ಮೂಡಲಗಿ: ತಾಲ್ಲೂಕಿನ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಎಸ್‌ಆರ್‌ಇಎಸ್ ಪ್ರಥಮ ದರ್ಜೆ ಕಾಲೇಜು ಹಾಗೂ ಕರಾವಳಿ ಟೀಚರ್ಸ ಹೆಲ್ಪ ಲೈನ್ ಇವರ ಸಹಯೋಗದಲ್ಲಿ ಅ. ೨೨ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಏರ್ಪಡಿಸಿರುವರು.
ಉದ್ಯೋಗ ಮೇಳದ ಮಾಹಿತಿ ಮತ್ತು ಪ್ರಚಾರ ಪತ್ರಿಕೆಯನ್ನು ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಅವರು ಕಾಲೇಜಿನಲ್ಲಿ ಬಿಡುಗಡೆಗೊಳಿಸಿ ಮಾತನಾಡಿ ‘ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಮೇಳದಲ್ಲಿ ಸಾಕಷ್ಟು ಅವಕಾಶಗಳು ಇದ್ದು, ಮೇಳದ ಉಪಯೋಗವನ್ನು ಪಡೆದುಕೊಳ್ಳಬೇಕು’ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಮಾತನಾಡಿ, ಉದ್ಯೋಗಾಕಾಂಕ್ಷಿ ಯುವಕ, ಯುವತಿಯರಿಗೆ ನೇರ ಸಂದರ್ಶನದ ಮೂಲಕ ಪ್ರತಿಷ್ಠಿತ ಶಾಲೆ, ಕಾಲೇಜುಗಳು, ಬ್ಯಾಂಕಿಂಗ್ ಕ್ಷೇತ್ರ ಮತ್ತು ಎಂಎನ್‌ಸಿ ಕಂಪನಿಗಳಲ್ಲಿ ನೇರ ನೇಮಕಾತಿ ಹೊಂದುವ ಅವಕಾಶಗಳಿವೆ ಎಂದರು.
ಎಸ್‌ಎಸ್‌ಎಲ್‌ಸಿಯಿಂದ ಹಿಡಿದು ಕಲಾ, ವಾಣಿಜ್ಯ, ವಿಜ್ಞಾನ, ಎಂಜಿನಿಯರಿಂಗ್ ಪದವಿ ಮತ್ತು ಸ್ನಾತಕೋತ್ತರ ಪದವಿಯವರೆಗೆ ಮೇಳದಲ್ಲಿ ಉದ್ಯೋಗದ ಅವಕಾಶಗಳು ಇವೆ ಎನ್ನಲಾಗಿದ್ದು ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು ಎಂದು ತಿಳಿಸಿದ್ದಾರೆ.
ಸಂಸ್ಥೆಯ ನಿರ್ದೇಶಕರಾದ ಸಾತಪ್ಪಾ ಖಾನಾಪುರ, ಎಂ.ಡಿ. ಕುರಬೇಟ, ಎನ್‌ಎಸ್‌ಎಸ್ ಯೋಜನಾಧಿಕಾರಿ ಶಂಕರ ನಿಂಗನೂರ, ಬಿ.ಕೆ. ಸೊಂಟನವರ ಇದ್ದರು.
ಅಧಿಕ ಮಾಹಿತಿಗಾಗಿ ಮೊ. ೯೪೪೮೦೦೩೬೮೨, ೯೭೪೩೨೧೮೪೮೦ ಸಂಪರ್ಕಿಸಲು ತಿಳಿಸಿದ್ದಾರೆ.