ಇರುವ ನಂದಿ ಭುಜ.

ನಂದಿ ಭುಜ:

ಭೀಮ ಕೋಪದಿಂದ ಗದೆಯನ್ನು ಬಂಡೆಗೆ ಬಡಿದಾಗ ನಂದಿ ಮೂರು ತುಂಡಾಗಿ ಸಿಡಿದು ಭುಜದ ಭಾಗ ಕೊಕ್ಕಡದಲ್ಲಿ, ಬಾಲದ ಭಾಗ ಶಿಶಿಲದಲ್ಲಿ ಹಾಗೂ ತಲೆಯ ಭಾಗ ರಾಮಕುಂಜದಲ್ಲಿ ಹೋಗಿ ಬಿದ್ದಿತ್ತು. ಇದರ ಕುರುಹು ಎಂಬಂತೆ ನಂದಿಯ ಭುಜದಂತೆ ಕಾಣುವ ಕಲ್ಲು ಗರ್ಭಗುಡಿಯ ಎದುರಲ್ಲೇ ಕಾಣಸಿಗುತ್ತದೆ.ಅದರ ಪೋಟೋ ತಗೆದುಕೊಂಡಿದ್ದೆನು. ಆದರೆ ನಮಗೆ ಸಮಯ ಬಹಳ ಇರದ ಕಾರಣ ಮಾಹಿತಿಯನ್ನು ಕೇಳಲಾಗಿರಲಿಲ್ಲ. ಜೊತೆಗೆ ದಿನಕ್ಕೆ ಮೂರು ಸಲ ಪೂಜೆ ನೆರವೇರುವದೆಂಬ ಸಂಗತಿಯನ್ನು ಇಲ್ಲಿ ಉಲ್ಲೇಖಿಸಬೇಕು. ಅರ್ಚಕರಾದ ರಮಾನಂದ ಭಟ್ ತಿಳಿಸಿದ್ದರು

ಹರಕೆ:

ಔಷಧೀಯ ಗುಣಗಳನ್ನು ಹೊಂದಿದ ಪುಷ್ಕರಣಿ ಯ ದೇಗುಲದಲ್ಲಿ ತಮ್ಮ ಹರಕೆ ಕುರಿತು ಸಂಕಲ್ಪ ಮಾಡಿ ತಮಗಿರುವ ವ್ಯಾಧಿ ಗುಣವಾಗಲೆಂದು ಹರಕೆ ಹೊತ್ತು ತಾಮ್ರದ ಕೊಡ ಹಗ್ಗ ನೀಡುವ ಪ್ರತೀತಿ ಇಲ್ಲಿದೆ.

ಕೋರಿ ಜಾತ್ರೆ:

ಇಲ್ಲಿ ಹರಕೆ ತೀರಿಸಲು ಕೋಣ, ಎತ್ತು, ಹಸು, ಕರುಗಳನ್ನೂ ಕಂಬಳ ಗದ್ದೆಯಲ್ಲಿ ಓಡಿಸುತ್ತಾರೆ. ಅನಾರೋಗ್ಯದ ಸಂದರ್ಭದಲ್ಲಿ ಹರಕೆ ಹೊತ್ತವರು ಕಂಬಳಕ್ಕೆ ಸೊಪ್ಪು ಹಾಕುತ್ತಾರೆ. ಇದೇ ಕೋರಿ ಜಾತ್ರೆ ವಿಶೇಷ

ಮೇಷ ಮಾಸದ ಜಾತ್ರೆ:

ವಿಶೇಷವಾಗಿ ಮೇ ತಿಂಗಳಲ್ಲಿ ಬರುವ ಈ ಜಾತ್ರೆ ಒಂದು ವಾರಗಳ ಕಾಲ ಜರಗುವ ಜಾತೆ ಪ್ರತಿದಿನ ವಿಶೇಷ ಅಭಿಷೇಕ ಪೂಜೆ ಜರಗುವ ಜೊತೆಗೆ ಕೊನೆಯ ದಿನ ರಥೋತ್ಸವ ಜರಗುವುದೆಂದು ಹೇಳುವರು.

ಶಿವರಾತ್ರಿ:

ಇಲ್ಲಿ ಶಿವರಾತ್ರಿ ಸಂದರ್ಭದಲ್ಲಿ ಕೂಡ ವಿಶೇಷ ಜಾಗರಣೆ ಜರಗುತ್ತದೆ.ಹಾಗೂ ಭಜನೆ ಪೂಜೆ ಜರಗುತ್ತವೆ.

ಆಟಿ ಅಮವಾಸ್ಯೆ:

ಆಷಾಢ ಮಾಸದಲ್ಲಿ ಬರುವ ಆಟಿ ಅಮವಾಸೆ ಸಂದರ್ಭದಲ್ಲಿ ಇಲ್ಲಿ ವಿಶೇಷ ಪೂಜೆ.ಜರಗುತ್ತದೆ.ಆ ಸಂದರ್ಭದಲ್ಲಿ ಆಟಿ ಅಮಾವಾಸ್ಯೆಯಂದು ಪ್ರಾತಃಕಾಲ ಮರದ ಕೆತ್ತೆಯ ರಸವನ್ನು ಸ್ವಾಮಿಗೆ ಅಭಿಷೇಕ ಮಾಡಿ ಭಕ್ತರಿಗೆ ತೀರ್ಥವಾಗಿ ಕೊಡಲಾಗುತ್ತದೆಯಂತೆ ಔಷಧೀಯ ಗುಣವಿರುವ ಪಾಲೆ ಮರದ ಕಷಾಯ ಸೇವನೆ ಜರಗುವುದು.ಹಾಗೂ ಅಮವಾಸ್ಯೆ ದಿನ ತೀರ್ಥ ಸ್ನಾನ ಕೂಡ ಮಾಡುವರು.

ದೇವಾಲಯ ಸಮಯ ಮತ್ತು ಅರ್ಚನೆ:

ದೇವಸ್ಥಾನ ಪ್ರತಿ ದಿನ ಬೆಳಿಗ್ಗೆ ೭.೩೦ ರಿಂದ ಸಂಜೆ ೭. ರ ವರೆಗೆ ಈ ದೇವರ ದರ್ಶನ ಪಡೆಯಬಹುದು.ದೇವರಿಗೆ ರಂಗಪೂಜೆ. ಏಕಾದಶ ರುದ್ರಾಭಿಷೇಕ ಪೂಜೆ.ಮಂಗಳಾರತಿ ಸೇವೆ.ಕಾರ್ತೀಕ ಪೂಜೆ. ಹಾಲು ಪಾಯಸ ಸೇವೆ. ಶಿವಾಷ್ಠೋತ್ತರ ಸೇವೆ..ಹರಿವಾಣ ನೈವೇದ್ಯ. ರುದ್ರ ತ್ರಿಶೂಲ ಅರ್ಚನೆ.ಪಂಚಾಮ್ರತ ಅಭಿಷೇಕ.ಈ ರೀತಿ ಸೇವೆ ಸಲ್ಲಿಸಬಹುದಾಗಿದೆ.

ತಲುಪುವ ಮಾರ್ಗ:

ಈ ದೇವಾಲಯವು ಧರ್ಮಸ್ಥಳದಿಂದ ೧೫ ಕಿಲೋಮೀಟರ್ ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ ಎರಡೂವರೆ ಕಿಲೋಮೀಟರ್ ದೂರದಲ್ಲಿದೆ.ಬೆಂಗಳೂರಿನಿಂದ ೨೮೩ ಕಿ.ಮೀ ಮಂಗಳೂರಿನಿಂದ ೭೩ ಕಿ.ಮೀ . ಹುಬ್ಬಳ್ಳಿಯಿಂದ ೩೭೯ ಕಿ.ಮೀ ಉಡುಪಿಯಿಂದ ೧೨೨ ಕಿ.ಮೀ ಕುಂದಾಪುರ ೧೫೭ ಕಿ.ಮೀ ಅಂತರದಲ್ಲಿದೆ. ಧರ್ಮಸ್ಥಳ ಮತ್ತು ಕುಕ್ಕೆ ಸಂಚರಿಸುವ ಮಾರ್ಗದಲ್ಲಿ ಕೊಕ್ಕಡ ಎಂಬ ಬರಹವುಳ್ಳ ನಾಮಫಲಕ ಕಾಣುತ್ತದೆ. ಅಲ್ಲಿಂದ ೨ ಕಿ.ಮೀ ಒಳಗೆ ಪ್ರವೇಶಿಸಿದರೆ ಈ ಗ್ರಾಮದಲ್ಲಿ ನೀವಿರುತ್ತೀರಿ.

ಒಟ್ಟಾರೆ ಶಾರೀರಿಕ ಆರೋಗ್ಯ ಭಾಗ್ಯಕ್ಕೆ ಏನೆಲ್ಲಾ ಆಲೋಚಿಸುವ ನಾವು ನಿಸರ್ಗದತ್ತ ಕೊಡುಗೆ ದೈವೀ ಶಕ್ತಿ ಆರಾಧನೆ ಪುರಾಣ ಇತಿಹಾಸದ ಬಗ್ಗೆ ಅರಿಯಲು ಇಂತಹ ಸ್ಥಳಗಳಿಗೆ ಭೇಟಿ ನೀಡುವುದು ಅವಶ್ಯಕ. ಈ ದಿಸೆಯಲ್ಲಿ ಧರ್ಮಸ್ಥಳ ಅಥವಾ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದರೆ ಮರೆಯದೇ ಧನ್ವಂತರಿ ಕ್ಷೇತ್ರಕ್ಕೆ ಭೇಟಿ ನೀಡಿ ಇಲ್ಲಿನ ಪ್ರಾಕೃತಿಕ ಉದ್ಬವ ಪುಷ್ಕರಣಿ ತೀರ್ಥ ಸೇವಿಸಿ ಆರೋಗ್ಯ ಭಾಗ್ಯ ಪಡೆಯಿರಿ.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!