spot_img
spot_img

ನಾವು ಮಾಡಿದ ಪರೋಪಕಾರ ನಮ್ಮಲ್ಲಿ ಅಹಮ್ಮಿನ ಕೋಟೆ ಕಟ್ಟದಿರಲಿ…

Must Read

- Advertisement -

ಅಣ್ಣಾ ಒಂದ್ ಸಣ್ಣ ಹೆಲ್ಪ್ ಆಗ್ಬೇಕಾಗಿತ್ತು ಅಂತ ವಾಟ್ಸಪ್ಪಿಗೆ ಮೇಸೆಜ್ ಒಂದು ಆಗಷ್ಟೇ ಬಂದು ಬಿದ್ದಿತ್ತು.. ಅರೇ ಯಾರಿದು?? ಅಂತ ಕುತೂಹಲ ತಡೆಯಲಾಗದೇ ಆ ನಂಬರಿಗೆ ಕರೆ ಮಾಡಿದರೆ ಅತ್ತ ಕಡೆಯಿಂದ ಯಾವ ಉತ್ತರವೂ ಬರಲಿಲ್ಲ.

ತಲೆಯಲ್ಲಿ ಸುಳಿದಾಡಿದ ಒಂದೇ ಒಂದು ಯೋಚನೆ ಅಂದರೆ ನನಗೆ ಪರಿಚಯವೇ ಇಲ್ಲದ ಮತ್ತು ಹೊಸದಾಗಿ ಇರುವ ನಂಬರ್ ಯಾರದ್ದಿರಬಹುದು?? ಎರಡು ಮೂರು ಸಲ ಟ್ರೈ ಮಾಡಿದಾಗ ಅತ್ತಲಿಂದ ಫೋನ್ ರಿಸೀವ್ ಆದರೂ ಕೂಡ ಮಾತಿಲ್ಲ ಬರೀ ಅಳು…ಯಾರಿಗೆ ಏನಾಗಿರಬಹುದು ಅನ್ನುವ ಸಂಶಯದೊಂದಿಗೆ ಬೇಜಾರಿನಲ್ಲೇ ಫೋನ್ ಕಟ್ ಮಾಡಿದೆ…

ಎರಡು ಮೂರು ದಿನದ ಬಳಿಕ ಅದೇ ನಂಬರಿನಿಂದ ಕರೆ ಬಂತು ಸರ್ ಇದು ದೀಪಕ್ ಅವ್ರು ಮಾತಾಡೋದಾ?? ಹೌದು ಹೇಳಿ ಅನ್ನುತ್ತಿದ್ದಂತೆಯೇ ನಿಮಗೆ ಮೆಸೇಜ್ ಹಾಕಿದ್ದ ಹುಡುಗ ರವಿ ಅವತ್ತೆ ಹೋಗ್ ಬುಟ್ಟಾ ಸರ್…

- Advertisement -

ಬ್ರದರ ದಯವಿಟ್ಟು ಮ್ಯಾಟರಿಗೆ ಬನ್ನಿ ಯಾವ ರವಿ ಅಂತ ಗೊತ್ತಾಗಲಿಲ್ಲ… ಅನ್ನುತ್ತಿದ್ದಂತೆಯೇ ‘ ಅಯ್ಯೋ ಏನ್ ಸರ್ ಹೀಗಂತೀರಿ ನಿಮ್ ಇನಸ್ಟಾಗ್ರಾಮ್, ಫೇಸ್ಬುಕ್ ,ಯೂಟ್ಯೂಬ್ ಎಲ್ಲಾ ಫಾಲೋ ಮಾಡ್ತಿದ್ನಲ್ಲ ಸರ್… ಬಡವ ರ‌್ಯಾಸ್ಕಲ್ ಅನ್ನೋ ಪ್ರೊಫೈಲ್ ಕ್ರಿಯೇಟ್ ಮಾಡಿ ಅದರಲ್ಲಿ ನಿಮ್ಮ ವಿಡಿಯೋ ಒಂದೂ ಬಿಡದೆ ಷೇರ್ ಮಾಡ್ತಿದ್ನಲ್ಲ ಆ ರವಿ ಸರ್..’ ಅಂತು ಆ ಕಡೆಯ ಗಡಸು ಧ್ವನಿ…

ಓಹ್ ಐ ಯಾಮ್ ವೇರಿ ಸಾರಿ ಅಂದೆ ಅಷ್ಟರಲ್ಲೇ ಮುಂದುವರೆದ ಆ ಧ್ವನಿ ಹೇಳಿದ್ದು ಆ ಹುಡುಗ ಮೂಗ ಸಾರ್ ಮಾತಾಡೋಕೆ ಬರ್ತಾ ಇರಲಿಲ್ಲ..ನಿಮ್ಮಿಂದ ಏನಾದ್ರು ಹೆಲ್ಪ್ ಕೇಳಿದ್ರೆ ನೀವು ಖಂಡಿತ ಇಲ್ಲ ಅನ್ನಲ್ಲ ಸಹಾಯ ಮಾಡೇ ಮಾಡ್ತೀರಾ ಅಂತೆಲ್ಲ ಕೈ ಸನ್ನೆ ಯಲ್ಲಿ ಹೇಳ್ತಿದ್ದಾ ಸರ್ ಏಳನೆ ತರಗತಿ ವರೆಗೂ ಎಲ್ಲ ಮಕ್ಕಳ ಜೊತೆಗೆ ಸರ್ಕಾರಿ ಕನ್ನಡ ಶಾಲೇಲಿ ಕಲಿತಿದ್ದ, ಮೊಬೈಲ್ ಶಾಪ್ ಅಲ್ಲಿ ಕೆಲಸ ಮಾಡಿದ್ರಿಂದ ಮೆಸೆಜ್ ಟೈಪ್ ಮಾಡೋದು, ಫೇಸ್ ಬುಕ್, ವಾಟ್ಸಪ್ ಎಲ್ಲಾ ಯೂಜ್ ಮಾಡೋದು ಗೊತ್ತಿತ್ತು ಆದ್ರೆ ತುಂಬಾ ಬಡವ್ರು ಸಾರ್… ಸೆಕೆಂಡ್ ಹ್ಯಾಂಡ್ ಮೊಬೈಲ್ ಬೇರೆ ತಗೊಂಡಿದ್ದ 

ಅವ್ರ ಮನೇಲಿ ಏನ್ ಸಮಸ್ಯೆ ಇತ್ತೋ ಏನೋ ಮೊನ್ನೆ ಹನ್ನೆರಡನೆ ತಾರೀಖು ಅವ್ರಪ್ಪ ಅಮ್ಮನ ಜೊತೆಗೆ ನೇಣಿಗೆ ಬಿದ್ದಿದ್ದಾನೆ ಸಾರ್ ಅಂತ ಆ ಧ್ವನಿ ಜರ್ಝರಿತವಾಗುತ್ತಿದ್ದಂತೆಯೇ ಆ ಹುಡುಗ ನನ್ನಿಂದ ಕೇಳಿರಬಹುದಾದ ಸಹಾಯ ಏನಿರಬಹುದು? ಅಂತ ಯೋಚಿಸುತ್ತಿದ್ದಂತೆಯೇ ಆಯ್ತು ಬಿಡಿ ಸರ್ ಇವತ್ತು ಅವ್ರ ಸಮಾಧಿಗೆ ಹಾಲು ಎರಿಬೇಕು ಅಂತ ಆ ಕಡೆಯ ಪೋನ್ ಕಟ್ಟಾಯಿತು.

- Advertisement -

ಅದೆಲ್ಲ ಆಗಿ ಈಗ ಐದಾರು ತಿಂಗಳಾಗಿರಬಹುದು. ಆ ನಂಬರಿಗೆ ಕರೆ ಮಾಡಿದರೆ ಅದು ಎಲ್ಲೋ ಶಿವಮೊಗ್ಗ ಹತ್ತಿರದ ಹೆಣ್ಣುಮಗಳಿಗೆ ಸಂಪರ್ಕವಾಗಿ ಯಾವ್ ರವೀರಿ?? ಅರೆ ಯಾರ್ ಸರ್ ನೀವು ಮಾತಾಡೋದು?? ಹೇಳಿದ್ನಲ್ಲ  ಇದು ರಾಂಗ್ ನಂಬರ್ ಅಂತಿದ್ದಾರೆ.

ಬಹುಶಃ ಆ ಮಹಿಳೆ ಹೊಸದಾಗಿ ಖರೀದಿಸಿದ ಸಿಮ್ ಅದಾಗಿರಬಹುದು ರವಿಯ ಸಂಬಂಧಿಕರು ಎರಡು ಮೂರು ತಿಂಗಳು ಕಾಲ ಆ ನಂಬರಿಗೆ ರೀಚಾರ್ಜ್ ಮಾಡದೆ ಇರುವದರಿಂದ ಆ ನಂಬರ್ ಡಿಸ್ ಕನೆಕ್ಟ ಆಗಿ ಮತ್ಯಾರದೊ ಪಾಲಾಗಿರಬಹುದು

ಹೀಗೆ ಎಲ್ಲಿಂದಲೋ ಬರುವ ಒಂದಷ್ಟು ಅಪರಿಚಿತ ಹುಡುಗ ಹುಡುಗಿಯರ ಮೆಸೇಜು ಅಥವಾ ಪೋನ್ ಕರೆಗಳನ್ನ ನೋಡಿದಾಗೆಲ್ಲ ಆ ಅಪರಿಚಿತ ಹುಡುಗ ರವಿಗೆ ಇದ್ದಿರಬಹುದಾದ ವಯಸ್ಸು?? ಅವನಿಗೆ ಇದ್ದಿರಬಹುದಾದ ಕನಸು ಮತ್ತು ಎಲ್ಲೋ ದೂರದ ಊರಿನಲ್ಲಿ ಕುಳಿತ ನನ್ನ ಮೇಲೆ ಅವನು ಇಟ್ಟಿರಬಹುದಾದ ನಂಬಿಕೆ ಮತ್ತು ನನ್ನಿಂದ ಸಿಗಬಹುದಾದ ಸಹಾಯದ ನಿರೀಕ್ಷೆ ಈಗಲೂ ನನಗೆ ವಿಚಿತ್ರ ಅನ್ನಿಸುತ್ತದೆ.

ಹೀಗೆಯೇ ನಿಮಗೂ ಪರಿಚಯ ಆಗಿರಬಹುದಾದ ಅಥವಾ ಅಪರಿಚಿತರಾಗಿರಬಹುದಾದ ಎಷ್ಟೋ ಜನ ಒಂದು ಹೆಲ್ಪ್ ಬೇಕಿತ್ತು ಅಂತ ಕೇಳಿರಬಹುದು.

ಅಂತಹ ಸಮಯಕ್ಕೆಲ್ಲ ನಾನು ರಿಯಾಕ್ಟ್ ಮಾಡೋದು ಯಾರು ಏನು ಎತ್ತ ಅಂತೆಲ್ಲ ಕೇಳಿದರೂ ಕೂಡ ದುಡ್ಡಿನ ವಿಷಯ ಅಂತ ಬಂದಾಗ ಯಾಕ್ ಬೇಕಿತ್ತು ಅಂತ ಎಂದೂ ಯಾರನ್ನೂ ಕೇಳುವದಿಲ್ಲ.

ಯಾಕೆಂದರೆ ನಮ್ಮನ್ನು ನಂಬಿದ ಅಥವಾ ನಮ್ಮಿಂದ ಪುಟ್ಟದೊಂದು ಸಹಾಯ ಬೇಡಿದ ಆ ವ್ಯಕ್ತಿ ಯಾವುದೋ ಒಂದು ಹೇಳಲಾಗದ ಅಸಹಾಯಕತೆಯನ್ನ ಅನುಭವಿಸುತ್ತಿರಬಹುದು.

ಮೊನ್ನೆಯಷ್ಟೇ ನನ್ನ ಗೆಳೆಯನೊಬ್ಬ ಹೇಳುತ್ತಿದ್ದ ಒಂದಷ್ಟು ದುಡ್ಡು ಬೇಕಿತ್ತು ಅಂತ ಅವರಿವರ ಹತ್ತಿರ ಎಲ್ಲಾ ಕೇಳಿದೆ ಗುರು ಅದರಲ್ಲಿ ಸಾರಿ ಬ್ರದರ್ ಅಂದೋರ್ ಬಗ್ಗೆ ಬೇಜಾರಿಲ್ಲ ಆದ್ರೆ ಎಷ್ಟು ಬೇಕಿತ್ತು ಮಗಾ ಏನಕ್ಕೆ ಅಂತ ಕೇಳಿ ಆಮೇಲೆ ಇಲ್ಲ ಅಂದ್ರಲ್ಲ ಅದು ತುಂಬಾ ಬೇಜಾರಾಯ್ತು ಒಂದೋ ನನ್ನ ಮೇಲೆ ನಂಬಿಕೆ ಇದ್ರೆ ಕೊಡಬೇಕಿತ್ತು ಇಲ್ಲ ಅಂದ್ರೆ ಆಗಲ್ಲ ಅಂತ ಹೇಳಬೇಕಾಗಿತ್ತು ಅದನ್ನೆಲ್ಲ ಬಿಟ್ಟು ಮಕ್ಕಳ ಸ್ಕೂಲ್ ಫೀಜ್ ಕಟ್ಟೋಕ್ ಆಗ್ಲಿಲ್ಲ ಅಂದ್ರೆ ಮಕ್ಕಳನಾದ್ರೂ ಯಾಕ್ ಮಾಡಬೇಕು ಅಂತ ಬೇರೆಯವರ ಮುಂದೆ ಆಡ್ಕೊಂಡಿದ್ದಾರೆ ಅಂದ್ರೆ ನನಗೆ ಎಷ್ಟು ಉರಿಯಲ್ಲ ಹೇಳು?? ಅನ್ನುತ್ತಿದ್ದಂತೆಯೇ ಅರೇ, ಹೌದಲ್ಲವಾ ಅನ್ನಿಸಿದ್ದು ನಿಜ.

ಹೀಗೆಯೇ ತನ್ನ ಮನೆಯಲ್ಲಿ‌ ಕಾಯಿಲೆ ಬಿದ್ದ ಅಮ್ಮನ ಔಷಧಿಗೋ, ಹುಷಾರು ತಪ್ಪಿದ ಮಡದಿಯ ಆಸ್ಪತ್ರೆಯ ಖರ್ಚಿಗೋ, ಮನೆಯಲ್ಲಿ ಮುಗಿದಿರಬಹುದಾದ ಸಿಲಿಂಡರ್ ಗ್ಯಾಸಿಗೋ ಅಥವಾ ತಪ್ಪದೆ ಕಟ್ಟಬೇಕಿರುವ ಬ್ಯಾಂಕಿನ ಇ ಎಮ್ ಐಗೋ ಆ ಕ್ಷಣಕ್ಕೆ ಸಂಬಳವಾಗಿರದ ಅಥವಾ ಎಲ್ಲದಕ್ಕೂ ಹಣ ಹೊಂದಿಸಲಾಗದ ಕಾರಣಕ್ಕೆ ನಮ್ಮ ಎದುರು ದೈನ್ಯವಾಗಿ ನಿಂತುಕೊಂಡ ಜೀವವೊಂದು ಅದಾಗಿರಬಹುದು.

ನಮ್ಮಿಂದ ಸಹಾಯ ಕೇಳಿದವರ ಬಗ್ಗೆ ತೀರಾ ಸಹಜವಾದ ಕಾಳಜಿಯೂ ಇಲ್ಲದಷ್ಟು ನಾವೆಲ್ಲ ಯಾಕೆ ಕಟುಕರಾಗುತ್ತಿದ್ದೀವಿ ಅನ್ನೋದು ನನ್ನನ್ನ ಆಗಾಗ ಬಿಡದೆ ಕಾಡುವ ಪ್ರಶ್ನೆ..

ಇಷ್ಟಕ್ಕೂ ಯಾರೋ ಜನನಾಯಕರ ಹುಟ್ಟು ಹಬ್ಬ ಅಂತ ಅದು ಯಾರನ್ನೋ ಮೆಚ್ಚಿಸಲು ಅವರ ಹೆಸರಿನಲ್ಲಿ ತಾವೇ ಹಣ್ಣು ಹಂಪಲು ಹಂಚಿ ದೊಡ್ಡ ದಾನಶೂರ ಅನ್ನುವಂತೆ ಸೋಷಿಯಲ್ ಮೀಡಿಯಾಗಳಲ್ಲಿ ಪೋಟೋ ಹಾಕುವ ಜನರಿಗೆ ಹೀಗೆ ಸಹಾಯ ಕೇಳಿಕೊಂಡು ಬರುವ ಕರೆಗಳ ಸಂಖ್ಯೆಯೂ ದೊಡ್ಡದೇ ಆಗಿರುತ್ತದೆ.

ಇಷ್ಟಕ್ಕೂ ಯಾರೋ ಒಬ್ಬರು ನಮ್ಮಿಂದ ಸಹಾಯ ಕೇಳಿದಾಗ ನೇರವಾಗಿ ಸ್ವಾರಿ ಬ್ರದರ್ ಅನ್ನುವದರಿಂದ ನಮ್ಮ ಗಂಟೆನೂ ಹೋಗುವದಿಲ್ಲ ಆ ಕ್ಷಣಕ್ಕೆ ನಮ್ಮಿಂದ ಸಹಾಯ ಮಾಡಲು ಆಗಿರಲಿಕ್ಕಿಲ್ಲ ಅಥವಾ ಸದ್ಯದ ಮಟ್ಟಿಗೆ ನನ್ನ ಹತ್ತಿರಾ ಇಷ್ಟೇ ಇರೋದು ತಗೋ ಮಚ್ಚಾ ಬೇರೆ ಕಡೆ ಟ್ರೈ ಮಾಡು ಅಂತ ಸಾಧ್ಯವಾದಷ್ಟು ಸಹಾಯ ಮಾಡಿದರೆ ಹನಿ ಹನಿ ಕೂಡಿದರೆ ಹಳ್ಳ ಅಂತ ಅವರ ಆ ಕ್ಷಣದ ಸಂಕಷ್ಟದ ಪರಿಹಾರವೂ ಆಗಬಹುದು.

ಒಂದು ಕಾಲದಲ್ಲಿ ನೀವು ಯಾವ ಸ್ವಾರ್ಥವೂ ಇಲ್ಲದೇ ಮಾಡಿದ ಸಹಾಯದಿಂದಲೇ ಚಿಗಿತುಕೊಂಡ ಮರದಂತಹ ಮನುಷ್ಯನೊಬ್ಬ ಮುಂದೆ ನಿಮಗೆ ಹೂವೋ,ಹಣ್ಣೋ ಅಥವಾ ನೆರಳೋ ಕೊಡಲು ಮತ್ತು ನೀವು ದಣಿದು ಬಳಲಿ ಬವಳಿ ಬಂದು ನಿಂತಾಗಲೋ ಇಂದಷ್ಟು ಆಶ್ರಯಕ್ಕೆ ಸಹಾಯ ಮಾಡಬಹುದು.

ಯಾಕೆಂದರೆ ಕಷ್ಟ ಅನ್ನುವದು ಯಾರ ಬದುಕಿನಲ್ಲಿ ಯಾವಾಗ ಯಾವ ರೀತಿ ಬರುತ್ತದೆಯೋ ಬಲ್ಲವರಾರು ಅಲ್ಲವಾ??

ಯಾರೋ ಒಬ್ಬರು ಹಣದ ಸಹಾಯ ಕೇಳಿದಾಗ ಅವರ ಎದುರಲ್ಲೇ ನಿಮ್ಮ ಜೇಬಿನಿಂದ ಪರ್ಸು ಹೊರಗೆ ತೆಗೆದು ಇನ್ನೇನು ಕೊಡುವವರಂತೆ ದುಡ್ಡು ಎಣಿಸಿ ಅಯ್ಯೋ ಸ್ವಾರಿ ಪಾ ಇದು ಬೇರೆ ಕೆಲಸಕ್ಕೆ ಇದೆ ಅನ್ನುವ ಕ್ರೂರತೆಗಿಂತ ಮತ್ತು ಯಾಕ್ ಬೇಕು?? ಎಷ್ಟ್ ಬೇಕು?? ಯಾವಾಗ ವಾಪಸ್ ಕೊಡ್ತೀಯಾ?? ಅನ್ನುವಂತಹ ಅಸಡ್ಡಾಳ ಪ್ರಶ್ನೆಗಳನ್ನೆಲ್ಲ ಕೇಳಿ ಆಮೇಲೆ ಕೈ ಎತ್ತುವದಕ್ಕೂ ಬಹಳ ವ್ಯತ್ಯಾಸವೇನೂ ಇಲ್ಲ…

ಐದಾರು ವರ್ಷಗಳ ಹಿಂದೆ ಬೆಳಗಾವಿಯ ಬಸ್ ನಿಲ್ದಾಣ ಒಂದರಲ್ಲಿ ತಮ್ಮಾ ಒಂದ್ ಹತ್ ರೂಪಾಯಿ ಇದ್ರ ಕೊಡು ಅಂತ ಹಣ್ಣಾಗಿ ಮಾಗಿದ ಅಜ್ಜಿಯೊಬ್ಬಳು ತನಗೆ ಹೊರಲಾಗದ ಭಾರದ ಕೈ ಚೀಲವೊಂದನ್ನ ಒಂದು ತನ್ನ ಆಧಾರಕ್ಕೆ ಅಂತ ಕೈಯಲ್ಲಿ ಹಿಡಿದಿದ್ದ ಕಟ್ಟಿಗೆಯ ಜೊತೆಗೆ ಬಾಗಿದ ಬೆನ್ನಿನಲ್ಲೆ ಪ್ಲಾಸ್ಟಿಕ್ ಕಟ್ಟಿದ ಕಿತ್ತುಹೋದ ಚಪ್ಪಲಿ ಮತ್ತು ಅಲ್ಲಲ್ಲಿ ತ್ಯಾಪೆ ಹಚ್ಚಿದ ಹಾಗೂ ಕುಪ್ಪುಸದಿಂದ ಅರ್ಧ ಹೊರಗೆ ಜೋತು ಬಿದ್ದ ಅರೇ ಜೀವವಾದ ಸ್ಥನಗಳೊಂದಿಗೆ ದೈನೇಶಿ ಭಾವದಿಂದ ಕೈ ಒಡ್ಡಿದಾಗ ಇಲ್ಲ ಅನ್ನಲಾಗದೆ ಅವಳಿಗೆ ಹತ್ತು ರೂಪಾಯಿ ಕೊಟ್ಟದ್ದಕ್ಕೆ ಕಣ್ಣೀರಾದ ಅಜ್ಜಿ ಎರಡ್ ದಿನದಿಂದ ಎನೂ ತಿಂದಿರಲಿಲ್ಲೋ ನನ್ ಮಗನ….. ನೀ ಇವತ್ ದೇವರ ಬಂದಂಗ್ ಬಂದಿ ಅನ್ನುತ್ತಿದ್ದಂತೆಯೇ ನನ್ನ ಕಣ್ಣುಗಳೂ ಕೂಡ ನನಗೆ ತಿಳಿಯದಂತೆಯೇ ಹನಿಗೂಡಿದ್ದವು.

ನಿಮ್ದ್ಯಾವ ಊರು?? ಎನ್ ಕಥೆ? ಇಲ್ಲಿ ಯಾಕ್ ಬಂದಿದಿ ಅಜ್ಜಿ ಅನ್ನುತ್ತಿದ್ದಂತೆಯೇ ಹದಿನೈದು ವರ್ಷಗಳ ಹಿಂದಷ್ಟೇ ಗಂಡ ತೀರಿಹೋಗಿ ಮುದ್ದಾಗಿ ಸಾಕಿದ್ದ ಒಬ್ಬನೇ ಆಳೆತ್ತರದ ಮಗನೂ ಇತ್ತೀಚೆಗಷ್ಟೇ ಕುಡಿದು ಸತ್ತಮೇಲೆ ಬೈಲ್ ಹೊಂಗಲ್ ಹತ್ತಿರದ ಹಳ್ಳಿಯೊಂದರಲ್ಲಿ ಇರುವ ತುಂಡು ಭೂಮಿಯನ್ನ ತನ್ನ ಹೆಸರಿಗೆ ಬರೆಸಿಕೊಂಡ ಸೊಸೆ ಅವಳನ್ನ ಮನೆಯಿಂದ  ಹೊರಗೆ ಹಾಕಿದ್ದನ್ನ ಕಣ್ಣು ತುಂಬಿಕೊಂಡೇ ಹೇಳಿದ ಅಜ್ಜಿಯ ಕೈಗೆ ಮತ್ತಷ್ಟು ಹತ್ತಿಪ್ಪತ್ತರ ನೋಟುಗಳನ್ನು ತುರುಕಿ ಬೆಳಗಾವಿ ವಿಜಯಪೂರ ಅಂತ ಬರೆದಿದ್ದ ಅಥಣಿಯ ಬಸ್ಸನ್ನು ರಶ್ ಆಗಿದ್ದ ಜನರ ನಡುವೆಯೇ ತಳ್ಳಾಡಿಕೊಂಡು ಹತ್ತಿಬಂದಿದ್ದ ನೆನಪು ನನ್ನೊಳಗೆ ಈಗಲೂ ಮಸಕು ಮಸಕು..

ಅಂದ ಹಾಗೆ ಇದೇ ರೀತಿಯ ಎಷ್ಟೋ ಜನ ಅಪರಿಚಿತರು ಅಸಹಾಯಕರು ಎದುರಿಗೆ ಬಂದಾಗ,ಅವರಲ್ಲಿ ಇರಬಹುದಾದ ಹಸಿವು ನನ್ನ ಕಣ್ಣಿಗೆ ಕಾಣಿಸದೆ ಇರುವದಿಲ್ಲ. ಯಾಕೆಂದರೆ ನಾನೂ ಕೂಡ ಎಷ್ಟೋ ಸಲ ಹಣವಿಲ್ಲದೆ ಊಟವಿಲ್ಲದೆ ಊರೂರು ಅಲೆದು ಉಪವಾಸ ಮಲಗಿದ್ದೆ ಅನ್ನುವದು ಕೂಡ ಇದಕ್ಕೆ ಕಾರಣವಾಗಿರಬಹುದು.

ಸರ್ ಹಮಿ ಮೀರಜ್ ನ ಹಿತ್ತ ಉಸ್ ತೋಡನ್ಯಾಚ ಕಾಮಾಲಾ ಅಲ್ಯಾಲ ಓ…. ಕಾಮ್ ಬೀ ಮಿಳಾಲೆ ನಯಿ,ಅನಿ ಬಸ್ ಪನ್ ಚುಕಲೇ…ಅನ್ನುತ್ತ ತನ್ನ ಕಂಕುಳಲ್ಲಿ ಇರುವ ಮೊಮ್ಮಗಳು ಮತ್ತು ನೂರಿನ್ನೂರರ ಸಾಧಾರಣದ ಸೀರೆ ಉಟ್ಟ ಸೊಸೆ ಅಥವಾ ಮಗಳ ಕೊರಳಲ್ಲಿ ಎರಡು ತೆಳುವಾದ ತಗಡಿನಂತಹ ಚಿನ್ನದ ಚೂರುಗಳನ್ನ ಕರಿಮಣಿಯ ಎರಡೆಳೆಯ ಸರಕ್ಕೆ ಸಿಕ್ಕಿಸಿ ಕೊರಳಲ್ಲಿ ಹಾಕಿದ ಕಾರಣಕ್ಕೆ ಕಬ್ಬಿನ ಕಟಾವಿಗೆ ಜೊತೆ ಮಾಡಿಕೊಂಡು ಬಂದು ಇಲ್ಲಿ ಕೆಲಸ ಸಿಗದೆ ಮರಳುತ್ತಿರುವ ಮೂರು ನಾಲ್ಕು ಜನ ಅಪರಿಚಿತರಿಗೆ ನನಗೆ ತಿಳಿದ ಅವರದೇ ಅರ್ಧಂಬರ್ದ್ ಮರಾಠಿ ಭಾಷೆಯಲ್ಲಿ “ಜೇವಲಾ ಕಾಯ್” ಅಂದಾಗ ಮೌನವಾಗಿ  ಅವರಿಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡಾಗ ಅಲ್ಲೆ ರಸ್ತೆ ಪಕ್ಕದ ತಳ್ಳುವ ಗಾಡಿಯಲ್ಲಿ ಎಗ್ ರೈಸ್ ಪಾರ್ಸಲ್ ಕೊಟ್ಟು ಬೈಕಿನ ಪಕ್ಕೆಗೆ ಕಿಕ್ಕು ಹೊಡೆದವನು ನಾನು.

ಮುಂದೊಮ್ಮೆ ಬೈಕ್ ಅಪಘಾತವಾಗಿ ಹೆಚ್ಚಿನ ಚಿಕಿತ್ಸೆಗೆ ಗೆಳೆಯನೊಬ್ಬ ದಾಖಲಾಗಿದ್ದ ಆಸ್ಪತ್ರೆಗೆ ಅವನನ್ನು ನೋಡಲು ಅಂತ ಅದೇ ಮಹಾರಾಷ್ಟ್ರದ ಮೀರಜ್ ಗೆ ಹೋಗಿದ್ದಾಗ ಎದುರಾದ ಹೆಂಗಸೊಬ್ಬಳು ಏ ಭಾವು ವಳಕಲಾ ಕಾಯ್ ಮಲಾ ಅಂತ ನಸುನಗುತ್ತ ಅದು ಎಂದೋ ಮಾಡಿದ್ದ ಸಹಾಯವನ್ನ ನನಗೆ ನೆನಪಿಸುತ್ತ ನಾನು ಅದೆಷ್ಟು ಬೇಡವೆಂದರೂ ರಸವಂತಿ ಗೃಹ ಅಂತ ಮರಾಠಿಯಲ್ಲಿ ಬರೆದಿದ್ದ ಕಬ್ಬಿನ ಹಾಲಿನ ಅಂಗಡಿಯಲ್ಲಿ ಏ ಬಾಳಾ ಐಸ್ ಜಾಸ್ತ್ ಘಾಲರೆ ತಂಢ್ ಅಸೂದೆ ಹಮಚೇ ಭಾವುಲಾ ಅನ್ನುತ್ತ ಬಿಸಿಲಿಗೆ ಬಸವಳಿದಿದ್ದ ನನಗೆ ಎರಡು ಲೋಟ ಕಬ್ಬಿನ ಹಾಲು ಕುಡಿಸಿ ಬೀಳ್ಕೊಟ್ಟದ್ದು ನನ್ನ ಬದುಕಿನ ಅವಿಸ್ಮರಣೀಯ ಘಟನೆಗಳಲ್ಲಿ ಒಂದು.

ಹೀಗೆ ಅದು ಯಾರಿಗೋ,ಯಾವಾಗಲೋ ನಮಗೆ ತಿಳಿದೋ- ತಿಳಿಯದೆಯೋ ಮಾಡಿದ ಉಪಕಾರವೊಂದು ಪ್ರತ್ಯುಪಕಾರವಾಗಿ ಮರಳಿ ಬಂದು ನಮ್ಮ ಮನಸ್ಸು ಮುಟ್ಟುವ ರಸಘಳಿಗೆ ಎನ್ನುವದು ಎಲ್ಲರ ಬದುಕಿನಲ್ಲಿಯೂ ಬರುವಂತಾಗಲಿ.

ಯಾರಿಗೋ ಯಾವ ಕಾಲಕ್ಕೋ ಮಾಡಿರಬಹುದಾದಒಂದು ಉಪಕಾರ ಅನ್ನುವದು ಅವರಿಗೆ ನಾನೆ ತಾನೇ ಹೆಲ್ಪ ಮಾಡಿದ್ದು ಇಲ್ಲಾಂದ್ರೆ ಇವತ್ತು ಅವನೆಲ್ಲಿ ಇರ್ತಾ ಇದ್ದಾ?? ಅನ್ನುವ ಭಾವನೆಯೊಂದು ನಿಮ್ಮ ಮನಸ್ಸಿನಲ್ಲಿ ಅಹಂಕಾರದ ಕೋಟೆಯನ್ನು ಕಟ್ಟದೆ ಒಂದಷ್ಟು ಆತ್ಮ ಸಂತೃಪ್ತಿ ಮತ್ತು ಹೆಮ್ಮೆಯನ್ನ ತರುವಂತಾಗಲಿ ಅನ್ನುವ ಆಶಯದೊಂದಿಗೆ…

ಯಾರಾದರೂ ನಿಮಗೆ ಸಹಾಯ ಕೇಳಿದಾಗ ಸಾಧ್ಯವಾದಷ್ಟು ಕಾರಣ ಕೇಳದೆ ಸಹಾಯ ಮಾಡಿ ಅನ್ನುವ ಒಂದು ಬಿನ್ನಹವನ್ನ ನಿಮ್ಮ ಎದುರಿಗೆ ಇಡುತ್ತಿದ್ದೇನೆ.

ಯಾವುದಕ್ಕೂ ನೀವು ಮಾಡುವ ಸಹಾಯ ಎದುರಿನ ವ್ಯಕ್ತಿಯ ಕುಡಿತಕ್ಕೋ,ಜೂಜಿಗೋ ಹೋಗಲಿದೆಯಾ? ಅವರು ಪದೇ ಪದೇ ಇಂತಹದ್ದೇ ಸಹಾಯವನ್ನ ಕೇಳಿ ಯಾರ ಉಪಕಾರವನ್ನೂ ಸ್ಮರಿಸದ ಅಥವಾ ಸಹಾಯ ಅಂತ ಕೇಳಿ ಮೋಜು ಮಾಡುವ ಮತ್ತು ದುಡಿಮೆಯನ್ನ ಬಿಟ್ಟ ಲೇಝಿ ಫೆಲೋ ಗಳಾ?? ಅನ್ನುವ ಅಂದಾಜು ನಿಮಗೆ ಖಂಡಿತ ಇರುತ್ತದೆ.

ಅಂತಹವರಿಗೆ ಖಡಾ ಖಂಡಿವಾಗಿ ಇಲ್ಲ ಅನ್ನುವದರಲ್ಲಿ ಯಾವ ತಪ್ಪೂ ಇಲ್ಲ.ಆದರೆ ಅಪರೂಪಕ್ಕೆ ಮತ್ತು ತನ್ನ ಈಗಿನ ಪರಿಸ್ಥಿತಿ ಗೆ ನಿಮ್ಮ ಎದುರು ನಿಂತವರಿಗೆ ಖಂಡಿತ ಆಗುವದಿಲ್ಲ ಅನ್ನಬೇಡಿ.

ಯಾಕೆಂದರೆ ಇಲ್ಲಿಯವರೆಗೂ ಮಾವು ಬಿತ್ತಿದವರು ಯಾರೂ ಕೂಡ ಬೇವಿನ ಫಸಲು ಪಡೆದಿಲ್ಲ ಮತ್ತು ಈಗ ಇರುವ ಅವರ ಪರಿಸ್ಥಿತಿ ಇಂದಲ್ಲ ನಾಳೆ ನಮ್ಮದೂ ಆಗಿರಬಹುದು ಯಾಕೆಂದರೆ ಬದುಕು ಅನ್ನುವದು ಹಾವು ಏಣಿಯ ಚದುರಂಗದ ಆಟ ಅನ್ನುವದು ನನ್ನ ಅನುಭವದ ಮಾತು.


ದೀಪಕ ಶಿಂಧೇ

- Advertisement -
- Advertisement -

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group