ಬೀದರ: ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ದುರಾಡಳಿತದಿಂದ ಜನ ಕಣ್ಣೀರು ಹಾಕಿದ್ದಾರೆ ಇದೀಗ ಬದಲಾವಣೆಗಾಗಿ ಆಮ್ ಆದ್ಮಿ ಪಕ್ಷಕ್ಕೆ ಜನ ಬೆಂಬಲಿಸಲಿದ್ದಾರೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ದೆಹಲಿ, ಪಂಜಾಬ ಮಾದರಿ ಕರ್ನಾಟಕ ಬದಲಾವಣೆ ಮಾಡುತ್ತೇವೆ ಹೀಗಾಗಿ ಜನ ನಮ್ಮನ್ನು ಬೆಂಬಲಿಸಿ ಅಧಿಕಾರ ನೀಡಬೇಕು ಎಂದು ಕನ್ನಡ ಚಿತ್ರ ಹಾಸ್ಯ ನಟ ಆಮ್ ಆದ್ಮಿ ಪಕ್ಷದ ಮುಖಂಡರಾದ ಟೆನ್ನಿಸ ಕೃಷ್ಣ ಹೇಳಿದರು.
ಅವರು ಬೀದರ್ ದಕ್ಷಿಣ ಕ್ಷೇತ್ರದ ಮಗದಾಳ ಗ್ರಾಮದಲ್ಲಿರುವ ನಸೀಮ್ ಪಟೇಲ್ ಅವರ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ರಾಜಕೀಯ ನಾಯಕರು ಚುನಾವಣೆ ಸಂದರ್ಭದಲ್ಲಿ ಕುಕ್ಕರ ಹಂಚಲು ಮುಂದಾಗುತ್ತಾರೆ ಅದು ದೀಪಾವಳಿ ಸಮಯದಲ್ಲಿ ಹಂಚಿದರೆ ಉತ್ತಮ ಎನಿಸುತ್ತೆ ಅದು ಯಾವಾಗ ಬ್ಲಾಸ್ಟ್ ಆಗುತ್ತೊ ಗೊತ್ತಾಗಲ್ಲ ಎಂದು ವ್ಯಂಗ್ಯ ಮಾಡಿದರು.
ಮತಕ್ಕಾಗಿ ಸೀರೆ, ಹೆಂಡ ಹಂಚಿ ಮತ ಸೆಳೆಯಲು ಮುಂದಾಗುತ್ತಾರೆ ಜನ ಮರುಳಾದರೆ ಐದು ವರ್ಷ ಸಮಸ್ಯೆ ಎದುರಿಸಬೇಕಾಗುತ್ತೆ. ಕೆಲವರು ಮತಕ್ಕಾಗಿ ಹಣ ಹಂಚುತ್ತಾರೆ ಜನ ಹಣ ತಗೊಳ್ಳಿ ಅದು ನಿಮ್ಮ ತೆರಿಗೆ ಹಣ ಎಂದರು.
ದೆಹಲಿ ಹಾಗೂ ಪಂಜಾಬ್ ನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪಾಸ್, ಉಚಿತ ವಿದ್ಯುತ್ ಸೌಲಭ್ಯ ಇಂತಹ ಅನೇಕ ಸೌಲಭ್ಯಗಳನ್ನು ಜನರಿಗೆ ನಾವು ಕೊಟ್ಟಿದ್ದೇವೆ ಅದನ್ನು ಕಾಂಗ್ರೆಸ್ ನವರು ತಮ್ಮ ಪ್ರಣಾಳಿಕೆಯಲ್ಲಿ ತೋರಿಸಿದ್ದಾರೆ. ರಾಜ್ಯ ಬಿಜೆಪಿ ಅವರು ಏನೂ ಅಭಿವೃದ್ಧಿ ಮಾಡಿಲ್ಲ ಹೀಗಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಲ್ಲಿ ಮತ ಕೇಳುತ್ತಾರೆ ಅದು ಇದೀಗ ನಡೆಯಲ್ಲ. ಬೀದರ್ ದಕ್ಷಿಣ ಅಭಿವೃದ್ಧಿಗಾಗಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ನಸೀಮ್ ಪಟೇಲ್ ಅವರನ್ನು ಗೆಲ್ಲಿಸಿ ಎಂದರು.
ಬೀದರ್ ದಕ್ಷಿಣ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ನಸೀಮ್ ಪಟೇಲ್ ಮಾತನಾಡಿ, ಬೀದರ್ ದಕ್ಷಿಣ ಕ್ಷೇತ್ರದ ರೈತರ ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಗೆ ನಾವು ಹಗಲಿರುಳು ಶ್ರಮಿಸಿ ಕಿಸಾನ್ ಕಬ್ಬಿನ ಕಾರ್ಖಾನೆ ಪ್ರಾರಂಭಿಸಿ ರೈತರ ಹಿತ ಕಾಪಾಡಿದ್ದೇವೆ. ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಶಾಸಕ ಬಂಡೆಪ್ಪ ಖಾಶೆಂಪುರ್, ಮಾಜಿ ಶಾಸಕ ಅಶೋಕ್ ಖೇಣಿ ಇವರ ಸಾಧನೆ ಏನೂ ಇಲ್ಲ ಬರಿ ಸುಳ್ಳು ಭರವಸೆ ನೀಡಿದ್ದಾರೆ.
ಬಂಡೆಪ್ಪ ಖಾಶೆಂಪುರ್ ಎರಡು ಬಾರಿ ಮಂತ್ರಿ ಯಾದರೂ ಕ್ಷೇತ್ರದಲ್ಲಿ ಯಾವುದೇ ಹೇಳಿಕೊಳ್ಳುವ ಕೆಲಸ ಮಾಡಿಲ್ಲ. ರೈತರ ಜೀವನಾಡಿ ಬಿಎಸ್ ಎಸ್ ಕೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದರು.
ಮಾಜಿ ಶಾಸಕ ಅಶೋಕ್ ಖೇಣಿ ಅಂತು ಕ್ಷೇತ್ರ ಸಿಂಗಾಪುರ ಮಾಡುವೆ ಎಂದು ಸುಳ್ಳು ಹೇಳಿ ಅಧಿಕಾರ ಅನುಭವಿಸಿದ್ದಾರೆ ಅಂತಹವರಿಗೆ ಜನ ನಂಬಬೇಡಿ ನಾನು ನನ್ನ ಕಬ್ಬಿನ ಕಾರ್ಖಾನೆ ಮೂಲಕ ರೈತರ ಹಿತ ಕಾಪಾಡಿದ್ದೇನೆ ಮುಂದಿನ ದಿನಗಳಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಕೆಲಸ ಮಾಡುವೆ ಮತ್ತು ರೈತರ ಹಿತ ಕಾಪಾಡುವ ಯೋಜನೆ ರೂಪಿಸುವೆ ಹೀಗಾಗಿ ನನಗೆ ಮತ ನೀಡಿ ಆಶೀರ್ವಾದ ನೀಡಿ ಎಂದರು.