ಮೂಡಲಗಿ – ಕೋವಿಡ್ ಸಂದರ್ಭದಲ್ಲಿ ಮಕ್ಕಳ ಶೈಕ್ಷಣಿಕ ವ್ಯವಸ್ಥೆ ಅವ್ಯವಸ್ಥಿತವಾಗುತ್ತಿರುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿರುವ ಜೊತೆಗೆ ದೂರದರ್ಶನ ಚಂದನವಾಹಿನಿ ಮೂಲಕ ವಿಡಿಯೋ ಪಾಠಗಳನ್ನು ಪ್ರಸಾರ ಮಾಡುತ್ತಿರುವದು ಶ್ಲಾಘನೀಯ ಕ್ರಮ ಎಂದು ತುಕ್ಕಾನಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಮರ್ದಿ ಹೇಳಿದರು.
ಅವರು ತುಕ್ಕಾನಟ್ಟಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯವರು ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ದೂರದರ್ಶನ ಚಂದನವಾಹಿನಿ ಮೂಲಕ ಪ್ರಸಾರ ಮಾಡುತ್ತಿರುವ ವಿಡಿಯೋ ಪಾಠಗಳ ಮಾಹಿತಿ ಹಾಗೂ ತಿಳಿವಳಿಕೆ ಕೊಡುವ ಸಂದರ್ಭದಲ್ಲಿ ಪಾಠಗಳ ವೇಳಾಪತ್ರಿಕೆ ವಿತರಿಸಿ ಮಾತನಾಡುತ್ತಿದ್ದರು.
ಕಲ್ಲೋಳಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಗಣಪತಿ ಉಪ್ಪಾರ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ನಮ್ಮ ಶಿಕ್ಷಣ ಇಲಾಖೆ ದೂರದರ್ಶನ ಮುಖಾಂತರ ವಿಡಿಯೋ ಪಾಠಗಳನ್ನು ಪ್ರಸಾರ ಮಾಡುತ್ತಿರುವದನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಸದುಪಯೋಗ ಪಡೆದುಕೊಂಡು ಸಂಕಷ್ಟದಲ್ಲೂ ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದರು.
ಪ್ರಧಾನ ಗುರುಗಳಾದ ಎ.ವ್ಹಿ ಗಿರೆಣ್ಣವರ ಮಾತನಾಡಿ, ಶಿಕ್ಷಣ ಇಲಾಖೆ ಕೋವಿಡ್ ಸಂದರ್ಭದಲ್ಲಿ ದೂರದರ್ಶನ ಚಂದನವಾಹಿನಿ ಮೂಲಕ ವಿಡಿಯೋ ಪಾಠಗಳನ್ನು ಪ್ರಸಾರ ಮಾಡುತ್ತಿರುವದು ತುಂಬಾ ಉಪಯುಕ್ತ ಗ್ರಾಮೀಣ ಪ್ರದೇಶದಲ್ಲಿ ಇದರ ಬಗ್ಗೆ ತಿಳಿವಳಿಕೆ ನೀಡಿದಂತಾಗುತ್ತದೆ ಎಂದರು.