ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಮಾರ್ಚ್ ೨೪ ಮತ್ತು ೨೫ ಕ್ಕೆ ನುಡಿ ಹಬ್ಬದ ಸಂಭ್ರಮ !
ದಿನಾಂಕ ೧೭-೨-೨೦೨೩ ರಂದು ಜರುಗಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾ ೧೫ ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಧಾರವಾಡ ತಾಲೂಕು ಮುಗದ ಗ್ರಾಮದ ನಿವೃತ್ತ ಪ್ರಾಧ್ಯಾಪಕ ರಾದ ಪ್ರೊ ಧರಣೇಂದ್ರ ಕುರಕುರಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕ ಸಾ ಪ ಅಧ್ಯಕ್ಷ ಡಾ ಲಿಂಗರಾಜ ಅಂಗಡಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಹುಬ್ಬಳ್ಳಿ ತಾಲೂಕು ಕಸಾಪ ಅಧ್ಯಕ್ಷ ಗುರುಸಿದ್ದಪ್ಪ ಬಡಿಗೇರ ಇವರು ಪ್ರೊ ಧರಣೇಂದ್ರ ಕುರಕುರಿ ಅವರ ಹೆಸರನ್ನು ಸೂಚಿಸಿದರು, ಅದಕ್ಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಶಿ ಸಾಲಿ ಅನುಮೋದನೆ ನೀಡಿದರು.
ಕುಂದರಗಿ, ಸಿ. ಎಂ ಚನ್ನಬಸಪ್ಪ, ಡಾ. ಶರಣಮ್ಮ ಗೊರೇಬಾಳ, ಮಕಾನದಾರ, ರಮ್ ಜಾನ್ ಕಿಲ್ಲೇದಾರ, ರವೀಂದ್ರ ವೆರ್ಣೇಕರ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಗೌರವ ಕಾರ್ಯದರ್ಶಿಗಳಾದ ಪ್ರೊ. ಕೆ. ಎಸ್. ಕೌಜಲಗಿ, ಡಾ. ಜಿನದತ್ತ ಅ ಹಡಗಲಿ, ಬಿ. ಜಿ. ಬಾರ್ಕಿ, ದಾನಪ್ಪನವರ, ಬೆಟಗೇರಿ, ಮಹಾಂತೇಶ ನರೇಗಲ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾರ್ಚ್೨೪, ೨೫, ರಂದು ಎರಡು ದಿವಸ ಹುಬ್ಬಳ್ಳಿ ಸವಾಯಿ ಗಂಧರ್ವ ಹಾಲ್ ನಲ್ಲಿ ಜರುಗಿಸಲು ತೀರ್ಮಾನಿಸಲಾಯಿತು.
ಪ್ರೊ ಧರಣೇಂದ್ರ ಕುರಕುರಿ ಯವರು ೯ ಗ್ರಂಥಗಳನ್ನು ಪ್ರಕಟಿಸಿ, ೭ ಗ್ರಂಥಗಳನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದು ಕನ್ನಡದಿಂದ ಹಿಂದಿ ಭಾಷೆಗೆ ೧೭ ಗ್ರಂಥಗಳನ್ನು ಅನುವಾದ ಮಾಡಿದ್ದಾರೆ. ಹಿರಿಯ ಸಾಹಿತಿಗಳಾದ ಶ್ರೀಯುತರಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ೧೭ ಪ್ರಶಸ್ತಿ ಪಡೆದ ಖ್ಯಾತಿ ಇದೆ
ಪ್ರೊ. ಧರಣೇಂದ್ರ ಕುರಕುರಿ ಯವರ ಸಂಕ್ಷಿಪ್ತ ಪರಿಚಯ:
ಇವರು ಪ್ರಾದ್ಯಾಪಕ, ಖ್ಯಾತ ಹಿರಿಯ ಕವಿ, ಸಾಹಿತಿ, ಬರಹಗಾರ, ಅನುವಾದಕ, ವಿಮರ್ಶಕ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಲೇಖಕ ಮತ್ತು ೮೨ ರ ಹರೆಯದಲ್ಲೂ ಅತ್ಯಂತ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಸಾಹಿತ್ಯ ಲೋಕಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡ ಹಿರಿಯ ಚೇತನ.
ಕನ್ನಡ ಮತ್ತು ಹಿಂದಿ ಭಾಷೆಯ ಶ್ರೇಷ್ಠ ಕೃತಿಗಳನ್ನು ಅನುವಾದಿಸುವ ಮೂಲಕ ಎರಡೂ ಭಾಷೆಯ ಸಾಹಿತ್ಯದ ಸಂಪರ್ಕ ಕೊಂಡಿಯಾಗಿದ್ದಾರೆ.
ಧಾರವಾಡ ತಾಲೂಕು ಮಲೆನಾಡಿನ ಸುಂದರ ಪರಿಸರ ಗ್ರಾಮ ಮುಗದ ದಲ್ಲಿ ದಿನಾಂಕ 1-4-1942 ರಲ್ಲಿ ಜನಿಸಿದ ಅವರು ಪ್ರಾಥಮಿಕ/ಮಾಧ್ಯಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದಿಂದಲೂ ಮುಗಿಸಿ, ಐದು ವರ್ಷಗಳ ಕಾಲ ಭಾರತೀಯ ಕುಟುಂಬ ಯೋಜನಾ ಸಂಸ್ಥೆಯಲ್ಲಿ ಹಿರಿಯ ಶಿಕ್ಷಣಾಧಿಕಾರಿಯಾಗಿ, ಮುಂದೆ ಹಾನಗಲ್ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ 25 ವರ್ಷ ಸೇವೆ ಸಲ್ಲಿಸಿ, ನಂತರ ಶಿರಸಿಯ ಎಂ ಎಂ ಕಾಲೇಜಿನಲ್ಲಿ ಪ್ರೊಫೆಸರ್ ಮತ್ತು ಹಿಂದಿ ಭಾಷಾ ವಿಭಾಗದ ಮುಖ್ಯಸ್ಥರಾಗಿ ಸೇವೆಸಲ್ಲಿಸಿ ದಿನಾಂಕ ೩೧-೩-೨೦೦೦ ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.
ಶ್ರೀಯುತರ ಪ್ರಕಟಣೆಗೊಂಡ ಕಾವ್ಯ/ಗ್ರಂಥಗಳು:
ಹರಕು ಪುಸ್ತಕ, ನೀರಾಗ ಕುಂತೇನ ನೆನಕೊಂತ, ಹೊಸಾ ಕಾಲ ಬರತಾವ, ನಾ ಕವಿ ಅಲ್ಲ, ಕುಂಚ ಮತ್ತು ಬಣ್ಣ, ಶಬ್ದವಾಯಿತು, ನಕ್ಷತ್ರ ಮತ್ತು ಆಯ್ದ ಕವನಗಳು ಮುಂತಾದ ಕವನ ಸಂಕಲನಗಳಲ್ಲಿ ಸಮಾಜದ ಆಯಾಮಗಳನ್ನು ಸೆರೆಹಿಡಿದಿರುವ ರೀತಿ ಸಾಹಿತ್ಯ ಲೋಕದಲ್ಲಿ ಅನುಕರಣೀಯವಾಗಿದೆ.
- ಚಾವುಂಡರಾಯ ವೈಭವ (ಕಾದಂಬರಿ)
ಪಿ. ಲಂಕೇಶ ಅವರ ಕಥೆಗಳ ಅನುವಾದ (ಪತ್ಥರ್ ಪಿಘಲನೆ ಕಿ ಫಡಿ, - ಓಂ ಣಮೋ (ಶಾಂತಿನಾಥ ದೇಸಾಯಿ ಅವರ ಕಾದಂಬರಿ),
- ಜುರ್ಮಾನ (ಬಸವರಾಜ ಸಾದರ ಕತೆಗಳು),
- ಶೇರ್ ಬಜಾರ ಮೇಂ ಗಂಗಾ (ಕೆ.ಆರ್. ಪ್ರಕಾಶರ ನಾಟಕ),
- ಉದ್ಧಾರ ಏವಂ ಬಜಾರ (ದಿವಾಕರ ಹೆಗಡೆ ಅವರ ನಾಟಕ),
- ದೃಷ್ಟಿ (ನಾ. ಮೊಗಸಾಲೆ ಅವರ ಕಾದಂಬರಿ),
- ಸೀತಾಯನ (ಚಂಪಾ ಅವರ ಕವಿತೆಗಳು),
- ಜಡೆಂ (ವೆಂಕಟೇಶ ಮಾಚನೂರು ಅವರ ಕಥೆಗಳು),
- ಬಗಾವರ ಏವಂ ಅನ್ಯ ಕಹಾನಿಯಾಂ (ಕೇಶವ ರೆಡ್ಡಿ ಹಂದ್ರಾಳರ ಕಥೆಗಳು)
- ಹಾಗೂ ಹಿಂದಿಯಿಂದ ಕನ್ನಡಕ್ಕೆ: ನಾವು ಮೆಚ್ಚಿದ ಹಿಂದಿ ಕಥೆಗಳುಪ್ರಿಯ ಶಬನಂ (ದೇವೇಶ ಠಾಕೂರರ ಕಾದಂಬರಿ), ನಿಲಾಲಾ (ಡಾ.ಪರಮಾನಂದ ಶ್ರೀವಾತ್ಸವರ ಕೃತಿ),
- ಕಲಿಕತೆ ವಯಾ ಬೈಪಾಸ್ (ಅಲಕಾ ಸರಾವಗಿ ಅವರ ಕಾದಂಬರಿ),
ಜೈನಧರ್ಮ ಏನು ಹೇಳುತ್ತದೆ (ಆಚಾರ್ಯ ಮಹಾಶ್ರವಣರ ಪ್ರವಚನಗಳು ಸಂಗ್ರಹಾನುವಾದ) - ಮೋಹನದಾಸ (ಉದಯ ಪ್ರಕಾಶರ ಕಾದಂಬರಿ) ಜಾಮಕಿದಾಸ ತೇಜುಪಾಲ ಮ್ಯಾನ್ಸನ್ (ಅಲಕಾ ಸರವಗಿ ಅವರ ಕೃತಿ),
- ಇಂಗ್ಲಿಷ್ ನಿಂದ ಕನ್ನಡಕ್ಕೆ : ಒಂದು ಮುರುಕು ಕುರ್ಚಿ (ಬಿ.ವಿ.ವೈಕುಂಠರಾಜು ಅವರ ಕಾದಂಬರಿ),
- ಕನ್ನಡದಿಂದ ಹಿಂದಿಗೆ: ಪರ್ಯಟನ (ಬಿ.ವಿ.ವೈಕುಂಠರಾಜು ಅವರ ಕಾದಂಬರಿ),
- ಅಂತ (ಬಿ.ವಿ.ವೈಕುಂಠರಾಜು ಅವರ ಕಾದಂಬರಿ),
- ಕಠಪುತಲಿ ಕಾ ವಿದ್ರೋಹ (ಪದ್ಮಪ್ರಸಾದರ ನಾಟಕ),
- ಆಜ ಕಿ ಕನ್ನಡ ಕವಿತಾಯಂ (32 ಕವಿತೆಗಳ ಅನುವಾದ) ನೂರಾರು ಮಹತ್ವದ ಕೃತಿಗಳನ್ನು ಕನ್ನಡ ಭಾಷೆಗೆ ಅನುವಾದಿಸಿ ಶ್ರೇಷ್ಠ ಅನುವಾದಕರಾಗಿದ್ದಾರೆ. ಈ ಮೂಲಕ ಕನ್ನಡ ಅನುವಾದ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
1972 ರಿಂದ 2011 ರ ವರೆಗೆ ಒಂದು ಅಂಕಣ ಬರಹವೂ ಸೇರಿ ಒಟ್ಟು 9 ಕಾವ್ಯ ಗ್ರಂಥಗಳು ಪ್ರಕಟಗೊಂಡಿವೆ ಇವುಗಳಲ್ಲಿ ಕೆಲವು ಪದವಿ ವರ್ಗಗಳಿಗೆ ಪಠ್ಯ ಪುಸ್ತಕವೂ ಆಗಿವೆ.
ಸಾಹಿತ್ಯಿಕ ಸಾಧನೆ
- ಕನ್ನಡದ ವಿಶಿಷ್ಟ ಕವಿ
- ಕಾವ್ಯದಲ್ಲಿ ಶೋಷಿತರ,ದುರ್ಬಲ ವರ್ಗದವರ ಪರ ದ್ವನಿ.
- ಹಲವಾರು ರಾಷ್ಟ್ರ ಮತ್ತು ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಕಾವ್ಯ ಮತ್ತು ಪ್ರಭಂದಗಳ ಮಂಡನೆ/ ಗೋಷ್ಠಿಗಳ ಅಧ್ಯಕ್ಷತೆ.
- ಹಲವಾರು ಕವಿತೆಗಳು ಹಿಂದಿಯಲ್ಲದೆ ತೆಲಗು,ತಮಿಳು ಭಾಷೆಗೂ ಅನುವಾದ.
- 2014 ರಲ್ಲಿ ಸಿರ್ಸಿ ಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದ, 2015 ರಲ್ಲಿ ಧಾರವಾಡ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ.
- ಆಕಾಶವಾಣಿಯಲ್ಲಿ ಚಿಂತನ, ಸಂದರ್ಶನ ಸೇರಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿ.
ಇವರ ಕಾವ್ಯದಲ್ಲಿ ನವ್ಯ,ನವೋದಯ,ಬಂಡಾಯ, ವಿಡಂಬನೆ,ಜಾನಪದ ಮತ್ತು ವೈಚಾರಿಕತೆಯ ಛಾಯೆ ಎದ್ದು ಕಾಣುತ್ತದೆ.
ಸಂದ ಪ್ರಶಸ್ತಿ/ಬಹುಮಾನಗಳು:
- ಕೇಂದ್ರೀಯ ಹಿಂದಿ ನಿರ್ದೇಶನಾಲಯದ ರಾಷ್ಟ್ರೀಯ ಪ್ರಶಸ್ತಿ ೧೯೯೫.
- ಬಾಲಕೃಷ್ಣ ಸಾಹಿತ್ಯ ಪ್ರಶಸ್ತಿ
- ಕದಂಬ ಸೇವಾ ರತ್ನ ಪ್ರಶಸ್ತಿ
- ದಕ್ಷಿಣ ಭಾರತ ಜೈನ ಸಭೆಯ
- ಬಾಹುಬಲಿ ಸಾಹಿತ್ಯ ಪ್ರಶಸ್ತಿ ೨೦೧೫
- ಕಾಂತಾವರ ಸಾಹಿತ್ಯ ಪ್ರಶಸ್ತಿ ೨೦೧೫
- ಚಾವುಂಡರಾಯ ಪ್ರಶಸ್ತಿ ೨೦೧೬
- ಕರ್ನಾಟಕ ಸಾಹಿತ್ಯ ಅಕ್ಯಾಡಮಿಯ ಸಾಹಿತ್ಯಶ್ರೀ ಪ್ರಶಸ್ತಿ ೨೦೧೭
- ಜೀವಮಾನದ ಹಿಂದಿ-ಕನ್ನಡ ಅನುವಾದ ಕಾರ್ಯಕ್ಕಾಗಿ ಉತ್ತರ ಪ್ತದೇಶ ಹಿಂದಿ ಸಂಸ್ಥಾನವು ಎರಡುವರೆ ಲಕ್ಷ ಮೊತ್ತದೊಂದಿಗೆ “ಸೌಹಾರ್ದ ಸಮ್ಮಾನ” ಪ್ರಶಸ್ತಿ ನೀಡಿ ದಿನಾಂಕ:೨೮-೧೧-೨೦೨೧ ರಂದು ಲಖನೌದಲ್ಲಿ ಗೌರವಿಸಿದೆ.
ಸಾರ್ವಜನಿಕ ಕ್ಷೇತ್ರದ ಸೇವೆ:
- ರತ್ನತ್ರಯ ಜೈನ ಸಂಘ ಸಿರ್ಸಿ ೧೯೯೬
- ಅಧ್ಯಕ್ಷರು ಕೆ ಎಚ್ ಬಿ ಕಾಲೋನಿ ನಿವಾಸಿಗಳ ಸಂಘ ೧೯೯೬-೨೦೦೯
- ಸದಸ್ಯರು ಶ್ರವಣಬೆಳಗೊಳ ಜೈನ ಅಧ್ಯಯನ ಸಂಸ್ಥೆ.
- ಅದ್ಯಕ್ಷರು ಸೋಂದಾ ಜೈನ ಮಠ 2002-2003
- ಪ್ರದಾನ ಕಾರ್ಯದರ್ಶಿ ೨೮ನೇ ರಾಜ್ಯಮಟ್ಟದ ಕೃಷಿಮೇಳ ೨೦೦೮
- ಆಸ್ಟ್ರೇಲಿಯಾದ ಅಡಿಲೇಡ್ ನಗರದಲ್ಲಿ ” ಸ್ಕೂಲ್ ಆಫ್ ಲ್ಯಾoಗವೆಜಿಸ್” ಸಂಸ್ಥೆಯ ಮನವಲಿಸಿ ಕನ್ನಡ ಶಾಲೆಯನ್ನು ಉದ್ಘಾಟನೆ ಮಾಡಿದ ಶ್ರೇಯಸ್ಸು ( 2012 ) ಇವರಿಗೆ ಸಲ್ಲುತ್ತದೆ.
ಏತನ್ಮಧ್ಯೆ1970 ರಲ್ಲಿ ಈಗಿನ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಕರಗುದ್ರಿ ಗ್ರಾಮದ ಗೌರವಾನ್ವಿತ ಗೌಡಕಿ ಮನೆತನದ ಶ್ರೀ ಬಸನಗೌಡ ಇವರ ಕಿರಿಯ ಪುತ್ರಿ ಶ್ರೀಮತಿ ವಿಜಯಲಕ್ಷ್ಮಿ ಇವರನ್ನು ಮದುವೆಯಾಗಿ ೫೦ ವಸಂತಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ 50ನೇ ವರ್ಷ ಪ್ರಾರಂಭ ವಾಗಿದೆ.ಇವರ ಎಲ್ಲಾ ಬೆಳವಣಿಗೆ ಶ್ರೇಯಸ್ಸಿನ ಹಿಂದೆ ಸಹಜವಾಗಿ ಇವರ ಧರ್ಮಪತ್ನಿಯ ಪ್ರಭಾವ ಖಂಡಿತ ಇದೆ.
ಶ್ರೀಯುತರು ಇಚ್ಛೆಯನರಿವ ಸತಿ, ಬೆಚ್ಚನೆಯ ಸುಂದರ ಪರಿಸರದಲ್ಲಿರುವ ಮನೆ, ಖ್ಯಾತಿ, ಸಿರಿ ಸಂಪತ್ತು ಜೊತೆಗೆ ಅಪಾರವಾದ ಬಂಧು, ಬಳಗ, ಸ್ನೇಹಿತರು, ಹಿತೈಷಿಗಳನ್ನು ಹೊಂದಿದದ್ದು, ಈ ದಂಪತಿಗಳಿಗೆ ಒಬ್ಬ ಪುತ್ರ, ಹಾಗು ಒಬ್ಬ ಪುತ್ರಿ ಮತ್ತು ಪ್ರೀತಿಯ ಮಮ್ಮೊಕ್ಕಳು ಇವರ ಸಂತೋಷವನ್ನು, ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಇದೀಗ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿ ಅಭಿನಂದನಾರ್ಹರಾಗಿದ್ದಾರೆ.
ಶಾಂತರಾಜ ಮಲ್ಲಸಮುದ್ರ