1993 ಸಪ್ಟೆಂಬರ್ 30 ನೆಯ ದಿನಾಂಕ. ಆ ದಿನ ಸಂಪೂರ್ಣ ಮಹಾರಾಷ್ಟ್ರ ಹಾಗು ಉತ್ತರ ಕರ್ನಾಟಕ ಭಾಗದಲ್ಲಿ ಎಲ್ಲರ ಮನೆ ಮನದಲ್ಲಿ ಒಂದೇ ಚರ್ಚೆ. ಅದು ಭೂಕಂಪದ್ದು !
ಲಾತೂರ್ ಜಿಲ್ಲೆಯ ‘ಕಿಲ್ಲಾರಿ’ ಎಂಬ ಗ್ರಾಮದಲ್ಲಿ ಭೂಕಂಪದಿಂದಾಗಿ ಅಲ್ಲಿಯ ಇಡೀ ಊರಿಗೆ ಊರೇ ಸತ್ತು ಮಲಗಿತ್ತು.
ಆಗ ನಾನು ರಬಕವಿಯಲ್ಲಿ ಇದ್ದೆ. ರಬಕವಿಯ ಸರಕಾರಿ ಚಾವಡಿ ಎದುರಿಗೆ ಡಿಸ್ಕೋ ರಾಜು ( ಉಮದಿ ರಾಜೇಂದ್ರ ) ಅವರ ಮನೆಯಲ್ಲಿ ಬಾಡಿಗೆ ಇದ್ದೆ. ನಸುಕಿನಜಾವ ನಾಲ್ಕು ಗಂಟೆಯ ಸಮಯ. ಮನೆಯಲ್ಲಿಯ ಭಾಂಡೆ ಸಾಮಾನುಗಳು ಎತ್ತರದ ಮೇಲಿನ ಕಟ್ಟಿಗೆಯ ಫಳಿ ( ಹಲಗೆ ) ಮೇಲಿಂದ ಧಢ ಧಢ ಎಂದು ಶಬ್ದ ಮಾಡುತ್ತ ಬೀಳತೊಡಗಿದಾಗ , ಒಂದು ಕ್ಷಣ ಏನಾಗುತ್ತಿದೆ ಎಂಬುದೇ ತಿಳಿಯದಂತಾಗಿತ್ತು.
ದಡಬಡಿಸಿ ಎಲ್ಲರೂ ಎದ್ದೆವು. ನಾನು ಒಂಭತ್ತು ವರ್ಷದ ನನ್ನ ಮಗನಾದ ದಿನೇಶನನ್ನು ಎತ್ತಿಕೊಂಡೆ , ನನ್ನ ಹೆಂಡತಿ ಐದು ವರ್ಷದ ಮಗಳಾದ ದೀಪಾಳನ್ನು ಎತ್ತಿಕೊಂಡು ಹೊರಗೆ ಅಂಗಳಕ್ಕೆ ಧಾವಿಸಿದೆವು. ಅಷ್ಟರಲ್ಲಿ ನಮ್ಮಂತೆಯೇ , ಆ ವಠಾರದಲ್ಲಿದ್ದ ಪತ್ರಕರ್ತ ಬಸಯ್ಯ ವಸ್ತ್ರದ , ಟೆಲಿಫೋನ್ ಆಫೀಸಿನಲ್ಲಿ ಇದ್ದ ಯಮನಪ್ಪ ಮೆಣಸಂಗಿ , ರಾಜು ಉಮದಿ ಹೀಗೆ ಎಲ್ಲರೂ ಓಡಿ ಹೊರಗಡೆ ಬಂದಿದ್ದರು.
ಆಗ ಈಗಿನ ಹಾಗೆ ಟಿ.ವಿ. ಗಳಲ್ಲಿ ಸುದ್ದಿಗಳನ್ನು ಬಿತ್ತರಿಸುವ ಚಾನೆಲ್ ಇದ್ದಿರಲಿಲ್ಲ. ಎಲ್ಲದಕ್ಕೂ ದೂರದರ್ಶನ ಒಂದೇ ಇತ್ತು. ಅದರಲ್ಲಿ ನಸುಕಿನಜಾವ ಉಂಟಾದ ಭೂಕಂಪದ ಸುದ್ದಿಯನ್ನು ಮುಂಜಾನೆ ತೋರಿಸಿದರು. ಮಹಾರಾಷ್ಟ್ರದ ಕಿಲ್ಲಾರಿಯಲ್ಲಿ ಅತೀವ ಸಾವು ನೋವು ಆಗಿವೆ ಎಂದು ಹೇಳಲಾಯಿತು. ಕರ್ನಾಟಕದ ಚಡಚಣ, ಧೂಳಖೇಡ ಗ್ರಾಮಗಳಲ್ಲಿಯೂ ಭೂಕಂಪದಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿತ್ತು.
ಆ ಸಮಯದಲ್ಲಿ ರಬಕವಿಯಲ್ಲಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಸಮಾಜ ಸೇವೆ ಮಾಡುವುದರಲ್ಲಿ ಎಲ್ಲಕ್ಕಿಂತ ಮುಂದೆ ಇದ್ದವು. ಡಾಕ್ಟರ್ ನಾನಾಸಾಹೇಬ ಸೋವನಿ , ಡಾಕ್ಟರ್ ಬಿ.ಎನ್. ಬಾಗಲಕೋಟ, ಡಾಕ್ಟರ್ ಎಮ್. ಕೆ. ನದಾಫ್ , ಡಾಕ್ಟರ್ ಎಸ್. ಜಿ. ಸಾಬೋಜಿ, ಡಾಕ್ಟರ್ ಕುಚನೂರ , ಶಿವಜಾತ ಉಮದಿ , ಮೋಹನ್ ಮಾಂಡವಕರ , ಕಿಶೋರ್ ಅರಬಳ್ಳಿ , ಕಿರಣ ಬದಾಮಿಕರ , ಮುರಲಿಧರ ಬದಾಮಿಕರ ಹೀಗೆ ಹಲವಾರು ಪ್ರಮುಖರು ಲಯನ್ಸ್ ಸಂಸ್ಥೆಯ ಸದಸ್ಯರು.
ಅಂದು 1993 ಸಪ್ಟೆಂಬರ್ ತಿಂಗಳ 30 ನೆಯ ತಾರೀಖು. ಇಡೀ ದೇಶವೇ ನಿದ್ರೆಯಲ್ಲಿದ್ದಂತೆ , ಕಿಲ್ಲಾರಿ ಗ್ರಾಮದ ಜನರೂ ಗಾಢವಾದ ನಿದ್ರೆಯಲ್ಲಿದ್ದರು. ಅದರ ಹಿಂದಿನ ದಿನ ಅಂದರೆ ಸಪ್ಟೆಂಬರ 29 ರಂದು ಭಾದ್ರಪದ ಮಾಸದ ಅನಂತ ಚತುರ್ದಶಿ ಇತ್ತು. ಮಹಾರಾಷ್ಟ್ರ ರಾಜ್ಯದಲ್ಲಿ ಬಹುತೇಕವಾಗಿ ಸಾರ್ವಜನಿಕ ಹಾಗೂ ಮನೆಯ ಗಣೇಶನನ್ನು ವಿಸರ್ಜನೆ ಮಾಡುತ್ತಾರೆ. ಹಾಗೆಯೇ ಆ ದಿನ ಕಿಲ್ಲಾರಿ ಊರಿನ ಜನರು ಕೂಡ ತಮ್ಮ ತಮ್ಮ ಮನೆಗಳಲ್ಲಿಯ ಮತ್ತು ಊರಿನಲ್ಲಿನ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಭಾವಿ , ಕೆರೆಗಳಲ್ಲಿ ವಿಸರ್ಜಿಸಿ ರಾತ್ರಿಯ ಒಂದು ಗಂಟೆಗೆ ನಿದ್ರೆಗೆ ಜಾರಿದ್ದರು.
ಹೆಣ್ಣು ಮಕ್ಕಳು ಗಣಪತಿ ಬಾಪ್ಪಾನನ್ನು ಕಳಿಸಿದ ನಂತರ ತಮ್ಮ ಮೈಮೇಲೆ ಧರಿಸಿದ್ದ ಬಂಗಾರದ ಆಭರಣಗಳನ್ನು ತೆಗೆದು ಇರಿಸದೇ ಹಾಗೆಯೇ ಅವರು ಕೂಡ ನಿದ್ರೆಗೆ ಜಾರಿದರು. ಎಲ್ಲರೂ ಸಕ್ಕರೆ ನಿದ್ರೆಯಲ್ಲಿರುವಾಗಲೇ , ಅವರು ಮಲಗಿದ್ದ ಮನೆಯ ಮೇಲ್ಛಾವಣಿಗಳು ಕ್ಷಣಾರ್ಧದಲ್ಲಿ ಕುಸಿದು ಬಿದ್ದಿದ್ದವು. ಇಡೀ ಊರಿಗೆ ಊರೇ ಕಲ್ಲು ಮಣ್ಣಿನ ಅಡಿಯಲ್ಲಿ ಸಿಲುಕಿ ಹೋಗಿತ್ತು.
ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಲಯನ್ಸ್ ಕ್ಲಬ್ ನವರು , ರಬಕವಿಯಲ್ಲಿ ಎಲ್ಲರಿಗೂ ಬಟ್ಟೆಗಳ ರೂಪದಲ್ಲಿ , ಆಹಾರದ ರೂಪದಲ್ಲಿ ಸಹಾಯ ಸಲ್ಲಿಸುವಂತೆ ಮನವಿ ಮಾಡಿತಲ್ಲದೇ , ತಾನು ಕೂಡ ತನ್ನ ಎಲ್ಲಾ ಲಯನ್ಸ್ ಕ್ಲಬ್ ಸದಸ್ಯರಿಗೆ ಆ ರೀತಿ ಸಹಾಯ ಮಾಡಲು ತಿಳಿಸಿತು.
ಅವರ ಮನವಿಗೆ ಉತ್ಸಾಹ ಭರಿತವಾದ ಬೆಂಬಲ ದೊರೆಯಿತು. ಶೀರೆ , ಬಟ್ಟೆ , ಆಹಾರ ಧಾನ್ಯ , ಹಾಗೂ ಔಷಧ ಸಾಮಗ್ರಿಗಳನ್ನು ತೆಗೆದುಕೊಂಡದ್ದಲ್ಲದೆ, ಅಲ್ಲಿ ಕಿಲ್ಲಾರಿಯಲ್ಲಿ ಆರೋಗ್ಯ ಸಮಸ್ಯೆಗಳಿಗೆ ಸಿಲುಕಿದವರಿಗೆ ತಾವು ಚಿಕಿತ್ಸೆ ನೀಡಲು ರಬಕವಿಯಿಂದ ಡಾಕ್ಟರ್ ಬಿ.ಎನ್. ಬಾಗಲಕೋಟ , ನಾನಾಸಾಹೇಬ ಸೋಹನಿ , ದೊಡ್ಡ ಹುಲಿ ಎಮ್. ಕೆ. ನದಾಫ್ , ಸಣ್ಣ ಹುಲಿ ಸಂಗಪ್ಪ ಜಿ. ಸಾಬೋಜಿ , ಕುಚನೂರ ಇವರೆಲ್ಲರೂ ಸಜ್ಜಾದರು. ಇವರೊಂದಿಗೆ ಮೋಹನ್ ಮಾಂಡವಕರ , ಕಿಶೋರ್ ಅರಬಳ್ಳಿ , ಶಿವಜಾತ ಉಮದಿ , ಕಿರಣ ಬದಾಮಿಕರ ಮುಂತಾದವರು ಕೂಡ ಕಿಲ್ಲಾರಿಗೆ ಸಹಾಯ ಮಾಡಲು ಹೊರಡಲು ಸಿದ್ಧರಾದರು.
ಅಕ್ಟೋಬರ್ ಐದರಂದು ರಬಕವಿಯಿಂದ ಮೂರು ಟೆಂಪೋಟ್ರ್ಯಾಕ್ಸಗಳ ಮೂಲಕ ಕಿಲ್ಲಾರಿಯ ಕಡೆಗೆ ಪ್ರಯಾಣ ಬೆಳೆಸಲಾಯಿತು. ವಿಜಾಪುರ ಮಾರ್ಗವಾಗಿ ಸೊಲ್ಲಾಪುರಕ್ಕೆ ಹೋಗಿ ಮುಟ್ಟಿದೆವು. ಆಗ ಸಮಯ ಮಧ್ಯಾಹ್ನ ಎರಡು ಗಂಟೆ.
ನಾವು ತೆಗೆದುಕೊಂಡು ಹೋದ ಸಹಾಯದ ಕಿಟ್ ಗಳನ್ನು ಕಿಲ್ಲಾರಿ ಊರಿಗೆ ತಲುಪಿಸಲು ಹೊರಟಿರುವ ಬಗ್ಗೆ ಸೊಲ್ಲಾಪುರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಿಳಿಸಿದೆವು. ಪ್ರವೀಣ ಪರದೇಸಿ ಎಂಬ ಯುವಕ ಅಲ್ಲಿನ ಜಿಲ್ಲಾಧಿಕಾರಿ ಇದ್ದರು. ಅವರು ಲಯನ್ಸ್ ಕ್ಲಬ್ ನ ತಂಡಕ್ಕೆ , ಬಟ್ಟೆ ಬರೆ , ಆಹಾರದ ಕಿಟ್ ಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಒಪ್ಪಿಸಲು ಹೇಳಿದರು.
ಆದ್ಯತೆಯ ಮೇರೆಗೆ ಆ ವಸ್ತುಗಳನ್ನು ಅವರು ಅತ್ಯವಶ್ಯವಿರುವ ಗ್ರಾಮಗಳಲ್ಲಿ ಅವರ ಮುಖಾಂತರ ತಲುಪಿಸುವುದಾಗಿ ಅವರು ಹೇಳಿದರು. ಆದರೆ ಔಷಧೀಯ ಕಿಟ್ ಗಳನ್ನು ಹಾಗೂ ಅಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲು ಹೋಗಬೇಕೆಂದಿರುವ ಲಯನ್ಸ್ ಕ್ಲಬ್ ನ ರಬಕವಿಯ ಎಲ್ಲಾ ವೈದ್ಯರಿಗೆ ಮತ್ತು ಅವರೊಂದಿಗೆ ಹೋದ ನಮಗೆ ಕಿಲ್ಲಾರಿಗೆ ಹೋಗಲು ಅನುಮತಿ ಪತ್ರ ನೀಡಿದರು.
ಭೂಕಂಪವಾದ ಮೊದಲ ದಿನ ಅಲ್ಲಿ ಸಹಾಯ ಮಾಡುವ ನೆಪದಲ್ಲಿ ಕೆಲವು ದುಷ್ಟರು ನೆಲಸಮವಾದ ಮನೆಗಳ ಬುಡದಲ್ಲಿ ಸಿಲುಕಿ ಅಸು ನೀಗಿದ್ದ ಮಹಿಳೆಯರ ಮೈಮೇಲಿನ ಬಂಗಾರದ ಒಡವೆಗಳನ್ನು ಕದಿಯುವ ಕೆಲಸದಲ್ಲಿ ತೊಡಗಿದ್ದರು.
ನಂತರ ಅಕ್ಟೋಬರ್ ಒಂದರಂದು ಮಹಾರಾಷ್ಟ್ರ ರಾಜ್ಯದ ಅಂದಿನ ಮುಖ್ಯ ಮಂತ್ರಿ ಶರದಚಂದ್ರ ಪವಾರ ಅವರು ತಮ್ಮ ತಂಡದ ಜೊತೆಗೆ ಅಲ್ಲಿ ಬಂದು ಉಸ್ತುವಾರಿ ವಹಿಸಿಕೊಂಡರು.
ಮರಾಠಾವಾಡಾ ಭಾಗದ ಲಾತೂರ್ ಮತ್ತು ಉಸ್ಮಾನಾಬಾದ ಜಿಲ್ಲೆಯ ಸುಮಾರು 56 ಹಳ್ಳಿಗಳಲ್ಲಿ ಭೂಕಂಪ ತಾಂಡವ ನೃತ್ಯ ಮಾಡಿತ್ತು. ರಬಕವಿಯ ಲಯನ್ಸ್ ಕ್ಲಬ್ ನ ವೈದ್ಯರು ಅಲ್ಲಿನ ಸ್ವಲ್ಪ ಮಟ್ಟಿಗೆ ಸಣ್ಣಪುಟ್ಟ ಗಾಯಗೊಂಡ , ಹಾಗು ಜ್ವರ ಕೆಮ್ಮು ಶೀತದಿಂದ ಬಳಲುತ್ತಿದ್ದವರಿಗೆ ಮಾತ್ರೆ ಕೊಡುವುದು , ಇಂಜೆಕ್ಷನ್ ಮಾಡುವುದನ್ನು ಪ್ರಾರಂಭಿಸಿದರು.
ಡಾಕ್ಟರ್ ಬಿ.ಎನ್. ಬಾಗಲಕೋಟರು ಓರ್ವ ವ್ಯಕ್ತಿಗೆ ಚಿಕಿತ್ಸೆ ನೀಡಿ , ಆತನಿಗೆ ಕೆಲವು ಮಾತ್ರೆ ನೀಡಿ , ಏನಾದರೂ ಹೊಟ್ಟೆಗೆ ತಿಂದು ಈ ಮಾತ್ರೆ ತೆಗೆದುಕೊಳ್ಳಿರೆಂದು ಹೇಳಿದಾಗ , ಆತ ಮರಾಠಿ ಯಲ್ಲಿ ” ಕುಟ್ಲ ಜೇವಣವೊ , ಘರಾತಲಿ ಸಗಳೀ ಗೇಲೇ ಮೀ ಏಕಟಾ ರಾಯಿಲೋಯ್, ವಿಠ್ಠೊಬಾನಿ ಮಲಾ ಹೇ ಭೋಗಾಯಲಾ ಏಕಟ್ಯಾಲಾ ಸೋಡೂನ ಗೇಲಾಯ್ ” ಅಂದರೆ “ಎಲ್ಲಿಯ ಊಟಾರಿ, ಮನೆಯಲ್ಲಿಯ ಎಲ್ರೂ ಹೋದರು, ದೇವರು ನನ್ನನ್ನು ಒಬ್ಬಂಟಿಯಾಗಿ ಇಲ್ಲಿ ಇದೆಲ್ಲಾ ನೋಡಲು ಬಿಟ್ಟು ಹೋಗಿದ್ದಾನೆ ” ಎಂದು ಬಿಕ್ಕುತ್ತ ರೋಧಿಸತೊಡಗಿದಾಗ, ಡಾಕ್ಟರ್ ಬಾಗಲಕೋಟರ ಕಣ್ಣುಗಳು ಕೂಡ ತೇವಗೊಂಡವು.
ಮರುದಿನ ಲಯನ್ಸ್ ಕ್ಲಬ್ ನವರು ಎಲ್ಲರೂ ಅಲ್ಲಿಂದ ಹೊರಟು ಊರಿಗೆ ಮರಳಿದರು. ಆದರೆ ನಾನು ಮತ್ತೆ ಮೂರು ದಿನಗಳ ಕಾಲ ಅಲ್ಲಿಯೇ ಠಿಕಾಣಿ ಹೂಡಿದೆ.
ಕಿಲ್ಲಾರಿ ಹತ್ತಿರದ ‘ಏಕೊಂಡಿ’ ಗ್ರಾಮದ ಪ್ರಿಯಾ ಎಂಬ ಎರಡು ವರ್ಷದ ಹೆಣ್ಣು ಮಗು ನೆಲಸಮವಾದ ಮನೆಯ ಕೆಳಗೆ ಐದು ದಿನಗಳ ನಂತರ ಜೀವಂತ ಸಿಕ್ಕ ಘಟನೆ ಮತ್ತೆ ನಾಳೆ ಹೇಳುವೆ.
ನೀಲಕಂಠ ದಾತಾರ.