ಬೀದರ್ – ಜಿಲ್ಲೆಯ ಭಾಲ್ಕಿ ತಾಲೂಕಿನ ಉದಗೀರ ರಸ್ತೆ ವಳಸಂಗ್ ಕ್ರಾಸ್ ಹತ್ತಿರ, 2021ರ ಮೇ 4 ರಂದು ರಾತ್ರಿ 9.30 ಗಂಟೆಗೆ ಸುಮಾರು 225 ಕ್ವಿಂಟಾಲ್ ತೊಗರಿಬೇಳೆ ಮತ್ತು 30 ಕ್ವಿಂಟಾಲ್ ಕಡಲೆ ಬೇಳೆ ಇರುವ ಲಾರಿಯನ್ನು ತಡೆದು ದರೋಡೆ ಮಾಡಿದ ಆರೋಪಿಗಳನ್ನು ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದ ಮೇರೆಗೆ ಭಾಲ್ಕಿಯ ಗ್ರಾಮೀಣ ವೃತ್ತದ ಪೊಲೀಸರ ಯಶಸ್ವಿ ಕಾರ್ಯಾಚರಣೆಯಿಂದ ಶನಿವಾರ ಬಂಧಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧೀಕ್ಷಕ ಡಿ.ಎಲ್.ನಾಗೇಶ, ಭಾಲ್ಕಿ ತಾಲೂಕಿನ ವಳಸಂಗ್ ಕ್ರಾಸ್ ಹತ್ತಿರ ಕಳೆದ ಮೇ 4 ರಂದು ಉದಗೀರ ದಿಂದ ಆಂದ್ರಪ್ರದೇಶದ ನೆಲ್ಲೂರಿಗೆ ತೆರಳುತ್ತಿದ್ದ ಲಾರಿ ಸುಮಾರು 225 ಕ್ವಿಂಟಾಲ್ ತೊಗರಿಬೇಳೆ ಮತ್ತು 30 ಕ್ವಿಂಟಾಲ್ ಕಡಲೆ ಬೇಳೆ ತುಂಬಿದ ಲಾರಿಯನ್ನು ತಡೆದು ಬೈಕ್ ಮೇಲೆ ಬಂದ 6 ಜನ ಆರೋಪಿಗಳು ಲಾರಿ ಚಾಲಕ ಮತ್ತು ಕ್ಲೀನರ್ ರನ್ನು ತಡೆದು, ಲಾರಿಯಲ್ಲಿದ್ದ ಸುಮಾರು 37 ಲಕ್ಷ ರೂ. ಮೌಲ್ಯದ ಸ್ವತ್ತನ್ನು ದರೋಡಿ ಮಾಡಿಕೊಂಡು ಹೋಗಿರುವುದಾಗಿ ಲಾರಿ ಚಾಲಕ ಟಿ.ಬಾಬು ರಾಮಯ್ಯ ನವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ತೀವ್ರ ಕಾರ್ಯಾಚರಣೆ ನಡೆಸಲಾಗಿತ್ತು.
ಈ ನಿಟ್ಟಿನಲ್ಲಿ ಚುರುಕಾದ ತಂಡ ರಚಿಸಿ, ವ್ಯಾಪಕ ಬಲೆ ಬೀಸಿ ಆರೋಪಿಗಳನ್ನು ಬಂಧಿಸಿ, ಬಂಧಿತ ಆರೋಪಿಗಳಿಂದ 31 ಲಕ್ಷ ರೂ. ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಗೋಪಾಲ ಬ್ಯಾಕೋಡ, ಪೊಲೀಸ್ ಉಪ ಅಧೀಕ್ಷಕ ಡಾ| ದೇವರಾಜ.ಬಿ, ಸಿ.ಪಿ.ಐ ಫಾಲಾಕ್ಷಯ್ಯ.ಎಮ್.ಹಿರೇಮಠ, ವೀರಣ್ಣಾ ದೊಡ್ಡಮನಿ, ಪಿಎಸ್‍ಐ ಮಹೇಂದ್ರಕುಮಾರ ಜಕಾತಿ, ಎ.ಎಸ್.ಐ ಬಸವರಾಜ, ಮಂಜು, ರಾಜೇಂದ್ರ, ಉತ್ತಮ ಸೇರಿದಂತೆ ಕಾರ್ಯಾಚರಣೆಯಲ್ಲಿದ್ದ ಎಲ್ಲಾ ಪೊಲೀಸ್ ಸಿಬ್ಬಂದಿಗಳಿದ್ದರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ