ಮೈಸೂರು -ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಶಾರದಾ ವಿಲಾಸ ಪದವಿ ಪೂರ್ವ ಕಾಲೇಜಿನ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಬಡ್ಡಿ ಕ್ರೀಡಾಕೂಟವು ಮೈಸೂರು ವಿಶ್ವವಿದ್ಯಾನಿಲಯದ ಓವೆಲ್ ಕ್ರೀಡಾಂಗಣದಲ್ಲಿ ಸೆ.೨೪ ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಹಾಜನ ಪದವಿ ಪೂರ್ವ ಕಾಲೇಜಿನ ಕ್ರೀಡಾ ವಿಭಾಗದ ನಿವೃತ್ತ ನಿರ್ದೇಶಕರಾದ ಕಾಂತರಾಜು ಅವರು ಮಾತನಾಡಿ, ಭಾರತದ ಗ್ರಾಮೀಣ ಕ್ರೀಡೆ ಕಬಡ್ಡಿ. ಇದಕ್ಕೆ ದೊಡ್ಡ ಇತಿಹಾಸವಿದೆ. ಇದು ದೇಸೀಯ ಕ್ರೀಡೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಕಬಡ್ಡಿ ಪಂದ್ಯಾವಳಿ ಗ್ರಾಮೀಣ ಪ್ರದೇಶದ ಜನರಿಗೆ ಬಹಳ ಇಷ್ಟವಾದ ಆಟವಾಗಿದ್ದು, ಪುರುಷರು ಮತ್ತು ಮಹಿಳೆಯರು ಕಬಡ್ಡಿಯನ್ನು ಮನಬಿಚ್ಚಿ ಆಡುತ್ತಾರೆ. ಈ ಆಟದಿಂದ ದೇಹ ಹಾಗೂ ಕಣ್ಣುಗಳಿಗೆ ಅತ್ಯಂತ ಹೆಚ್ಚಿನ ಉತ್ಸಾಹ ಹಾಗೂ ಶಕ್ತಿ ದೊರಕುತ್ತದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾರದಾ ವಿಲಾಸ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ.ಕೆ.ಅಶೋಕಕುಮಾರ್, ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿ ಜೀವನದಲ್ಲಿ ಬಹಳ ಮುಖ್ಯ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಸೋಲು-ಗೆಲುವುಗಳಲ್ಲ. ಕ್ರೀಡೆ ವಿದ್ಯಾರ್ಥಿಗಳ ಜೀವನದಲ್ಲಿ ಮುಖ್ಯ ಪಾತ್ರವಾಗಿದೆ. ಸದೃಢ ದೇಹಕ್ಕೆ ಕ್ರೀಡೆ ಅತ್ಯಂತ ಅವಶ್ಯಕ. ತರಗತಿಯ ಬಿಡುವಿನ ವೇಳೆಯಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿ, ದೇಹವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಿ.ಶಿವಶಂಕರ್ ಅವರು ಮಾತನಾಡಿ, ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿ ಸಮುದಾಯ ಭಾಗವಹಿಸುವುದರಿಂದ ಮಾನಸಿಕ ಒತ್ತಡವನ್ನು ನಿಯಂತ್ರಿಸಬಹುದು. ಅಂತೆಯೇ ನೆನಪಿನ ಶಕ್ತಿ ವೃದ್ಧಿಸಿಕೊಂಡು, ಓದಿನಲ್ಲಿ ಹೆಚ್ಚು ಗಮನ ಹರಿಸುವಂತಾಗುತ್ತದೆಯೆಂದು ತಿಳಿಸಿದರು.
ಜಿಲ್ಲಾ ಮಟ್ಟದ ಈ ಕ್ರೀಡಾಕೂಟದಲ್ಲಿ ಮೈಸೂರು, ಹುಣಸೂರು, ಹೆಚ್.ಡಿ.ಕೋಟೆ, ನಂಜನಗೂಡು, ಪಿರಿಯಾಪಟ್ಟಣ ಹಾಗೂ ಕೆ.ಆರ್.ನಗರದಿಂದ ಏಳು ತಂಡಗಳು ಭಾಗವಹಿಸಿದ್ದವು. ತೀರ್ಪುಗಾರರಾಗಿ ಕ್ರೀಡಾ ವಿಭಾಗದ ನಿರ್ದೇಶಕರಾದ ಹರೀಶ್, ಮಂಜುನಾಥ್ ಮತ್ತು ಜಿಲ್ಲಾ ಕ್ರೀಡಾ ಸಂಚಾಲಕರಾದ ಕೆ.ಆರ್.ಮಂಜುನಾಥ್, ಕೆ.ಆರ್.ಮುರುಳೀಧರ್ ಮತ್ತಿತರರು ಉಪಸ್ಥಿತರಿದ್ದರು.