ಹೊಲ ಊರಾಯ್ತು ಊರ ಮನಸ್ಸು ತಿಳಿಯಾಗಲಿ
ಮೂಲ ಕಥೆ: ಮಧು ನಾಯ್ಕ ಲಂಬಾಣಿ, ಹೂವಿನಹಡಗಲಿ.
ರಂಗ ರೂಪಾಂತರ: ಗೊರೂರು ಅನಂತರಾಜು, ಹಾಸನ.
ದೃಶ್ಯ-೧ ( ಆ ಊರಿನ ಜನರೆಲ್ಲಾ ಒಂದು ಕಡೆ ಸೇರಿದ್ದಾರೆ)
ಪೊಲೀಸ್ ಇನ್ಸ್ಪೆಕ್ಟರ್: ಇದೆಂತಹ ವಿಚಿತ್ರ ಊರ ಐತಿ. ಉರಾಗೊಂದು ಹೆಣ, ಹೊಲದಾಗೊಂದು ಹೆಣ. ಯಾರು ಕೂಡ ಹತ್ರ ರ‍್ತಾ ಇಲ್ಲ. ಯಾರಿಗೂ ಅಲ್ಲಿಗೆ ಹೋಗಿ ಅವನ್ನ ಸುಡಬೇಕು, ಅಂತ್ಯಸಂಸ್ಕಾರ ಮಾಡ್ಬೇಕು ಅನ್ನೋ ಜ್ಞಾನ ಇಲೇನ್ರಿ.
ತಹಸೀಲ್ದಾರ: ಇದು ಕೊನೆಸಾರಿ ನಿಮಗೆ ಎಚ್ಚರಿಕೆ ನೀಡ್ತಾ ಇದ್ದಿನಿ. ನಿಮ್ಮೂರಿಗೆ ನೀವೇ ಸ್ಮಶಾನ ಮಾಡಿಕೊಳ್ರಿ. ಇಲ್ಲ ನಮಗೆ ಹೊಲಕೊಡ್ರಿ. ಅದ್ಯಾವುದೂ ನೀವು ಮಾಡಲ್ಲ ಅಂದ್ರೆ ನಾವೇ ನಿಂತಿದ್ದು ಯಾವುದಾದ್ರು ಹೊಲಕ್ಕೆ ಬೇಲಿ ಹಾಕಬೇಕಾಗುತ್ತದೆ.
ಪೊಲೀಸ್ ಇನ್ಸ್ಪೆಕ್ಟರ್: ಈ ಊರಿನ ಹಿರಿಯರು ಮನಸ್ಸು ಮಾಡಿದ್ರೆ ಈ ಊರಿಗೆ ಇಂಥಾ ಪರಿಸ್ಥಿತಿ ಬರುತ್ತಿರಲಿಲ್ಲ. ಎಲ್ಲಿ ನಿಮ್ಮ ಊರಗೌಡ್ರು..?
ಮಂದಿ-೧: ಇಲ್ರೀ ಸಾಹೇಬ್ರ, ಬೆಳಿಗ್ಗೆನೆ ಗೌಡ್ರು ಊರು ಬಿಟ್ಟು ಹೋಗ್ಯಾರ.
ಪೊಲೀಸ್ ಇನ್ಸ್ಪೆಕ್ಟರ್: ನೀವು ಊರಿನವರು ಯಾರು ಎರಡು ಹೆಣಗಳನ್ನ ಅಂತ್ಯಸಂಸ್ಕಾರ ಮಾಡ್ಲಿಕ್ಕ ಮುಂದೆ ಬರೊಲ್ಲ ಅಂದ್ರ ಅದಕ್ಕೂ ನಾವು ತಯಾರಾಗಿ ಬಂದಿವಿ.
ತಹಸೀಲ್ದಾರ: ನೀವು ಬದುಕಬೇಕಾದ್ರೆ ಖಂಡಿತವಾಗಿ ನಿಮ್ಮಲ್ಲಿ ಸಹಕಾರ ಭಾವನೆ ಇರಲೇಬೇಕು. ಒಬ್ಬರನ್ನೊಬ್ಬರು ಪ್ರೀತಿಯಿಂದ ಕಾಣಬೇಕು. ಒಂದೇ ಮನೆಯವರಂತೆ ಬಾಳಬೇಕಾಗುತ್ತದೆ. ಒಂದು ಊರಿಗೆ ಏನೆಲ್ಲಾ ಇರಬೇಕು ಅದನ್ನು ನೀವೇ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಇದು ಊರಾಗಲ್ಲ ಸುಡುಗಾಡು ಆಗುತ್ತದೆ.
ಕತ್ತಲು
ಕತೆಗಾರ: ಊರ ಮಂದಿ ತಹಸಿಲ್ದಾರರು, ಇನ್ಸ್ಪೆಕ್ಟರ ಸಾಹೇಬ್ರು ಹೇಳಿದ ಮಾತನ್ನು ಮೂಕವಾಗಿ ಆಲಿಸಿದರು. ಯಾವುದಕ್ಕೂ ಪ್ರತ್ಯುತ್ತರ ನೀಡಲಿಲ್ಲ. ಇವರು ತಾವು ಪೇಟೆಯಿಂದ ಕರೆತಂದಿದ್ದ ನಾಲ್ಕು ಮಂದಿಯಿಂದ ಎರಡು ಹೆಣಗಳನ್ನು ಹೊರಿಸಿತಂದು ಗೌಡ್ರ ಹೊಲವನ್ನು ದಾಟಿ ಸುಡುಗಾಡಿನಲ್ಲಿ ಹೆಣ ಸುಡುವುದಕ್ಕೆ ವ್ಯವಸ್ಥೆ ಮಾಡಿದರು. ಇತ್ತ ಗೌಡರ ಬೆದರಿಕೆಗೆ ಪೂಜಾರಿ ತನ್ನ ಕಾಯಕ ದೇವರ ಪೂಜೆ ತೊರೆದುಬಿಟ್ಟ. ದಿನ ಬೆಳಗಾದರೆ ದೇವಸ್ಥಾನಕ್ಕೆ ಹೋಗುತ್ತಿದ್ದವ ಚಿಂತೆಗೆ ಜಾರಿದ, ತನ್ನಲ್ಲಿದ್ದ ಹಸು ಮೇಯಿಸಲು ಊರಾಚೆಗಿನ ಹೊಲದ ಕಡೆಗೆ ಹಳ್ಳದ ಕಡೆಗೆ ಹೋಗುತ್ತಿದ್ದ.
ಕತ್ತಲು
ಪೂಜಾರಿ: ಇದು ಎಂಥಾ ಊರು ಐತಿ. ನನ್ನ ಪೂರ್ವಜರು ಪೂಜಿಸುತ್ತಾ ಬಂದು ಈ ದೇವ್ರು ಇಂದು ಅನಾಥವಾಗಿ ಬಿಟ್ಟಿತಲ್ಲ. ನನ್ನಿಂದ ಎಂಥಾ ಅಪರಾಧವಾಗುತ್ತಿದೆ. ಕಣ್ಣೆದುರಿಗಿರುವ ದೇವರ ಪೂಜೆ ಮಾಡದಂತಾದೆನಲ್ಲ. ಪೂಜೆಯೆನ್ನುವ ಕಾರ್ಯ ಪುಣ್ಯದ ಕಾರ್ಯ. ಎಲ್ಲರಿಗೂ ಸಿಗುವುದಿಲ್ಲ. ಅದು ಅವರವರ ಪೂರ್ವಜನ್ಮದ ಪುಣ್ಯದ ಕಾರ್ಯ. ಅದು ನಮ್ಮ ವಂಶಕ್ಕೆ ಸಿಕ್ಕಿರುವುದು ನನ್ನ ಬಾಗ್ಯ. ಅದರಲ್ಲಿ ತೃಪ್ತಿ ಪಡುವವರು ನಾವು. ಅಂದು ನಾನು ಈ ದೇವರ ಬಗ್ಗೆ ಏನೇನೋ ಅಂದುಕೊಂಡೆ, ಬೈದುಕೊಂಡೆ. ನಾ ನಡೆದುಕೊಂಡ ರೀತಿಯಿಂದ ಇಂದು ನಾನು ಈ ಶಿಕ್ಷೆಯನ್ನು ಅನುಭವಿಸುವಂತಾಯಿತೆ. ಈ ಊರಲ್ಲಿರುವ ದೇವರಿಗೆ ಪೂಜೆ ಮಾಡಲಾರದಷ್ಟು ಹೀನರಾಗಿ ಹೋದೆವಲ್ಲ. ಸಿಂಗಾರಗೊಂಡು ಊರ ಡೊಳ್ಳು ಸಮಾಳ, ನಂದಿಕೋಲು ಮಜಲಿನೊಂದಿಗೆ ಮೆರವಣಿಗೆ, ಕೈ ಮುಗಿಯುವ ಭಕ್ತರಿಗೆ ಆಶಿರ್ವದಿಸುವ ಭಗವಂತ, ಮನಸ್ಸಿಗೆ ನೋವಾದಾಗ ನೆಮ್ಮದಿ ಇಲ್ಲದಾಗ, ನಿರಾಶೆ ಕವಿದಾಗ, ಭರವಸೆಯ ಬೆಳಕನ್ನು ನೀಡುವ ಜ್ಯೋತಿ ಇಂದು ತನ್ನ ಸುತ್ತಲೂ ಇರುವ ಸುಡುಗಾಡು ಮನಸ್ಸುಗಳ ಮಧ್ಯೆ ಸುಮ್ಮನೆ ಕುಳಿತು ಬಿಟ್ಟಿದೆಯೆಲ್ಲ.
ಕತ್ತಲು
ಎಂಎಲ್‌ಎ: ಅರೇ ಹೆಂಗಿದ್ದ ಊರು ಹಿಂಗ್ಯಾಕಾತು. ಓಟು ಕೇಳಾಕ ಬಂದಾಗ ಎಷ್ಟು ಚಂದಿತ್ತು. ಜನ ಊರ ತುಂಬಾ ಒಡ್ಯಾಡ್ತಿದ್ರು. ಇದೇನು ಊರೋ ಸುಡುಗಾಡೋ..?
ಆಪ್ತ ಸಹಾಯಕ: ಎಂಎಲ್‌ಎಯವರು ಬಂದಾರಂದ್ರ ಓಡಿ ಬರೋ ಮಂದಿ ಇವತ್ತು ಒಬ್ರು ಬಂದಿಲ್ಲ.
ಎಂಎಲ್‌ಎ: ನಡಿಯೋ ತಮ್ಮ, ದೇವರ ಗುಡಿ ಹತ್ರ ಅಲ್ಲಿಗೆ ಗೌಡ್ರನ್ನ ಕರೆಸೋಣು.
ಧ್ವನಿ: ದೇವಸ್ಥಾನ ದೂಳಿನಿಂದ ತುಂಬಿತ್ತು. ಗರ್ಭಗುಡಿ ಕತ್ತಲಾಗಿ ಮೂರ್ತಿಯು ಮಂಕಾಗಿತ್ತು. ಬಹಳ ದಿನಗಳಾದ್ದರಿಂದ ಗರ್ಭಗುಡಿಯಿಂದ ದುರ್ನಾತ ಬರುತ್ತಿತ್ತು. ಅದರಲ್ಲಿ ಹಲವು ಕೀಟಗಳು ಸೇರಿಕೊಂಡಿದ್ದವು. ಗುಡಿಯ ಮುಂದಿನ ಅಂಗಳದಲ್ಲಿ ಕಸದ ರಾಶಿ ಇತ್ತು.
ಪೂಜಾರಿ: (ಪ್ರವೇಶಿಸಿ) ನಾನಿನ್ನು ಈ ಊರಲ್ಲಿದ್ದು ನನ್ನ ದೇವರ ಈ ಸ್ಥಿತಿಯನ್ನು ನೋಡಿ ಇಲ್ಲಿ ಉಳಿಯಬಾರದು. ಹೆಂಡತಿ ಮಗನನ್ನು ಕರೆದುಕೊಂಡು ಹಸುವನ್ನು ಮಾರ‍್ಕೊಂಡು ಈ ಊರು ಬಿಡಬೇಕು..
ಎಂಎಲ್‌ಎ: ಈ ದೇವರ ಗುಡಿಯ ಅರ್ಚಕರು ನೀವಾ ಏನ್ರೀ..?
ಪೂಜಾರಿ: ಹೌದ್ರೀ ಸಾಹೇಬ್ರ.
ಎಂಎಲ್‌ಎ: ಇದೇನು ದೇವಸ್ಥಾನದ ಅಂಗಳ ಹೀಗೆ ಗಬ್ಬು ನಾರತೈತಿ. ನೀವು ದಿನಾ ದೇವ್ರ ಪೂಜೆ ಮಾಡಿ ಅಂಗಳ ಸ್ವಚ್ಛ ಮಾಡ್ತಿಲ್ಲೇನು..?
ಪೂಜಾರಿ: ಇಲ್ರೀ ಸಾಹೇಬ್ರ, ಗೌಡ್ರ ಅಪ್ಪಣೆ ಆಗೈತಾ. ಪೂಜೆ ಮಾಡಬಾರ‍್ದಂತ..
ಎಂಎಲ್‌ಎ: ಯಾವನ್ರಿ ಅವ..
ಊರಗೌಡ: ನಾನ್ರೀ ಸಾಹೇಬ್ರ ಈ ಊರಗೌಡ.
ಎಂಎಲ್‌ಎ: ಏನ್ರಿ ಗೌಡ್ರೆ, ಯಾಕ ಹಿಂಗಾಗಿದ್ದೀರಿ. ಏನು ಸಮಾಚಾರ (ಮೌನ) ಇದೇನ್ರೀ ನಿಮ್ಮೂರ ಈ ದೇವರ ಗುಡಿ ಇಷ್ಟು ಹಾಳಾಗೈತಿ. ಗುಡಿಗೆ ಸುಣ್ಣ ಬಣ್ಣ ಕಂಡು ಎಷ್ಟು ವರ್ಷ ಆಯ್ತೋ.. ಗುಡಿ ಮುಂದ ಇಷ್ಟೊಂದು ಕಸ ತುಂಬೈತಿ. ಅರ್ಚಕರಿಗೆ ದೇವರ ಪೂಜೆ ಮಾಡ್ಬೇಡಿ ಅಂತ ಹೇಳಿರೇನು..?
ಊರಗೌಡ: ಹೌದ್ತಿ ಸಾಹೇಬ್ರ.
ಎಂಎಲ್‌ಎ: ದೇವರ ಗುಡಿ ಮುಂದೆ ತುಂಬಿರೋ ಈ ಕಸಕ್ಕಿಂತ ನಿಮ್ಮ ತಲಿಲಿ ತುಂಬಿ ಕೊಂಡಿರೋ ಬಹಳ ಇರಾಂಗೈತಿ. ನೀವ್ಯಾಕ ಗಡ್ಡ ಮೀಸೆ ಬಿಟ್ಕೊಂಡು ಹುಚ್ಚರಂಗ ಆಗಿದ್ದೀರಿ..
ಊರಗೌಡ: ನಾಕು ತಿಂಗ್ಲಾತು, ಚೌರ ಮಾಡೋನು ಊರು ಬಿಟ್ಟು ಹೋಗ್ಯಾನ. ನಾವು ಪಕ್ಕದೂರಿಗೆ ಹೋಗಲ್ರಿ. ನಮ್ಮ ಚೌರದ ಚನ್ನ ಬಂದ್ಮೇಲೆ ಚೌರ ಮಾಡ್ಸಿಕೊಳ್ತಿವಿ.
ಎಂಎಲ್‌ಎ: ಒಂದು ವೇಳೆ ಅವನು ಬರಲೇ ಇಲ್ಲ ಅಂದ್ರ ಹೆಂಗ್ರೀ
ಊರಗೌಡ: ಖಂಡಿತ ಬರ‍್ತಾನ್ರಿ. ಅವ ಎಲ್ಲಿಗೂ ಹೋಗಂಗಿಲ್ಲ.
ಎಂಎಲ್‌ಎ: ಮುಂದ್ಹೆಂಗ್ರಿ ಗೌಡ್ರ.
ಊರಗೌಡ: ನೀವ ಹೇಳ್ರಿ
ಎಂಎಲ್‌ಎ: ಅಲ್ರಿ, ನೀವು ಸುಡುಗಾಡಿಗೆ ಹೋಗಾಕ್ ಜಾಗ ಕೊಟ್ಟಿದ್ರೆ ಇವೆಲ್ಲ ಆಗ್ತಿತ್ತೇನು..ಯಾಕ್ ಹಂಗ್ ಮಾಡಿದ್ರಿ..
ಊರಗೌಡ: ಸಾಹೇಬರ ಸುಡುಗಾಡು ಜಾಗ ಸರ್ಕಾರದ ಖರೇ. ಅದ್ರ ಅಲ್ಲಿಗೆ ಹೋಗ್ಬೇಕಂದ್ರ ನನ್ನ ಹೊಲ ದಾಟಿ ಹೋಗ್ಬೇಕು. ಅದು ನನ್ನ ಹೊಲ. ಹೆಣಗಳು ನನ್ನ ಹೊಲ್ದಾಗಾಸಿ ಹೋಗ್ಬಾರ‍್ದು. ಅದನ್ನು ಬಿಟ್ರ ನಾ ಬೇರೆ ಏನು ಹೇಳಿಲ್ಲ.
ಎಂಎಲ್‌ಎ: ಹೆಣ ನಿಮ್ಮ ಹೊಲ ದಾಟಿ ಹೋದ್ರ ನಿಮಗೇನು ತೊಂದ್ರೆ..
ಊರಗೌಡ: ಬ್ಯಾಡ್ರಿ ಯಾರು ಬೇಕಾದ್ರು ಹೋಗ್ಲಿ, ಆದ್ರ ಹೆಣ ಮಾತ್ರ ನನ್ನ ಹೊಲ್ದಾಗಾಸಿ ಹೋಗುವಂಗಿಲ್ರಿ..
ಎಂಎಲ್‌ಎ: ಒಂದು ವೇಳೆ ನಿಮ್ಮವರು ಯಾರಾದ್ರು ಸತ್ರ ಹೆಂಗ್ಮಾಡ್ತಿರಿ..
ಊರಗೌಡ: ನಮ್ಮನಿಯಾಗ ಈಗ ಯಾರೂ ಸಾಯೋರಿಲ್ರಿ..
ಎಂಎಲ್‌ಎ: ಈಗ ಸಾಯದಿದ್ರು ಮುಂದೆ..?
ಊರಗೌಡ: ಮುಂದೆ ಸತ್ತಾಗ ನೋಡಿದ್ರಾತು..
ಎಂಎಲ್‌ಎ: ಇವತ್ತಲ್ಲ ನಾಳೆ ನಿಮ್ಮವರು ಸಾಯ್ತಾರ. ಸಾವು ಯಾರಿಗೂ ಬಿಟ್ಟಿಲ್ಲ. ಬಿಡೋದು ಇಲ್ಲ ಅವಾಗ ಹೆಂಗಮಾಡ್ತಿರೀ..?
ಊರಗೌಡ: ಆವಾಗ ನಾ ಹೆಂಗಾದ್ರು ಮಡ್ಕೋತಿವಿ ಬಿಡ್ರಿ..
ಎಂಎಲ್‌ಎ: ಗೌಡ್ರೆ, ಸರ್ಕಾರದ ಭೂಮಿಗೆ ಹೆಣ ಒಯ್ಯಾಕ ನೀವು ದಾರಿ ಕೊಡ್ಬೇಕು. ಒಂದು ವೇಳೆ ಕೊಡ್ಲಿಲ್ಲ ಅಂದ್ರೆ ಮುಂದೆ ನೀವು ಬಹಳ ದುಃಖ ಅನುಭವಿಸ್ತೀರಿ.
ಊರಗೌಡ: ಸಾಧ್ಯ ಇಲ್ರಿ ಸಾಹೇಬ್ರ. ಅದ್ರ ಸಲ್ವಾಗ ಸ್ಟೇಷನ್ನಿಗೆ ಹೋಗಿಬಂದೀನಿ. ನಿಮಗ ಸುಡುಗಾಡ ಬೇಕಾದ್ರ ಬೇರೆ ಜಾಗ ಕೊಡ್ರಿ. ಖರೀದಿ ಮಾಡ್ರಿ..
ಎಂಎಲ್‌ಎ: ಖರೀದಿ ಮಾಡಾಕ ಯಾರು ಹೊಲ ಕೊಡ್ತಾರ ಹೇಳ್ರಿ..
ಊರಗೌಡ: ಈಗ್ಲೆ ವ್ಯಾಪಾರ ಮಾಡಾನ ಯಾರೂ ಕೊಡ್ತಾರೋ ಬಿಡ್ತಾರೋ ಗೊತ್ತಿಲ್ರಿ. ನಾ ಮಾತ್ರ ದಾರಿ ಕೊಡಲ್ಲ
ಎಂಎಲ್‌ಎ: ಈ ಊರಿಗೆ ನೀವು ಗೌಡನಾಗಿ ಉಳಿಬೇಕಂದ್ರ ನೀವು ಜನಾನ ಉಳ್ಸಿಕೋಬೇಕು. ಗೌರವ ಗಳಿಸಿಕೋಬೇಕು. ಅದನ್ನ ಬಿಟ್ಟು ಹಟಮಾಡಿ ಊರ ಮಂದಿ ಎಲ್ಲಾ ಬೇರೆ ಊರಿಗೆ ಹೋದ್ರೆ, ಇಲ್ಲಿ ಯಾರು ಇರಲ್ಲ. ನೀವು ಇರಲ್ಲ, ನಿಮ್ಮ ಗೌಡ್ಕಿನೂ ಇರಲ್ಲ. ಮೊದ್ಲು ಊರಿಗೆ ಉಪಕಾರ ಮಾಡ್ರಿ ಆಮೇಲೆ ನಿಮ್ಮ ಬಗ್ಗೆ ಊರಿನ ಮಂದಿಗೆ ಗೌರವ ಬರುತ್ತೆ.
ಊರಗೌಡ: ನಾನು ಈ ಊರಗೌಡ, ಯಜಮಾನ ಅನ್ನೋ ಪರಿಜ್ಞಾನ ಈ ಊರ ಮಂದಿಗೆ ಇದ್ದಿದ್ರೆ ನನ್ನ ಮೇಲೆ ಚ್ಯಾಡ ಹೇಳ್ತಿದ್ರೇನು ಈ ಜನ..
ಎಂಎಲ್‌ಎ: ಹೌದ್ರಿ ನೀವು ಸುಡುಗಾಡಿಗೆ ಹೋಗಾಕ ದಾರಿಕೊಡಲ್ಲ ಅಂದ್ರ ಗತಿ ಹೆಂಗ ಹೇಳ್ರಿ.
ಊರಗೌಡ: ನಾ ಕೊಡುದಿಲ್ರಿ ಸಾಹೇಬ್ರ.
ಎಂಎಲ್‌ಎ: ಯಾಕ..ಏನು ಕಾರಣ ಹೇಳ್ರಿ..
ಊರಗೌಡ: ನೇಣು ಹಾಕೊಂಡಾವ್ರು, ವಿಷ ಕುಡದವ್ರು ಜಗಳಾಡಿ ಸತ್ತವ್ರು. ಅರ್ಧ ವಯಸ್ಸಿನ್ಯಾಗ ಸತ್ತವ್ರು ಎಲ್ಲರ ಹೆಣನೂ ನನ್ನ ಹೊಲ್ದಗಾಸಿ ಹೋಗೋದಂದ್ರ ಹೇಂಗ್ಹೇಳ್ರಿ. ಅದಕ್ಕ ಯಾವ ಹೆಣನೂ ಬೇಡ.
ಎಂಎಲ್‌ಎ: ಗೌಡ್ರೆ, ಅವ್ರು ಹೆಂಗಾದ್ರು ಸಾಯ್ಲಿ. ಸುಡುಗಾಡಿಗೆ ಹೋಗ್ಲೇ ಬೇಕು.
ಊರಗೌಡ: ಹೋಗ್ಲಿ, ಆದ್ರ ನನ್ನ ಹೊಲ ದಾಟಿ ಹೋಗೋದು ಬೇಡ ಅಷ್ಟೇ.
ಎಂಎಲ್‌ಎ: ಹಿಂಗಾದ್ರೆ ನಾನೇನು ಮಾಡೋದಕ್ಕಾಗಲ. ಮುಂದೆ ಕೇಸಾಗ್ಲಿ. ಹೆಂಗ ತೀರ್ಮಾನ ಆಗುತ್ತೆ ನೋಡೋಣ
ಊರಗೌಡ: ಆಗ್ಲಿ ಬಿಡ್ರಿ..
(ಕತ್ತಲು)
ಕತೆಗಾರ: ಇಡೀ ರಾಜ್ಯಕ್ಕೆ ಮಳೆ ಬರಲಿಲ್ಲ. ಬರಗಾಲದ ಛಾಯೆ ಎಲ್ಲೆಲ್ಲಲೂ ಆವರಿಸಿತ್ತು. ಜನ ತತ್ತರಿಸಿದ್ರು. ಆ ಊರಿನಲ್ಲಿರುವ ರೈತರ‍್ಯಾರೂ ಕೂಡ ಹೊಲದಲ್ಲಿ ಬಿತ್ತನೆ ಮಾಡಿರಲಿಲ್ಲ. ಬಾನಿನ ಕಡೆಗೆ ಬಾಯಿ ಮಾಡಿ ಬಾನಾಡಿಗಳು ಬಸವಳಿದು ಬದುಕುಳಿಯದೆ ರೆಕ್ಕೆ ಬಡಿದು ಬತ್ತಿಹೋಗುತ್ತಿದ್ದವು. ನಾಯಿಗಳು ನೀರಿಲ್ಲದೆ ನರಳಾಡಿ ನೆಗೆದು ಬೀಳುತ್ತಿದ್ದವು. ಹಸುಗಳು ಹಸಿವಿನಿಂದ ಹಲುಬುತ್ತಾ ಎಲ್ಲೆಂದರಲ್ಲಿ ಓಡಿ ನೀರಿಗಾಗಿ ಹುಡುಕಾಡಿ ಅಸುನೀಗಿದವು.
ಆ ಊರ ಮಾರ್ಗವಾಗಿ ಪರಮ ಪೂಜ್ಯರು ಪ್ರಖ್ಯಾತ ಸ್ವಾಮೀಜಿ ಒಬ್ಬರು ಬರುತ್ತಿರುವ ಸುದ್ಧಿ ತಿಳಿದ ಊರ ಗೌಡ ಮತ್ತೊಂದಿಷ್ಟು ಮಂದಿ ಸೇರಿ ಅವರನ್ನು ಎದುರುಗೊಳ್ಳಲು ಊರ ಮುಂದೆ ನಿಂತಿದ್ದರು. ಊರಿಗೆ ಬಂದ ಸ್ವಾಮೀಜಿ ಊರಲ್ಲಿ ಕಾರಿನಿಂದ ಇಳಿಯದೇ
ಗುರುಗಳ ಧ್ವನಿ (ಹಿನ್ನೆಲೆಯಲ್ಲಿ) ಮುಂದೆ ನಡಿ ಈ ಸುಡುಗಾಡಿನಲ್ಲಿ ಕಾರು ನಿಲ್ಲಿಸಬೇಡ. ನಾನು ಇಲ್ಲಿ ಇಳಿಯುವುದಿಲ್ಲ.
ಕತೆಗಾರ: ಗುರುಗಳ ಕಾರು ಊರು ದಾಟಿ ಹೊರಟಿತ್ತು. ಊರ ಜನ ಕಾರಿನ ಹಿಂದೆ ಕೂಗುತ್ತಾ ಓಡಿದರು. ಕಾರು ನೇರವಾಗಿ ಮರಡಿಯ ಹತ್ತಿರವಿರುವ ಗೌಡರ ಹೊಲದ ಮಧ್ಯದಲ್ಲಿರುವ ದೊಡ್ಡ ಮರದ ಕೆಳಗೆ ಕಾರಿನಿಂದಿಳಿದು ಹೋಗಿ ನಿಂತರು.
ಗುರುಗಳು: ಎಂಥಾ ಚಂದದೂರು. ಮಳೆ ಬಂದು ಒಳ್ಳೆಯ ಬೆಳೆ ಬಂದು ನೀವು ಖುಷಿಯಿಂದ ಓಡಾಡುತ್ತಿದ್ರಿ. ಹಬ್ಬ ಹರಿದಿನಗಳಲ್ಲಿ ಒಬ್ಬರನೊಬ್ಬರು ಅಪ್ಪಿ ಆನಂದಿಸಿ ಒಬ್ಬರ ಮನೆಯಲ್ಲಿ ಒಬ್ಬರು ಉಂಡು ಒಂದೇ ಬಳಗದವರಂತೆ ಇದ್ರಿ. ಕಷ್ಟ ಸುಖಗಳಲ್ಲಿ ಒಬ್ಬರಿಗೊಬ್ಬರು ಭಾಗಿಯಾಗುತ್ತಿದ್ರಿ. ಯಾರ ಮನೆಗೇನಾದರೂ ತೊಂದರೆಯಾದರೆ ಅಲ್ಲಿ ಎಲ್ಲರೂ ಬಂದು ಸೇರಿ ಆ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನ ಮಾಡ್ತಿದ್ರಿ. ದಿನಬೆಳಗಾದರೆ ದೇವಸ್ಥಾನದ ಗಂಟೆಯ ನಾದ ಮನಸ್ಸಿಗೆ ನೆಮ್ಮದಿ ನೀಡ್ತಿತ್ತು. ಹಸು, ಕರು, ಎತ್ತು, ಎಮ್ಮೆ ನಾಯಿಗಳು ಆನಂದದಿಂದ ಬದುಕುತ್ತಿದ್ದವು. ಯಾರಾದರೂ ಸತ್ತರೆ ಅಲ್ಲಿಗೆ ಹೋಗಿ ಶವಸಂಸ್ಕಾರ ಮಾಡಿ ಬರುತ್ತಿದ್ರಿ. ಊರು ನಂದನವನವಾಗಿತ್ತು. ಪಂಚಾಯ್ತಿ ಕಟ್ಟೆಗೆ ಸೇರುವುದೇ ಒಂದು ಸಂತೋಷ ಸಂಭ್ರಮ. ನ್ಯಾಯ ಅನ್ಯಾಯವನ್ನು ಪರಿಶೀಲಿಸಿ ಊರ ಗೌಡ್ರು ನೀಡುವ ತೀರ್ಪಿನಿಂದ ಸನ್ಮಾರ್ಗದಲ್ಲಿ ನಡೆಯುತ್ತಿದ್ರಿ.
ಕತೆಗಾರ: ಹೌದು ಗುರುಗಳು ಹೇಳೋ ಮಾತ್ನಲ್ಲಿ ಖರೆ ಐತಿ. ನಾನು ಈ ಹಿಂದಿನ ಊರನ್ನು ಕಂಡಿದ್ದೇನೆ. ಆಗ ಅದೆಷ್ಟು ಸಂತೋಷ ತುಂಬಿ ತುಳುಕ್ತಿತ್ತು. ಊರಲ್ಲಿ ನಡೆಯುವ ಯಾವುದೇ ಕಾರ್ಯಕ್ರಮ ಹಿರಿಯರ ಮಾರ್ಗದರ್ಶನದಂತೆ ಪೂರ್ವಯೋಜಿತವಾಗಿ ನಡೆಯುತ್ತಿತ್ತು. ದೇವಸ್ಥಾನದಲ್ಲಿ ಭಜನೆ ಮಾಡುವುದು, ವರ್ಷಕ್ಕೊಮ್ಮೆ ತೇರಳೆದು ನಾಟಕವಾಡುವುದು, ನಂದಿಕೊಲು ಕುಣಿತ, ನಗಾರಿ ಬಡಿತ, ಪಲ್ಲಕ್ಕಿ ಉತ್ಸವ, ಸಮಾಳ, ಒಡಪು, ಮೆರವಣಿಗೆ ಅಂತೆಲ್ಲಾ ಹಬ್ಬ ಆಚರಣೆ ಎಷ್ಟು ಚೆನ್ನಾಗಿ ನಡೀತಿತ್ತು. ಹೆಂಗಸರು ಬೀಸುವ ಪದ, ಕುಟ್ಟುವ ಪದ, ಸೋಬಾನೆ ಪದ, ಜೋಗುಳದ ಹಾಡು ಎಷ್ಟು ಚಂದ ಹಾಡ್ತಿದ್ರು. ಗಂಡಸರು ಹಂತಿ ಹಾಡು, ಸುಗ್ಗಿಯ ಹಾಡು, ಜಾನಪದ ಗೀತೆ, ಲಾವಣಿ, ತತ್ವಪದ, ಕೋಲಾಟದ ಪದಗಳನ್ನು ಹಾಡಿ ನಮ್ಮನ್ನೆಲ್ಲಾ ಸಂತೋಷಪಡಿಸ್ತಿದ್ರು.
ಗುರುಗಳು: ಊರ‍್ನಲ್ಲಿ ನಾಗರಪಂಚಮಿ, ದೀಪಾವಳಿ, ಯುಗಾದಿ ಹಬ್ಬವನ್ನು ನೀವೆಲ್ಲಾ ಎಷ್ಟು ಸಂತೋಷ ಸಂಭ್ರಮದಿಂದ ಆಚರಿಸ್ತಿದ್ರಿ ಹೌದಲ್ಲ
ಯಜಮಾನ: ಹೌದು ಬುದ್ಧಿ. ಅದೆಲ್ಲಾ ನಮ್ದು ಹಳೇ ಕಾಲದಲ್ಲಿ ಹಿಂಗೆಲ್ಲಾ ನಡಿತ್ತಿತ್ತು ಖರೆ..
ಕತೆಗಾರ: ಗುರುಗಳು ಊರಿಗೆ ಬರ‍್ತಾರಂದ್ರೇ ಎಷ್ಟು ಕಾತರದಿಂದ ನೀವೆಲ್ಲಾ ಕಾಯ್ತಿದ್ರೀ. ತಮ್ಮನ್ನೇ ತಾವು ಸಮರ್ಪಿಸಿಕೊಳ್ಳುತ್ತಿದ್ರಿ.
ಗುರುಗಳು: ಇಡೀ ತಾಲೂಕಿಗೆ ಮಾದರಿಯಾಗಿದ್ದ ಈ ಊರಿಗೆ ಈಗ ಆದದ್ದಾದರೂ ಏನು? ಯಾಕೆ ನೀವೆಲ್ಲ ಹೀಗಾಗಿದ್ದೀರಿ.? ಇದ್ದು ಸತ್ತವರಂತೆ ಜೀವಂತ ಶವಗಳಾಗಿದ್ದೀರಿ. ಕಾರಣವೇನು? ನಿಮ್ಮ ಆಗಿನ ಸಂಬಂಧ ಪ್ರೀತಿ ವಿಶ್ವಾಸ ಖುಷಿ ನಗು ಎಲ್ಲಾ ಎಲ್ಲಿ ಹೋದವು.?
ಕತೆಗಾರ: ಎಂತೆಂಥ ಹಿರಿಯರು ವಿಚಾರವಂತರು ಹುಟ್ಟಿ ಒಳ್ಳೆಯ ಸಂಸ್ಸೃತಿಯನ್ನು ಕಲಿಸಿಕೊಟ್ಟು ಸತ್ತುಹೋದರು. ಆದರೆ ಕೊನೆಗಳಿಗೆಯಲ್ಲಿ ಅವರನ್ನು ಸುಡುವುದಕ್ಕೂ ಜಾಗವಿಲ್ಲದಂತೆ ಮಾಡಿಬಿಟ್ಟಿರಿ. ಅನಾಥ ಶವಗಳಾಗಿ ಎಲ್ಲೆಂದರಲ್ಲಿ ಪ್ರಾಣಿಗಳಿಗಿಂತ ಕೀಳಾಗಿ ಮಣ್ಣಲ್ಲಿ ಮಣ್ಣಾಗಿ ಹೋದರು.
ಗುರುಗಳು: ನೀವು ಈಗಿರುವ ಊರು ಸ್ಮಶಾನದಂತಾಗಿದೆ. ಅಲ್ಲಿ ನನಗೆ ಇಳಿಯಲು ಮನಸ್ಸು ಬರಲಿಲ್ಲ. ಸುಡುಗಾಡಿಗಿಂತಲೂ ಸುಡುತ್ತಿದೆ ಆ ಜಾಗ. ಅಲ್ಲಿ ನೀವು ಇಷ್ಟು ದಿನ ಬದುಕಿರುವುದೇ ನಿಮ್ಮ ಭಾಗ್ಯ. ಮನುಷ್ಯ ಹುಟ್ಟುವಾಗ ಅವನಿಗೆ ಆಶ್ರಯ ಅನ್ನೋ ಮನೆ ಬೇಕು. ಹಾಗೆನೇ ಸತ್ತಾಗ ಸುಡುಗಾಡು, ಸ್ಮಶಾನ ಅಥವಾ ರುದ್ರಭೂಮಿ ಅನ್ನೋ ಜಾಗ ಬೇಕು. ಏಕೆಂದರೆ ಹುಟ್ಟು ಮತ್ತು ಸಾವು ಒಂದೇ ನಾಣ್ಯದ ಎರಡು ಮುಖಗಳು. ಹುಟ್ಟಿದೆ ಎಂದರೆ ಸಾವು ಇದೇ ಎನ್ನುವುದನ್ನು ಮರೆತರೆ ಹೇಗೆ?
ಕತೆಗಾರ: ಮನೆಗೆ ಜನರಿರಬೇಕು. ಊರಿಗೆ ಸುಡುಗಾಡಿರಬೇಕು. ಊರಿಗೆ ಸುಡುಗಾಡಿಲ್ಲದಿದ್ದರೆ ಊರೇ ಸುಡುಗಾಡಾಗಿ ಹೋಗುತ್ತದೆ.
ಗುರುಗಳು: ಆ ಹೆಣ ನನ್ನ ಹೊಲದಾಗ ಬರಬಾರ‍್ದು. ಈತನ ಹೆಣ ನನ್ನ ಹೊಲದಾಗ ಬರಬಾರ‍್ದು ಅಂದ್ರೆ ನಿನ್ನ ಹೆಣಾನೂ ನಿನ್ನ ಹೊಲ್ದಾಗ ಹೋಗಬಾರದು. ಏಕೆಂದರೆ ಈ ಭೂಮಿ ನಿಮ್ಮದಲ್ಲ. ನೀನಿರುವವರೆಗೆ ಮಾತ್ರ ನಿನ್ನದು ಹೆಸರಿಗೆ. ನೀನು ಸತ್ತ ಮೇಲೆ ನಿನ್ಹೆಸರು ಅಳಿಸಿಹೋಗಿ ಬೇರೆ ಯಾರದೋ ಹೆಸರು ಬರುತ್ತದೆ. ನೀನು ಶಾಶ್ವತವಲ್ಲ, ನಿನ್ಹೆಸರು ಶಾಶ್ವತವಲ್ಲ. ನೀನು ಕಟ್ಟುವ ಯಾವುದೇ ಆಸ್ತಿ ಅಂತಸ್ತು ಯಾವುದೂ ಇರುವುದಿಲ್ಲ. ಮೊದಲಿಗೇ ನೀನೇ ಇರುವುದಿಲ್ಲ. ನಿನ್ನದಲ್ಲದ ಈ ನೆಲಕ್ಕಾಗಿ ನೀನೇಕೆ ಹಲಬುತ್ತಿರುವೆ.
ಕತೆಗಾರ: ಪೊಲೀಸರು, ಜೈಲು ಎಂದರೆ ಹೆದರಿಕೆ. ಕನಸು ಮನಸಿನಲ್ಲೂ ಅವರನ್ನು ನೆನೆಯದ ಈ ಊರಿಗೆ ಪೊಲೀಸರು ಬಂದರು. ಅಧಿಕಾರಿಗಳು ಬಂದರು. ಇದೆಲ್ಲಾ ಬೇಕಾಗಿತ್ತಾ? ಗುರುಗಳು: ಯಾರಿಂದಲೂ ಬುದ್ಧಿವಾದ ಹೇಳಿಸಿಕೊಳ್ಳುವಷ್ಟು ದಡ್ಡರಲ್ಲ ನೀವು. ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಿ. ನಿಮ್ಮವರನ್ನು ಅರ್ಥ ಮಾಡಿಕೊಳ್ಳಿ. ಇಡೀ ಊರೇ ಒಂದು ಕುಟುಂಬ ಇದ್ದಂತೆ. ಇಲ್ಲಿ ಯಾರೊಬ್ಬರಿಗೇನಾದರೂ ಆದರೆ ಅದು ಎಲ್ಲರಿಗೂ ಮರುಕಳಿಸುವುದು ಬೇಡ. ತಾವೇ ತಪ್ಪನ್ನು ಒಪ್ಪಿಕೊಳ್ಳದಿದ್ದರೆ ನಿಮ್ಮ ಜನ್ಮ ಸಾರ್ಥಕವಾಗುವುದು ಯೋಚಿಸಿ ನೋಡಿ.
ಊರಗೌಡ: (ಗೌಡ್ರು ಮತ್ತು ಗೌಡ್ರ ಹೆಂಡತಿ ಗುರುಗಳ ಕಾಲಿಗೆ ಬಿದ್ದರು) ನಮ್ದು ತಪ್ಪಾಯ್ತು. ನಾವು ತಪ್ಪು ಮಾಡಿದ್ವಿ.
ಗುರುಗಳು: ಗೌಡ್ರೇ, ನಿಮ್ಮ ಹಿರಿಗುಣಕ್ಕೆ ನಾ ಸೋತು ಹೋದೆ. ನಿಮಗೆ, ನಿಮ್ಮ ಕುಟುಂಬಕ್ಕೆ ಆ ಭಗವಂತ ಆಯಸ್ಸು ಆರೋಗ್ಯ ಕರುಣಿಸಲಿ. ಈಗ ನಾ ಹೇಳಿದಂತೆ ಎಲ್ಲರೂ ಕೇಳಬೇಕು. ಎಲ್ಲರೂ ಎದ್ದು ನಿಂತುಕೊಳ್ಳಿ. ನೀವೆಲ್ಲರೂ ಒಂದು ಮನೆಯವರು. ಇನ್ನೊಂದು ಮನೆಯವರನ್ನು ಅಪ್ಪಿ ಮಾತಾಡಿಸಬೇಕು. ಯಾರೊಬ್ಬರೂ ಕೂಡ ತಪ್ಪಿಸಿಕೊಳ್ಳಬಾರದು. ಇದು ಗುರುವಾಜ್ಞೆ. (ಗುರುಗಳು ಪೋನಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತಾ) ತಾವು ಅನ್ಯಥಾ ಭಾವಿಸದೆ ನಮ್ಮ ಈ ಮನವಿಯನ್ನು ಸ್ವೀಕರಿಸಿ ಇಲ್ಲಿಗೆ ಬರಬೇಕು. (ನಂತರ) ಗೌಡ್ರೇ ನನಗೆ ಭಿಕ್ಷೆ ನೀಡ್ತಿರಾ
ಊರಗೌಡ: ನೀಡ್ತೀನಿ ಗುರುಗಳೇ
ಗುರುಗಳು: ನಾನು ಕೇಳಿದ್ದು ಕೊಡ್ತಿರಿ ತಾನೇ..
ಊರಗೌಡ: ಖಂಡಿತ ಕೊಡ್ತೀನಿ.
ಗುರುಗಳು: ಹಾಗಾದ್ರೆ, ನನಗೆ ಭಾಷೆ ಕೊಡಿ.
ಊರಗೌಡ ನನ್ನ ಮೇಲೆ ನಿಮಗೆ ನಂಬಿಕೆ ಇಲ್ಲವೇ,?
ಗುರುಗಳು: ನನ್ನ ನಿಮ್ಮ ನಂಬಿಕೆ ನಿಜವಾಗಲೂ ಸತ್ಯ. ಅದು ಎಲ್ಲರಿಗೂ ಗೊತ್ತಾಗಬೇಕಲ್ಲ..
ಊರಗೌಡ: ನಾನು ಕೊಡುತ್ತೇನೆ. ಅದೇನು ಕೇಳಿ ಗುರುಗಳೇ.
ಮುಖ್ಯಮಂತ್ರಿ: (ಪ್ರವೇಶಿಸಿ) ನಾನು ಈ ರಾಜ್ಯದ ಮುಖ್ಯಮಂತ್ರಿ. ತಾಲೂಕು ಕೇಂದ್ರದಲ್ಲಿ ಅನೇಕ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಇದ್ದು ಆ ಕಾರ್ಯಕ್ರಮ ಗುರುಗಳ ಸಾನ್ನಿಧ್ಯದಲ್ಲಿ ನಡೆಯಬೇಕಾಗಿತ್ತು. ಗುರುಗಳೂ ನನಗೆ ಫೋನಿನ ಮೂಲಕ ಕರೆದು ಇಲ್ಲಿಯ ಎಲ್ಲಾ ವಿಷಯವನ್ನು ತಿಳಿಸಿದ್ದಾರೆ. ಖಂಡಿತವಾಗಿ ಗುರುಗಳು ಇಲ್ಲಿ ಪವಾಡವನ್ನೇ ಮಾಡಿದ್ದಾರೆ. ಅನೇಕ ಬಾರಿ ನಮ್ಮ ತಹಸೀಲ್ದಾರರು, ನಮ್ಮ ಶಾಸಕರು ಇಲ್ಲಿಗೆ ಬಂದು ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದ್ದಾರೆಂಬುದು ನನಗೂ ಗೊತ್ತಿತ್ತು. ಈ ಊರಿನ ಸಮಸ್ಯೆ ನನಗೆ ಈ ಮೊದಲೆ ಗೊತ್ತಿದ್ದುದರಿಂದ ಗುರುಗಳು ಕರೆದ ಕೂಡಲೆ ನಾನಿಲ್ಲಿಗೆ ಬಂದಿದ್ದೇನೆ. ತುಂಬಾ ಸಂತೋಷವಾಗ್ತ ಇದೆ. ಗುರುಗಳು ಏನೇ ಹೇಳಿದರು ಗೌಡ್ರು ಒಪ್ಪಿಕೊಂಡಂತೆ ನಾನು ಕೂಡ ಸರ್ಕಾರದಿಂದ ಯಾವುದೇ ಸಹಾಯ ಮಾಡುತ್ತೇನೆಂದು ಭರವಸೆ ಕೊಡುತ್ತೇನೆ.
ಗುರುಗಳು: ಗೌಡ್ರೇ, ತಾವು ಮಾತಿನಂತೆ ಈಗ ನಾವು ಕುಳಿತಿರುವ ಈ ಹೊಲ ಐದು ಎಕರೆ ಇದ್ದು ಇದನ್ನು ಗ್ರಾಮಕ್ಕೆ ಬಿಟ್ಟುಕೊಡಬೇಕು. ಅಂದರೆ ಇಲ್ಲಿ ಸುಡುಗಾಡು ಮಾಡಲಿಕ್ಕಲ್ಲ. ಇಲ್ಲಿ ಊರು ನಿರ್ಮಾಣವಾಗಬೇಕು. ಈಗಿರುವ ಆ ಊರೆಂಬ ಸುಡುಗಾಡನ್ನು ಬಿಟ್ಟು ನೀವೆಲ್ಲ ಇಲ್ಲಿ ವಾಸವಾಗಬೇಕು. ಮಾನ್ಯ ಮುಖ್ಯಮಂತ್ರಿಗಳು ಮಾತು ಕೊಟ್ಟಿದ್ದಾರೆ. ಈ ಐದು ಎಕರೆ ಭೂಮಿಯಲ್ಲಿ ಇನ್ನೂ ಆರು ತಿಂಗಳಲ್ಲಿ ಐದುನೂರು ಮನೆಗಳನ್ನು ಕಟ್ಟಿಸಿಕೊಡಬೇಕೆಂದು ಕೇಳಿದ್ದೇನೆ.
ಮುಖ್ಯಮಂತ್ರಿ: ಗುರುಗಳ ಅಪ್ಪಣೆಯಂತೆ ಇನ್ನು ಆರು ತಿಂಗಳಲ್ಲಿ ಐದುನೂರು ಮನೆಗಳನ್ನು ಕಟ್ಟಿಸುವ ಜವಾಬ್ದಾರಿ ನಮ್ಮ ಸರ್ಕಾರದ್ದು. ಇದಕ್ಕೆ ನಾನೀಗಲೇ ಶಾಸಕರೊಂದಿಗೆ ಹಾಗೂ ತಹಸೀಲ್ದಾರರೊಂದಿಗೆ ಮಾತನಾಡಿ ಈ ವ್ಯವಸ್ಥೆಯನ್ನು ಮಾಡುತ್ತೇನೆ. ಗೌಡ್ರೇ, ನೀವೇನೋ ಚಿಂತೆ ಮಾಡ್ಬೇಡಿ. ನಿಮ್ಮ ಹೊಲಕ್ಕೆ ಬೆಲೆ ಕಟ್ಟಿ ಸರ್ಕಾರ ಪರಿಹಾರ ಕೊಡುತ್ತೆ..
ಗುರುಗಳು: ತಾವೆಲ್ಲರೂ ಕೂಡ ಹಳೆಯ ಆ ಊರನ್ನು, ಹಳೆಯ ಆ ದ್ವೇಷ ಅಸೂಯೆ ಅಹಂಕಾರಗಳನ್ನು ಅಲ್ಲೆ ಬಿಟ್ಟು ಈ ಹೊಸ ಜಾಗದಲ್ಲಿ ಹೊಸ ಬದುಕನ್ನೂ ಕಟ್ಟಿಕೊಂಡು ಬಾಳಿರಿ.
ಮುಖ್ಯಮಂತ್ರಿ: ಇಲ್ಲಿ ನೀರು ವಿದ್ಯುತ್ ಎಲ್ಲಾ ಸೌಕರ್ಯಗಳನ್ನು ಜೊತೆಗೆ ಶಾಲೆಯನ್ನು ಕೂಡ
ನಿರ್ಮಾಣ ಮಾಡುತ್ತೇವೆ.
ಕತ್ತಲು
ಕತೆಗಾರ: ಗೌಡ್ರು ಮಾತಿನಂತೆ ನೆಡೆದುಕೊಂಡರು. ಮುಖ್ಯಮಂತ್ರಿಗಳು ಕೂಡ ಐದುನೂರು ಮನೆಗಳನ್ನು ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಿದರು. ಅಲ್ಲಿ ಕುಡಿಯಲು ನೀರು ವಿದ್ಯುತ್ ಶಾಲೆ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಿದರು. ಊರನ್ನು ಬಿಟ್ಟು ಹೋದವರೆಲ್ಲ ಮರಳಿ ಊರಿಗೆ ಬಂದರು. ಹಳೆಯ ಊರನ್ನು ಬಿಟ್ಟು ಹೊಸ ಊರಿಗೆ ಎಲ್ಲರೂ ಬಂದು ಬಂಧುಗಳಾದರು. ಗೌಡ್ರು ಪುನ: ತಮ್ಮ ಪಂಚಾಯ್ತಿ ವ್ಯವಸ್ಥೆಯನ್ನು ಮುಂದುವರೆಸಿದರು. ಹಳೆಯ ಊರಿನಲ್ಲಿದ್ದ ತಮ್ಮೆಲ್ಲ ಮನೆಗಳನ್ನು ನೆಲಸಮ ಮಾಡಿದರು. ಅದನ್ನೆ ಸ್ಮಶಾನ ಮಾಡುವ ಮೂಲಕ ಹಳೆಯದನ್ನೆಲ್ಲ ಅದೇ ಸ್ಮಶಾನದಲ್ಲಿ ಹೂತುಬಿಟ್ಟು ಹೊಸಜಾಗದಲ್ಲಿ ಹೊಸ ಬದುಕನ್ನು ಪ್ರಾರಂಭಿಸಿದರು.
ಮುಕ್ತಾಯ.
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.