ಮೊದಲೆಲ್ಲ ಮಕ್ಕಳು ಹಟ ಹಿಡಿದು ಅಳುವಾಗ ಕೈಯಲ್ಲಿ ಬೆಲ್ಲ ಕೊಟ್ಟು ಸಮಾಧಾನಿಸುತ್ತಿದ್ದರು. ಬರ ಬರುತ್ತ ಪೆಪ್ಪರಮೆಂಟ್ ಚಾಕೋಲೇಟ್‍ಗಳ ಕಾಲ ಬಂತು. ಇದೀಗ ಎಲ್ಲೆಲ್ಲೂ ಜಂಕ್ ಫುಡ್‍ಗಳ ಹಾವಳಿ. ಇವುಗಳ ಮೋಹಕತೆಗೆ ಬಲಿಯಾಗದವರ ಸಂಖ್ಯೆ ಅತಿ ಕಡಿಮೆ. ಮಕ್ಕಳಷ್ಟೇ ಅಲ್ಲ ಮಹಿಳೆಯರು ದೊಡ್ಡವರು ಸಹ ಇವುಗಳನ್ನು ಚಪ್ಪರಿಸಿ ವಾವ್! ಎಂದು ಮತ್ತೊಂದು ಪ್ಯಾಕೆಟ್ಟಿಗೆ ಕೈ ಹಾಕುತ್ತಾರೆ. ಇಂದು ಸಣ್ಣ ಹಳ್ಳಿಗಳಿಂದ ಹಿಡಿದು ದೊಡ್ಡ ದೊಡ್ಡ ನಗರಗಳ ಮಾರುಕಟ್ಟೆಗಳಲ್ಲೂ ಜಂಕ್ ಫುಡ್‍ಗಳದ್ದೇ ರಾಜ್ಯಭಾರ. ಅಂದ ಚೆಂದದ ಪ್ಯಾಕೆಟ್‍ಗಳಲ್ಲಿ ಪ್ಯಾಕ್ ಆಗಿ ಕುಳಿತ ಕುರುಕಲು ತಿಂಡಿ ನಮ್ಮನ್ನು ಕೈ ಬಿಸಿ ಕರೆದಂತೆ ಭಾಸವಾಗುತ್ತದೆ. ಪ್ರವಾಸ ಸಣ್ಣದಿರಲಿ ದೊಡ್ಡದಿರಲಿ ಇವುಗಳ ಸಾಥ್ ಬೇಕೇ ಬೇಕು. ಬಹುತೇಕ ಜನರು ಬಟ್ಟೆಯೊಂದಿಗೆ ಕುರುಕಲು ತಿಂಡಿಗಳನ್ನು ಒಂದು ಚೀಲದಲ್ಲಿ ತುಂಬಿಕೊಳ್ಳಲು ಮರೆಯುವುದಿಲ್ಲ. ಇದು ಸಾಲದೆಂಬಂತೆ ಬಸ್ ನಿಲ್ದಾಣ ರೈಲ್ವೇ ನಿಲ್ದಾಣಗಳಲ್ಲಿಯೂ ಜಂಕ್ ಫುಡ್ ಖರೀದಿ ಜೋರಾಗಿಯೇ ಇರುತ್ತದೆ. ಇತ್ತೀಚೆಗೆ ಇದು ಒಂದು ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ. ಪ್ರವಾಸದುದ್ದಕ್ಕೂ ಇವುಗಳನ್ನೇ ಮೆಲುಕು ಹಾಕಿ ಖುಷಿ ಪಡುತ್ತಾರೆ. ಇವುಗಳೊಂದಿಗೆ ಫಾಸ್ಟ್ ಫುಡ್ ಬೇರೆ ಕೈ ಜೋಡಿಸಿವೆ. ಇವುಗಳನ್ನೇ ವೈದ್ಯಕೀಯ ತಜ್ಞರು ಹಾಳು ಮೂಳು ತಿಂಡಿ (ಜಂಕ್ ಫುಡ್) ಎಂದು ಕರೆಯುತ್ತಾರೆ. ವೈದ್ಯರು ತಮ್ಮನ್ನು ಭೇಟಿಯಾದವರಿಗೆಲ್ಲ ಇವುಗಳಿಂದ ದೂರವಿರಲು ಸಲಹೆ ನೀಡಲು ಮರೆಯುವುದಿಲ್ಲ.
ರುಚಿ ವರ್ಧಕಗಳನ್ನು ಬಳಸಿರುವುದರಿಂದ ಇವುಗಳನ್ನು ತಿನ್ನುವ ಚಟ ಮಾದಕ ದ್ರವ್ಯದಂತೆ ಅಂಟಿಕೊಳ್ಳುತ್ತದೆ. ಮನೆ ತಿಂಡಿ ತಿನಿಸುಗಳು ರುಚಿ ಎನಿಸುವುದಿಲ್ಲ. ಮನೆಯಲ್ಲೇ ತಯಾರಿಸುವ ಚಕ್ಕುಲಿ ನಿಪ್ಪಟ್ಟು ವಡೆ ಗಾರಗಿ ಲಾಡು ಕಾರಾಶೇವ್ ಚೂಡಾ ಇನ್ನೂ ಮುಂತಾದ ತಿಂಡಿ ತಿನಿಸುಗಳ ಸೇವನೆಯಿಂದ ಬೊಜ್ಜು ಬಾರದಂತಿರುತ್ತದೆ. ಜಂಕ್ ಫುಡ್ ಚಟ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಜಂಕ್ ಫುಡ್ ಫಾಸ್ಟ್ ಫುಡ್‍ಗಳ ಭರಾಟೆಯಲ್ಲಿ ಸಮತೋಲಿತ ಆಹಾರ ಸೇವನೆಯನ್ನೇ ದೂರ ತಳ್ಳಿದ್ದೇವೆ. ಬಹುತೇಕರು ಜಂಕ್ ಫುಡ್ ತಿನ್ನುವುದು ಒಂದು ಚಟವೆಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಸಾಮಾನ್ಯವಾಗಿ ಜಂಕ್ ಫುಡ್‍ಗಳಲ್ಲಿ ಎಣ್ಣೆ ಸಕ್ಕರೆ ಕೊಬ್ಬು ಬಳಸಲಾಗುತ್ತದೆ. ಇವು ಬೊಜ್ಜಿಗೆ ಕಾರಣವಾಗುತ್ತವೆ. ಬೊಜ್ಜು ಅನೇಕ ಕಾಯಿಲೆಗಳನ್ನು ಆಹ್ವಾನಿಸುತ್ತದೆ. ಆಹಾರ ದಿನಚರಿಯನ್ನು ನಿರ್ವಹಿಸಿದರೆ ಜಂಕ್ ಫುಡ್ ತಿನ್ನುವ ಪ್ರಮಾಣ ತಿಳಿಯುತ್ತದೆ. ಸೇವನೆಯನ್ನು ಕ್ರಮೇಣ ಕಡಿಮೆಗೊಳಿಸುತ್ತ ಬರಲು ನಿರ್ಧರಿಸಬೇಕು. ಜಂಕ್ ಫುಡ್ ಗಳ ಬದಲಾಗಿ ಹಣ್ಣು ತರಕಾರಿ ಒಣಗಿದ ಹಣ್ಣುಗಳ ಸೇವನೆ ರೂಢಿಸಿಕೊಳ್ಳಿ. ಮನೆಯಲ್ಲಿ ಮಾಡಿದ ತಿನಿಸುಗಳನ್ನು ಸೇವಿಸಿ. ಮಕ್ಕಳಿಗೆ ಪ್ರೋತ್ಸಾಹಕರ ಬಹುಮಾನವಾಗಿ ಜಂಕ್ ಫುಡ್ ನೀಡುವುದನ್ನು ಬಿಡಿ. ಈ ಚಟ ಬಾಲ್ಯದಲ್ಲಿಯೇ ಬೊಜ್ಜು ಬೆಳೆಸುತ್ತದೆ. ಖಿನ್ನತೆ ಉಂಟು ಮಾಡುತ್ತದೆ. ಮುಂಗೋಪಿಗಳನ್ನಾಗಿಸುತ್ತದೆ. ಹೃದಯ ಕಾಯಿಲೆ ಮಧುಮೇಹದಂಥ ರೋಗಗಳಿಗೆ ಬಲಿಯಾಗಿಸುತ್ತದೆ. ಕ್ಯಾಂಡಿ ಐಸ್ ಕ್ರೀಮ್ ಸಾಲ್ಟಿ ಸ್ನ್ಯಾಕ್ಸ್ ಸಾಫ್ಟ್ ಡ್ರಿಂಕ್ಸ್ ಬೇಕರಿ ತಿನಿಸುಗಳ ಅತಿಯಾದ ಸೇವನೆ ನೆನಪಿನ ಶಕ್ತಿ ಹಾಳಾಗುವಿಕೆಗೆ ಕಲಿಕಾ ಅನಾಸಕ್ತಿಗೆ ಕಾರಣವಾಗುತ್ತದೆ. ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಮಾನಸಿಕ ನೆಮ್ಮದಿಯನ್ನೂ ಹಾಳುಗೆಡುವುತ್ತದೆ.
ಇಷ್ಟು ಅಪಾಯಕಾರಿಯಾದ ಇವುಗಳ ಅತಿಯಾದ ಬಳಕೆಯಿಂದ ಪರಿಸರದಲ್ಲಿ ಇಂಗಾಲದ ಡೈ ಆಕ್ಸೈಡ್‍ನ ಪ್ರಮಾಣವೂ ಹೆಚ್ಚಾಗುತ್ತದಂತೆ! ಹೀಗೆ ಪರಿಸರವನ್ನೂ ಹಾಳುಗೆಡುವುವ ಹಾಳು ಮೂಳು ಆಹಾರ (ಜಂಕ್ ಫುಡ್) ಸಹವಾಸದಿಂದ ಮುಕ್ತರಾಗಿ ಮನೆಯ ತಿಂಡಿ ತಿನಿಸುಗಳನ್ನು ಬಾಯಿ ಚಪ್ಪರಿಸಿ ತಿಂದರೆ ಆರೋಗ್ಯವಂತ ಜೀವನ ನಮ್ಮದಾಗುತ್ತದೆ.
ಜಯಶ್ರೀ ಅಬ್ಬಿಗೇರಿ, ಬೆಳಗಾವಿ 9449234142