ಸಾವು ಯಾರನ್ನೂ ಬಿಡುವುದಿಲ್ಲ. ಸಾವಿಗೆ ಬೇಧಭಾವವಿಲ್ಲ. ಸಾವು ಎಲ್ಲರ ಬಂಧು. ಬದುಕೆಂಬ ಬಾಳ ನೌಕೆಯನು ನೀನೆಷ್ಟೇ ಸರಿದೂಗಿಸಿಕೊಂಡು ಹೋದರೂ ಸಾವೆಂಬ ಯಮದೂತ ಬಂದು ಯಾವಾಗ ಯಾರ ಹೆಗಲೇರಿ ಹೇಗೆ ಕರೆಯೋಲೆ ಕಳುಹಿಸುತ್ತಾನೋ ಗೊತ್ತಿಲ್ಲ, ಅದು ಬಂದಾಗ ಹೋಗಲೇಬೇಕು. ಬದುಕಿನ ಜೋಳಿಗೆಯಲ್ಲಿ ಪಾಪ, ಪುಣ್ಯವೆಂಬ ಗಂಟು ತುಂಬಿದ ಮೇಲೆ ಇದ್ದವರು, ಇಲ್ಲದವರು, ಇದ್ದಬದ್ದವರೆಲ್ಲರೂ ಹೋಗಲೇಬೇಕು. ಆಸ್ತಿ, ಅಂತಸ್ತು, ಪದವಿ, ಸೌಂದರ್ಯ, ನಾನು, ನನ್ನದು, ನಾನೇ ಇವೆಲ್ಲವೂ ಸಾವೆಂಬ ಗರ್ಭ ಸೇರಿ ಮಣ್ಣಾಗಲೇಬೇಕು ಅದು ಪ್ರಕೃತಿ ನಿಯಮ.
ಆದರೆ ಇದೆಲ್ಲರದ ನಡುವೆ ಅಹಂಕಾರ, ನಾನು, ನಾನೇ ಎನ್ನುವುದು ಬಹುತೇಕರಲ್ಲಿ ಮನೆಮಾಡಿದ್ದು ಚಿರವಲ್ಲದ ಈ ಬದುಕಿನಲ್ಲಿ ಎಲ್ಲವೂ ನನ್ನದೇ ಎಂಬ ಭ್ರಮೆಯೊಳಗೆ ಬದುಕುತ್ತಿದ್ದೇವೆ ಎನಿಸುತ್ತದೆ. ನಾನೇ ಸರಿ ಎನ್ನುವವರು ಮತ್ತೊಬ್ಬರ ಕುರಿತು ಮಾತನಾಡುತ್ತಿದ್ದರೆ ನೀನು ಸರಿ ಇಲ್ಲ ಎಂಬಂತೆ ನಿನ್ನ ಬೆನ್ನ ಹಿಂದೆಯೂ ಮತ್ತೊಬ್ಬರು ಮಾತನಾಡುತ್ತಿರುತ್ತಾರೆ ಅದು ಕೆಲವರಿಗೆ ಜನ್ಮಗತವಾಗಿ ಬಂದಿರುತ್ತದೆ. ಸರಿ ಸರಿ ಅದೆಲ್ಲ ಸರಿ ಹಾಗಾದರೆ ಸಾವನ್ನು ಸಂಭ್ರಮಿಸುವವರು ಎಂದರೆ ಯಾರು? ಅರೆರೆ ಗೊತ್ತಿಲ್ವ ಕೆಲವರಿಗೆ ಗೊತ್ತಿರುತ್ತೆ ಯಾರು ಅಂದ್ರೆ ನಿಷ್ಠುರವಾಗಿ ಮಾತನಾಡುವ, ನೇರ ನಡೆ ನುಡಿ ಇರುವ ಅಥವಾ ಯಾರ್ ಯಾರಿಗೆ ಹೇಗೆಗೆ ಇಷ್ಟವೋ ಹಾಗೆ ತಮ್ಮೆದುರಿರುವ ವ್ಯಕ್ತಿ ಇರದೇ ಇದ್ದಾಗ ಅಂತಹ ವ್ಯಕ್ತಿಗಳು ಕಾಲನಿಯಮದಂತೆ ಸಾವೆಂಬ ಸಂತೆಗೆ ಹೊರಟಾಗ ಅಯ್ಯೋ ತುಂಬಾ ಅಹಂಕಾರಿ, ಹಾಗೆ ಹೀಗೆ ಹೋಗಿದ್ದೆ ಒಳ್ಳೆಯದಾಯ್ತು, ಇಂತವರು ಇರಬಾರದು ಎಂದು ಬೊಬ್ಬೆ ಹೊಡೆದು, ಚಿರಾಡಿ ಸಂಭ್ರಮಪಡುವ ವಿಕೃತ ಮನಸ್ಸುಗಳು ಇರುತ್ತವೆ. ಇಂತಹದೆ ಉದಾಹರಣೆಗಳನ್ನು ಸಾಕಷ್ಟು ನಾನು ನೋಡಿದ್ದೇನೆ.
ಅಸೂಯೆ, ಹಗೆತನಗಳನ್ನೇ ತುಂಬಿಕೊಂಡ ಬಹುತೇಕರು ತಮಗೆ ಅನುಕೂಲಕರವಾಗದ ಅಥವಾ ತಮಗೆ ಲಾಭದಾಯಕವಲ್ಲದ ಸಂಧರ್ಭಗಳನ್ನು ಪರಿಗಣಿಸಿ ತಮ್ಮ ಕಾಯಕ ಆಗಿಲ್ಲವೆಂದಾಗ ತಾನಾಯ್ತು, ತನ್ನ ಕಾಯಕವಾಯ್ತು ಎಂದಿರುವವರನ್ನು ಕಂಡು ಹೊಟ್ಟೆಕಿಚ್ಚು ಪಡುವವರನ್ನು ನೋಡಿದ್ದೇನೆ, ಹತ್ತಿರದಿಂದಲೇ ಅಂತವರ ಕುರಿತು ತಿಳಿದಿದ್ದೇನೆ ಇತ್ತೀಚಿಗಂತೂ ತಮ್ಮ ನೆಚ್ಚಿನಂತೆ ಯಾವುದೂ ನಡೆಯದಿದ್ದಾಗ ಮತ್ತೊಬ್ಬರನ್ನು ಹೀಗಳೆಯುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ.
ಕೆಲವೊಮ್ಮೆ ಸಾಕಷ್ಟು ಪ್ರಶ್ನೆಗಳು ನನ್ನನ್ನು ಕಾಡುತ್ತಲೇ ಇರುತ್ತದೆ. ಅದೇನೆಂದರೆ ಹಲವರಲ್ಲಿ ಕೆಲವರು ಮತ್ತೊಬ್ಬರ ಸೋಲು, ಸಾವನ್ನು ಕಂಡು ಮೆರೆದಾಡುವವರನ್ನು ಇದೆ ಕಂಗಳಿಂದ ನೋಡಿದ್ದೇನೆ ಅಲ್ಲದೆ ಬದುಕು ಎಂದರೆ ಮತ್ತೊಬ್ಬರ ಬದುಕಲ್ಲಾಗುವ ಬವಣೆಗಳನ್ನು ಕಂಡು ಸಂಭ್ರಮಿಸುವುದಾ? ಛೇ ಎನಿಸಿದ್ದು ಉಂಟು. ಬದುಕು ಎಂದರೇನು! ಗಳಿಕೆ ಎಂದರೇನು? ಏನನ್ನು ಗಳಿಸುವುದು, ಸಾವು ಎಂದರೇನು ಇಂತಹ ಸಾಕಷ್ಟು ವಿಚಾರಗಳು ಸಂದರ್ಭಕ್ಕನುಗುಣವಾಗಿ ನೂರಾರು ಪ್ರಶ್ನೆಗಳನ್ನು ಹುಟ್ಹಾಕುತ್ತಲೇ ಇರುತ್ತದೆ. ಹಾಗಾದರೆ ನಿಜವಾದ ಬದುಕು ಯಾವುದು ! ಎಲ್ಲರಿಗೂ ಒಳ್ಳೆಯವರಾಗುವುದಾ? ಅಥವಾ ಎಲ್ಲರನ್ನು ಎದುರುಹಾಕಿಕೊಳ್ಳುವುದಾ, ಸ್ವಾರ್ಥಕ್ಕಾಗಿ ಬದುಕುವುದ ನೋ ಅಲ್ಲವೇ ಅಲ್ಲ ನಮ್ಮಂತೆ ಮನಸಿಗೊಪ್ಪುವಂತೆ ಬದುಕುವುದು ನಿಜವಾದ ಬದುಕು. ಇನ್ನು ಭಗವಂತನಿಗೂ ಕೆಲವರನ್ನು ಕಂಡರೆ ಪ್ರಿಯವೆನಿಸುತ್ತದೆಯೇನೋ ಬಹುಬೇಗ ಕೆಲವರನ್ನು ತನ್ನೊಡನೆ ಕರೆದೊಯ್ದುಬಿಡ್ತಾನೆ ಎನಿಸುತ್ತದೆ. ಬಹುತೇಕ ಏನನ್ನೋ ಸಾಧಿಸಬೇಕು, ಏನೋ ಗುರಿ ತಲುಪಬೇಕು, ಒಳಿತು ಮಾಡಬೇಕು ಎನ್ನುವವರೇ ಸಗ್ಗದಲ್ಲಿರುವ ಪರಮಾತ್ಮನಿಗೂ ಪ್ರಿಯವಾಗಿಬಿಡ್ತಾರೇನೋ ಬದುಕಿನಲ್ಲಿ ಹೇಳದೆ ಕೇಳದೆ ಎದ್ದು ಅವನ ಕರೆಗೆ ಹೋದವರು ಅದೆಷ್ಟೋ ಜನ. ಇನ್ನೂ ಕೆಲವ್ರು ಇರ್ತಾರೆ ಪುಣ್ಯಾತ್ಮರ ಸಾವನ್ನು ಜೀವಿಸುವವರು ಅಂತವರನ್ನು ಕಂಡರೆ ಪಾಪಿ ಭಗವಂತನಿಗೂ ಕರೆದೊಯ್ಯಲು ಇಷ್ಟವಿರುವುದಿಲ್ಲ ಎನಿಸುತ್ತದೆ ಏಕೆಂದರೆ ಭೂ ಲೋಕದಂತೆ ಆ ಲೋಕವು ಯಾರ ನೋವು ಕಂಡು ಸಂಭ್ರಮಿಸದಿರಲಿ ಇವರಂತೆ ಆಗುವುದು ಬೇಡ ಎಂದುಕೊಳ್ತಾನೇನೋ ಎನಿಸುತ್ತದೆ. ಹೌದಲ್ವಾ ಬದುಕು ಎಷ್ಟೊಂದು ವಿಚಿತ್ರ.
ಇತ್ತೀಚೆಗೆ, ಈಗಲೂ ಒಂದು ಹತ್ತಿರದಿಂದ ಕಂಡ ಘಟನೆ ಪದೇ ಪದೇ ನೆನಪಾಗುತ್ತಲಿರುತ್ತದೆ. ಸತ್ಯವಾದ ಘಟನೆ ಆದರೆ ಹೆಸರು ವಿಳಾಸದ ಅಗತ್ಯವಿಲ್ಲವೆಂದು ಭಾವಿಸುತ್ತೇನೆ. ಇಂತಹದೆ ಘಟನೆಗಳು ನಿಮ್ಮನ್ನು ಕಾಡುತ್ತಲಿರಬಹುದು ಅಥವಾ ನೀವು ಕಂಡಿರಲುಬಹುದು. ಆ ಒಬ್ಬ ವ್ಯಕ್ತಿ ಯಾರಿಂದಲೂ ಏನನ್ನೂ ಬಯಸಿರಲಿಲ್ಲ. ಬದುಕಿನಲ್ಲಿ ಎಲ್ಲವೂ ಇತ್ತು, ಅದರ ಜೊತೆಗೆ ಇತರರಿಗೂ ಒಳಿತನ್ನೇ ಬಯಸುತ್ತಿದ್ದು ಕಾಯಕವೇ ಬದುಕು ಎಂದು ನಂಬಿದ್ದ ವ್ಯಕ್ತಿಯಾಗಿದ್ದರು. ನನಗೆ ತಿಳಿದಮಟ್ಟಿಗೆ, ನಾನು ನೋಡಿದಮಟ್ಟಿಗೆ, ನಾನು ಅವರೊಂದಿಗೆ ಆ ದೇವರಂತ ವ್ಯಕ್ತಿಯ ಜೊತೆಗೆ ಮಾತನಾಡಿ ಹತ್ತಿರದಿಂದ ಆ ವ್ಯಕ್ತಿಯನ್ನು ಕಂಡ ಮಟ್ಟಿಗೆ ಕನಸಿನಲ್ಲಿಯೂ ಯಾರಿಗು ಕೆಟ್ಟದ್ದನ್ನು ಬಯಸದಂತಹ ವ್ಯಕ್ತಿತ್ವವನ್ನು ಬೆಳೆಸಿಕೊಂಡ ವ್ಯಕ್ತಿ ಅವರು. ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ವಸ್ತುನಿಷ್ಟತೆ ಬಯಸುತ್ತಿದ್ದ ವ್ಯಕ್ತಿ ಇರುವುದನ್ನು ಇದ್ದ ಹಾಗೆ ನೇರ, ನಿಷ್ಠುರವಾಗಿ ಹೇಳುತ್ತಿದ್ದರು. ಪ್ರತಿಯೊಬ್ಬರನ್ನು ಗೌರವಿಸುತ್ತಿದ್ದ ಮನುಷ್ಯನು ಹೌದು. ಇಂತಹ ವ್ಯಕ್ತಿಗಳು ಬಹುತೇಕರಲ್ಲಿ ಕೆಲವರು ಮಾತ್ರ. ನಿಮ್ಮ ಬದುಕಿನಲ್ಲೂ ಹೃದಯವಂತರನ್ನು ಕಂಡಿರಬಹುದು ಆದರೆ ಕೆಲವು ಬಾರಿ ಪ್ರಾಮಾಣಿಕತೆಗಿಂತ ಹೆಚ್ಚು ನಾಟಕವಾಡುವವರೇ ಇರುತ್ತಾರೆ, ಅಂತವರ ನಡುವೆ ಪ್ರಾಮಾಣಿಕತೆ ಎಂಬ ಲೇಬಲ್ ತಗೊಂಡು ಯಾರಿಗೆ ಏನು ಆಗ್ಬೇಕಿದೆ, ಅವರವರಿಗೆ ಇಷ್ಟಬಂದಂತೆ ಇರೋದಷ್ಟೇ ಬಹುತೇಕರಿಗೆ ಬೇಕಿದೆ. ಅಂತವರ ನಡುವೆಯೂ ನಿಷ್ಠೆ, ಸಂಯಮ, ಕಾಯಕಕ್ಕೆ ಬೆಲೆ ಕೊಡುವವರು ಕುಟುಂಬದವರೆ ಆದ್ರೂ, ಬಂಧುಗಳೇ ಆದರೂ, ಸ್ನೇಹಿತರೂ, ಆಪ್ತರೂ ಆದರೂ ಸರಿ ಯಾರೇ ಇರಲಿ ಸತ್ಯ, ಸುಳ್ಳು, ನ್ಯಾಯ, ನೀತಿ ಎಲ್ಲವುಗಳನ್ನು ಪರಿಗಣಿಸಿ ನ್ಯಾಯಾಪರವಾಗಿ ನಿಲ್ಲುತ್ತಾರೆ ಮತ್ತು ಅವುಗಳನ್ನೇ ಜೀವಾಳವಾಗಿಸಿಕೊಂಡಿರುತ್ತಾರೆ. ಇಂತಹದ್ದೇ ವ್ಯಕ್ತಿಯನ್ನು ನಾನು ಕಂಡಿದ್ದೇನೆ, ಇವರಷ್ಟೇ ಅಲ್ಲ, ಕೆಲವು ಸಂಧರ್ಭದಲ್ಲಿ ಇಂತಹ ಒಂದಷ್ಟು ಜನರನ್ನು ನೋಡಿದ್ದೇನೆ ಆದರೆ ಸಾವು ಯಾರಪ್ಪನನ್ನು ಕೇಳಿ ಬರೋದಿಲ್ವಲ್ಲ, ಮೇಲಿರುವ ಜವರಾಯನ ಪಟ್ಟಿಯಲ್ಲಿ ನನ್ನದೇ ಇರಲಿ ಯಾರದೇ ಇರಲಿ ಸರತಿ ಬಂತೆಂದರೆ ಯಾವುದೋ ನೆಪದಿಂದ ಅಂದರೆ ಜ್ವರ, ಅಪಘಾತ, ಆಘಾತ ಹೀಗೆ ಏನೋ ಒಂದು ಕಾರಣದಿಂದ ಹೊರಟು ಹೋಗಲೇಬೇಕು. ಹೀಗೆ ಹೋದವರು ಎಷ್ಟೋ ಜನ ಲೆಕ್ಕಕ್ಕಿಲ್ಲ. ಹೀಗೆ ನಾನು ಹತ್ತಿರದಿಂದ ಒಬ್ಬ ಪುಣ್ಯಾತ್ಮನನ್ನು ನೋಡಿದ್ದೆ ನ್ಯಾಯ ನಿಷ್ಠೆಯಿಂದ ಬದುಕಿದ್ದೆ ತಪ್ಪೇನೋ ಆ ಮನುಷ್ಯ ಗೊತ್ತಿಲ್ಲ, ಅದೊಂದು ದಿನ ಆತನ ಸಾವಿನ ಸುದ್ದಿ ಬಂದಿದ್ದೆ ತಡ ಅಯ್ಯೋ ಪಾಪ ಎಂದು ಹೆಸರಿಗೆ ಮಾತ್ರ ತೆಗೆದ ಉದ್ಘಾರ ಅದರ ಹಿಂದೆ ಅವನಿಗೆ ಹೀಗೆ ಆಗ್ಬೇಕು, ಸರಿಯಾಗಿ ಆಗಿದೆ, ಏನ್ ಮೆರೆದುಬಿಟ್ಟ ಪಾ ಮನುಷ್ಯ, ಬುದ್ದಿವಂತ ನಾನೆ ಅನ್ನೋತರ ಮಾಡ್ತಿದ್ದ, ನನ್ನಷ್ಟು ತಿಳಿದವರಿಲ್ಲ ಅನ್ನೋತರ ಆಡ್ತಿದ್ದ, ಏನ್ ಕೇಳಿದ್ರು ಬೇಗ ಉತ್ತರಿಸುತ್ತಿರಲಿಲ್ಲ, ಮನುಷ್ಯರನ್ನ ಕಾಯಿಸೋದು ಅವನಿಗೆ ಅಭ್ಯಾಸ, ಅಧಿಕಾರ ಇದ್ದೋರೆಲ್ಲ ಹೀಗೆ, ಮನೆಕಡೆ ಆಸ್ತಿ ಪಾಸ್ತಿ ಇದೆ ಅದಕ್ಕೆ ಸೊಕ್ಕು, ಅವ್ರು ಹೇಳಿದ್ದೆ ಆಗ್ಬೇಕು ಕರುಣೆ ಇಲ್ಲದೆ ನಡ್ಕೋತಾರೆ, ಏನ್ ಪಾಪ ಮಾಡಿದ್ನೋ ಹೀಗೆ ನಾನಾ ರೀತಿ ಮಾತನಾಡಿದ್ರು ಕಾರಣ ಇಷ್ಟೇ ಹೀಗೆ ಮಾತನಾಡಿದವರಿಗೆಲ್ಲ ಆ ವ್ಯಕ್ತಿ ಮಾಡುವ ಕಾಯಕದಲ್ಲಿ ಪ್ರಾಮಾಣಿಕತೆ ನಿಷ್ಠೆ ಇರಬೇಕು ಅಂತ ಅವರ ತಪ್ಪುಗಳನ್ನು ತಿದ್ದಿದ್ದು ಅಷ್ಟೇ ಬಿಟ್ರೆ ಆ ವ್ಯಕ್ತಿ ಏನು ಇವರ ಪಾಲಿನ ಆಸ್ತಿ ಕಿತ್ಕೊಂಡಿರ್ಲಿಲ್ಲ, ಅವರು ತಿನ್ನೋ ತುತ್ತು ಅನ್ನ ಕದ್ದಿರಲಿಲ್ಲ, ಅವರಿಗೆ ಇಷ್ಟ ಬಂದ ಹಾಗೆ ಇವರಿರಲಿಲ್ಲ ಅನ್ನೋದು ಬಿಟ್ರೆ ಇನ್ನ್ಯಾವ ಪಾಪವನ್ನು ಆ ವ್ಯಕ್ತಿ ಮಾಡಿರಲಿಲ್ಲ ಅಷ್ಟಕ್ಕೆ ಅಷ್ಟು ಮಾತ್ರಕ್ಕೆ ಆ ವ್ಯಕ್ತಿಯ ಸಾವನ್ನು ಸಂಭ್ರಮಿಸಿ ಮೋಜು ಮಾಡಿದವರು ಎಷ್ಟು ಜನರೊ ಲೆಕ್ಕಕ್ಕಿಲ್ಲ ಮತ್ತು ಅದಕ್ಕೊಂದು ಪಾರ್ಟಿ ಅಂತ ಹೆಸರು. ಕುಣಿದು ಕುಪ್ಪಳಿಸಿ ಬೊಬ್ಬೆ ಹೊಡೆದವರೆಲ್ಲರನ್ನು ಕಂಡಾಗ ನನಗೆ ಆ ವ್ಯಕ್ತಿ ಮರಣಿಸಿದ್ದಾನೆ ಎನಿಸಲಿಲ್ಲ ಬದಲಿಗೆ ಮತ್ತೊಬ್ಬರ ಸಾವನ್ನು ಸಂಭ್ರಮಿಸುವ ವಿಕೃತ ಮನಸುಗಳು ಬದುಕಿದ್ದು ಸತ್ತ ಹಾಗೆ ಎಂದು ನನಗನಿಸಿತು.
ನನ್ನನ್ನು ಇಂದಿಗೂ ಕಾಡುವುದೊಂದೇ ಸಾವು. ಎಷ್ಟು ಕ್ರೂರಿ ಅದು ಯಾರನ್ನು ಬಿಟ್ಟಿಲ್ಲ. ಯಾರನ್ನು ಬಿಡುವುದಿಲ್ಲ ಈ ಒಂದೇ ಒಂದನ್ನು ಅರಿತವರು ಯಾರನ್ನು ದ್ವೇಷಿಸುವುದಿಲ್ಲ,ಯಾರನ್ನು ಶಪಿಸುವುದಿಲ್ಲ, ಯಾವುದಕ್ಕೂ ಹೊಡೆದಾಡಿಕೊಳ್ಳುವುದಿಲ್ಲ, ನಿಜವಾಗಿ ನೋಡಿದರೆ ಏನು ಇಲ್ಲ, ಏನೇನು ಇಲ್ಲ ಬದಲಿಗೆ ಎಲ್ಲವನ್ನೂ ಕಳೆದುಕೊಂಡೆ ನಾವು ಇಲ್ಲಿಂದ ಹೋಗುವುದು. ಕಳೆದುಕೊಳ್ಳದೆ ಇಲ್ಲೇನು ಇಲ್ಲ,ಸುರಲೋಕವು ಸಹ ಸಾವನ್ನೇ ಬಯಸುತ್ತದೆ. ಬದುಕಿನಲ್ಲಿ ನಾನು ಗೆದ್ದೆ, ನೀನು ಸೋತೆ, ನೀನು ಗೆದ್ದೆ ನಾನು ಸೋತೆ ಇವ್ಯಾವು ಇಲ್ಲ ಇಲ್ಲಿ ನಿಜವಾಗಿ ಗೆಲ್ಲೋದು ಸಾವು ಮಾತ್ರ ಇದನ್ನರಿತರೆ ಯಾರು ಯಾರ ಸಾವನ್ನು ಸಂಭ್ರಮಿಸುವುದಿಲ್ಲ, ನಿಜವಾಗಿ ತಿಳಿದವನಾದರೆ ಪ್ರತಿ ಸಾವಿಗೂ ಮಿಡಿಯುತ್ತಾನೆ, ಏಕೆಂದರೆ ಕೊನೆಗೊಂದು ದಿನ ನಾನು ಮಡಿಯುತ್ತೇನೆ ಎಂಬ ಬದುಕಿನ ಕಟು ಸತ್ಯವನ್ನು ಅರಿತವನಾಗುತ್ತಾನೆ. ಇರೋದು ಒಂದು ಬದುಕು ಅದನ್ನ ಪ್ರೀತಿಯಿಂದ ಬದುಕಬೇಕು ಮತ್ತೊಬ್ಬರ ನೋವನ್ನ ನಗುವಿನ ಔಷಧಿಯಂತೆ ಎದೆಗಿಳಿಸಿಕೊಂಡು ಅಲ್ಲ. ಇವತ್ತು ಅವರನ್ನು ಕಾಡಿದ ಸಾವು ನಾಳೆ ನನ್ನನ್ನೂ ಕಾಡಬಹುದೆಂದನ್ನು ಎಂದಿಗೂ ಮರೆಯಬಾರದು. ಒಬ್ಬರ ಜ್ಞಾನವನ್ನು, ಒಳ್ಳೆಯತನವನ್ನು, ನಿಷ್ಠೆ, ಸ್ವಾಭಿಮಾನವನ್ನು ಗೌರವಿಸದ ವಿಕೃತ ಮನಸ್ಸುಗಳು ಸಾವನ್ನಲ್ಲದೆ ಮತ್ತೇನನ್ನು ಸಂಭ್ರಮಿಸಲು ಸಾಧ್ಯ? ಬದಲಿಗೆ ಏಡಿ ಮನಸ್ಥಿತಿ ಇರುವ ಅವುಗಳು ಗೆಲ್ಲುವ ಮಂತ್ರವನ್ನು, ಗೆಲುವಿನ ಸೂತ್ರವನ್ನು ಹೊಸೆಯಲು ಆಗದೆ ಇದ್ದಾಗ ತನ್ನಷ್ಟಕ್ಕೆ ತಾನಿರುವ, ಇದ್ದು ಹೋದ ವ್ಯಕ್ತಿ ವೈರಿಯಲ್ಲದೆ ಬೇರೇನಾಗಲು ಸಾಧ್ಯ ಕೈಲಾಗದ ಹೇಡಿಗಳು ಮಾತ್ರ ಹೀಗಿರಲು ಸಾಧ್ಯ. ಅದೇನೇ ಇರಲಿ ಕರೆಯದೆ ಬರುವ ಬಂಧು ಸಾವು, ಯಾರು ವೈರಿಗಳಲ್ಲ, ಯಾರು ದೂಷಿಗಳಲ್ಲ, ಯಾರು ಶಾಶ್ವತವಲ್ಲ ಇರುವ ಒಂದೇ ಬದುಕನ್ನ ಬದುಕಿನಂತೆ ಬದುಕಿಬಿಡಿ. ಯಾರಿಗೆ ಗೊತ್ತು ನಾವಿಲ್ಲದ ಕಾಲಕ್ಕೆ ನಮ್ಮ ಸಾವನ್ನು ಯಾರಾದರೂ ಸಂಭ್ರಮಿಸಬಲ್ಲರೇನೋ ಹಾಗಾಗಿ ಸ್ವಕಾರ್ಯ, ಸ್ವಾಮಿ ನಿಷ್ಠೆ ಮಾತ್ರ ನಮ್ಮನ್ನ ಕಾಯಬಲ್ಲದು, ನಮಗೆ ಮುಕ್ತಿ ನೀಡಬಲ್ಲದು. ಕೊನೆಯಪಕ್ಷ ನಾವು ಮಾಡಿದ ಪಾಪ ಪುಣ್ಯಗಳನ್ನು ಯಾರು ಮೆಚ್ಚದೆ ಹೋದರು ಒಂದು ನಮ್ಮೊಳಗೇ ಇರುವ ಆತ್ಮನು ಮೇಲಿರುವ ಪರಮಾತ್ಮನು ಇವರಿಬ್ಬರು ಮೆಚ್ಚುವಂತಾದರೂ ಕನಿಷ್ಠಪಕ್ಷ ಆತ್ಮ ತೃಪ್ತಿಯಾಗುವಂತಾದರು ಬದುಕಿಬಿಡೋಣ. ಯಾರ ಸಾವನ್ನು ಸಂಭ್ರಮಿಸಬೇಡಿ ನಮ್ಮನ್ನ ನಾವು ಮೊದಲು ಗೆಲ್ಲೋಣ.
ಡಾ. ಮೇಘನ ಜಿ
ಉಪನ್ಯಾಸಕರು