ಗ್ರಾಮಗಳ ಅಭಿವೃದ್ಧಿಯೇ ಪಂಚಾಯತಿಗಳ ಮುಖ್ಯ ಗುರಿ: ಹನಮಂತ ಬಸಳಿಗುಂದಿ

0
151

ಮೂಡಲಗಿ: ಗ್ರಾಮೀಣ ಪ್ರದೇಶದ ಕಟ್ಟಕಡೆಯ ವ್ಯಕ್ತಿಯನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸದೃಢಗೊಳಿಸುವಲ್ಲಿ ಪಂಚಾಯತಿಗಳು ಪ್ರಮುಖ ಪಾತ್ರವಹಿಸುತ್ತವೆ. ಪ್ರತಿ ಗ್ರಾಮದಲ್ಲಿ ಸಮಸ್ಯೆಗಳು ಇದ್ದೇ ಇರುತ್ತವೆ ಅವುಗಳನ್ನು ಸರ್ಕಾರಿ ಅಧಿಕಾರಿಗಳು, ಪದಾಧಿಕಾರಿಗಳು, ಸಾರ್ವಜನಿಕರು ಒಟ್ಟುಗೂಡಿ ಬಗೆಹರಿಸಬೇಕು ಎಂದು ರಾಜಾಪೂರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹನಮಂತ ಬಸಳಿಗುಂದಿ ಹೇಳಿದರು.

ಅವರು ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ರಾಜಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಆತ್ಮವಿಶ್ವಾಸ ಪ್ರತಿಯೊಬ್ಬರಲ್ಲಿ ಇರಬೇಕು. ಯುವಕರು ಉದಾತ್ತ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಾನಂದ ಕಮತಿ ಮಾತನಾಡಿ, ವಿದ್ಯಾರ್ಥಿಗಳು ಶಿಬಿರದ ಸಂಪೂರ್ಣ ಸದುಪಯೋಗ ಪಡೆದುಕೊಂಡು ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳಬೇಕು. ನಿರಂತರ ಪ್ರಯತ್ನ, ಪ್ರಬಲ ಇಚ್ಛಾಶಕ್ತಿ ಮೂಲಕ ಅದ್ಭುತವಾದದ್ದನ್ನು ಸಾಧಿಸಬಹುದು ಎಂದು ನುಡಿದರು.

ರಾಜಾಪೂರ ಗ್ರಾಮ ಪಂಚಾಯತ ಸದಸ್ಯರಾದ ಸಿದ್ರಾಮ ಮರಸಿದ್ದಪ್ಪಗೋಳ, ಸುರೇಶ ಎಣ್ಣಿ, ಗೋಪಾಲ ಕಮತಿ ಮಾತನಾಡಿದರು. ಕಾರ್ಯಕ್ರಮ ಅಧಿಕಾರಿ ಶಂಕರ ನಿಂಗನೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸಮಾರಂಭದಲ್ಲಿ ರಾಜಾಪೂರ ಗ್ರಾಮದ ರಾಜು ಗುಂಡಪ್ಪಗೋಳ, ವಿಠ್ಠಲ ಯಕ್ಕುಂಡಿ, ಜಗದೀಶ ಕಮತಿ, ಪುಂಡಲಿಕ ಕೊಡ್ಲಿ, ಗೋಪಾಲ ಸವಸುದ್ದಿ, ನಾಗಪ್ಪ ನಾವಿ ಇನ್ನಿತರರು ಉಪಸ್ಥಿತರಿದ್ದರು.

ಪ್ರತಿಭಾ ಮಕ್ಕಳಗೇರಿ, ರೇಣುಕಾ ಕಮತಿ ನಿರೂಪಿಸಿದರು. ಸುಷ್ಮೀತಾ ತೋಳಮರ್ಡಿ ಸ್ವಾಗತಿಸಿದರು. ವರ್ಷಾ ಕಡಾಡಿ ವಂದಿಸಿದರು.

LEAVE A REPLY

Please enter your comment!
Please enter your name here