ಬೈಲಹೊಂಗಲ – (ನಾಗನಗೌಡ ಪಾಟೀಲ ವೇದಿಕೆ) ಜಗತ್ತಿನಾದ್ಯಂತ ಸೋಲರಿಯದ ಸರದಾರರು ಎಂದು ಬೀಗುತ್ತಿದ್ದ ಬ್ರಿಟಿಷರಿಗೆ ಮೊದಲ ಸೋಲಿನ ರುಚಿಯನ್ನು ತೋರಿಸಿದ ಕಿತ್ತೂರು ಸಂಸ್ಥಾನದ ವೀರ ಯೋಧ ಅಮಟೂರು ಬಾಳಪ್ಪನವರ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯವಾಗಿದೆ ಎಂದು ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು.
ಬೆಳಗಾವಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ ಅಮಟೂರು ಬಾಳಪ್ಪ ಉತ್ಸವದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಅವರು, ನಾಡಿನ ಬೇರೆ ಬೇರೆ ಕಡೆಗಳಲ್ಲಿ ಐತಿಹಾಸಿಕ ಉತ್ಖನನಗಳಿಂದ ಸಾವಿರಾರು ವರ್ಷಗಳ ಐತಿಹಾಸಿಕ ದಾಖಲೆಗಳು ಕುರುಹುಗಳು ಲಭ್ಯವಾಗಿವೆ. ಆದರೆ ಎರಡು ನೂರು ವರ್ಷಗಳ ಹಿಂದೆ ಕಿತ್ತೂರು ಸಂಸ್ಥಾನ ಮತ್ತು ರಾಣಿ ಚೆನ್ನಮ್ಮ ತಾಯಿಯ ರಕ್ಷಣೆಗಾಗಿ ಜೀವದ ಹಂಗು ತೊರೆದು ಹೋರಾಡಿ, ಹುತಾತ್ಮರಾದ ಅಮಟೂರು ಬಾಳಪ್ಪ ಸೇರಿದಂತೆ ಅನೇಕ ಸೇನಾನಿಗಳ ಬಗ್ಗೆ ಅಧಿಕೃತ ಐತಿಹಾಸಿಕ ದಾಖಲೆಗಳು ಲಭ್ಯವಿಲ್ಲ. ಆದ್ದರಿಂದ ಈ ಮರೆತುಹೋದ ಸ್ವಾತಂತ್ರ್ಯ ಯೋಧರ ಕುರಿತು ಈ ಭಾಗದ ಸಂಶೋಧಕರು ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಮೂಡಲಗಿ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಂಜಯ ಶಿಂದಿಹಟ್ಟಿಯವರು ರಚಿಸಿದ ವೀರ ಕೇಸರಿ ಅಮಟೂರು ಬಾಳಪ್ಪ ಕೃತಿಯನ್ನು ಕೆ.ಎಲ್.ಇ.ಸಂಸ್ಥೆಯ ಅಧ್ಯಕ್ಷರು ಹಾಗೂ ಬೈಲಹೊಂಗಲ ಮತಕ್ಷೇತ್ರದ ಶಾಸಕರಾದ ಮಹಾಂತೇಶ ಶಿವಾನಂದ ಕೌಜಲಗಿ ಲೋಕಾರ್ಪಣೆ ಮಾಡಿ ಸ್ಥಳೀಯರು ತಮ್ಮ ಬಳಿ ಲಭ್ಯವಿರುವ ಮಾಹಿತಿಯನ್ನು ನೀಡಿ ಕಿತ್ತೂರು ಸಂಸ್ಥಾನದ ಅಧಿಕೃತ ಇತಿಹಾಸ ರಚನೆಗೆ ಕೈಜೋಡಿಸಬೇಕು ಎಂದು ಹೇಳಿದರು.
ಬೇವಿನಕೊಪ್ಪದ ಆನಂದ್ರಾಶ್ರಮದ ಶ್ರೀ ವಿಜಯಾನಂದ ಸ್ವಾಮಿಗಳು, ಡಾ. ಮಹಾಂತಯ್ಯ ಶಾಸ್ತ್ರಿಗಳು ಆರಾದ್ರಿಮಠ ಹಾಗೂ ಈಶ್ವರೀಯ ವಿಶ್ವವಿದ್ಯಾಲಯದ ಪ್ರಭಾ ಅಕ್ಕನವರು ಆಶೀರ್ವಚನ ನೀಡಿದರು.
ಬೈಲಹೊಂಗಲ ತಹಸೀಲ್ದಾರರಾದ ಹನುಮಂತ ಶಿರಹಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ಅಮಟೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಘವೇಂದ್ರ ಸಂಗಪ್ಪನವರ, ಅಮಟೂರು ಬಾಳಪ್ಪ ಟ್ರಸ್ಟಿನ ಅಧ್ಯಕ್ಷರಾದ ಸೋಮನಗೌಡ ಪಾಟೀಲ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಜನೂರ, ತಾಲ್ಲೂಕಿನ ಆರೋಗ್ಯ ಅಧಿಕಾರಿ ಸಂಜಯ ಸಿದ್ದಣ್ಣವರ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ರವೀಂದ್ರ ಹಿರೇಮಠ, ಕಂದಾಯ ನಿರೀಕ್ಷಕರಾದ ಬಸವರಾಜ ಬೋರಗಲ್ಲ, ಗ್ರಾಮ ಆಡಳಿತ ಅಧಿಕಾರಿ ಅಭಿಷೇಕ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸದಸ್ಯರು ಹಾಗೂ ಬೈಲಹೊಂಗಲ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ರಾಜು ಅಕ್ಕಿ ನಿರೂಪಿಸಿ, ವಂದಿಸಿದರು.

