spot_img
spot_img

ಕವಿಯತ್ರಿ ಡಾ. ಪ್ರೇಮಾ ಯಾಕೊಳ್ಳಿ

Must Read

- Advertisement -

ಕೋಳಿ ಕೂಗುವುದರೊಳಗೆ ಒಲೆ ಹೊತ್ತಿಸಬೇಕು
ಅಂಗಳದ ಕಸ ಗುಡಿಸಬೇಕು
ರಂಗೋಲಿ ಹಾಕಿ,
ಎದ್ದ ಯಜಮಾನರಿಗೆ ಚಹಾ ಕೊಡಬೇಕು (ಎರಡು ಸಲ)
ಅಯ್ಯೋ! ತಡವಾಯಿತು ಎನ್ನುತ್ತ ಹಿಟ್ಟು ನಾದಿ
ಚಪಾತಿಯೋ ರೊಟ್ಟಿಯೋ ಎರಡೆರಡು ಲಟ್ಟಣಿಸಿ (ಎರಡು ಸಲ)
ನಿದ್ದೆ ಹೊಡೆಯುವ ಮಕ್ಕಳನ್ನೆಬ್ಬಿಸಿ, ಮುಖಕ್ಕೆ ನೀರು ಗೊಜ್ಜಿ
ಬಚ್ಚಲಕೆ ನುಗ್ಗಿಸಬೇಕು.
ಪೇಪರು ಹಿಡಿದ ರಾಯರದು ಮುಗಿಯಿತೇನೇ.?
ಎಂಬ ವರಾತ
ಏನಾದರೂ ತಿರುಗಿ ಅನ್ನಲಾದೀತೆ.?
ಬಾಗಿಲಿಗಿಟ್ಟ ತುಂಬಿದ ಸೇರು ಒದ್ದು ಒಳಬಂದವಳು,
ಧರ್ಮೇಚ ಅರ್ಥೇಚ ಪಾಲಿಸುತ್ತೇನೆ ಎಂದು
ಮಾತು ಕೊಟ್ಟವಳು

ಇದು ಡಾ.ಪ್ರೇಮಾ ಅವರ “ಹೇಗೆ ಬರೆಯಲಿ” ಕವಿತೆಯ ಲಹರಿ. ಈ ಕವಿತೆಯನ್ನು ಓದುತ್ತ ಹೊರಟರೆ ದಿನನಿತ್ಯದ ಅವರ ದೈನಂದಿನ ಬದುಕು ಆರಂಭವಾಗುವುದನ್ನು ಎಳೆ ಎಳೆಯಾಗಿ ನೋಡುತ್ತ ಸಾಗಬಹುದು.

ಗಂಡ ಹೆಂಡತಿ ಇಬ್ಬರೂ ನೌಕರಿಯಲ್ಲಿದ್ದರೆ ಹೆಂಡತಿಯ ಸ್ವಗತವೇನು.? ಎಂಬುದು ಈ ಕವಿತೆಯಲ್ಲಿ ಅಡಕವಾಗಿರುವುದು.ಇದು ನೌಕರರ ಬದುಕು ಕಟ್ಟಿಕೊಟ್ಟ ರೀತಿಯಾದರೆ ರೈತ ಮಹಿಳೆಯ ಪಾಡನ್ನು ನಮ್ಮ ಜನಪದರು ಕೂಡ ಸಾಂಸ್ಕೃತಿಕ ನೆಲೆಯಲ್ಲಿ ಕಟ್ಟಿಕೊಟ್ಟಿರುವರು.

- Advertisement -

ಬಹಳ ಸೌಮ್ಯ ಸ್ವಭಾವದ ಗೃಹಿಣಿ ಡಾ.ಪ್ರೇಮಾ ಯಾಕೊಳ್ಳಿ. ಹೆಚ್ಚು ಮಾತನಾಡರು. ಆದರೆ ಮನೆಗೆ ಹೋದರೆ ಸಾಕು ಡಾ.ವೈ.ಎಂ.ಯಾಕೊಳ್ಳಿಯವರೊಡನೆ ಮಾತನಾಡುತ್ತ ಕುಳಿತುಕೊಳ್ಳುವಷ್ಟರಲ್ಲಿ ಅಡುಗೆ ಮನೆಯಿಂದ ತಿನ್ನಲು ತಿನಿಸು.

ಚಹಾ ಕಾಫಿ ತಂದು ಕೊಟ್ಟು ಯೋಗಕ್ಷೇಮ ವಿಚಾರಿಸುವ ಅವರ ಸ್ವಭಾವ ನಿಜಕ್ಕೂ ಅಭಿನಂದನಾರ್ಹ. ಅದು ಹೊಸಟ್ಟಿ ಕುಟುಂಬದ ಕುಡಿ. ಮನೆತನದ ಸಂಸ್ಕೃತಿ ಎಲ್ಲಿಯೂ ಬಿಡದಂತೆ ಚಾಚೂ ತಪ್ಪದೇ ಅನುಸರಿಸಿಕೊಂಡಿರುವ ರೀತಿ. ನನಗೆ ಹೊಸಟ್ಟಿ ಗುರುಗಳು ಭಾರತ ಜ್ಞಾನ ವಿಜ್ಞಾನ ಸಮಿತಿಯ ಮೂಲಕ ಪರಿಚಿತರು.ಗುರುಗಳ ಸ್ವಭಾವ ಮನೆಯ ಮಕ್ಕಳಿಗೂ ಬಂದಿರುವುದು.

- Advertisement -

ಮಿತಭಾಷಿ ಸಹೋದರಿ ಡಾ.ಪ್ರೇಮಾ ಯಾಕೊಳ್ಳಿಯವರ ಕುರಿತು ಬರಹ ರೂಪಿಸುತ್ತೇನೆ ಎಂದಾಗ ಡಾ.ವೈ.ಎಂ.ಯಾಕೊಳ್ಳಿ ಗುರುಗಳು ತಮ್ಮ ಪ್ರೀತಿಯ ಮಡದಿಯ ಕುರಿತು ಮಾಹಿತಿಯನ್ನು ಒದಗಿಸಿದರು. ಅವರ ಪರಿಚಯವನ್ನು ಅವರ ಕವನದ ಮೂಲಕ ಮಾಡುವುದೇ ಸೂಕ್ತ ಎನ್ನುತ್ತ ಆ ಕವನದ ಸಾಲುಗಳ ಮೂಲಕ ಅವರ ಬದುಕು ನನ್ನ ಅಕ್ಷರಗಳಲ್ಲಿ ಒಡಮೂಡಿಸಿರುವೆ.

ಸಾಧಕರಲ್ಲಿ ಎರಡು ವಿಧ. ಸದಾ ಸುದ್ದಿಯಲ್ಲಿರುವವರು ಒಂದು ವರ್ಗವಾದರೆ ತಮ್ಮ ಪಾಡಿಗೆ ತಾವು ಸಾಧನೆ ಮಾಡುತ್ತ , ತಾವು ಮಾಡುವ ಸಾಧನೆಗಿಂತ ಬದುಕು ಮುಖ್ಯ ಎಂದು ಭಾವಿಸುತ್ತ ಎಲೆ ಮರೆಯ ಕಾಯಿಯಂತೆ ಇರುವವರದು ಎರಡನೆಯ ವರ್ಗ , ಆ ಎರಡನೆಯ ವರ್ಗಕ್ಕೆ ಸೇರಿದವರು ಡಾ. ಪ್ರೇಮಾ ಯಾಕೋಳ್ಳಿ.

ಉಪನ್ಯಾಸಕ ವೃತ್ತಿ, ಓದಿದ್ದು ಕನ್ನಡ ಎಂ.ಎ.ಪಿಎಚ್ ಡಿ , ಮನೆಯಲ್ಲಿ ಸಾಕಷ್ಟು ಸಾಹಿತ್ಯ ಪರಿಸರ , ಆದರೆ ಅದಾವುದನ್ನೂ ಗಮನಿಸದೇ ತಾನಾಯಿತು, ತಮ್ಮ ಉದ್ಯೋಗ, ಕುಟುಂಬವಾಯಿತು, ಬಿಡುವು ಸಿಕ್ಕರೆ ಸಾಹಿತ್ಯ ರಚನೆ, ಇರದಿದ್ದರೆ ಬೇಡ ಎಂಬಂತೆ ಇರುವವರು ಡಾ. ಪ್ರೇಮಾ ಯಾಕೊಳ್ಳಿ ಯವರು.

ಸವದತ್ತಿ ಕುಮಾರೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕನ್ನಡ ಉಪನ್ಯಾಸಕಿಯರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಪ್ರೇಮಾ ಯಾಕೊಳ್ಳಿಯವರು ಕವಯಿತ್ರಿ, ಸಂಶೋಧಕಿ, ಬರಹಗಾರ್ತಿ. ಅಲಲ್ಲಿ ಬಿಡಿಲೇಖನಗಳು, ಬಿಡಿಕವಿತೆಗಳನ್ನು ಪ್ರಕಟಿಸಿರುವ ಇವರು ತಮ್ಮ ಒಂದೆ ಒಂದು ಸಂಶೋಧನ ಮಹಾಪ್ರಬಂಧವನ್ನು ಪ್ರಕಟ ಮಾಡಿದ್ದಾರೆ. ಸವದತ್ತಿ ತಾಲೂಕಾ ಸಾಹಿತ್ಯ ಸಮ್ಮೇಳನ ,ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಇನ್ನೂ ಅನೇಕ ಕಡೆ ತಮ್ಮ ಕವಿತೆಗಳನ್ನು ವಾಚನ ಮಾಡಿದ್ದಾರೆ.

ಸಾಹಿತ್ಯ ರಚನೆ ಇವರಿಗೆ ಪೂರ್ಣ ಪ್ರಮಾಣದ ಕಾರ್ಯವಲ್ಲ. ಸುಮ್ಮನೆ ಸಮಯವಿದ್ದಾಗ ಪ್ರೀತಿಯಿಂದ ಬರೆಯುವ ಹವ್ಯಾಸ. ಎಲ್ಲದಕ್ಕಿಂತ ಮೊದಲು ತನ್ನ ಮನೆ, ತನ್ನ ನೌಕರಿ ಎಂದು ನಂಬುವ ಅವರು ಹೊರಗೆ ಬರುವದೇ ಕಡಿಮೆ. ವೇದಿಕೆ ಹತ್ತುವದು ಅನಿವಾರ್ಯವಾದಾಗ ಮಾತ್ರ ವೇದಿಕೆಯೇರುತ್ತಾರೆ.

ಅಯ್ಯಾ ಆತ್ಮ ಸಂಗಾತ
ಅಕ್ಕನಂತೆ. . . .
ಕಾಣದ ಚನ್ನಮಲ್ಲಿಕಾರ್ಜುನನ
ಹುಡುಕುತ್ತ. . .
ಕದಳಿಯನು ಅಲೆಯುವಷ್ಟು
ಸಮಾಧಾನಿಯಲ್ಲ ನಾನು.
ಕಂಡ ನಿನ್ನನ್ನೇ ಕಣ್ಣಂಚಿನೊಳಗೆ
ಕಾಯಲು ಹರಸಾಹಸ ಪಡುವ
ನನಗೆ, ಕಾಣದ ‘ಸಂಗಾತ’ನ
ಕಾಣುವ ಹಂಬಲವಿಲ್ಲ

ಈ ಸಾಲುಗಳು ಅವರ ಆತ್ಮ ಸಂಗಾತ ಕವಿತೆಯಲ್ಲಿನವು. ಸರಸವೇ ಜನನ ವಿರಸವೇ ಮರಣ.ಸಮರಸವೇ ಜೀವನ ಎಂಬ ಬೇಂದ್ರೆ ಅಜ್ಜನ ಉಕ್ತಿಯಂತೆ. ಪ್ರೀತಿಯ ಪತಿದೇವರಲ್ಲಿ ಅನುರಕ್ತೆಯಾದ ಮಡದಿ ಹಂಬಲಿಸುವ ಪರಿ. ಕಣ್ಮುಂದೆ ದೇವರು ಕೊಟ್ಟಿರುವ ಬದುಕನ್ನು ಸರಿಯಾಗಿ ಆಸ್ವಾದಿಸುವ ರೀತಿ.ಮನದಾಳದೊಳಗಿನಿಂದ ಮೂಡಿ ಬಂದಿರುವ ಅಕ್ಷರಗಳು. ದೈನಂದಿನ ಬದುಕಿಗೆ ಹಿಡಿದ ಕೈಗನ್ನಡಿ.

ಮತ್ತೆ ಮತ್ತೆ ಇಂತಹ ಸಾಲುಗಳನ್ನು ಓದುವಾಗ ಬೇಂದ್ರೆ ಅಜ್ಜ ನನಗೆ ನೆನಪಾಗುತ್ತಾನೆ. ಒಲವೇ ನಮ್ಮ ಬದುಕು ಎಂಬ ಬೇಂದ್ರೆಯವರ ಕವನದಂತೆ ನಿಜ ಬದುಕನ್ನು ಡಾ.ಪ್ರೇಮಾ ಯಾಕೊಳ್ಳಿಯವರು ತಮ್ಮ ಕವನಗಳಲ್ಲಿ ಬಿಂಬಿಸಿರುವರು. ಜೊತೆಗೆ ಅಷ್ಟೇ ಅಲ್ಲ ಅವರ ಕವನಗಳಲ್ಲಿ ವಿಡಂಬನೆಯೂ ಇದೆ.ಅದನ್ನು ನಾವು ದ್ರೌಪತಿಯ ಕುರಿತು ಕವನದಲ್ಲಿ ನೋಡಬಹುದು.

“ಹೇಗೆ ಸಹಿಸಿದೆಯಾ.? ತಾಯಿ ಆ ಐವರನು.” ಎಂಬ ಕವಿತೆ ಓದುವಾಗ ಇವರ ಒಳನೋಟ ಬಹಳ ಸೂಕ್ಷ್ಮತೆಯನ್ನು ಗೃಹಿಸಿರುವುದನ್ನು ಕಾಣಬಹುದು.ಅಂದರೆ ಕವಿತೆ ಕೇವಲ ನಾಲ್ಕು ಸಾಲು ಪೋಣಿಸಿದರೆ ಮುಗಿಯಿತೆಂದಲ್ಲ.ಅದು ಅನುಭವದ ಮೂಸೆಯಿಂದ ಮೂಡಿ ಬರಬೇಕು ಎಂಬುದನ್ನು ಅವರ ಕವನಗಳಲ್ಲಿ ಕಾಣಬಹುದು.

ಮನೆತನದ ಹಿನ್ನಲೆ

ಡಾ. ಪ್ರೇಮಾ ಯಾಕೊಳ್ಳಿಯವರು ಜನಿಸಿದ್ದು ಸವದತ್ತಿ ತಾಲೂಕಿನ ಹಿರೇಕುಂಬಿಯಲ್ಲಿ ಅವರ ತಂದೆಯವರು ಅರ್ಜುನ ಹೊಸಟ್ಟಿ ಪ್ರೌಢಶಾಲಾ ಶಿಕ್ಷಕರಾಗಿದ್ದರು. ತಾಯಿ ಶ್ರೀಮತಿ ಪಾರ್ವತಿಯವರು. ಮೊದಲ ಕೆಲವು ವರ್ಷಗಳ ಪ್ರಾಥಮಿಕ ಶಾಲಾ ಶಿಕ್ಷಣ ಹಿರೇಕುಂಬಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆರಂಭಗೊಂಡಿತು.

ಮೊದಲಿನಿಂದಲೂ, ತವರು ಮನೆಯಿಂದಲೂ ಅವರದು ಸುಶೀಕ್ಷಿತ ಕುಟುಂಬ. ಅವರ ತಂದೆಯವರು ಶ್ರೀ ಎ. ಎಚ್. ಹೊಸಟ್ಟಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರು. ಮೊದಲಿನಿಂದಲೂ ವಿದ್ಯಾಭ್ಯಾಸವನ್ನು ಅತ್ಯಂತ ಪ್ರಾಮಾಣಿಕತೆಯಿಂದ ಪೂರ್ಣಗೊಳಿಸುತ್ತ ಬಂದವರು ಡಾ ಪ್ರೇಮಾ ಅವರು.

ಮೊದಲು ಅವರ ತಂದೆಯವರಿಗೆ ನೌಕರಿ ಹಿರೇಕುಂಬಿಯಲ್ಲಿದ್ದಾಗ ಪ್ರಾಥಮಿಕ ಶಿಕ್ಷಣ ಹಿರೇಕುಂಬಿಯಲ್ಲಿ ಕೆಲವು ವರ್ಷ ಸಾಧ್ಯವಾಯಿತು. ಅವರ ತಂದೆಯವರಿಗೆ ಸವದತ್ತಿಯ ಶ್ರೀ ಗವಿಸಿದ್ದಪ್ಪ ಪ್ರೌಢಶಾಲೆಗೆ ಮುಖ್ಯೋಪಾಧ್ಯಾಯರಾಗಿ ವರ್ಗವಾದಾಗ ಈ ಕುಟುಂಬವೂ ಸವದತ್ತಿಗೆ ಬಂದ ಕಾರಣ ಸವದತ್ತಿಯ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಬಾಲಿಕೆಯರ ವಿಭಾಗ) ಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು, ಮುಂದೆ ಪ್ರೌಢಶಾಲಾ ಶಿಕ್ಷಣವನ್ನು ಸವದತ್ತಿಯ ಗವಿಸಿದ್ದಪ್ಪ ಬೆಳವಡಿ ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ ಎರಡು ವರ್ಷಗಳ ಪಿಯುಸಿಯನ್ನು ಎಸ್. ಕೆ. ಪದವಿಪೂರ್ವ ಕಾಲೇಜದಲ್ಲಿಯೇ ಪೂರ್ಣಗೊಳಿಸಿದರು.

ವೈವಾಹಿಕ ಬದುಕು

1995 ರಲ್ಲಿ ಪಿಯು ತರಗತಿಗಳು ಮುಗಿದಾಗ ಅವರ ಬದುಕು ಬೇರೊಂದು ತಿರುವು ತಗೆದುಕೊಂಡಿತು. ಈಗ ನಾಡಿನ ಹಿರಿಯ ಸಾಹಿತಿಗಳೆಂದೂ ಪ್ರಖ್ಯಾತ ವಾಗ್ಮಿಗಳೆಂದು ಹೆಸರಾದ ಡಾ.ವೈ.ಎಂ.ಯಾಕೊಳ್ಳಿಯವರನ್ನು ಮದುವೆಯಾಗುವ ಅವಕಾಶ ದೊರಕಿತು. ಆಗಿನ್ನೂ ಅವರಿಗೆ ಹದಿನೆಂಟರ ವಯಸ್ಸು. ಮನೆಗೆ ಮೊದಲ ಮಗಳಾದ್ದರಿಂದ ತಂದೆಯವರು ನೌಕರಿ ಇರುವ ಅಳಿಯ ಸಿಕ್ಕಿದ್ದಾನೆಂದು ಮದುವೆ ಮಾಡಿದರು. ಇದು ಕೂಡ ಅವರ ಓದಿಗೆ ಮತ್ತೊಂದು ಮಗ್ಗಲನ್ನು ನೀಡಿತೆಂದರೆ ಅತಿಶಯೋಕ್ತಿಯಾಗಲಾರದು ಡಾ.ವೈ.ಎಂ.ಯಾಕೊಳ್ಳಿಯವರು ತಮ್ಮ ಪತ್ನಿಯ ಓದಿಗೆ ನೀರೆರೆದು ಪೋಷಣೆ ಮಾಡಿದರು.

ಕೌಟುಂಬಿಕ ಬದುಕಿನೊಂದಿಗೆ ವಿದ್ಯಾಭ್ಯಾಸ

ಆದರೆ ಓದಬೇಕೆನ್ನುವ ಹವ್ಯಾಸವಿರುವವರು ಯಾವುದೇ ಸಂದರ್ಭದಲ್ಲಿ ಹಿಂದೆ ಸರಿಯುವದಿಲ್ಲ. ಒಂದು ವೇಳೆ ಅಡೆ ತಡೆ ಬಂದರೂ ಅದು ತಾತ್ಕಲಿಕ ಅಷ್ಟೇ. ಪ್ರೇಮಾ ಯಕೊಳ್ಳಿಯವರು ಮದುವೆಯಾದಾಗ ಅವರ ಓದಿದ್ದು ಕೇವಲ ಪಿಯುಸಿ ದ್ವಿತೀಯ ವರ್ಷ ಮಾತ್ರ. ನಂತರ ಅವರು ಬಿ .ಎ. ಪದವಿಗೆ ಸವದತ್ತಿಯ ಬೆಳ್ಳುಬ್ಬಿ ಪದವಿ ಮಹಾವಿದ್ಯಾಲಯಕ್ಕೆ ಪ್ರವೇಶ ಪಡೆದರು, ಮದುವೆಯಾಗಿದ್ದರೂ ಓದಿನ ಪ್ರಕ್ರಿಯೆ ಮುಂದುವರೆಯಿತು.

ನಡು ನಡುವೆ ಸಾಂಸಾರಿಕ ತಾಪತ್ರಯದಿಂದಾಗಿ ಮೂರು ವರ್ಷದ ಡಿಗ್ರಿ ನಾಲ್ಕು ವರ್ಷ ತಗೆದುಕೊಂಡಿತು. ಒಂದು ವರ್ಷದ ಪರಿಕ್ಷೆ ಬಿಡಬೇಕಾಗಿ ಬಂದಿತು. ಆದರೂ ಹಿಂಜರಿಯದೇ ಪ್ರಥಮ ವರ್ಗದಲ್ಲಿ ಉತ್ತೀರ್ಣರಾದರು. ಆಗ ಬೆಳ್ಳುಬ್ಬಿ ಮಹಾವಿದ್ಯಾಲಯದ ಪ್ರಾಚಾರ್ಯರೂ ಕನ್ನಡ ವಿಭಾಗದ ಮುಖ್ಯಸ್ಥರೂ ಆಗಿದ್ದ ಡಾ. ಪಮ್ಮಾರ ಗುರುಗಳ ಮತ್ತು ಇನ್ನಿತರ ಪ್ರಾಧ್ಯಾಪಕರ ಸಹಕಾರ ಮತ್ತು ಮಾರ್ಗದರ್ಶನ ಇದಕ್ಕೆ ಕಾರಣ ಎಂದು ಅವರು ನೆನಯುತ್ತಾರೆ.

ಯಾಕೊಳ್ಳಿ ದಂಪತಿಗೆ ಇಬ್ಬರು ಮಕ್ಕಳೂ ಆದರು. ಅಷ್ಟೊತ್ತಿಗೆ ಮಕ್ಕಳು ಒಂದೆರಡು ವರ್ಷದವರಾದ್ದರಿಂದ ತಂದೆಯವರ ಕುಟುಂಬದ ಸಹಾಯದಿಂದಾಗಿ ಮಕ್ಕಳನ್ನು ಪಾಲನೆ ಮಾಡುವದು ಅಷ್ಟೇನೂ ಕಷ್ಟವಾಗಲಿಲ್ಲ. ಕಾರಣ ಎಂ.ಎ ಸ್ನಾತಕೋತ್ತರ ಪದವಿಗೆ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದರು.

ಡಾ ವೈ.ಎಂ.ಯಾಕೊಳ್ಳಿಯವರ ಪಿ.ಎಚ್‍ಡಿ ಅಧ್ಯಯನ ಅಲ್ಲಿಯೇ ನಡೆದಿತ್ತು. ಹೀಗಾಗಿ ಅಲ್ಲಿಯೂ ಡಾ ಬಿ.ಆರ್ ಹಿರೇಮಠ ಗುರುಗಳು , ಆಗ ಕನ್ನಡ ವಿಭಾಗದ ಮುಖ್ಯಸ್ಥರೂ ಆಗಿದ್ದ ಡಾ.ಎ. ಮುರಿಗೆಪ್ಪ ಸರ್ ಅವರ ಮಾರ್ಗದರ್ಶನಗಳಿಂದಾಗಿ ಪ್ರವೇಶ ಪ್ರಕ್ರಿಯೆ ಸರಳವಾಗಿ ನಡೆಯಿತು.

ಎರಡು ವರ್ಷ ಪ್ರತಿದಿನ ಮಕ್ಕಳನ್ನು ತಂದೆ ತಾಯಿಯ ಮನೆಯಲ್ಲಿ ಬಿಟ್ಟು ಸವದತ್ತಿಯಿಂದ ಧಾರವಾಡ ವಿಶ್ವವಿದ್ಯಾಲಯಕ್ಕೆ ಪ್ರಯಾಣ ಮಾಡುತ್ತಲೇ ಓದು ಪೂರ್ಣಗೊಳಿಸಿದರು. ಅಲ್ಲಿಯೂ ಪ್ರಥಮವರ್ಗ ದೊರೆಯಿತು.

ಡಾ.ಬಿ.ಆರ್.ಹಿರೇಮಠ ಸರ್ ಅವರು “ಪಿ. ಎಚ್‍ಡಿ ಒಂದು ಮಾಡಿ ಮುಗಿಸಿ ಬಿಡಮ್ಮ “ ಎಂದಾಗ ಹಿಂದೆ ಸರಿಯಲಿಲ್ಲ. ಅವರದೇ ಮಾರ್ಗದರ್ಶನದಲ್ಲಿ ‘ಕನ್ನಡ ಯುದ್ದೋತ್ತರ ಮಹಾಭಾರತ ಕನ್ನಡ ಕಾವ್ಯಗಳು’ ಎಂಬ ವಿಷಯವನ್ನು ಆರಿಸಿಕೊಂಡು ಮುಂದಿನ ನಾಲ್ಕು ವರ್ಷಗಳ ಕಾಲ ನಿರಂತರ ಅಧ್ಯಯನ ಮಾಡಿ ಸಂಶೋದನ ಮಹಾ ಪ್ರಬಂಧ ಪೂರ್ಣಗೊಳಿಸಿದರು.

‘ಡಾ .ಬಿ.ಆರ್ ಹಿರೇಮಠ ಸರ ಅವರಂಥ ಮಾತೃ ಹೃದಯದ ಮಾರ್ಗದರ್ಶಕರು ದೊರೆತದ್ದು ನನ್ನ ಪುಣ್ಯ’ ಎಂದು ಅವರನ್ನು ಡಾ. ಪ್ರೇಮಾ ಯಕೊಳ್ಳಿ ಮತ್ತು ಯಕೊಳ್ಳಿ ದಂಪತಿಗಳು ನೆನಯುತ್ತಾರೆ. ಸರ್ ಅವರ ಶಿಷ್ಯವಾತ್ಸಲ್ಯ ಹಾಗಿತ್ತು. ಅದರೆ ದುರ್ದೈವ. ಸರ್ ಇರುವಾಗಲೇ ಸಂಶೋಧನ ಪ್ರಬಂಧ ವಿಶ್ವವಿದ್ಯಲಯಕ್ಕೆ ಸಾದರಪಡಿಸುವದಾಗಲಿಲ್ಲ.

ಅವರ ಅಗಲಿಕೆಯ ನಂತರ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ವಿದ್ಯಾಗುರುಗಳು ಆದ ಡಾ. ಮಧು ವೆಂಕಾರೆಡ್ಡಿ ಮೆಡಮ್ ಅವರ ಮಾರ್ಗದರ್ಶನದಲ್ಲಿ ಪ್ರಬಂದ ಸಾದರ ಪಡೆಸಿ 2008 ರಲ್ಲಿ ಡಾಕ್ಟರೇಟ್ ಪದವಿ ಪಡೆದರು.

ಮದುವೆಯಾದ ಗೃಹಿಣಿಯೊಬ್ಬಳು ಉಳಿದ ಪರೀಕ್ಷೆಗಳಿಗೆ ಓದಿ ಬರೆಯುವದೇ ಕಷ್ಟದ ಸಂಗತಿಯಾದಾಗ ಡಾಕ್ಟರೇಟ್ ಮಾಡಿ ಮಹಾಪ್ರಬಂದ ಸಾದರ ಪಡಿಸುವದು ಸಾಮಾನ್ಯ ಸಂಗತಿಯಲ್ಲ.

ಮನೆಯವರ ಸಹಕಾರವಿರದಿದ್ದರಂತೂ ಅದು ಅಸಾಧ್ಯವೇ. ಆದರೆ ಸ್ವತ: ಸಾಹಿತ್ಯಾಸಕ್ತರೂ ಸಂಶೋಧನೆ ಮಾಡಿದವರೂ ಆದ ಗಂಡ, ಮುಖ್ಯೋಪಾಧ್ಯಾಯರಾದ ತಂದೆ , ಸಹಕಾರ ಕೊಡುವ ತಾಯಿ ಸಹೋದರ ಸಹೋದರಿಯರ ಬೆಂಬಲದಿಂದ ಇದು ಸಾಧ್ಯವಾಯಿತು.

ಏನೇ ಇದ್ದರೂ ಎರಡು ಮಕ್ಕಳನ್ನು ಸಾಕುತ್ತಲೆ ಒಬ್ಬ ಸಂಸಾರಸ್ಥ ಮಹಿಳೆಯೊಬ್ಬಳು ಎಂ.ಎ. ಪಿ.ಎಚ್‍ಡಿ ಪದವೀಧರೆಯಾದದ್ದು ಒಂದು ಸಾಹಸದ ಕಾರ್ಯವೆನ್ನಬೇಕು.

‘ಕನ್ನಡ ಯುದ್ದೋತ್ತರ ಮಹಾಭಾರತ ಕನ್ನಡ ಕಾವ್ಯಗಳು’ ಅವರ ಸಂಶೋದನೆಗೆ ಸ್ವೀಕರಿಸಿದ ವಿಷಯ. ಕನ್ನಡದಲ್ಲಿ ಮಹಾಭಾರತವನ್ನು ಹಲವಾರು ಕವಿಗಳು ಬರೆದಿದ್ದಾರೆ. ಆದರೆ ಅವೆಲ್ಲ ಮಹಾಭಾರತ ಯುದ್ಧ ದವರೆಗಿನ ಮಹಾಕಾವ್ಯಗಳು. ಪಂಪ, ರನ್ನ ಮತ್ತು ಕುಮಾರವ್ಯಾಸ ಇವರೆಲ್ಲ ಬರೆದದ್ದು ಮಹಾಭಾರತ ಯುದ್ಧ ಪೂರ್ವ ಕಥೆಯನ್ನೇ.

ಯುದ್ಧಾನಂತರದ ಪಂಡವರ ಕಥೆಯನ್ನು ಕುಮಾರವ್ಯಾಸನ ನಂತರ ಬಂದ ಕವಿಗಳು ಬರೆದರು. ಆದರೆ ಆ ಕುರಿತ ಕಾವ್ಯಗಳ ಹೆಸರೂ ಕೆಲವರು ಕೇಳಿರಲಿಲ್ಲ. ಅಂಥ ಯಾರ ಕಣ್ಣಿಗೂ ಬೀಳದ ವಿಷಯವನ್ನು ಮಾರ್ಗದರ್ಶಕರು ನೀಡಿದಾಗ ತಿಮ್ಮಣ್ಣ ಕವಿಯ ಭಾರತ, ಶ್ರೀನಿವಾಸ ಕವಿಯ ಸ್ತ್ರೀಪರ್ವ, ಪರಮದೇವ ಕವಿಯ ತುರಂಗ ಭಾರತ, ಹೆಳವನಕಟ್ಟೆ ಗಿರಿಯಮ್ಮನ ಚಂದ್ರಹಾಸ ಕಾವ್ಯ, ಲಕ್ಷ್ಮೀಶ ಕವಿಯ ಜೈಮಿನಿ ಭಾರತ ಇವೆಲ್ಲ ಯುದ್ಧೋತ್ತರ ಮಹಾಭಾರತ ಕಾವ್ಯಗಳು.

ಇವುಗಳನ್ನು ಇಟ್ಟುಕೊಂಡು 450 ಪುಟಗಳ ಒಂದು ಮಹಾಪ್ರಬಂಧವನ್ನು ಅವರು ರಚಿಸಿದ್ದಾರೆ ಇವುಗಳಲ್ಲಿ ಜೈಮಿನಿ ಭಾರತ ವನ್ನು ಕುರಿತು ಕನ್ನಡದಲ್ಲಿ ಅಧ್ಯಯನಗಳಾಗಿವೆ ಮತ್ತು ಡಾ.ಕಮಲಾ ಹಂಪನಾ ಅವರು ತುರಂಗ ಭಾರತವನ್ನು ಕುರಿತು ಅಧ್ಯಯನ ಮಾಡಿದ್ದು ಬಿಟ್ಟರೆ ಇನ್ನುಳಿದ ಕೃತಿಗಳ ಅಧ್ಯಯನ ಇಲ್ಲಿ ಮೊದಲ ಬಾರಿಗೆ ನಡೆದಿದೆ.

ಅದರೆ ಅವುಗಳನ್ನೆಲ್ಲ ಯುದ್ದೋತ್ತರ ಮಹಾಭಾರತಗಳೆಂದು ಗುರುತಿಸಿ ಅಲ್ಲಿನ ವಿಶೇಷಾಂಶಗಳನ್ನು ಗುರುತಿಸಿದ್ದು ಡಾ.ಪ್ರೇಮಾ ಯಾಕೊಳ್ಳಿಯವರ ಅದು ಬೆಂಗಳೂರಿನ ಕಿಕ್ಕೇರಿ ಪ್ರಕಾಶನದಿಂದ ಮುದ್ರಣ ಕೂಡ ಆಗಿದೆ.

ಈ ಕೃತಿಗೆ ಮುನ್ನುಡಿ ಬರೆದಿರುವ ಹಿರಿಯ ವಿದ್ವಾಂಸರಾದ ಡಾ .ಸಿಕೆ. ನಾವಲಗಿಯವರು ಸಂಶೋಧಕರ ಆಳವಾದ ಅಧ್ಯಯನ, ಶ್ರದ್ಧೆ- ಪರಿಶ್ರಮ, ನಡುಗನ್ನಡ ಸಾಹಿತ್ಯದ ವಿಪುಲ ಜ್ಞಾನ ,ವಿಷಯ ಮಂಡನೆಯಲ್ಲಿ ಖಚಿತತೆ, ಪ್ರತಿಯೊಂದು ಅದ್ಯಾಯದಲ್ಲಿ ಒಡಮೂಡಿ , ಸಂಶೋದನ ವಿಷಯದ ಒಳನೋಟಗಳನ್ನು ಸ್ಥೂಲ -ಸೂಕ್ಷ್ಮ ಮತ್ತು ತೀಕ್ಷ್ಣವಾಗಿ ತೆರೆದು ತೋರುವ ಮೂಲಕ ಇದು ಸಂಶೋಧನ ಅಧ್ಯಯನ ಕ್ಷೇತ್ರಕ್ಕೊಂದು ವಿನೂತನ ಸೇರ್ಪಡೆ ಎಂಬುದರಲ್ಲಿ ಎರಡು ಮಾತಿಲ್ಲ” ಎಂದಿರುವದು ಸಂಶೋಧನ ಪ್ರಬಂದದ ಮಹತ್ವವನ್ನು ಎತ್ತಿ ತೋರಿಸಿದೆ. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಂಶಿಕ ಸಹಾಯಧನ ತಗೆದುಕೊಂಡು ಈ ಕೃತಿ ಪ್ರಕಟವಾದದ್ದು ಒಂದು ಹೆಮ್ಮೆಯ ಸಂಗತಿಯೇ.

ಉಪನ್ಯಾಸಕ ವೃತ್ತಿಯ ಬದುಕು

ಮಕ್ಕಳೂ ಬೆಳೆದು ದೊಡ್ಡವರಾಗತೊಡಗಿದಂತೆ ಮನೆಯ ಜವಾಬ್ದಾರಿ ಸ್ವಲ್ಪ ಕಡಿತಗೊಂಡಂತೆ ಅನಿಸತೊಡಗಿತು. ಆಗ ಅವರು ಕಲಿತ ವಿದ್ಯೆಗೆ ಉಪನ್ಯಾಸಕ ವೃತ್ತಿ ಅರಸಿ ಬಂದಿತ್ತು.

ಅದಕ್ಕೆ ಅವರ ಪತಿಯ ಪ್ರೋತ್ಸಾಹವೂ ದೊರಕಿ 2005 ರಿಂದ ಸವದತ್ತಿಯ ಶ್ರಿ ಕುಮಾರೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಗೆ ಸೇರಿದರು. ಮನೆಯ ಕೆಲಸ ಮುಗಿಸಿ ಪತಿಯ ಬೈಕಿನಲ್ಲಿ ಕಾಲೇಜಿಗೆ ಪಯಣ, ಇವರನ್ನು ಬಿಟ್ಟು ಯಾಕೊಳ್ಳಿಯವರು ತಮ್ಮ ಕರ್ತವ್ಯದ ಕಡೆಗೆ ಪಯಣ.ಮತ್ತೆ ಇಬ್ಬರೂ ತಮ್ಮ ತಮ್ಮ ಕೆಲಸ ನಿರ್ವಹಿಸಿಕೊಂಡು ಮೆನಯ ಕೆಲಸಗಳಲ್ಲಿ ತೊಡಗುತ್ತ ಬದುಕನ್ನು ಸಾಗಿಸತೊಡಗಿದರು.

ಗಂಡನಿಗೆ ತಕ್ಕ ಮಡದಿಯಾಗಿ ತಮ್ಮ ಉಪನ್ಯಾಸದ ಮೂಲಕ ಕಳೆದ ಹದಿನೈದು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೀತಿಯ ಉಪನ್ಯಾಸಕರಾಗಿ ಹೊರಹೊಮ್ಮಿದ್ದಾರೆ. ಪ್ರತಿ ವರ್ಷ ಕಾಲೇಜಿನ ದ್ವಿತೀಯ ಪಿಯುಸಿ ಕನ್ನಡ ವಿಷಯದ ಫಲಿತಾಂಶ ನೂರಕ್ಕೆ ನೂರರಷ್ಟು ಅಗಿ ಇಲಾಖೆಯಿಂದ ಪುರಸ್ಕರ ಪಡೆಯುತ್ತಲೇ ಬಂದಿದ್ದಾರೆ.

ಸಾಹಿತ್ಯದ ಸೇವೆಯಲ್ಲಿ

ನೌಕರಿಯೂ ಆಯಿತು. ಮಕ್ಕಳು ದೊಡ್ಡವರಾದರು.ಪತಿಯ ಪ್ರೋತ್ಸಾಹವೂ ದೊರೆಯಿತು. ತಮ್ಮೊಳಗಿನ ಕವಿಯತ್ತಿಯೂ ಈಗ ಹೊರಹೊಮ್ಮಲು ಸಕಾಲ ಕೂಡಿ ಬಂದಿತು. ಅದರ ಪರಿಣಾಮ ಕವನಗಳು ಒಂದೊಂದಾಗಿ ರಚನೆಯಾಗುತ್ತ. ಅಲ್ಲಲ್ಲಿ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡುತ್ತ ಸಾಹಿತ್ಯದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಇದರ ಪರಿಣಾಮ ಸವದತ್ತಿ ತಾಲೂಕಿನ ಸಾಹಿತ್ಯ ಸಮ್ಮೇಳನಗಳು , ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಕವಿತೆ ವಾಚನ , ಅನೇಕ ಪುಸ್ತಕಗಳಲ್ಲಿ ಬಿಡಿ ಲೇಖನಗಳನ್ನು ಬರೆದಿದ್ದು ಅವೆಲ್ಲ ಸ್ವತಂತ್ರ ಸಂಗ್ರಹಗಳಾಗಿ ಬರಬೇಕಿದೆ. ಆದರೆ ಇದೆಲ್ಲಕ್ಕಿಂತ ಆದರ್ಶ ಗೃಹಿಣಿಯಾಗಿರಬೆಕೆಂಬುದು ಅವರ ಮೊದಲ ಆದ್ಯತೆ.

‘ಸದಾ ಗಂಡ, ಮಕ್ಕಳು, ಕುಟುಂಬ ಇದನ್ನು ಮೀರಿ ತನ್ನ ಕಾಲೇಜಿನ ಸೇವೆ, ಇದರಲ್ಲಿ ಬದುಕು ಸವೆಸುವದೇ ತನ್ನ ಪೂರ್ಣ ಗುರಿ. ಸಮಯ ಉಳಿದರೆ ಮತ್ರ ಸಾಹಿತ್ಯ ಸೇವೆ’ ಎನ್ನುವ ಡಾ. ಪ್ರೇಮಾ ಯಾಕೊಳ್ಳಿಯವರು ಅದರಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ.

ಚಿಕ್ಕ ಚೊಕ್ಕ ಕುಟುಂಬ

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆತುಂಬ ಮುತ್ತು.
ನೀನು ಕೊಡುವೆ ನನಗೆ ದವನ
ನಾನು ಕೊಡುವೆ ನಿನಗೆ ಕವನ

ಬೇಂದ್ರೆಯವರ ಅನುಕರಣೆ ಅನುಸರಣೆ ನಾವು ಎಲ್ಲಿ ನಿಲ್ಲುತ್ತೇವೆಯೋ ಅದೇ ನಮ್ಮ ಬೀಡು. ಅದೇ ನಮ್ಮ ನೆಲೆ.ನಾವು ಎಲ್ಲಿ ಆಡುತ್ತೇವೆಯೋ ಅದೆ ನಮ್ಮ ಮನೆಯ ಅಂಗಳು ಎಂಬಂತೆ ಬಿಜಾಪುರ ಜಿಲ್ಲೆಯ ಯಾಕೊಳ್ಳಿಯವರು ಸವದತ್ತಿ ತಾಲೂಕಿನ ಹಿರೇಕುಂಬಿಯ ಹೊಸಟ್ಟಿಯವರ ಮಗಳು ಪ್ರೇಮಾ. ಇಬ್ಬರ ದಾಂಪತ್ಯ ಬದುಕು ಸವದತ್ತಿಯಲ್ಲಿ ಸ್ವಂತ ಸೂರು. ಇವರಿಗೆ ಇಬ್ಬರು ಗಂಡು ಮಕ್ಕಳು.

ಮಕ್ಕಳಿಗೂ ಕೂಡ ಉತ್ತಮ ವಿದ್ಯಾಭ್ಯಾಸವನ್ನು ಮಾಡಿಸಿದ ಪ್ರತಿಫಲ ಹಿರಿಯ ಮಗ ನೀರಜ್ ಈಗ ಎಂ.ಬಿ.ಬಿ.ಎಸ್ ಮುಗಿಸಿ ವೈದ್ಯನಾಗುವ ಕನಸು ಹೊತ್ತು ಮುಂದೆ ಎಂ.ಡಿ. ಮಾಡಲು ತಯಾರಿಯೊಂದಿಗೆ ತನ್ನ ವ್ಯಾಸಾಂಗಕ್ಕೆ ಮತ್ತೆ ಏನು ಅವಶ್ಯವೋ ಅದರ ಅರಸುವಿಕೆಯಲ್ಲಿ ಮೈಸೂರಿನಲ್ಲಿ ಇರುವನು. ಇನ್ನೊಬ್ಬ ಮಗ ಎಂ.ಟೆಕ್ ಎರಡನೇ ಸೆಮಿಸ್ಟರ ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಓದುತ್ತಿದ್ದು.ಎರಡು ಮುತ್ತುಗಳೊಂದಿಗೆ ದಂಪತಿಯ ಸಖಿಗೀತ ಸಾಗಿರುವುದು.


ವೈ.ಬಿ.ಕಡಕೋಳ

- Advertisement -
- Advertisement -

Latest News

ಏ ಸಬ್ ಪಾಪೀ ಪೇಟ್ ಕಾ ಸವಾಲ್ ಹೈ ಜನಾಬ್ ಔರ್ ಕುಚ್ ಭೀ ನಹೀ…

ಎಲ್ಲಾರೂ ಮಾಡುವದು ಹೊಟ್ಟೆಗಾಗಿ... ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅನ್ನುವ ಮಾತನ್ನು ನಾವು ನೀವೆಲ್ಲ ಆಗಾಗ ಕೇಳುತ್ತಲೇ ಇರುತ್ತೇವೆ.ಆದರೆ ಹಣ ಗಳಿಸುವ ಆಸೆಗೆ ಬಿದ್ದ ಮನುಷ್ಯ ಮಾತ್ರ...
- Advertisement -

More Articles Like This

- Advertisement -
close
error: Content is protected !!
Join WhatsApp Group