ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ ಶ್ರೀಗಳು ಹೇಳಿದರು.
ಪಟ್ಟಣದ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ವಿಶ್ವ ಬಂಧು ಪರಿಸರ ಬಳಗ ಹಮ್ಮಿಕೊಂಡಿದ್ದ ವಾರಕ್ಕೊಮ್ಮೆ ಹಸಿರು ಅಭಿಯಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಮಗರಿವಿಲ್ಲದೇ ನಗರೀಕರಣ, ಜನ ಸಂಖ್ಯಾ ಸ್ಪೋಟದ ಪರಿಣಾಮವಾಗಿ ನಿಸರ್ಗವನ್ನು ನಾಶಮಾಡಿ ಸ್ವಯಂಕೃತ ಅಪರಾಧವನ್ನು ಎಸಗಿ ಅದರ ದುಷ್ಪರಿಣಾಮವನ್ನು ಅನುಭವಿಸುತ್ತಿದ್ದೇವೆ. ಅದನ್ನು ಸರಿದೂಗಿಸಬೇಕೆಂದರೆ ನಾವೆಲ್ಲರೂ ಗಿಡ ಮರಗಳನ್ನು ನೆಟ್ಟು ದಿನನಿತ್ಯ ನೀರುಣಿಸಿ ಪೋಷಿಸಬೇಕು ಎಂದರು.
ವಿಶ್ವಭಂಧು ಪರಿಸರ ಬಳಗದ ಸಂಚಾಲಕ, ಕಸಾಪ ಅಧ್ಯಕ್ಷ ಸಿಧ್ಧಲಿಂಗ ಚೌಧರಿ ಪ್ರಾಸ್ತಾವಿಕ ವಾಗಿ ಮಾತನಾಡಿ, ಪ್ರಕೃತಿದತ್ತವಾಗಿ ದೊರೆಯುವ ಆಮ್ಲಜನಕದ ಮಹತ್ವ ಅರಿಯದ ನಾವು ಗಿಡ ಮರ ನಾಶ ಮಾಡಿ, ಸಂಜೀವಿನಿಯಾದ ಆಮ್ಲಜನಕವನ್ನು ದುಡ್ಡು ಕೊಟ್ಟು ಕೊಂಡುಕೊಳ್ಳುವ ಸಂದರ್ಭ ಬಂದೊದಗಿದ್ದು ವಿಪರ್ಯಾಸ. ಇದೇ ಪರಿಸ್ಥಿತಿ ಮುಂದುವರೆದರೆ ಜೀವ ಸಂಕುಲಕ್ಕೆ ಖಂಡಿತ ಉಳಿಗಾಲವಿಲ್ಲ. ಕಾರಣ ಹಸಿರು ಪರಿಸರ ಉಳಿಸಿ, ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಬೇಕು. ನಾವೆಲ್ಲರೂ ನಿಸರ್ಗದ ಕೂಸುಗಳು ಎಂಬುದನ್ನು ಮರೆತಿದ್ದೇವೆ. ಅದಕ್ಕೆ ನಿರಂತರ ಕೊಡಲಿ ಪೆಟ್ಟು ಹಾಕಿ ಇವತ್ತು ನಾಶದ ಅಂಚಿನಲ್ಲಿ ಬಂದು ನಿಂತಿದ್ದೇವೆ. ನಾವೆಲ್ಲರೂ ಪರಿಸರ ಪ್ರೇಮಿಗಳಾಗಿ ಅದನ್ನು ಬೆಳೆಸಿ, ನಾವು ಉಳಿಯಬೇಕು, ಮುಂದಿನ ಪೀಳಿಗೆಯನ್ನೂ ಜೀವಂತ ಉಳಿಸಬೇಕು ಎಂದರು.
ವಿಶ್ವಬಂದು ಪರಿಸರ ಬಳಗ ಮತ್ತು ಕಸಾಪ ಸಹಯೋಗದಲ್ಲಿ ಈ ವಾರದ 20 ಸಸಿಗಳನ್ನು, ಕೈಗಾರಿಕಾ ವಸಾಹತು ಪ್ರದೇಶದಲ್ಲಿ ನೆಡಲಾಯಿತು. ಕಾನಿಪ ಅಧ್ಯಕ್ಷ ಆನಂದ ಶಾಬಾದಿ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಅಗಸರ ಸ್ವಾಗತಿಸಿದರು. ನಿವೃತ್ತ ಪ್ರಾಧ್ಯಾಪಕ ಪಿ.ಎಮ್. ಮಡಿವಾಳರ್, ವಿಶ್ರಾಂತ ಪೋಲಿಸ್ ಅಧಿಕಾರಿ ಬಿ.ಪಿ ಹುಲಸಗುಂದ, ಶಂಕರ್ ಮಳ್ಳಿ, ಶಿವಕುಮಾರ ಕಲ್ಲೂರ, ಗಂಗಾಧರ ರೊಟ್ಟಿ, ಸಂತೋಷ ಕಲ್ಲೂರ, ಪರಶುರಾಮ ಪೂಜಾರಿ, ಆರ್ ಎಚ್ ಬಿರಾದಾರ, ಮುಖ್ಯ ಗುರುಮಾತೆ ಎಸ್ ಎಂ ಮಸಳಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪುರಸಭೆ ಆಶ್ರಯ ಸಮಿತಿಯ ನೂತನ ಸದಸ್ಯರಾದ ರಾಕೇಶ ಕಂಠಿಗೊಂಡ, ಖಾಜು ಬಂಕಲಗಿ, ರಫೀಕ ಮುಜಾವರ, ಚೆನ್ನಯ್ಯ ನಂದಿಕೋಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವರದಿ: ಪಂಡಿತ್ ಯಂಪೂರೆ, ಸಿಂದಗಿ