ಗೋಲ್ಡನ್ ರೆಟ್ರೀವರ್, ಜರ್ಮನ್ ಶೆಪರ್ಡ್, ಲ್ಯಾಬರ್ಡಾರ್, ಪೊಮೆರಿನಿಯನ್, ಡಾಬರ್ಮೆನ್, ಪಗ್, ರಾಟ್ವಿಲರ್, ಸ್ವಾನಿಯಲ್, ಮುಧೋಳ್ ……..
ಹೀಗೆ ವಿವಿಧ ತಳಿಯ ಐದು ಸಾವಿರ, ಹತ್ತು ಸಾವಿರದಿಂದ ಹಿಡಿದು ಸುಮಾರು ಐವತ್ತು ಸಾವಿರ ಬೆಲೆಯ ನಾಯಿ ಮರಿಗಳನ್ನು ತಂದು ದಿನಾ Pedigree, ಹಾಲು, ಆಗಾಗ್ಗೆ Non veg ಎಲ್ಲವನ್ನೂ ಕೊಟ್ಟು, ಬೆಳಗ್ಗೆ ಸಂಜೆ ವಾಕಿಂಗ್ ಮಾಡಿಸಿ, ವಾರ ಅಥವಾ ಹದಿನೈದು ದಿನಕ್ಕೊಮ್ಮೆ ಸ್ನಾನ ಮಾಡಿಸಿ, ದಿನಾ ಹೊದ್ದಿಸಿ, ಮುದ್ದಿಸಿ ಸಾಕುವ ಜನರು ಇಂದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ಹಿಂದೆ ಒಂದಾನೊಂದು ಕಾಲದಲ್ಲಿ ನಾವು ಚಿಕ್ಕವರಿದ್ದಾಗ ಈಗ ಕೆಲವರಿಂದ ‘ಬೀದಿನಾಯಿ’, ‘ಕಂತ್ರಿ ನಾಯಿ’ ಎಂದು ಹಣೆಪಟ್ಟಿ ಕಟ್ಟಿರುವ, ಅಪ್ಪಟ ನಮ್ಮ ಸ್ಥಳೀಯ ಮೂಲದ ನಾಯಿಗಳದ್ದೆ ಕಾರುಬಾರು! ಅವು ಪಾಳು ಮನೆಯಲ್ಲೋ, ಹುಲ್ಲಿನ ಮೆದೆಯಲ್ಲೋ ನಾಲ್ಕೈದು ವಿವಿಧ ಬಣ್ಣದ ಮರಿಗಳನ್ನು ಹಾಕಿದಾಗ ಮೊದಲು ಹೋಗಿ ಆ ಮರಿ ನನಗೆ ಈ ಮರಿ ನನಗೆ ಎಂದು ಅಡ್ವಾನ್ಸ್ ಬುಕಿಂಗ್ ಮಾಡಿಕೊಳ್ಳುತ್ತಿದ್ದೆವು. ಮನುಷ್ಯ ಸಮಾಜದ ಸಹವಾಸವೋ ಏನೋ, ಆಗಿನ ಕಾಲದಲ್ಲೂ ನಾಯಿಗಳ ವಿಚಾರದಲ್ಲೂ ಬಹಳಷ್ಟು ಲಿಂಗ ತಾರತಮ್ಯ ಇತ್ತು. ಹೆಣ್ಣು ನಾಯಿಗಳ ವಿಚಾರದಲ್ಲಿ ತೀರಾ ತಾತ್ಸಾರ; ಗಂಡು ಮರಿಗಳ ಬಗ್ಗೆ ಉದ್ಗಾರ!
ಯಾಕೆ ಅಂದ್ರೆ ಹೆಣ್ಣು ನಾಯಿಗಳನ್ನು ಸಾಕಿದರೆ ಅವುಗಳನ್ನು ಹುಡುಕಿ ಗಂಡು ನಾಯಿಗಳ ಗುಂಪು ಮನೆ ಹತ್ತಿರ ಬರುತ್ತವೆ. ಹಾಗೆಯೇ ಅವು ಮರಿ ಹಾಕಿದಾಗ ಕೆಲವೊಮ್ಮೆ ಯಾರೂ ಅವುಗಳನ್ನು ಹಿಡಿದುಕೊಂಡು ಹೋಗದಿದ್ದರೆ ಮತ್ತೆ ಅವುಗಳನ್ನೂ ನಾವೇ ಸಾಕಬೇಕು… ಇತ್ಯಾದಿ ಕಾರಣಗಳನ್ನು ಪಟ್ಟಿ ಮಾಡುತ್ತಿದ್ದರು. ಹೆಣ್ಣುಮರಿ ಬೇಡ, ಗಂಡುಮರಿ ಬೇಕು ಎಂದು ಹೇಳಲು. ಆದರೂ ಆಗಲೂ ಹೆಣ್ಣು ಮರಿಗಳನ್ನು ಸಾಕುವವರು ಸಾಕಷ್ಟು ಜನರಿದ್ದರು. ಸಾಮಾನ್ಯವಾಗಿ ಊರ ಹೊರಗಿನ ಮನೆಯವರು, ಮಂದೆ ಕುರಿಯವರು ತಪ್ಪದೆ ತಮ್ಮ ಕಾವಲಿಗೆ ಎಂದು ನಾಯಿಯನ್ನು ಸಾಕುತ್ತಿದ್ದರು!
ಎಲ್ಲೋ ಇರುತ್ತಿದ್ದ ಮರಿಗಳನ್ನು ಗುರ್ತಿಸಿ, ಅದರ ತಾಯಿಯ ಕಣ್ತಪ್ಪಿಸಿ, ಆ ಮರಿಗಳನ್ನು ಹಿಡಿದುಕೊಂಡು ಬರುವುದು, ಬಂದ ನಂತರ ಎದೆ ಹಾಲು ಕುಡಿಯುತ್ತಿದ್ದ ಮರಿಗೆ ಹಸು /ಎಮ್ಮೆ ಹಾಲು ಕುಡಿಯಲು ಅಭ್ಯಾಸ ಮಾಡಿಸಿ, ಅವಕ್ಕೆ ಹಾಲು ಕುಡಿಸಿ, ನಿಧಾನಕ್ಕೆ ಅನ್ನ, ಮುದ್ದೆ, ರೊಟ್ಟಿ ಎಲ್ಲವನ್ನೂ ತಿನ್ನಲು ಅಭ್ಯಾಸ ಮಾಡಿಸುತ್ತಿದ್ದದ್ದು ನಮಗೆ ಸವಾಲಿನ ಕೆಲಸವೇ ಆಗಿತ್ತು. ಆದರೆ ಈಗ ಎಲ್ಲೆಲ್ಲೂ ರೆಡಿಮೇಡ್ ಹೈಬ್ರಿಡ್ ನಾಯಿಗಳಿಂದಾಗಿ ಅವುಗಳನ್ನು ಸಾಕುವುದು ಬೀದಿನಾಯಿಗಳನ್ನು ಪಳಗಿಸಿದಷ್ಟು ಕಷ್ಟವೇನೂ ಅಲ್ಲ. ಆದರೆ ಈಗಿನ ಜಾತಿನಾಯಿಗಳನ್ನು ಸಾಕುವುದು ಮಾತ್ರ ಈಗಿನ ಮಕ್ಕಳನ್ನು ಸಾಕುವುದಕ್ಕಿಂತಲೂ ಕಷ್ಟ ಹಾಗೂ ದುಬಾರಿ ಆಗಿದ್ದರೂ ಕೂಡ ಅವುಗಳ ಮೇಲಿನ ನಮ್ಮ ಹುಚ್ಚುಪ್ರೀತಿ ದಿನೇದಿನೇ ಹೆಚ್ಚಾಗುತ್ತಲೇ ಇದೆ.
ಕಡೆಗೆ ಈ ನಾಯಿಗಳ ಬಗ್ಗೆ ನೆನೆಯುವಾಗ ಕುವೆಂಪುರವರ ಕಾವ್ಯ ಕಂತ್ರಿ ನಾಯಿ ‘ಹುಲಿಯಾ’ ಹಾಗೂ ತೇಜಸ್ವಿಯವರ ಕಾವ್ಯದ ‘ಕಿವಿ’ ನೆನಪಾಗದೆ ಇರವು !!
ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ