spot_img
spot_img

ನನ್ನನ್ನು ಬಿಟ್ಟು ಹೋಗಲೆಂದೇ ಆ ರೀತಿ ಮಾತನಾಡಿದರಾ ಅಪ್ಪ ?

Must Read

ಇವರು ನಿಮ್ಮ ಹಿರಿಯ ಅಣ್ಣನಾ.? ಎಂದು ಅದೆಷ್ಟೋ ಜನ ನನ್ನನ್ನು ಕೇಳಿದಾಗ ನನಗೆ ಅಚ್ಚರಿಯಾಗುತ್ತಿತ್ತು. ಇಲ್ಲರಿ ಇವರು ನನ್ನ ಅಪ್ಪ ಎಂದಾಗ, ಏನ್ರಿ ನೀವು ಅವರ ಮಗನ ರೀತಿ ಕಾಣೋದೇ ಇಲ್ಲ. ಅಷ್ಟೊಂದು ಚಿರಯೌವ್ವನಿಗರು ಇದ್ದಾರಲ್ಲ ನಿಮ್ಮ ತಂದೆ. ಅವರ ಶರೀರ,ಶಾರೀರ ಎಲ್ಲವೂ ಜವಾರಿ ಎಂದೆಲ್ಲ ನನ್ನ ಸ್ನೇಹಿತರು ಚೇಷ್ಟೆ ಮಾಡಿದ ನುಡಿಗಳು ಎದೆಯಾಳದಲ್ಲಿ ಹುದುಗಿಕೊಂಡಿವೆ.

ಸಂಬಳ ತರುವ ಮಗನಾದರೂ ಕೂಡ ಎಷ್ಟಿದೆ ನಿನ್ನ ಸಂಬಳ ಎಂದು ಎಂದೂ ತಂದೆ ತಾಯಿ ಇಬ್ಬರೂ ಕೇಳಿದವರಲ್ಲ. ನಾನು ಸಂಬಳವಾದ ತಕ್ಷಣ ಹಣ ತಂದು ತಂದೆಯ ಕೈಗಿಡುತ್ತಿದ್ದೆ. ಎಷ್ಟಿದೆ ಎಂದು ಎಂದೂ ಕೇಳುತ್ತಿರಲಿಲ್ಲ. ನನ್ನ ಸಾಹಿತ್ಯಿಕ ಚಟುವಟಿಕೆಗಳಿಗೆ ನಾನು ಹೊರಟರೆ ಹಣವಿದೆಯೇ ಎನ್ನುತ್ತ ಹಣ ಕೊಡುವವರು ನನ್ನ ತಂದೆ. ಹೀಗಿರುವ ಕುಟುಂಬದಲ್ಲಿ ದೇವರು ವಿಧಿಯ ರೀತಿ ಆಗಮಿಸಬಹುದೆಂದು ಎಂದೂ ಅಂದುಕೊಂಡಿರಲಿಲ್ಲ.

ಆರು ವರ್ಷದ ಹಿಂದಿನ ಮಾತು.ಪ್ರತಿ ನಿತ್ಯ ನಮ್ಮ ತಂದೆ ತಾಯಿ ಹೆಂಡತಿ ಮಕ್ಕಳು ಎಲ್ಲ ಸೇರಿ ಊಟ ಮಾಡುವುದು ನಮ್ಮನೆಯ ಪದ್ಧತಿ.ಮನೆಯ ಜವಾಬ್ದಾರಿಗಳೆಲ್ಲವೂ ನಮ್ಮ ತಂದೆಯೇ ನೋಡಿಕೊಳ್ಳುತ್ತಿದ್ದರು. ಹುಟ್ಟಿ ೪೫ (ಸದ್ಯ ೫೧ ವರ್ಷ) ವರ್ಷದ ಮಗನಾದ ನನಗೆ ಯಾವ ಕೆಲಸವನ್ನೂ ಅವರು ಹಚ್ಚಿರಲಿಲ್ಲ.ಮಕ್ಕಳ ಫೀ ತುಂಬುವುದರಿಂದ ಹಿಡಿದು.ಅವರ ಪಾಲಕರ ಸಭೆಗೆ ಹಾಜರಾಗುವುದು, ತರಕಾರಿ ತರುವುದು ಇತ್ಯಾದಿ ನಾನು ನೌಕರಿ ಮಾಡುತ್ತ ೨೨ ವರ್ಷ ಕಳೆದಿದ್ದರೂ ಕಾಲೇಜು ಹುಡುಗನ ಹಾಗೆಯೇ ಓಡಾಡುಕೊಂಡಿದ್ದೆ. ಆ ದಿನ ರಾತ್ರಿ ಇಡೀ ತಿಂಗಳ ಖರ್ಚು ವೆಚ್ಚಗಳ ಬಗ್ಗೆ ಒಮ್ಮಿಂದೊಮ್ಮಲೇ ನನ್ನ ತಂದೆ ಮಾತನಾಡತೊಡಗಿದರು. “ಸರ್ಕಾರಿ ನೌಕರಿ ಮಾಡ್ತಿದೀಯ,ಖರ್ಚು ವೆಚ್ಚಗಳ ಬಗ್ಗೆ ಒಂದಿಷ್ಟು ವಿಚಾರಿಸುವುದಿಲ್ಲ.ಮನೆಗೆ ನೀನು ಕೊಡುವ ಹಣ ಸಾಲುತ್ತಿಲ್ಲ. ನನ್ನ ನಿವೃತ್ತಿ ವೇತನ ಕೂಡ ಅದರಲ್ಲಿ ಖರ್ಚು ಮಾಡುತ್ತಿರುವೆ ಹೀಗೆ ಆದರೆ ಗತಿಯೇನು.ನಿನಗೇನೂ ಜವಾಬ್ದಾರಿ ಬೇಡವೇ.?” ಎಂದರು.

ನಾನಾಗ “ಇಷ್ಟು ವರ್ಷ ಇಲ್ಲದ ವಿಚಾರ ಇವತ್ತೇಕೆ ಮಾಡುತ್ತಿರುವಿರಿ. ನೀವಿರುವವರೆಗೂ ಜವಾಬ್ದಾರಿ ಅನ್ನುವ ಪದ ಬಳಸಬೇಡಿರಿ” ಎಂದೆ.ಆಗ ನನ್ನ ತಂದೆ “ಇಲ್ಲ ಮುಂದಿನ ತಿಂಗಳು ನನ್ನ ನಿವೃತ್ತಿ ವೇತನವನ್ನು ನಿನಗೆ ಕೊಡ್ತೀನಿ ನೀನೇ ಜವಾಬ್ದಾರಿ ವಹಿಸಿಕೊಳ್ಳು” ಎಂದರು. ”ಯಾಕೆ ಈ ದಿನ ಈ ರೀತಿ ಮಾತಾಡ್ತಿದೀರಿ. ನಿಮ್ಮ ಹಿರಿಯತನದ ಬಗ್ಗೆ ನಾನೇನಾದರೂ ಮಾತಾಡಿದ್ದೇನಾ.? ಈ ಮಾತು ಇನ್ನೊಮ್ಮೆ ಹೇಳಬೇಡಿ” ಎಂದು ವಿನಂತಿಸಿ ರಾತ್ರಿ ೧೦ ತಂಟೆಯ ಸಮಯವಾದ್ದರಿಂದ ಮಲಗಿ ಎಂದು ಹೇಳಿ ಎದ್ದು ಮಹಡಿಯ ಮೇಲಿನ ನನ್ನ ಕೊಠಡಿಗೆ ತೆರಳಿದೆ.

೧೧ ಗಂಟೆಯ ಸಮಯ ತಂದೆಗೆ ಕೆಮ್ಮು ಜೋರಾಗಿದೆ ಎಂದು ಪತ್ನಿ ಬಂದು ಬಾಗಿಲು ಬಡಿದು ಎಚ್ಚರಿಸಿದಳು, ಮಹಡಿಯ ಮನೆಯಿಂದ ಕೆಳಗೆ ಇಳಿಯುವಷ್ಟರಲ್ಲಿ ಬೈಕ್ ತಾವೇ ಗೇಟ್‌ನಿಂದ ಹೊರತಗೆದು ಸ್ಟಾರ್ಟ ಮಾಡಿ ಕುಳಿತಿದ್ದರು.ಬೇಗ ಬಾ ಆಸ್ಪತ್ರೆಗೆ ಹೋಗೋಣ.ಎನ್ನುತ್ತ ನಮ್ಮ ಕುಟುಂಬದ ವೈದ್ಯರೆಂದರೆ ಹನಸಿ ರವಿ ಡಾ.ರವಿ ಹನಸಿಗೆ ಪೋನ್ ಮಾಡ್ತಿದ್ದಾರೆ ರವಿ ಪೋನ್ ರಿಸೀವ್ ಆಗುತ್ತಿರಲಿಲ್ಲ. ಎಲ್ಲಿ ಹೋಗಿದ್ದಾನೋ ಏನೋ ರವಿ ಪೋನ್ ತೆಗೆಯುತ್ತಿಲ್ಲ. ಬೇಗ ಬಾ ಹೋಗಿ ಬರೋಣ ಎನ್ನುತ್ತಲೇ ಬೈಕ್ ಮೇಲೆ ಕುಳಿತಿದ್ದರು.

ಆ ದಿನ ನಮ್ಮ ಕೆಟ್ಟ ಗಳಿಗೆಯೇನೋ ನನ್ನ ತಂದೆಯನ್ನು ಖಾಯಂ ಆಗಿ ಉಪಚರಿಸುತ್ತಿದ್ದ ರವಿ ಆಸ್ಪತ್ರೆಯಲ್ಲಿ ಇರಲಿಲ್ಲ. ಹಾಗೆಯೇ ಅವರ ಮನೆಗೆ ಬಂದೆವು. ರವಿಯ ತಂದೆ ಎಂ.ಎಂ.ಹನಸಿಯವರು ನನ್ನ ತಂದೆಯ ಬಾಲ್ಯ ಸ್ನೇಹಿತರು ಇಬ್ಬರೂ ಕ್ಲಾಸಮೇಟ್ ಕೂಡ. ಅವರನ್ನು ಕೂಗಿದೆವು. ಅವರು ಹೊರ ಬಂದರು “ಬಸಣ್ಣ ಇಷ್ಟೊತ್ತಿನ್ಯಾಗ ಏನಾತು.? ಎಂದರು. ನಾನು ರವಿ ಆಸ್ಪತ್ರೆಯಲ್ಲಿ ಇಲ್ಲ. ಅಪ್ಪನಿಗೆ ಕೆಮ್ಮು ಜೋರಾಗಿದೆ ಎಂದೆ. ಆಗ ಅವರು ರವಿ ಒಂದು ಪೇಷೆಂಟ್ ಕರೆದುಕೊಂಡು ಬೆಳಗಾವಿಗೆ ಹೋಗಿರುವನು. ಪೋನ್ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದಾನೆ ಎಂದರು.

ನನಗೆ ನನ್ನ ಜಂಘಾಬಲವೇ ಉಡುಗಿ ಹೋದಂತಾಯಿತು. ಈಗ ಏನು ಮಾಡೋದು.? ಎಂದು ಅವರನ್ನೇ ಕೇಳಿದ್ದೆ. ಬೆಟಗೇರಿ ಡಾಕ್ಟರ್ ಹತ್ತಿರ ಹೋಗೋಣ ನಡೆ ಎಂದರು. ಆಗ ಕೆಮ್ಮು ಮತ್ತಷ್ಟು ಜೋರಾಗತೊಡಗಿತು. ಪಂಚಲಿಂಗೇಶ್ವರ ಕ್ರಾಸ್ ನಲ್ಲಿರುವ ಡಾ.ಬೆಟಗೇರಿಯವರ ಆಸ್ಪತ್ರೆಗೆ ಬಂದೆನು. ಅವರು ಮಲಗಿದ್ದರು. ಮಹಡಿಯ ಅವರ ಮನೆಗೆ ಹೋಗಿ ಬಾಗಿಲು ತಟ್ಟಿದೆ. ಅವರು ಎಚ್ಚರಗೊಂಡು “ಸರ್ ಇಷ್ಟೊತ್ತಿನಲ್ಲಿ ಯಾರಿಗೆ ಏನಾಗಿದೆ.? ಎಂದು ತಡವರಿಸುತ್ತ ಪ್ರಶ್ನಿಸಿದರು. ಡಾಕ್ಟರ್ ನನ್ನ ತಂದೆಗೆ ವಿಪರೀತ ಕೆಮ್ಮು ಕಂಟ್ರೋಲ್ ತಪ್ಪಿದೆ ಬನ್ನಿ ಎಂದೆ. ಅವರು ಬಂದು ನನ್ನ ತಂದೆಯ ತಪಾಸಣೆ ಮಾಡಿ. ನನಗೆ ಒಳಗೆ ಕರೆದು. ಇದು ಹಾರ್ಟ ಸಮಸ್ಯೆ. ಬೇಗ ಡಾ.ನಾಯ್ಕ ಆಸ್ಪತ್ರೆಗೆ ಹೋಗಿರಿ ಎಂದವರೇ ನನ್ನ ಜೊತೆಗೆ ಯಾರಿದ್ದಾರೆ ಎಂದು ಕೇಳಿದರು. ನನಗೆ ಮಾತೇ ಬರದಂತಾಗಿ ನಿಂತು ಬಿಟ್ಟೆ ಮಲಗಿದ್ದ ಅವರ ಸಹಾಯಕನನ್ನು ಎಬ್ಬಿಸಿ. ಸರ್ ಜೊತೆಗೆ ಅವರ ತಂದೆಯನ್ನು ಹಿಂದಿನಿಂದ ಹಿಡಿದು ಕುಳಿತುಕೋ ಎನ್ನುತ್ತ ನನಗೆ ಬೈಕ್ ಸ್ಟಾರ್ಟ ಮಾಡಲು ಹೇಳಿದರು. ನನ್ನ ತಂದೆ ಅವರನ್ನು ಯಾಕೆ ಒಂದು ಇಂಜೆಕ್ಷನ್ ಮಾಡಬಾರದ ಕೆಮ್ಮು ಇಷ್ಟೇಕೆ ಬರುತ್ತಿದೆ ಎಂದರು. ಆಗ ನಿಮಗೆ ಸಲಾಯಿನ್ ಜೊತೆಗೆ ಇಂಜೆಕ್ಷನ್ ಬೇಕು. ಈ ಕೆಮ್ಮು ಹೋಗಲು ಇರುವ ಇಂಜೆಕ್ಷನ್ ನನ್ನ ಬಳಿ ಇಲ್ಲ. ಅದಕ್ಕೆ ಡಾ.ನಾಯ್ಕ ಆಸ್ಪತ್ರೆಗೆ ಬೇಗ ಹೋಗಿ ಎಂದರು.

ಅವರ ಆಸ್ಪತ್ರೆಗೆ ಹೋಗುವಷ್ಟರಲ್ಲಿ ನನ್ನ ತಂದೆಗೆ ಕೆಮ್ಮು ವಿಪರೀತವಾಗಿ ಮೈ ಬೆವರತೊಡಗಿತ್ತು. ನನಗಂತೂ ಏನೂ ತೋಚದಂತಾಗಿತ್ತು. ಆಸ್ಪತ್ರೆಗೆ ಹೋಗಿ ನರ್ಸಗಳಿಗೆ ಹೇಳಿ ಮಲಗಿದ್ದ ಡಾಕ್ಟರ್ ಎಬ್ಬಿಸಲು ಹೋದೆ. ನನ್ನ ತಂದೆ ಮಂಚದ ಮೇಲೆ ಮಲಗಿದ್ದವರು. ಎದೆಯನ್ನು ಹಿಡಿದುಕೊಂಡು ನನಗೆ ಎದೆಯಲ್ಲಿ ಚುಚ್ಚಿದಂತಾಗುತ್ತದೆ. ಬೇಗ ಡಾಕ್ಟರ್ ಕರೆದುಕೊಂಡು ಬಾ ಎಂದಿದ್ದೆ ಕೊನೆಯ ಮಾತು. ನಾನು ಡಾಕ್ಟರ ಬಳಿಗೆ ಬಂದು ನನ್ನ ತಂದೆಯ ಸ್ಥಿತಿ ಹೇಳುತ್ತ ಅವರೊಂದಿಗೆ ನನ್ನ ತಂದೆಯ ಮಂಚದ ಬಳಿ ಬರುವಷ್ಟರಲ್ಲಿ ನನ್ನ ತಂದೆಯ ಪ್ರಾಣಪಕ್ಷಿ ಹಾರಿಹೋಗಿತ್ತು.

ಡಾ.ನಾಯ್ಕ ಅವರು ಇದು ಸೀವಿಯರ್ ಹಾರ್ಟ ಅಟ್ಯಾಕ್ ಬೇಗ ಬಂದಿದ್ದರೆ. ನಿನ್ನ ತಂದೆ ನನ್ನ ಜೊತೆಗೆ ಮಾತಾಡುವ ಸ್ಥಿತಿಯಲ್ಲಿದ್ದರೆ ಖಂಡಿತವಾಗಿ ಉಳಿಸಬಹುದಿತ್ತು ಎಂದು ಅಲ್ಲಿದ್ದ ಅಟೋದವರನ್ನು ಕರೆಯಲು ನರ್ಸಗಳಿಗೆ ಹೇಳಿ ತಮ್ಮ ಅಸಹಾಯಕತೆಯನ್ನು ನನಗೆ ತಿಳಿಸಿ ಹೋದಾಗ. ಜೊತೆಯಲ್ಲಿಯೇ ಮಾತಾಡುತ್ತ ಬಂದ ನನ್ನ ತಂದೆ ನನ್ನ ಕಣ್ಣ ಮುಂದೆ ತೀರಿದ ಕ್ಷಣ ಎಂದೆಂದಿಗೂ ಮರೆಯಲಾಗದ್ದು.

ಯಾವತ್ತೂ ಜವಾಬ್ದಾರಿ ಮಾತನಾಡದ ನನ್ನಪ್ಪ ಆ ದಿನ ಊಟ ಮಾಡಿ ನಾಳೆಯಿಂದ ಮನೆಯ ಜವಾಬ್ದಾರಿ ನಿನ್ನದು ಎಂದ ಮಾತು ನನ್ನಿಂದ ದೂರ ಹೋಗುತ್ತಿರುವುದರ ಸಂಕೇತವಾಗಿತ್ತೇನೋ…ಎಂದು ಮತ್ತೆ ಮತ್ತೆ ನೆನಪಾಗುತ್ತಿದೆ.


ವೈ.ಬಿ.ಕಡಕೋಳ (ಶಿಕ್ಷಕರು)
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!