spot_img
spot_img

ಡಾ.ಗುರುಮೂರ್ತಿ ಯರಗಂಬಳಿಮಠ ನಿವೃತ್ತಿಯಲ್ಲ ಮತ್ತೆ ಸಾಹಿತ್ಯ ಸೇವೆಯತ್ತ ಬದುಕು

Must Read

ಅಮ್ಮಿನಬಾವಿಯಿಂದ ಧಾರವಾಡ ಬಹಳ ಹತ್ತಿರ. ಧಾರವಾಡದಲ್ಲಿ ಜೀವನ ಶಿಕ್ಷಣ ಪತ್ರಿಕೆ ೧೫೬ ವರ್ಷಗಳ ಇತಿಹಾಸ ಹೊಂದಿದೆ. ಈ ಪತ್ರಿಕೆಯ ಸಂಪಾದಕ ಮಂಡಳಿಯಲ್ಲೊಬ್ಬರು ಡಾ.ಗುರುಮೂರ್ತಿ ಯರಗಂಬಳಿಮಠ. ಬಹಳ ಮೃದು ಸ್ವಭಾವ. ನನಗೆ ನನ್ನ ಬರವಣಿಗೆಗೆ ಅವರು ನಿರಂತರವಾಗಿ ಸ್ಪೂರ್ತಿ ತುಂಬುತ್ತ ಬಂದವರು. ಜೀವನ ಶಿಕ್ಷಣಕ್ಕೆ ಬರೆಯಲು ನನಗೆ ಅವರು ಕಾರಣ. ನಮ್ಮಿಬ್ಬರ ಈ ಒಡನಾಟ ಆಲಮಟ್ಟಿಯಲ್ಲಿ ಜರುಗಿದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನಕ್ಕೂ ಕಾರಣವಾಯಿತು ಎಂದರೆ ಅತಿಶಯೋಕ್ತಿಯಲ್ಲ. ಇಂತಹ ಹಿರಿಯ ಸ್ನೇಹಜೀವಿ ಇದೇ ಮೇ ೩೧ ರಂದು ಸೇವೆಯಿಂದ ನಿವೃತ್ತರಾಗುತ್ತಿರುವರು. ಜೀವನ ಶಿಕ್ಷಣದಂತಹ ಪತ್ರಿಕೆಗೆ ಇವರು ಅನಿವಾರ್ಯವಾಗಿದ್ದರು. ಜೊತೆಗೆ ಆ ಪ್ರತಿಕೆಗೆ ಹೊಸ ಹೊಳಹನ್ನು ತರುವಲ್ಲಿ ಇವರ ಪಾತ್ರ ಅಪಾರ.ಅದಕ್ಕೆ ಮೇಜರ್ ಸಿದ್ದಲಿಂಗಯ್ಯನವರ ಸ್ಪೂರ್ತಿ ಕೂಡ ಕಾರಣವಾಗಿತ್ತು.

ಶಿಕ್ಷಣ ಇಲಾಖೆಯ ಆಯುಕ್ತರಾಗಿ ಮೇಜರ್ ಸಿದ್ದಲಿಂಗಯ್ಯ ಸಾಹೇಬರು ಅಧಿಕಾರ ವಹಿಸಿಕೊಂಡ ನಂತರ ಜೀವನ ಶಿಕ್ಷಣದ ಚಂದಾ ಹಣವನ್ನು ಎಲ್ಲ ಸರ್ಕಾರಿ ಶಾಲೆಗಳವರು ತುಂಬಲು ಆದೇಶ ಮಾಡುವ ಜೊತೆಗೆ ನಿಂತು ಹೋಗಬಹುದಾಗಿದ್ದ ಪತ್ರಿಕೆಗೆ ಪುನರ್ಜನ್ಮ ನೀಡಿದರು ಎಂದರೆ ಅದು ಅವರ ಸಾಹಿತ್ಯದ ಒಲವು ಮತ್ತು ಡಾ.ಯರಗಂಬಳಿಮಠ ಅವರ ಕಾಳಜಿಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಿಕ್ಕಿಲ್ಲ. ಇಂತಹ ಸ್ನೇಹಿತನ ನಿವೃತ್ತಿ ಜೀವನ ಸುಖಮಯವಾಗಿರಲಿ ಜೊತೆಗೆ ಅವರ ಸಾಹಿತ್ಯದ ಶೈಕ್ಷಣಿಕ ಬದುಕು ನಿರಂತರ ಬರವಣಿಗೆಯ ಮೂಲಕ ಹೊರಹೊಮ್ಮುವಂತಾಗಲಿ ಎಂದು ಆಶಿಸುವ ಜೊತೆಗೆ ಅವರು ಬೆಳೆದು ಬಂದ ಹಾದಿಯತ್ತ ಪುಟ್ಟ ಅವಲೋಕನ

ಬಾಲ್ಯ ಹಾಗೂ ಬದುಕಿನ ಘಟ್ಟ:

ಡಾ. ಗುರುಮೂರ್ತಿ ಯರಗಂಬಳಿಮಠ ಅವರ ಪೂರ್ಣ ಹೆಸರು ಡಾ.ಗುರುಮೂರ್ತಯ್ಯ ವೀರಯ್ಯ ಯರಗಂಬಳಿಮಠ. ಶ್ರೀವೀರಯ್ಯ ಹಾಗೂ ಶ್ರೀಮತಿ ಈರಮ್ಮ ಅವರ ಏಕೈಕ ಪುತ್ರನಾಗಿ ಹಾವೇರಿ ಜಿಲ್ಲೆಯ ಯಲಗಚ್ಚು ಗ್ರಾಮದಲ್ಲಿ ದಿನಾಂಕ : ೧೨-೦೫-೧೯೬೨ ರಂದು ಡಾ.ಗುರುಮೂರ್ತಿ ಅವರು ಜನಿಸಿದರು. ಇವರ ಸ್ವಗ್ರಾಮ ಧಾರವಾಡ ತಾಲೂಕು ಅಮ್ಮಿನಬಾವಿ ಗ್ರಾಮವಾದರೂ, ಡಾ.ಗುರುಮೂರ್ತಿ ಅವರ ಪೂರ್ವಜರು ದಕ್ಷಿಣ ಕರ್ನಾಟಕದ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕು ‘ಯರಗಂಬಳಿ’ ಗ್ರಾಮದವರು. ಅಲ್ಲಿಂದ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ಸಂಪಗಾಂವ ಗ್ರಾಮಕ್ಕೆ ‘ಯರಗಂಬಳಿ’ಯಿಂದ ವಲಸೆ ಬಂದು ‘ಮಠ’ ಕಟ್ಟಿ ಧರ್ಮ ಜಾಗೃತಿ ಕೈಕೊಂಡಿದ್ದರಿಂದ ಇವರ ಮನೆತನದ ಹೆಸರು ‘ಯರಗಂಬಳಿಮಠ’ ಆಗಿದೆ.

ಅವರ ಅಜ್ಜ ತಂದೆಯ ತಂದೆ ಮುರಗಯ್ಯ ಯರಗಂಬಳಿಮಠ ಅವರು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ಸಂಪಗಾಂವ ಗ್ರಾಮದಿಂದ ತಮ್ಮ ಆಸ್ತಿ, ಮನೆ ತೊರೆದು ಬಂದು ಮಹಾತಪಸ್ವಿ, ತ್ರಿಕಾಲಜ್ಞಾನಿ, ಶ್ರೇಷ್ಠ ಅವಧೂತರಾಗಿದ್ದ ಪೂಜ್ಯಶ್ರೀ ಗರಗದ ಮಡಿವಾಳ ಶಿವಯೋಗಿಗಳ ಸೇವೆಗೈದವರು. ಅವರ ಕೃಪಾಕಾರುಣ್ಯ ಮತ್ತು ಆಶೀರ್ವಾದ “ಯರಗಂಬಳಿಮಠ” ಅವರ ಮನೆತನಕ್ಕೆ ಪ್ರಾಪ್ತವಾಗಿದೆ ಎಂದು ಡಾ.ಗುರುಮೂರ್ತಿ ಅವರು ಅತ್ಯಂತ ವಿನೀತ ಭಕ್ತಿಭಾವದಿಂದ ಆಗಾಗ ಸ್ಮರಣೆ ಮಾಡಿಕೊಳ್ಳುತ್ತಾರೆ. ತಮ್ಮ ಸಂಸ್ಕಾರಪೂರ್ಣ ಬದುಕಿನ ಪ್ರಗತಿಗೆ ಮತ್ತು ಯಶಸ್ಸಿನ ಹೆಜ್ಜೆ ಗುರುತುಗಳ ಸಾಧನೆಗೆ ಜನ್ಮ ನೀಡಿದ ತಂದೆ-ತಾಯಿಗಳನ್ನು, ಗುರುಬೆಳಕಿನ ಮಾರ್ಗದರ್ಶನ ಮಾಡಿದ ಧಾರವಾಡ ತಾಲೂಕು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶ್ರೀಷಟ್‌ಸ್ಥಲ ಬ್ರಹ್ಮ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳನ್ನು ಹಾಗೂ ತಮ್ಮ ಕೃಪಾಕಾರುಣ್ಯದೊಂದಿಗೆ ಆಶೀರ್ವದಿಸಿದ ಬಾಳೆಹೊನ್ನೂರಿನ ಶ್ರೀರಂಭಾಪುರಿ ಪೀಠದ ಶ್ರೀಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರನ್ನೂ ಸಹ ಸದಾ ಭಕ್ತಿಯೊಂದಿಗೆ ಸ್ಮರಣೆ ಮಾಡುತ್ತಾರೆ.

ಡಾ.ಗುರುಮೂರ್ತಿ ಯರಗಂಬಳಿಮಠ ಅವರ ಪ್ರಾಥಮಿಕ ಶಿಕ್ಷಣವು ಹಾವೇರಿ ಜಿಲ್ಲೆ ಯಲಗಚ್ಚು, ಧಾರವಾಡ ತಾಲೂಕು ಕಣವಿಹೊನ್ನಾಪೂರ ಹಾಗೂ ಧಾರವಾಡ ನಗರದ ಮಾಳಮಡ್ಡಿ-ಎಮ್ಮಿಕೇರಿಯ ೧೧ನೇ ನಂಬರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಪ್ರೌಢ ಶಿಕ್ಷಣವು ಇವರ ಸ್ವಗ್ರಾಮ ಧಾರವಾಡ ತಾಲೂಕು ಅಮ್ಮಿನಬಾವಿಯ ಶ್ರೀ ಶಾಂತೇಶ್ವರ ಪ್ರೌಢ ಶಾಲೆಯಲ್ಲಿ ಆಗಿದೆ.

೧೯೭೮ ಏಪ್ರೀಲ್‌ದಲ್ಲಿ ಜರುಗಿದ ಎಸ್.ಎಸ್.ಎಲ್.ಸಿ. ಪರೀಕ್ವೆಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಧಾರವಾಡದ ಪ್ರತಿಷ್ಠಿತ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜು (ಅಂದರೆ ಈಗಿನ ಡಯಟ್‌ದಲ್ಲಿ) ೧೯೭೮ ರಿಂದ ೧೯೮೦ ರವರೆಗೆ ೨ ವರ್ಷಗಳ ಟಿ.ಸಿ.ಎಚ್. ಶಿಕ್ಷಕರ ತರಬೇತಿ ಪಡೆದರು.

ವೃತ್ತಿ ಜೀವನ:

೧೯೮೦-೧೯೮೧ ರಲ್ಲಿ ಪ್ರತಿಷ್ಠಿತ ಕರ್ನಾಟಕ ಕಲಾ ಮಹಾವಿದ್ಯಾಲಯ (ಕೆಸಿಡಿಯಲ್ಲಿ) ಪಿಯುಸಿ ದ್ವಿತೀಯ ವರ್ಷ ಓದುತ್ತಿರುವಾಗಲೇ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗೆ ನೇಮಕವಾದರು. ಸರಕಾರಿ ನೌಕರಿಯ ಆದೇಶ ಇವರನ್ನು ಹುಡುಕಿಕೊಂಡು ಬಂದದ್ದರಿಂದ ಇವರ ತಂದೆಯವರ ಸೂಚನೆಯಂತೆ ಮತ್ತು ಇಚ್ಛೆಯಂತೆ ಪಿಯುಸಿ ದ್ವಿತೀಯ ವರ್ಷದ ವ್ಯಾಸಂಗವನ್ನು ಮೊಟಕುಗೊಳಿಸಿ ಶಿಕ್ಷಕ ವೃತ್ತಿ ಆರಂಭಿಸಲು ತೀರ್ಮಾನಿಸಿದರು.

ಕೇವಲ ೧೯ ವರ್ಷ ೨ ತಿಂಗಳ ವಯಸ್ಸಿನವರಿದ್ದಾಗಲೇ ಮಹಾರಾಷ್ಟ್ರದ ಗಡಿ ಪ್ರದೇಶವಾದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನವಲಿಹಾಳ ಗ್ರಾಮದ ಕಿರಿಯ ಪ್ರಾಥಮಿಕ ಕನ್ನಡ ಸರಕಾರಿ ಪಾಠಶಾಲೆಯಲ್ಲಿ ದಿನಾಂಕ : ೧೭-೦೭-೧೯೮೧ ರಂದು ಶಿಕ್ಷಕ ವೃತ್ತಿ ಬದುಕು ಆರಂಭವಾಯಿತು. ಈ ಶಾಲೆಯಲ್ಲಿ ೨ ವರ್ಷ ೪ ತಿಂಗಳು ಸೇವೆ ಸಲ್ಲಿಸಿ ತಮ್ಮ ಮುಪ್ಪಿನ ತಂದೆ-ತಾಯಿಗಳ ಸೇವೆಗಾಗಿ ಸ್ವಗ್ರಾಮವಾದ ಧಾರವಾಡ ತಾಲೂಕು ಅಮ್ಮಿನಬಾವಿಗೆ ವರ್ಗಾವಣೆಗೊಂಡರು.

ದಿ.೨೮-೧೧-೧೯೮೩ ರಿಂದ ಸ್ವಗ್ರಾಮ ಧಾರವಾಡ ತಾಲೂಕು ಅಮ್ಮಿನಬಾವಿ ಗ್ರಾಮದ ಬಾಲಕಿಯರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಇವರ ಶಿಕ್ಷಕ ವೃತ್ತಿ ಮುಂದುವರೆಯುತ್ತದೆ.

ಈ ಶಾಲೆಯಲ್ಲಿ ಒಟ್ಟು ೨೬ ವರ್ಷಗಳ ಕಾಲ ಸೇವೆ ಗೈಯುವ ಮೂಲಕ ಉತ್ಕೃಷ್ಟ ಬೋಧನೆಯನ್ನು ರೂಢಿಸಿಕೊಂಡಿದ್ದ ಇವರು ವಿದ್ಯಾರ್ಥಿಗಳು ಬಹುಮುಖ ವ್ಯಕ್ತಿತ್ವ ಸಂಪಾದಿಸಿಕೊಳ್ಳಲು ಅಗತ್ಯವಾದ ಮಾರ್ಗದರ್ಶನ ಮಾಡಿರುವುದನ್ನು ಇಂದಿಗೂ ಇವರ ಬಗ್ಗೆ ಅಪಾರ ಗೌರವವನ್ನು ಹೊಂದಿರುವ ಇವರ ವಿದ್ಯಾರ್ಥಿಗಳನ್ನು ಮಾತನಾಡಿಸುವ ಮೂಲಕ ತಿಳಿದುಕೊಂಡೆ. ನನಗೆ ಪರಿಚಿತವಿರುವ ಇವರ ವಿದ್ಯಾರ್ಥಿಗಳ ಪೈಕಿ ಸವದತ್ತಿಯಲ್ಲಿರುವ ನನ್ನ ಸ್ನೇಹಿತ ಪುಂಡಲೀಕ ಬಾಳೋಜಿಯವರ ಪತ್ನಿ ಗಿರಿಜಾ ಹಾರೋಬೇಡಿ ಹಾಗೂ ಸ್ನೇಹಿತ ರಾಜು ಪಾಟೀಲ ರ ಪತ್ನಿ ಕವಿತಾ ಶೆಟ್ಟರ್ ತಮ್ಮ ಗುರುಗಳ ಬಗ್ಗೆ ಅಪಾರ ಗೌರವದ ಮಾತುಗಳನ್ನು ಅವರ ಪಾಠ ಬೋಧಿಸಿದ ರೀತಿಯನ್ನು ನೆನೆಯುವುದನ್ನು ಇಲ್ಲಿ ಉಲ್ಲೇಖಿಸಬಲ್ಲೆನು.

ಇವರ ಸಾಹಿತ್ಯ ಬರವಣಿಗೆಯ ಪ್ರಭೆಯು ಮುಂದೆ ಧಾರವಾಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಆದೇಶದಂತೆ ದಿನಾಂಕ : ೧-೦೬-೨೦೦೯ ರಿಂದ ಧಾರವಾಡ ಡಯಟ್ “ಜೀವನ ಶಿಕ್ಷಣ” ಮಾಸಪತ್ರಿಕೆ ಸಹ ಸಂಪಾದಕ ಹುದ್ದೆಯಲ್ಲಿ ಪೂರ್ಣಕಾಲಿಕ ನಿಯೋಜನೆ ಮೇಲೆ ಸೇವೆಗೆ ಆರಂಭವಾಯಿತು ನಂತರ. ಸರಕಾರದ ಆದೇಶದಂತೆ ದಿ.೨-೦೪-೨೦೧೬ ರಿಂದ ಅಮ್ಮಿನಬಾವಿ ಹೆಣ್ನು ಮಕ್ಕಳ ಪ್ರಾಥಮಿಕ ಶಾಲೆಯಿಂದ ವರ್ಗಾವಣೆ ಹೊಂದಿ ಪೂರ್ಣಕಾಲಿಕವಾಗಿ ಧಾರವಾಡ ಡಯಟ್‌ಗೆ ವರ್ಗಾವಣೆ ಹೊಂದಿ, ಇಂದಿನವರೆಗೆ ಒಟ್ಟು ೧೩ ವರ್ಷಗಳ ಕಾಲ “ಜೀವನ ಶಿಕ್ಷಣ” ಮಾಸಪತ್ರಿಕೆ ಸಹ ಸಂಪಾದಕ ಹುದ್ದೆಯಲ್ಲಿ ಸೇವೆಗೈದ ಹಿರಿಮೆ ಡಾ.ಗುರುಮೂರ್ತಿ ಯರಗಂಬಳಿಮಠ ಅವರಿಗೆ ಸಲ್ಲುತ್ತದೆ. “ಜೀವನ ಶಿಕ್ಷಣ” ಮಾಸಪತ್ರಿಕೆಯ ಮುಖಪುಟ ವಿನ್ಯಾಸ, ಒಳಪುಟ ವಿನ್ಯಾಸ, ಇಡಿಯಾಗಿ ಪತ್ರಿಕೆಯನ್ನು ಬಹುವರ್ಣ ಮುದ್ರಣಕ್ಕೆ ಅಳವಡಿಸಿ ಮುದ್ರಿಸಿ ಹೊರತಂದು ಸ್ಪರ್ಧಾತ್ಮಕವಾಗಿ ಪತ್ರಿಕೆಯ ಘನತೆಯನ್ನು ಹೆಚ್ಚಿಸುವಲ್ಲಿ ಇವರು ವಿಶೇಷ ಕಾಳಜಿಯೊಂದಿಗೆ ನಿರಂತರ ಶ್ರಮವಹಿಸಿದ್ದಾರೆ.

(ಇವರು ಪ್ರಾಥಮಿಕ ಶಾಲಾ ಅಧ್ಯಾಪಕರಾಗಿ ಹಾಗೂ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಜಂಟಿ ಸಂಪಾದಕರಾಗಿ ಸಲ್ಲಿಸಿದ ಒಟ್ಟು ಸರಕಾರಿ ಸೇವೆಯ ಅವಧಿ: ೪೦ವರ್ಷ ೧೦ ತಿಂಗಳು ೧೪ ದಿನ)

ಸಂಸ್ಕಾರಯುತ ಕುಟುಂಬದ ಕುಡಿ:

ಇವರ ಅಜ್ಜ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರು. ಮನೆಯಲ್ಲಿ ಚರಕದಿಂದ ನೂಲನ್ನು ತಗೆಯುವ ಮೂಲಕ ಖಾದಿ ಬಟ್ಟೆಯನ್ನು ಧರಿಸುವ ಭಾರತೀಯ ಸಂಪ್ರದಾಯವನ್ನು ಜೀವನ ಪೂರ್ತಿ ಅಳವಡಿಸಿಕೊಂಡಿದ್ದರು. ಅಂತಹ ಕುಟುಂಬದ ತಂದೆ, ತಾಯಿ ಮತ್ತು ಧರ್ಮ ಗುರುಗಳ ಸಂಸ್ಕಾರದಿಂದ ಬಹುಮುಖ ವ್ಯಕ್ತಿತ್ವವನ್ನು ಸಂಪಾದಿಸಿಕೊಂಡಿರುವ ಡಾ.ಗುರುಮೂರ್ತಿ ಯರಗಂಬಳಿಮಠ ಅವರು ಉತ್ತಮ ಬರವಣಿಗೆ ಮತ್ತು ಮಾತುಗಾರಿಕೆಯನ್ನು ರೂಡಿಸಿಕೊಂಡಿದ್ದಾರೆ. ಸಮಾಜದ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದ ಅನೇಕ ಸಾಂದರ್ಭಿಕ ಮತ್ತು ವಿಶೇಷ ಲೇಖನಗಳನ್ನು ಬರೆದಿದ್ದು, ಅವು ನಾಡಿನ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಹವ್ಯಾಸೀ ಪತ್ರಕರ್ತರಾಗಿ ಪಕ್ಷ ರಾಜಕಾರಣದ ರಾಜಕೀಯ ವಾರ್ತೆಗಳು, ಕೇಂದ್ರ ಮತ್ತು ರಾಜ್ಯ ಸರಕಾರಿ ನೀತಿ-ನಿರ್ಧಾರ-ಧೋರಣೆಗಳಿಗೆ ವಿರುದ್ಧವಾದ ಸುದ್ದಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳ ಅಭಿವೃದ್ಧಿ ಸುದ್ದಿಗಳ ಬರವಣಿಗೆಯಲ್ಲಿ ಆಸಕ್ತಿಯನ್ನು ಇಟ್ಟುಕೊಂಡು ಉತ್ತಮ ಸುದ್ದಿ ಬರವಣಿಗೆಯ ಕೌಶಲವನ್ನು ರೂಢಿಸಿಕೊಂಡಿದ್ದಾರೆ. ಇವರ ಅನೇಕ ಸುದ್ದಿಗಳು ಎಲ್ಲಾ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

‘ಜೀವನ ಶಿಕ್ಷಣ’ ಮಾಸಪತ್ರಿಕೆಯಲ್ಲಿ ಡಾ.ಗುರುಮೂರ್ತಿ ಯರಗಂಬಳಿಮಠ ಅವರು ಬರೆದ “ನಿತ್ಯೋತ್ಸವ” ಹೆಸರಿನ ಅಂಕಣ ಬರಹ ಕೃತಿ ಅಚ್ಚಿನಲ್ಲಿದ್ದು, ಈ ಸಂಕಲನ ಮುಂದಿನ ದಿನಗಳಲ್ಲಿ ಓದುಗರ ಕೈ ಸೇರಲಿದೆ

ಬಹುಮುಖ ಪ್ರತಿಭೆ/ಪ್ರಶಸ್ತಿ ಗೌರವಗಳು:

೧೯೯೬ರಲ್ಲಿ ಹಾಸನದಲ್ಲಿ ಚೆಂಬೆಳಕಿನ ಕವಿ ದಿವಂಗತ ನಾಡೋಜ ಡಾ. ಚೆನ್ನವೀರ ಕಣವಿ ಅವರ ಸರ್ವಾಧ್ಯಕ್ಷತೆಯಲ್ಲಿ ಜರುಗಿದ ೬೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾವ್ಯ-ಕುಂಚ ಗೋಷ್ಠಿಯಲ್ಲಿ ಪಾಲ್ಗೊಂಡು ಕವಿತೆ ವಾಚಿಸಿರುವ ಡಾ.ಗುರುಮೂರ್ತಿ ಯರಗಂಬಳಿಮಠ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜರುಗಿದ ರಾಷ್ಟ್ರ ಮಟ್ಟದ ಇತಿಹಾಸ ಸಮ್ಮೇಳನದಲ್ಲಿ ‘ಅಮ್ಮಿನಬಾವಿ ಪಂಚಗೃಹ ಹಿರೇಮಠ : ಒಂದು ಚಾರಿತ್ರಿಕ ಅವಲೋಕನ’ ಎಂಬ ವಿಷಯವಾಗಿ ಪ್ರಬಂಧ ಮಂಡಿಸಿದ್ದಾರೆ. ಜೊತೆಗೆ ಧಾರವಾಡ ಆಕಾಶವಾಣಿ ಕೇಂದ್ರದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಡಾ. ಗುರುಮೂರ್ತಿ ಅವರು, ವಿಶೇಷವಾಗಿ ಇವರ ಹಲವಾರು ಚಿಂತನಗಳು ಗಮನಸೆಳೆದಿವೆ.

ಡಾ.ಗುರುಮೂರ್ತಿ ಯರಗಂಬಳಿಮಠ ಅವರ ಬಹುಮುಖ ವ್ಯಕ್ತಿತ್ವವನ್ನು ಪರಿಗಣಿಸಿ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಇವರನ್ನು ಹುಡುಕಿಕೊಂಡು ಬಂದಿವೆ.

ರಾಜ್ಯ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಕೊಡುಮಾಡುವ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಜಗದ್ಗುರು ಪೀಠವು ಕೊಡಮಾಡುವ ‘ಸಾಹಿತ್ಯ ಸಂವರ್ಧಕ ಪ್ರಶಸ್ತಿ ದೊರೆತಿದೆ.

ರಂಗಕಲಾವಿದ ಪಂ.ಬಸವರಾಜ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ ನೀಡುವ ‘ನಟಶೇಖರ ಪಂ.ಬಸವರಾಜ ಮನಸೂರ ಪ್ರಶಸ್ತಿ’ಗೆ ಭಾಜನರಾಗಿರುವರು.

ಬೆಂಗಳೂರಿನ “ಅಪ್ನಾದೇಶ ಬಳಗ” ಕೊಡಮಾಡುವ ‘ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ’ ಗೌರವ ಲಭಿಸಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರದ ಶ್ರೀಗಣೇಶೋತ್ಸವ ಮಂಡಳಿ ಪ್ರದಾನ ಮಾಡುವ ‘ಶಾರದಾ-ಶಾಲ್ಮಲಾ ಪ್ರಶಸ್ತಿ’ ಇವರ ಮುಡಿಗೇರಿದೆ.

ಧಾರವಾಡ ತಾಲೂಕು ಉಪ್ಪಿನಬೆಟಗೇರಿಯ ಮೂರುಸಾವಿರ ವಿರಕ್ತ ಮಠವು ದಯಪಾಲಿಸಿದ ‘ಶಿಕ್ಷಕ ಸಂಪನ್ನೂಲ ರತ್ನ’ ಗೌರವ ಸನ್ಮಾನಕ್ಕೆ ಪಾತ್ರರು.

ಹುಬ್ಬಳ್ಳಿಯಲ್ಲಿ ಜರುಗಿದ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಗೌರª ಸನ್ಮಾನ ದೊರೆತಿರುವುದು

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಜರುಗಿದ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನದಲ್ಲಿ ‘ದಸರಾ ಗೌರವ ಪುರಸ್ಕಾರ’ಕ್ಕೆ ಪಾತ್ರರಾಗಿದ್ದಾರೆ.

ಡಾ.ಗುರುಮೂರ್ತಿ ಯರಗಂಬಳಿಮಠ ಅವರು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾಗಿ ಸೇವೆಗೈದಿದ್ದಾರೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಕ್ಷಕರ ಸಂಘದ ಧಾರವಾಡ ತಾಲೂಕಾ ಪ್ರಧಾನ ಕಾರ‍್ಯದರ್ಶಿಯಾಗಿ ಸೇವೆ. ಅಖಿಲ ಕರ್ನಾಟಕ ಪ್ರಾಥಮಿಕ ಶಿಕ್ಷಕರ ಸಂಘದ ಧಾರವಾಡ ಜಿಲ್ಲಾ ಪ್ರಾಧಾನ ಕಾರ‍್ಯದರ್ಶಿಯಾಗಿ ಸೇವೆ ಗೈದಿರುವರು.

ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ಧಾರವಾಡ ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷರಾಗಿ ಸೇವೆ ಗೈದಿರುವರು.

ಕನ್ನಡ ಸಾಹಿತ್ಯ ಪರಿಷತ್ತಿನ ಧಾರವಾಡ ತಾಲೂಕಾ ಘಟಕದ ಗೌರವ ಕಾರ್ಯದರ್ಶಿಯಾಗಿ, ಧಾರವಾಡ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಪತ್ತು ಬೆಳೆಸುವ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ.

೧೯೯೩-೯೪ರಲ್ಲಿ ಜರುಗಿದ ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಧಾರವಾಡ ಜಿಲ್ಲಾ ಸಾಕ್ಷರದೀಪ ಸಮಿತಿಯ ಮಾಧ್ಯಮ ಸಂಯೋಜಕರಾಗಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ, ಧಾರವಾಡ ತಾಲೂಕಾ ಸಂಯೋಜಕರಾಗಿ ಸಕ್ರೀಯಾವಾಗಿ ಸೇವೆ ಸಲ್ಲಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಜಗದ್ಗುರು ಪೀಠದ ಗೌರವ ವಾರ್ತಾ ಕಾರ್ಯದರ್ಶಿಯಾಗಿ ಮತು ಸೇವೆಗೈದಿದ್ದಾರೆ.

ಧಾರವಾಡ ತಾಲೂಕು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀಶಾಂತೇಶ್ವರ ವಿದ್ಯಾವರ್ಧಕ ಸಂಘದ ಗೌರವ ನಿರ್ದೇಶಕರಾಗಿ ಶ್ರೀಮತಿ ಲೀಲಾವತಿ ಚರಂತಿಮಠ ಪಬ್ಲಿಕ್ ಸ್ಕೂಲ್ ಆಡಳಿತ ಮಂಡಳಿಯ ಗೌರವ ನಿರ್ದೆಶಕರಾಗಿ“ರಂಭಾಪುರಿ ಬೆಳಗು” ಮಾಸಪತ್ರಿಕೆಯ ಹಾಗೂ “ಶಿಕ್ಷಣ ಸಂಪದ” ತ್ರೈಮಾಸಿಕ ಪತ್ರಿಕೆಗಳ ಸಂಪಾದಕೀಯ ಮಂಡಳಿಯ ಸದಸ್ಯರಾಗಿ ಸೇವೆಗೈದಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯರಾಗಿರುವ ಡಾ. ಗುರುಮೂರ್ತಿ ಯರಗಂಬಳಿಮಠ ಅವರು ಕನ್ನಡ ಜಾಗೃತಿ ಕೈಂಕರ್ಯಕ್ಕೆ ಕೈಜೋಡಿಸಿದ್ದಾರೆ.

ಸಾಂದರ್ಭಿಕವಾದ ವಿವಿಧ ಸಮಿತಿಗಳ ಅಧ್ಯಕ್ಷರಾಗಿ, ಸಂಚಾಲಕರಾಗಿ, ಕಾರ್ಯದರ್ಶಿಗಳಾಗಿ, ಮಾಧ್ಯಮ ಸಲಹೆಗಾರರಾಗಿ, ಕಾರ್ಯಕಾರಿಣಿ ಸದಸ್ಯರಾಗಿ ಪಾರದರ್ಶಕ ಸೇವೆ ಒದಗಿಸಿದ್ದಾರೆ.

ಸಮಾವೇಶ, ಸಮ್ಮೇಳನ, ವಿಚಾರ ಸಂಕಿರಣ, ಕವಿಗೋಷ್ಠಿ, ಚಿಂತನಗೋಷ್ಠಿ ಮುಂತಾದ ನೂರಾರು ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ, ಉದ್ಘಾಟಕರಾಗಿ, ಅಧ್ಯಕ್ಷರಾಗಿ, ಉಪನ್ಯಾಸಕರಾಗಿ ಪಾಲ್ಗೊಂಡು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಿರೂಪಿಸಿ ಸಾರ್ವಜನಿಕ ವಲಯದ ಗಮನಸೆಳೆದಿದ್ದಾರೆ.

ಆಡಳಿತದಲ್ಲಿ ನಮ್ಮ ಜನ ಭಾಷೆ ಕನ್ನಡದ ಅನುಷ್ಠಾನದ ಮೇಲ್ವಿಚಾರಣೆಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಅಧಿಕೃತವಾಗಿ ರಾಜ್ಯಪಾಲರ ಅಂಕಿತದೊಂದಿಗೆ ರಚಿಸಿದ್ದ “ಧಾರವಾಡ ತಾಲೂಕು ಕನ್ನಡ ಜಾಗೃತಿ ಸಮಿತಿ” ಸದಸ್ಯರಾಗಿ ಹಾಗೂ “ಧಾರವಾಡ ಜಿಲ್ಲಾ ಕನ್ನಡ ಜಾಗೃತಿ ಸಮಿತಿ” ಸದಸ್ಯರಾಗಿ ಎರಡು ಅವಧಿಗೆ ಡಾ.ಗುರುಮೂರ್ತಿ ಯರಗಂಬಳಿಮಠ ಸೇವೆಸಲ್ಲಿಸಿದ್ದಾರೆ.

ರಾಜ್ಯದ ಮತ್ತು ಹೊರರಾಜ್ಯಗಳಲ್ಲಿರುವ ವೀರಶೈವ ಧರ್ಮದ ಅನೇಕ ಮಠಾಧೀಶರೊಂದಿಗೆ ಸಂಪರ್ಕ ಹೊಂದಿರುವ ಇವರು, ಶ್ರೀಗಳವರ ಜನಕಲ್ಯಾಣದ ಆಶಯಗಳ ಅನುಷ್ಠಾನಕ್ಕೆ ಶ್ರಮಿಸಿದ್ದಾರೆ.

ಗೌರವ ಡಾಕ್ಟರೇಟ್:

ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ಅತ್ಯಂತ ಆಸಕ್ತಿಯೊಂದಿಗೆ ಕ್ರಿಯಾಪ್ರೇರಕವಾಗಿ ಸಲ್ಲಿಸಿದ ಗುರುಮೂರ್ತಿ ಯರಗಂಬಳಿಮಠ ಅವರ ಬಹುಮುಖ ವ್ಯಕ್ತಿತ್ವದ ವಿಶಿಷ್ಟ ಸೇವೆಯನ್ನು ಗುರುತಿಸಿ ಇವರಿಗೆ “ಗೌರವ ಡಾಕ್ಟರೇಟ್” ಪದವಿ ನೀಡಲಾಗಿದೆ.

“ಎಲ್ಲರಿಗೂ ಶಿಕ್ಷಣ” ಎಂಬ ವಿಸ್ತೃತ ತತ್ವದ ದೃಷ್ಟಿಕೋನ ಹೊಂದಿರುವ National Council for skill development and professional Education Mission ಘಟಕವಾಗಿ ಕಾರ್ಯ ಮಾಡುತ್ತಿರುವ ಮತ್ತು ಭಾರತ ಸರಕಾರದ ನೀತಿ ಆಯೋಗದ ಅಡಿಯಲ್ಲಿ ನೋಂದಾಯಿತವಾಗಿರುವ “ನ್ಯಾಷನಲ್ ವರ್ಚುವಲ್ ಯುನಿರ್ವಸಿಟಿ ಆಫ್ ಪೀಸ್ ಆ್ಯಂಡ್ ಎಜ್ಯುಕೇಷನ್” ದಿನಾಂಕ : ೨೯-೦೨-೨೦೨೦ ರಂದು ಚೆನ್ನೈ ಮಹಾನಗರದಲ್ಲಿ ಹಮ್ಮಿಕೊಂಡಿದ್ದ ತನ್ನ ವಾರ್ಷಿಕ ವಿಶೇಷ ಘಟಿಕೋತ್ಸವದಲ್ಲಿ ಗುರುಮೂರ್ತಿ ಯರಗಂಬಳಿಮಠ ಅವರಿಗೆ “ಗೌರವ ಡಾಕ್ಟರೇಟ್” ಪದವಿಯನ್ನು ಪ್ರದಾನ ಮಾಡಿ ಗೌರವಿಸಿರುವುದು ಇವರ ಜನಪರ ಮತ್ತು ಪಾರದರ್ಶಕ ವ್ಯಕ್ತಿತ್ವವನ್ನು ಸಾಕ್ಷೀಕರಿಸುತ್ತದೆ.

ಕೌಟುಂಬಿಕ ಬದುಕು:

ಯರಗಂಬಳಿಮಠರ ಪತ್ನಿ ಶೋಭಾ ಕೂಡ ಆರೋಗ್ಯ ಇಲಾಖೆಯಲ್ಲಿ ಸೇವೆಗೈದವರು. ಮೂರು ಜನ ಮಕ್ಕಳು. ಹಿರಿಯವಳು ಮಹಾಲಕ್ಷ್ಮಿ ಎಂ. ಎ ಬಿ. ಈಡಿ. ಪದವೀಧರೆ. ವಿವಾಹಿತೆ.ಇಬ್ಬರೂ ಗಂಡು ಮಕ್ಕಳು ಮೊದಲನೆಯವ ವೀರೇಶಕುಮಾರ ಎಂ. ಎಸ್ಸಿ ಯಲ್ಲಿ ಇಲೆಕ್ಟ್ರಾನಿಕ್ ಮೀಡಿಯ ಓದಿ ಸದ್ಯ ಟಾಟಾ ಮೋಟಾರ್ಸ್ ನಲ್ಲಿ ಸೇವೆಸಲ್ಲಿಸುತ್ತಿದ್ದು ಇನ್ನೊಬ್ಬ ನಂದೀಶಕುಮಾರ ವಿಡಿಯೋ ಮತ್ತು ಪೋಟೋಗ್ರಾಪರ್ ಆಗಿ ವೃತ್ತಿ ಕೈಗೊಂಡಿದ್ದು ಗಂಡು ಮಕ್ಕಳು ಕೂಡ ವಿವಾಹಿತರು. ತಮ್ಮ ನಿವೃತ್ತಿ ಜೀವನದ ಮೊದಲು ತಮ್ಮ ಮಕ್ಕಳಿಗೆ ವಿವಾಹ ಮಾಡಿ ಬದುಕಿನ ದಾರಿ ತೋರುವ ಜವಾಬ್ದಾರಿ ತಂದೆ ತಾಯಿ ಸ್ಥಾನವನ್ನು ಈ ದಂಪತಿಗಳು ತುಂಬಿದ್ದು ಸುಖೀ ಕುಟುಂಬ ಇವರದು.

ಇಂತಹ ಓರ್ವ ಶಿಕ್ಷಕ ಸಾಹಿತಿ ಮೇ ೩೧ ರಂದು ಸೇವೆಯಿಂದ ನಿವೃತ್ತರಾಗುತ್ತಿರುವರು. ತನ್ನಿಮಿತ್ತ ಇವರ ಬೀಳ್ಕೊಡುಗೆ ಕಾರ್ಯಕ್ರಮ ಕೂಡ ಸಂಜೆ ಜರುಗುತ್ತಿದ್ದು ಇವರ ಆಪ್ತ ಬಳಗವೆಲ್ಲ ಇಲ್ಲಿ ಸೇರುತ್ತಿದೆ., ಇವರ ಸೇವೆಯ ನಂತರದ ದಿನಗಳು ಕೂಡ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಈ ಸಂದರ್ಭದಲ್ಲಿ ಆಶಿಸುವೆನು.ಗುರುಮೂರ್ತಿ ಯರಗಂಬಳಿಮಠರ ಸಂಪರ್ಕ ಸಂಖ್ಯೆ 9945801422


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ

- Advertisement -
- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!