ಮೂಡಲಗಿ – ಭಾರತದ ಧಾರ್ಮಿಕ ಪರಂಪರೆಗೆ ಇರುವಂಥ ಇತಿಹಾಸ ಯಾವ ಜಗತ್ತಿಗೂ ಇಲ್ಲ ಅದನ್ನು ನಾಶ ಮಾಡಲು ಯಾರಿಂದಲೂ ಆಗಿಲ್ಲ. ಯಾಕೆಂದರೆ ಸಾಧು ಸಂತರು ಬರೆದಿಟ್ಟಂಥ ಶಾಸ್ತ್ರವನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ. ಮಠ ಮಂದಿರಗಳೂ ಕೂಡ ಸಂತರ ಆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಇಂದಿಗೂ ನಡೆದಿದೆ.
ಈ ನಿಟ್ಟಿನಲ್ಲಿ ಶಿವಾಪೂರದ ಶ್ರೀ ಅಡವಿ ಸಿದ್ದೇಶ್ವರ ಮಠ ಒಂದು ಉತ್ತಮ ಉದಾಹರಣೆಯಾಗಿದೆ ಎಂದು ಸತೀಶ ಕಡಾಡಿ ಹೇಳಿದರು.
ತಾಲೂಕಿನ ಶಿವಾಪೂರ(ಹ) ಗ್ರಾಮದಲ್ಲಿ ಶುಕ್ರವಾರ ನಡೆದ ಅಂಬಲಿ ಒಡೆಯ ಶ್ರೀ ಅಡವಿ ಸಿದ್ದೇಶ್ವರ ಜಾತ್ರೆಯ ವಚನ ಮಹಾಮಂಗಲ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂಥ ಜಾತ್ರೆಗಳು ನಿರಂತರ ನಡೆಯಲಿ, ಗುರುವಿನ ಆಶೀರ್ವಾದ ಎಲ್ಲ ಭಕ್ತರ ಮೇಲೆ ಇರಲಿ. ಇಂಥ ಮಠಗಳಿಂದ ಪ್ರೇರಿತರಾಗಿ ನಾವು ಧಾರ್ಮಿಕ ಕಾರ್ಯಗಳಲ್ಲಿ ತೊಡಗುವುದು ಸಾಧ್ಯವಾಗುತ್ತದೆ. ಮನುಷ್ಯನಲ್ಲಿ ಸಾತ್ವಿಕ ಗುಣಗಳು ಬರಬೇಕಾದರೆ ಇಂಥ ಜಾತ್ರೆ ನಡೆಯಬೇಕು ಎಂದರು.
ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಹನ್ನೆರಡನೇ ಶತಮಾನದ ಶರಣರ ಹಾಗೆ ಇವತ್ತಿಗೂ ಶರಣರಂತೆ ಬದುಕಿದವರೆಂದರೆ ಅಂಕಲಗಿಯ ಅಡವಿ ಸಿದ್ದೇಶ್ವರರು. ರಾಜ್ಯದಲ್ಲಿ ಒಟ್ಟು ಮೂರು ಶಿವಾಪೂರಗಳಿವೆ. ಒಂದು ಮಂಡ್ಯ ಜಿಲ್ಲೆಯ ಶಿವಪುರ, ಎರಡನೇಯದು ಉಳವಿಯ ಶಿವಪುರ ಹಾಗೂ ಮೂರನೇಯದು ಇದೇ ಮೂಡಲಗಿಯ ಶಿವಪುರ ಇವುಗಳು ಆಧ್ಯಾತ್ಮಿಕ ಸಾಧನೆಗೆ ಪ್ರಸಿದ್ಧವಾಗಿವೆ. ಇಲ್ಲಿನ ಅಡವಿ ಸಿದ್ಧರಾಮ ಶ್ರೀಗಳು ಎಲ್ಲರಿಗೂ ಬಸವ ದರ್ಶನ ಮಾಡಿಸಿದ್ದಾರೆ. ಇಂಥ ಧಾರ್ಮಿಕ ಸ್ವಾತಂತ್ರ್ಯ ನೀಡಿದವರೆಂದರೆ ಹನ್ನೆರಡನೇ ಶತಮಾನದ ಬಸವಾದಿ ಶರಣರು ಎಂದು ಹೇಳಿ, ಶ್ರೀ ಬಸವಣ್ಣನವರ ಕಾಯಕದ ಹಾಗೂ ಶರಣ ತತ್ವದ ಮಹತ್ವ ವಿವರಿಸಿದರು.
ನಿಂಗಪ್ಪ ಫಿರೋಜಿ ಮಾತನಾಡಿ, ಈ ಜಾತ್ರೆಯಲ್ಲಿ ನಾವು ನಿಜವಾದ ಹಳ್ಳಿಯ ಸಂಸ್ಕೃತಿಯನ್ನು ಕಂಡಂತಾಯಿತು. ಇಂಥ ಗ್ರಾಮೀಣ ಜಾತ್ರೆ ಮುಂದಿನ ವರ್ಷ ಇನ್ನೂ ಹೆಚ್ಚಿನ ವೈಭವದಿಂದ ನಡೆಯಬೇಕು ಎಂದರು.
ಈ ಮುಂಚೆ ಶ್ರೀ ಅಡವಿ ಸಿದ್ದೇಶ್ವರ ಮಠದ ಸಿದ್ಧರಾಮ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಟ್ರ್ಯಾಕ್ಟರ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸತ್ಕಾರ ಮಾಡಿ ಬಹುಮಾನ ನೀಡಲಾಯಿತು.
ಜಾತ್ರೆಯಲ್ಲಿ ಪಂಚಾಕ್ಷರಿ ಶಾಸ್ತ್ರಿಗಳು ಪ್ರತಿದಿನ ಪ್ರವಚನ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯ ಮೇಲೆ ಕಂಕಣವಾಡಿಯ ಮಾರುತಿ ಶರಣರು, ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ನಿಡಗುಂದಿ, ಶ್ರೀ ಚಂದ್ರಶೇಖರ ಸ್ವಾಮೀಜಿ ಗದಗ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್ ಜಿ ಢವಳೇಶ್ವರ ಅವರು ಉಪಸ್ಥಿತರಿದ್ದರು.