spot_img
spot_img

ತುಂಬಬೇಕಿದೆ ಒಣಗಿದ ಎಲೆಗಳಿಗೆ ನೆಮ್ಮದಿಯ ಹಸಿರು ಬಣ್ಣ

Must Read

- Advertisement -

ಊರು ಸುತ್ತೋಕೆ ಅಪ್ಪನ ಹೆಗಲು, ಸವಿಯಾದ ಅಮೃತ ಸವಿಯೋಕೆ . ಅವ್ವನ ಕೈ ತುತ್ತು, ತಾರೆ ಎಣಿಸುತ್ತ ಕಥೆಗೆ ಹ್ಞೂಂ ಅನ್ನೋಕೆ ಅಜ್ಜಿಯ ಮಡಿಲು ಚಿಕ್ಕವರಿದ್ದಾಗ ಇವೆಲ್ಲ ಬೇಕೇ ಬೇಕಿತ್ತು. ಇವುಗಳಲ್ಲಿ ಒಂದು ಕಡಿಮೆಯಾದರೂ ಧ್ವನಿ ಮುಗಿಲಿನ ಎತ್ತರಕ್ಕೆ ಏರುತ್ತಿತ್ತು. ಅಷ್ಟೇ ಏಕೆ ನಿನ್ನೆ ಮೊನ್ನೆಯವರೆಗೂ ಬಾಳ ಸಂಗಾತಿಯ ಕಿರುಬೆರಳಿಗೆ ಬೆರಳು ಬೆಸೆಯುವವರೆಗೂ ಅಪ್ಪ ಅವ್ವನೇ ಜೀವನದ ಸರ್ವಸ್ವ ಆಗಿದ್ದರು. ಅವರಿಲ್ಲದ ಜೀವನ ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಅನಿಸುತ್ತಿತ್ತು. ಅವರ ಮಾತೇ ವೇದವಾಕ್ಯವಾಗಿತ್ತು.ಹೆತ್ತವರ ಪ್ರೋತ್ಸಾಹ ಬೆಂಬಲವಿಲ್ಲದೇ ನಾವು ಶೂನ್ಯ ಎನ್ನುತ್ತಿತ್ತು ಒಳ ಮನಸ್ಸು.

ನಿಮ್ಮ ಹೆತ್ತವರಿಗೆ ಈಗ ವಯಸ್ಸಾಯ್ತು. ಅರಳು ಮರಳು ಶುರುವಾಯ್ತು. ದಿನೇ ದಿನೇ ಸಣ್ಣ ಮಕ್ಕಳಂತೆ ಆಡುತ್ತಿದ್ದಾರೆ. ಹೇಳಿದ್ದನ್ನೇ ಹೇಳಿ ತಲೆ ತಿನ್ನುತ್ತಾರೆ. ನೀವು ಆಫೀಸಿಗೆ ಹೋಗಿ ಬಿಡ್ತಿರಿ. ನಾನಿಲ್ಲಿ ಅವರ ಜೊತೆ ಏಗಬೇಕು. ಎಂಬ ಪತ್ನಿಯ ದೂರು ಕೇಳಿದಾಗ ತಲೆ ಗಿರ್ರ ಎನ್ನುತ್ತೆ.

ಹೆಂಡತಿಯ ಮಾತಿಗೆ ಪ್ರತಿಯಾಗಿ ಮಾತನಾಡಿದರೆ ಮನೆಯಲ್ಲಿ ರಾಮಾಯಣ ಆಗುತ್ತದೆ ಎಂದು ತುಟಿ ಪಿಟಕ್ ಎನ್ನದೇ ಸಹಿಸಿಕೊಳ್ಳುತ್ತಾನೆ.ದುಡಿಯುವ ಮಹಿಳೆಗೂ ಇದು ನುಂಗಲಾರದ ತುತ್ತು. ಪತಿ ಮೌನವಾಗಿದ್ದರೂ ದೂರುಗಳ ಪ್ರವಾಹ ಹರಿದು ಬರುತ್ತದೆ. ಹೆಂಡತಿಯ ಉಪಟಳ ತಾಳಲಾರದೇ ಮನಸ್ಸಿಲ್ಲದಿದ್ದರೂ ಆಕೆಯ ಬಲವಂತಕ್ಕೆ ಹೆತ್ತವರ ಮುಂದೆ ನಿಲ್ಲುತ್ತಾನೆ.

- Advertisement -

ನೇರವಾಗಿ ಪ್ರಶ್ನಿಸೋಕೆ ಧೈರ್ಯ ಸಾಲುವುದಿಲ್ಲ. ‘ನನ್ನ ಹೆಂಡತಿಗೆ ಜೀವನಾನುಭವ ಸಾಲದು. ನೀವೇ ಹಿರಿಯರು ಹೊಂದಿಕೊಂಡು ಹೋಗಿ.’ ಮುದ್ದಿನ ಮಗನ ಬಾಯಲ್ಲಿ ಇಂಥ ಮಾತುಗಳು! ಕಿವಿಗೆ ಕಾದ ಸೀಸ ಸುರಿದಂತಾಗುತ್ತದೆ. ಹೆಂಡತಿ ಬಂದ ಮೇಲೆ ನಾವೆಲ್ಲ ನಿನಗೆ ಬೇಡವಾದ್ವಿ ಕಣಪ್ಪ.’ ನೊಂದ ದನಿಯಲ್ಲಿ ಹೆತ್ತವರ ಮಾತು ಕೇಳಿದಾಗ ಅಡಕೋತಿನಲ್ಲಿ ಸಿಕ್ಕಿ ಹಾಕಿಕೊಂಡ ಸ್ಥಿತಿ.

ಯಾರಿಗೂ ಏನೂ ಹೇಳಲಾಗದ ಅತಂತ್ರ ಸ್ಥಿತಿ. ಪ್ರತಿದಿನದ ಗೋಳಿಗೆ ತಲೆ ಕೆಟ್ಟು ಕೊನೆಗೆ ತನ್ನ ಆಪ್ತ ವಲಯದಲ್ಲಿ ಇದಕ್ಕೆ ಪರಿಹಾರ ಹುಡುಕಲು ಹೋದರೆ ವೃದ್ಧಾಶ್ರಮದ ದಾರಿ ಕಾಣುತ್ತದೆ. ಹೆತ್ತವರನ್ನು ಅಲ್ಲಿ ಬಿಟ್ಟು ಬರಲು ಕರಳು ಚುರುಕ್ ಎನ್ನುತ್ತಿದ್ದರೂ ಗತ್ಯಂತರವಿಲ್ಲ. ಮಕ್ಕಳಾದ ಮೇಲೆ ಅವುಗಳ ಪಾಲನೆ ಪೋಷಣೆಗೆ ಹೆತ್ತವರ ಉಪಸ್ಥಿತಿ ಬೇಕೆನಿಸುತ್ತದೆ. ಮನದ ನೋವನು ಯಾರಿಗೆ ಹೇಳೋದು ಎಂದು ಒಳಗೊಳಗೆ ಕೊರಗುವ ಸಂದರ್ಭ ಬರತ್ತದೆ.

ಸಮಸ್ಯೆ ಬಂದಾಗ ಅವಿಭಕ್ತ ಕುಟುಂಬ ಬಯಸುವ ಮನಸ್ಸು ಉಳಿದಂತೆ ವಿಭಕ್ತ ಕುಟುಂಬ ಖುಷಿ ನೀಡುತ್ತದೆ. ಹೆತ್ತವರು ಇತರ ಸಂಬಂಧಗಳು ಜೊತೆಗಿದ್ದರೆ ಸುಮ್ಮನೇ ಖರ್ಚು ಹೆಚ್ಚು. ದುಬಾರಿ ಕಾಲದಲ್ಲಿ ಅವರ ಬೇಕು ಬೇಡಿಕೆಗಳನ್ನು ನೀಗಿಸುವುದು ಸುಲಭದ ಮಾತಲ್ಲ. ಎನ್ನುವ ಮನೋಧೋರಣೆ ಹೆಚ್ಚುತ್ತಿದೆ.ಮೊದಲೆಲ್ಲ ಸಣ್ಣ ಮನೆಯಲ್ಲಿ ದೊಡ್ಡ ಕುಟುಂಬ ಜೇನುಗೂಡಿನಂತೆ ಬದುಕುತ್ತಿತ್ತು. ಈಗ ಮನೆ ದೊಡ್ಡದಾಗುತ್ತಿದೆ. ಮನಸ್ಸುಗಳು ಚಿಕ್ಕದಾಗುತ್ತಿವೆ.

- Advertisement -

ಗೂಡಿನಲ್ಲಿ ಸವಿ ಜೇನು ಸಿಗುವುದು. ಕ್ವಚ್ಚಿತ್ತಾಗಿದೆ. ಮನೆಯಲ್ಲಿ ಹಿರಿಯರಿದ್ದರೆ ತಮ್ಮ ಸ್ವಚ್ಛಂದ ನಡೆಗೆ ಅಡ್ಡ ಉಂಟಾಗುವುದೆನ್ನುವ ಭ್ರಮೆಯೂ ಕಾಡುತ್ತಿದೆ. ತೋರಿಕೆಯ ಜೀವನದ ಹುಚ್ಚಿನಲ್ಲಿ ಕಂಡದ್ದೆನ್ನೆಲ್ಲ ಮನೆಗೆ ತುಂಬಿಸುವ,. ಕುಟುಂಬದ ಪ್ರತಿಷ್ಟೆ ಮೆರೆಯುವ ಭರಾಟೆಯಲ್ಲಿ ನಿರತರಾದ ನಮಗೆ ಹೆತ್ತವರ ಹಿತವನ್ನು ಬಯಸುವ ಕನಿಷ್ಠ ಅಗತ್ಯಗಳನ್ನು ಪೂರೈಸುವುದು ದೊಡ್ಡ ಸಂಗತಿಯೆಂಬಂತೆ ಭಾಸವಾಗುವುದು.

ಎಲ್ಲ ಭಾವನೆಗಳಿಗೆ ಪ್ರತಿಸ್ಪಂದಿಸಿ ನಮ್ಮ ಏಳ್ಗೆಗೆ ಹಗಲಿರುಳು ಶ್ರಮಿಸಿದ ಹೆತ್ತವರದು ನಮ್ಮ ಜೀವನದಲ್ಲಿ ಅಗ್ರ ಸ್ಥಾನವೆಂಬುದು ಎಲ್ಲರಿಗೂ ಗೊತ್ತು ವಿಭಕ್ತ ಕುಟುಂಬಗಳಲ್ಲಿ ತಾನು ತನ್ನ ಕುಟುಂಬದ ಕನಸು ಕಾಣುತ್ತಿರುವವರಿಗೆ ವಯಸ್ಸಾದ ಹೆತ್ತವರು ಭಾರ ಎನಿಸುತ್ತಾರೆ. ತಮ್ಮ ಸ್ವಚ್ಛಂದತೆಗೆ ತೊಡರು ಎನಿಸುತ್ತಾರೆ. ತಲೆಮಾರಿನ ಅಂತರದಿಂದಾಗಿ ಆಲೋಚನೆ ವಿಚಾರ ಧಾರೆ ಜೀವನಶೈಲಿಯಲ್ಲಿ ವ್ಯತ್ಯಾಸವಿದೆ. ಎನ್ನುವುದೇ ದೊಡ್ಡ ಸಂಗತಿ.

ಆದರೆ ನಮ್ಮ ಹೆತ್ತವರು ಈ ಮೊದಲು ಹೀಗೇ ಇದ್ದರು. ನಮಗಾಗಿ ಅದೆಷ್ಟೋ ಬದಲಾಗಿದ್ದಾರೆ ಕೂಡ. ಆದರೂ ಸಂಪೂರ್ಣವಾಗಿ ಬದಲಾಗಬೇಕು ಎಂಬುದು ಎಷ್ಟು ಸರಿ? ದುಡಿದು ಸಂಬಳ ತರುವವರೆಗೂ ಅವರ ಮಾತಿಗೆ ಬೆಲೆ ಇತ್ತು. ನಿವೃತ್ತಿಯ ನಂತರ ನಿಶ್ಯಕ್ತರಾದ ಅವರು ದುಬಾರಿ ಕಾಲದಲ್ಲಿ ನಮ್ಮ ಮೇಲೆ ಅವಲಂಬಿತರು ಅದೂ ಅಲ್ಲದೇ ಪುನಃ ಪುನಃ ಆರೋಗ್ಯವೂ ಹದಗೆಡುತ್ತದೆ. ಆಸ್ಪತ್ರೆ ಮೆಟ್ಟಿಲು ಹತ್ತಿದರೆ ಆ ಪರೀಕ್ಷೆ ಈ ಪರೀಕ್ಷೆ ಅಂತ ಹಣ ಕೀಳ್ತಾರೆ. ಇವೆಲ್ಲ ತಾಪತ್ರಯಗಳಿಗೆ ಒಂದೇ ಸಾರಿ ಗುಡ್ ಬೈ ಹೇಳುವ ಸುಲಭದ ದಾರಿ ವೃದ್ಧಾಶ್ರಮ.

ಜೀವನವೆಂಬ ಸುಂದರ ಸಸಿಯನ್ನು ನೆಟ್ಟು ಕಾಲ ಕಾಲಕ್ಕೆ ಅನ್ನ ಆಹಾರ ಉಡುಗೆ ತೊಡುಗೆ ಯಾವುದಕ್ಕೂ ಕಡಿಮೆ ಮಾಡದೇ, ವಿದ್ಯೆ ಎಂಬ ಫಲವತ್ತಾದ ಗೊಬ್ಬರ ಕೊಟ್ಟು ಬೆಳೆಸಿದ ದೈವ. ರೋಗ ರುಜಿನಗಳು ಕಾಡಿದಾಗ ಕಂಡ ಕಂಡ ದೇವರನ್ನು ಸುತ್ತಿ, ಕಣ್ಣೀರ ಧಾರೆ ಸುರಿಸಿ. ತಮ್ಮ ಆಯುಷ್ಯವನ್ನೆಲ್ಲ ನಮಗೆ ಧಾರೆಯೆರಯಲು ಶುದ್ಧ ಮನಸ್ಸಿನಿಂದ ಬೇಡಿಕೊಂಡ ನಿಸ್ವಾರ್ಥ ಜೀವಿಗಳು.

ಇಷ್ಟೆಲ್ಲ ಹೊರೆಹೊತ್ತು ಹೊಣೆಯನ್ನು ಚೆನ್ನಾಗಿ ನಿಭಾಯಿಸಿದವರು, ನಮ್ಮ ಖುಷಿಯಲ್ಲಿಯೇ ತಮ್ಮ ಖುಷಿ ಕಂಡವರು. ನಮ್ಮ ಸಣ್ಣ ಸಣ್ಣ ಖುಷಿಗಳಿಗಾಗಿ ದೊಡ್ಡದನ್ನು ತ್ಯಾಗ ಮಾಡಿದ ಬದುಕು ಸವೆಸಿದ ಜೀವಿಗಳು.ಅವರ ಬೆವರ ಹನಿಯ ಫಲವಾಗಿ ನಾವಿಂದು ಈ ಸ್ಥಿತಿಯಲ್ಲಿದ್ದೇವೆ.ಎಂಬುದನ್ನು ಮರೆತು ವರ್ತಿಸುತ್ತಿದ್ದೇವೆ. ಸಸಿಯಿಂದ ಹೆಮ್ಮರವಾಗಿ ಬೆಳೆಸಿದ ಅವರಿಗೆ ತಕ್ಕ ಫಲವನ್ನು ನೀಡದೇ ಇರುವುದು ಯಾವ ನ್ಯಾಯ?

ಬ್ಯಾಂಕಿನವರು ನಮ್ಮ ಹಾಸಿಗೆಯಿಂದಾಚೆ ಕಾಲು ಚಾಚಲು ಸಹಾಯವಾಗುವಂತೆ, ಐಷಾರಾಮಿ ಅಗತ್ಯಗಳನ್ನು ಪೂರೈಸಿಕೊಳ್ಳಲು ಕರೆದು ಸಾಲ ಕೊಡುತ್ತಿದ್ದಾರೆ. ಹೀಗಾಗಿ ಬಂಗಲೆಯಂಥ ದೊಡ್ಡ ಮನೆ. ಬಂಗಲೆಯ ಮುಂದೆ ಉದ್ದನೆಯ ಕಾರು. ಮನೆ ಕಾಯಲು ಜಾತಿ ನಾಯಿ ಅಂತಃಕರಣ, ದಯೆಯ ಸಾಗರದಂತಿರುವ ಹೆತ್ತ ಜೀವಿಗಳಿಗೆ ದೊಡ್ಡ ಮನೆಯಲ್ಲಿ ಸ್ವಲ್ಪ ಜಾಗ ಇಲ್ಲವೇ? ಮನೆ ದೊಡ್ಡದಾಗಿದೆ. ಮನಸ್ಸು ಸಣ್ಣದಾಗಿದೆ. ಕೃತಘ್ನವಾಗಿದೆ. ಸ್ವಾರ್ಥಿಯಾಗಿದೆ. ಹೀಗಾಗಿ ವಯಸ್ಸಾದ ಅಪ್ಪ ಅವ್ವ ಬೇಡವಾಗಿದ್ದಾರೆ.

ಕೊಂಚ ವಿಚಾರಿಸಿ ನೋಡಿ ಇಂದು ನಾವು ಯೌವ್ವನದಲ್ಲಿದ್ದೇವೆ. ಮುಂದೊಂದು ದಿನ ನಮ್ಮನ್ನು ಮುಪ್ಪು ಆವರಿಸುವುದು ಖಚಿತ. ಆಗ ನಮ್ಮ ಮಕ್ಕಳು ನಾವೀಗ ಹೆತ್ತವರೊಂದಿಗೆ ನಡೆದುಕೊಂಡಿದ್ದನ್ನು ನೋಡಿ ಅನುಸರಿಸಿದರೆ ಬಾಳಿನ ಸಂಜೆಯ ಜೀವನ ನರಕ ಸದೃಶ. ಜೀವನವೆಂಬ ಪುಸ್ತಕದ ಕೊನೆಯ ಪುಟಗಳಲ್ಲಿರುವ ಹೆತ್ತವರನ್ನು ಗೌರವಿಸಿ ಪ್ರೀತಿಸೋಣ. ಬಾಳಿನ ಸವಿ ನೆನಪಿನ ಬುತ್ತಿ ಬಿಚ್ಚಿ ಸವಿಯಲು ಸಹಕರಿಸೋಣ. ಮುಸುಕಿನೊಳಗಿನ ನಸುಕಿನ ಭ್ರಮಾಲೋಕದ ಕನಸಿಗೆ ದೊಡ್ಡ ನಮಸ್ಕಾರ ಹೇಳಿ ಕಷ್ಟಗಳ ಕಡಲು ದಾಟಿ ನೋವುಂಡು ಸದಾ ಮಿನುಗುವ ನಗುವ ಎರಡು ನಕ್ಷತ್ರಗಳನ್ನು ಎಳೆಯ ಕಂದಮ್ಮಗಳಂತೆ ಕೈ ಹಿಡಿದು ನಡೆಸೋಣ. ಮಾಯೆಯ ಕೈ ಬಿಟ್ಟು ವಾಸ್ತವದಿ ಮುಂದಿನ ಹೆಜ್ಜೆ ಇಡೋಣ.ಒಣಗಿದ ಎಲೆಗಳಿಗೆ ನೆಮ್ಮದಿಯ ಹಸಿರು ಬಣ್ಣ ತುಂಬೋಣ.


ಜಯಶ್ರೀ.ಜೆ. ಅಬ್ಬಿಗೇರಿ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಹೂಗಾರ ಮಾದಣ್ಣ ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನ ಒಂದು ಕ್ರಾಂತಿಯ ಕಾಲ. ಅಪ್ಪ ಬಸಣ್ಣನವರ ನೇತೃತ್ವದಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ರಂಗದಲ್ಲಿ ಪರಿವರ್ತನೆಯಾಯಿತು. ವ್ಯಕ್ತಿ ಹಾಗೂ ಸಮಾಜದ...
- Advertisement -

More Articles Like This

- Advertisement -
close
error: Content is protected !!
Join WhatsApp Group