ಮುನವಳ್ಳಿ: ಪಟ್ಟಣದ ಶ್ರೀ ವಿ.ಪಿ.ಜೇವೂರ ಮೂಕ ಮತ್ತು ಕಿವುಡು ಮಕ್ಕಳ ವಸತಿ ಶಾಲೆಯಲ್ಲಿ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಅವರ ಜನ್ಮದಿನವನ್ನು ಮಕ್ಕಳಿಗೆ ಲೇಖನ ಸಾಮಗ್ರಿ ವಿತರಿಸುವ ಮೂಲಕ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶಿಕ್ಷಕ ವೀರಣ್ಣ ಕೊಳಕಿ ಆಗಮಿಸಿ ಮಾತನಾಡುತ್ತ, ವೈ.ಬಿ.ಕಡಕೋಳ ಅವರ ಬದುಕು ಬರಹ ಇತರರಿಗೆ ಆದರ್ಶವಾಗಿದೆ. ಕಡಕೋಳ ಅವರು ನಿರಂತರ ಸಾಹಿತ್ಯ ಹಾಗೂ ಸಾಹಿತಿಗಳ ಒಡನಾಟದಲ್ಲಿದ್ದಾರೆ. ಈಗಾಗಲೇ ಸುಮಾರು ೧೬ ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದು, ಇನ್ನೂ ಹಲವಾರು ಕೃತಿಗಳು ಮುದ್ರಣಕ್ಕೆ ಅಣಿಯಾಗುತ್ತಿವೆ. ಸೃಜನಶೀಲ ಮನಸ್ಸಿನಿಂದ ಕಡಕೋಳ ಅವರು ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿದ ವೈ.ಬಿ.ಕಡಕೋಳ ಮಾತನಾಡುತ್ತ, ನಿತ್ಯ ನಾವು ನೋಡುವ, ಅನುಭವಿಸುವ ಘಟನೆಗಳನ್ನು ಸಹಜವಾಗಿ ಬರೆಯುತ್ತ ಹೋದರೆ ನಮ್ಮೊಳಗಿರುವ ಲೇಖಕ ತಾನಾಗಿಯೇ ಹೊರಗೆ ಬರುತ್ತಾನೆ. ಬರೆಯಬೇಕು ಎನ್ನುವ ಹಂಬಲ ಇರಬೇಕು. ಸಾಹಿತ್ಯ ಕ್ಷೇತ್ರದ ಜೊತೆಗೆ ಇತರ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಲು ವಿವಿಧ ಮಠಾಧೀಶರ ಆಶೀರ್ವಾದ, ಹಿರಿಯರ ಒಡನಾಟ, ಮನೆಯಲ್ಲಿ ಕುಟುಂಬದವರ ಸಹಕಾರವನ್ನು ನೆನೆದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶಿವೂ ಕಾಟೆ ಪ್ರಾಸ್ತಾವಿಕವಾಗಿ ಮಾತನಾಡುತ್ತ, ವೈ.ಬಿ.ಕಡಕೋಳ ಗುರುಗಳ ಸಾಹಿತ್ಯಿಕ ಬದುಕು ನಿಜಕ್ಕೂ ಅದ್ಭುತ. ನಸುಕಿನಲ್ಲಿ ಏಳುವ ಮೂಲಕ ಅವರು ಅಂತರ್ಜಾಲ ತಾಣದಲ್ಲಿ ಗುರುರಾಜ ಕರ್ಜಗಿಯವರ ಉಪನ್ಯಾಸ ಮಾಲಿಕೆ ಮತ್ತು ಬಾವಗೀತೆಗಳ ಮೂಲಕ ದಿನ ತೆರೆದುಕೊಳ್ಳುವ ಅವರ ಬದುಕು ನಿಜಕ್ಕೂ ಮಹತ್ವದ್ದು.ಇಂದು ವಿಕಲಚೇತನ ಮಕ್ಕಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಅವರ ಬದುಕು ಇತರರಿಗೆ ಮಾದರಿ ಎಂದು ಪ್ರಾಸ್ತಾವಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ಶಿವಲೀಲಾ ಕಡಕೋಳ ಪಂಚಪ್ಪ ಜಂಬಗಿ, ಪಿ.ಜಿ.ಜಂಬಗಿ, ಶಾರದಾ ತೆಗ್ಗಿನಮನಿ, ಬಸವರಾಜ ಮಾದರ, ಮುಖ್ಯ ಶಿಕ್ಷಕ ಲಾಲಸಾಬ ವಟ್ನಾಳ, ಬಸವರಾಜ ತುಳಜಣ್ಣವರ, ಶಿವು ಕಾಟಿ, ವೀರೂ ಕಳಸಣ್ಣವರ, ಮಂಜುನಾಥ ಮಾವಿನಕಟ್ಟಿ, ಅಜೇಯ ಕಂಬಣ್ಣವರ, ಸುಜಾತಾ ಬಡ್ಲಿ, ಲೀಲಾವತಿ ಟಿ.ಜೆ., ಇಬ್ರಾಹಿಂ ಅತ್ತಾರ, ಅಮೀನಾ.ಎಸ್.ತಾಸೇದ, ಮಾಂತೇಶ ಮೇತ್ರಿ, ಮೊದಲಾದವರು ಉಪಸ್ಥಿತರಿದ್ದರು.