ಸಿಂದಗಿ: ಮಹಾಪುರುಷರ ಜಯಂತಿಗಳು ಅವರ ಚರಿತ್ರೆಗಳನ್ನು ತಿಳಿಸಿಕೊಡುತ್ತವೆ ಅದಕ್ಕೆ ಮುಂಬರುವ ದಿನಗಳಲ್ಲಿ ನಡೆಯುವ ಜಯಂತಿ ಕಾರ್ಯಕ್ರಮದಲ್ಲಿ ಆಯಾ ಜಾತಿಗೆ ಸೀಮಿತವಾಗದೆ ಎಲ್ಲರು ಎಲ್ಲ ಜಯಂತಿಗಳಲ್ಲಿ ಬಾಗವಹಿಸುವಂತಾಗಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ಶಾಸಕ ಅಶೋಕ ಮನಗೂಳಿ ಧ್ವಜಾರೋಹಣ ಮಾಡುವ ಮೂಲಕ ಕಿತ್ತೂರರಾಣಿ ಚೆನ್ನಮ್ಮಳ ೨೪೭ನೆಯ ಜಯಂತ್ಯುತ್ಸವ ಹಾಗೂ ೨೦೧ನೇ ವಿಜಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ವೀರವನಿತೆ ಚನ್ನಮ್ಮಾಜಿ ಮೂರ್ತಿ ಅನಾವರಣವಾಗಬೇಕಾಗಿದ್ದು ಡಿಶೆಂಬರ ಕೊನೆಯ ವಾರದಲ್ಲಿ ಸಿಎಂ ಅವರು ದಿನಾಂಕ ನಿಗದಿ ಪಡಿಸುವ ಭರವಸೆ ನೀಡಿದ್ದು ಅಂದು ಸ್ವಾಮಿ ವಿವೇಕಾನಂದ ವೃತ್ತ, ಟಿಪ್ಪು ಸುಲ್ತಾನ ವೃತ್ತ ಸೇರಿದಂತೆ ನಾಲ್ಕು ವೃತ್ತಗಳು ಅನಾವರಣಗೊಳ್ಳಲಿವೆ. ಅಲ್ಲದೆ ಪಂಚಮಸಾಲಿ ಹಾಸ್ಟೇಲ್ ಕಟ್ಟಡಕ್ಕೆ ರೂ ೫೦ ಲಕ್ಷ ಮಂಜೂರಾಗಿದ್ದು ಕೂಡಲೇ ಕಾರ್ಯಗತವಾಗುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಸಿ.ಮಯೂರ ಮಾತನಾಡಿ, ರಾಣಿ ಚೆನ್ನಮ್ಮ ಭಾರತದ ಮೊದಲ ಮಹಿಳಾ ಸ್ವಾತಂತ್ರ‍್ಯ ಹೋರಾಟಗಾರ್ತಿ, ಕರ್ನಾಟಕದ ಕಿತ್ತೂರಿನ ರಾಜಮನೆತನದ ಚೆನ್ನಮ್ಮ ರಾಣಿ ಅವರು ಬೆಳಗಾವಿ ಜಿಲ್ಲೆಯ ಒಂದು ಪುಟ್ಟ ಗ್ರಾಮವಾದ ಕಾಕತಿಯಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಿಂದಲೂ ಕುದುರೆ ಸವಾರಿ, ಕತ್ತಿ ವರಸೆ ಮತ್ತು ಬಿಲ್ಲುಗಾರಿಕೆಯಲ್ಲಿ ತರಬೇತಿ ಪಡೆದಿದ್ದ ಮಹಾನ್ ತಾಯಿ, ಬ್ರಿಟೀಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ದೇಶದ ಹೆಮ್ಮೆಯ ಮಗಳು ಎಂದು ಹೇಳಿದ ಅವರು, ಬ್ರಿಟೀಷರು ಈ ದೇಶಕ್ಕೆ ವ್ಯಾಪಾರಕ್ಕಾಗಿ ಬಂದವರು ಆದರೆ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಸಂಸ್ಥಾನಗಳು ಒಗ್ಗಟಿಲ್ಲದನ್ನು ಪರಿಗಣಿಸಿ ಈಸ್ಟ್ ಇಂಡಿಯಾ ಕಂಪನಿಯ ತೆರೆದು ಅದರ ಮೂಲಕ ಆಡಳಿತ ನಡೆಸಿದರು. ಅಂತವರ ವಿರುದ್ದ ಬಂಡೆದ್ದು ನಿಂತವಳು ಚೆನ್ನಮ್ಮಾಜಿ. ಎಲ್ಲೆಲ್ಲಿ ಹೋರಾಟಗಳು ನಡೆದಿದೆಯೋ ಅಲ್ಲಿ ಸೈನಿಕರು ಸತ್ತಿದ್ದು ಇತಿಹಾಸ ಆದರೆ ಒಬ್ಬ ಆಯ್‌ಎಎಸ್ ಅಧಿಕಾರಿ ಸತ್ತಿದ್ದು ಇತಿಹಾಸ ಸೃಷ್ಟಿಸಿದೆ. ಅಂತಹ ಮಹಾನ್ ತಾಯಿಯ ತತ್ವಾದರ್ಶ, ಜೀವನ ಚರಿತ್ರೆ ಇಂದಿನ ಯುವಕರಲ್ಲಿ ತಿಳಿಸುವುದು ಮಹತ್ಕಾರ್ಯ ನಡೆಯಬೇಕಾಗಿದೆ ಎಂದರು.
ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ ಮಾತನಾಡಿ, ಹೋರಾಟ, ದೈರ್ಯ, ಸ್ವಾತಂತ್ರ, ಸ್ವಾಭಿಮಾನ ಎಂದರೆ ಏನು ಎಂಬುದನ್ನು ೨೪೭ ವರ್ಷಗಳ ಹಿಂದೆಯೇ ತಿಳಿಸಿಕೊಟ್ಟ ಮಹಾನ್ ತಾಯಿ, ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರು ಮಾಡಿದ ಸಾಧನೆ, ಸಾಹಸ, ತ್ಯಾಗ, ಹೋರಾಟದ ಕುರಿತು ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಕರೆಪ್ಪ ಬೆಳ್ಳಿ, ಬಿಇಓ ಎಂ.ಬಿ.ಯಡ್ರಾಮಿ, ಬಿ.ಜಿ.ನೆಲ್ಲಗಿ ವಕೀಲರು, ವಕೀಲರ ಸಂಘದ ಅದ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಪ್ರಥಮ ದರ್ಜೆ ಗುತ್ತಿಗೆದಾರ ಸೋಮನಗೌಡ ಬಿರಾದಾರ, ನಿವೃತ್ತ ಕೃಷಿ ಅಧಿಕಾರಿ ವ್ಹಿ.ಬಿ.ಕುರುಡೆ, ಸಂಗನಗೌಡ ಪಾಟೀಲ, ಚಂದ್ರಶೇಖರ ನಾಗರಬೆಟ್ಟ, ಮಲ್ಲನಗೌಡ ಪಾಟೀಲ ಇಬ್ರಾಹೀಂಪುರ, ಚನ್ನು ಹೊಡ್ಲ, ಜಗದೀಶ ಜಗತಿ, ಕಾಳಣ್ಣ ಬಗಲಿ, ಸೇರಿದಂತೆ ಸಮಾಜದ ಹಿರಿಯರು, ಪ್ರಮುಖರು ಸೇರಿದಂತೆ ಅನೇಕರಿದ್ದರು.

