spot_img
spot_img

ಪರಿಸರ ಪ್ರೇಮಿ ಲಕ್ಕಣ್ಣ ಸವಸುದ್ದಿ

Must Read

ಪರಿಸರ ಪ್ರೇಮಿಯಾಗಿ ಯುವಕರಿಗೆ ಮಾದರಿ ! ವಿಶ್ವ ಪರಿಸರ ದಿನದ ಅಂಗವಾಗಿ  ಕಿರು ಲೇಖನ
- Advertisement -

ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ,ಧರೆ ಹತ್ತಿ ಉರಿದೊಡೆ ನಿಲಬಹುದೇ?
ಏರಿ ನೀರುಂಬಡೆ,ಬೇಲಿ ಕೆಯ್ಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ,
ತಾಯ ಮೊಲೆವಾಲು ನಂಜಾಗಿ ಕೊಲುವಡೆ,ಇನ್ನಾರಿಗೆ ದೂರುವೆ ಕೂಡಲ ಸಂಗಮದೇವ.

ಬುದ್ಧಿ ಜೀವಿಯಾದ ಮನುಷ್ಯನು ತಾನು ಕಾಪಾಡಬೇಕಾಗಿರುವುದನ್ನು ತಾನೇ ನಾಶಪಡಿಸಲು ತೊಡಗಿದಾಗ,ಅದರಿಂದ ಆಗುವ ವ್ಯತಿರಿಕ್ತ ಪರಿಣಾಮಗಳನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಾಗುವುದಿಲ್ಲವೆಂಬ ವಾಸ್ತವ ಸತ್ಯವನ್ನು ರೂಪಕಗಳ ಮೂಲಕ 12ನೇ ಶತಮಾನದಲ್ಲಿ ವಚನಗಳ ಮೂಲಕ ಬಸವಣ್ಣವರು ಜಗತ್ತಿಗೆ ಸಾರಿದ್ದಾರೆ.ಅದು ಈಗಿನ ಕೋವಿಡ್ ನಂತಹ ವಾಸ್ತವ ಪರಿಸ್ಥಿತಿಗೂ ಅನ್ವಯಿಸುವಂತಿದೆ.

“ನಮಗೆ ಇರುವುದೊಂದೆ ಇಳೆ,ಅದರ ಸಂರಕ್ಷಣೆಯೇ ನಮ್ಮೆಲ್ಲರ ಹೊಣೆ” ಎಂಬುದೇ ಸಾರ್ವತ್ರಿಕ ಅಭಿಪ್ರಾಯ. ಪರಿಸರ ಮಾಲಿನ್ಯ ಎಂಬುದು ಜಗತ್ತನ್ನು ಅತ್ಯಂತ ತೀವ್ರವಾಗಿ ಕಾಡುತ್ತಿರುವ ಸಂಧರ್ಭದಲ್ಲಿ ಪ್ರಕೃತಿಯನ್ನು ಉಳಿಸಿಕೊಳ್ಳುವುದೇ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

- Advertisement -

ಈ ಆಶಯದೊಂದಿಗೆ ಜನ ಜಾಗೃತಿಯ ಅಭಿಯಾನಕ್ಕೆ ಪ್ರತಿ ವರ್ಷ ಜೂನ್ 5ರಂದು ಆಚರಣೆಯಾಗುವ ವಿಶ್ವ ಪರಿಸರ ದಿನವೂ ಸ್ಪೂರ್ತಿಯಾಗಿದೆ.ವಿಶ್ವ ಸಂಸ್ಥೆಯು ಪರಿಸರ ಭದ್ರತೆ ಹಾಗೂ ಆರೋಗ್ಯ ಪೂರ್ಣ ಭವಿಷ್ಯದ ಉದ್ದೇಶದಿಂದ, ಪರಿಸರ ಸಂರಕ್ಷಣೆಗೆ ವಿವಿಧ ಯೋಜನೆ,ಹಾಗೂ ಕಾರ್ಯಕ್ರಮಗಳನ್ನು ರೂಪಿಸಿ 1974 ಜೂನ್ 5ರಂದು “ವಿಶ್ವ ಪರಿಸರ ದಿನವಾಗಿ” ಘೋಷಣೆ ಮಾಡಿತು.

ಪರಿಶುದ್ಧ ಪರಿಸರವನ್ನು ರೂಪಿಸಲು ಪರಿಸರ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ರೂಪಿಸುವುದೇ ಈ ಅಭಿಯಾನದ ಉದ್ಧೇಶವಾಗುವುದರ ಜೊತೆಗೆ ಸ್ವಚ್ಛ ಮತ್ತು ಸುಂದರ ಪರಿಸರದ ನಿರ್ಮಾಣ ಮೂಲ ಧ್ಯೇಯವಾಯಿತು.

- Advertisement -

ವಿಶ್ವ ಪರಿಸರ ದಿನವಾದ ಇಂದು,ಪರಿಸರ ಬಗ್ಗೆ ಅತಿಯಾದ ಕಾಳಜಿ ಹಾಗೂ ಸಂರಕ್ಷಣೆ ಮಾಡುವ ಅನೇಕ ಮಹನೀಯರ ಸಾಲಲ್ಲಿ ನಿಂತುಕೊಳ್ಳುವ ವ್ಯಕ್ತಿಯೆಂದರೆ ಲಕ್ಕಣ್ಣ ಸವಸುದ್ದಿ.ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದವರಾದ ಇವರು,ಕಾಂಗ್ರೆಸ್ ಮುಖಂಡರು,ಮೂಡಲಗಿ ತಾಲೂಕಾ ಹೋರಾಟ ಸಮಿತಿ ಸದಸ್ಯರು ಆಗಿದ್ದಾರೆ.ರಾಜಕಾರಣದಲ್ಲಿ ಸರಳ ಹಾಗೂ ನೇರ ವ್ಯಕ್ತಿತ್ವಕ್ಕೆ ಗುರುತಿಸಲ್ಪಡುವ ಇವರು ಪರಿಸರವಾದಿ ಕೂಡ ಹೌದು. ರಾಜಕಾರಣದಲ್ಲಿ ಸಕ್ರಿಯರಾಗಿದ್ದರು ತಮ್ಮ ಮೂಲ ಕೃಷಿಯನ್ನು ಮತ್ತು ಪರಿಸರ ಪ್ರೇಮವನ್ನು ಮಾತ್ರ ಮರೆತಿಲ್ಲ. ಇದಕ್ಕೆ ಪುರಾವೆ ಎಂಬಂತೆ ಅವರು ರೂಢಿಸಿಕೊಂಡಿರುವ ಜೀವನ ಶೈಲಿ.

ಮೂಡಲಗಿ ತಾಲೂಕಿನ ಕಲ್ಲೋಳಿಯಲ್ಲಿರುವ ಲಕ್ಕಣ್ಣ ಸವಸುದ್ದಿಯವರ ಮನೆಗೆ ಭೇಟಿಕೊಟ್ಟರೆ ಮೊದಲು ಕೈ ಬೀಸಿ ಬರಮಾಡಿಕೊಳ್ಳುವುದು ನೂರಾರು ಗಿಡಮರಗಳು. ಹೌದು  ತುಂಬಾ ಜನ ಗಿಡಮರಗಳನ್ನು ಹೊಡೆದುರುಳಿಸಿ ಭವ್ಯ ಬಂಗಲೆ ಕಟ್ಟಿಸಿಕೊಂಡು ಕಾಂಕ್ರೀಟ ಕಾಡಿನಲ್ಲಿ ಇರುವ ಈಗಿನ ಕಾಲದಲ್ಲಿ ಸವಸುದ್ದಿಯವರು ತಮ್ಮ 8 ರಿಂದ 9 ಎಕರೆ ಜಮೀನಿನ 10ಗುಂಟೆ ಜಾಗದಲ್ಲಿ ನೂರಾರು ಗಿಡಮರಗಳ ಮಧ್ಯೆ ಮನೆ ಕಟ್ಟಿಕೊಂಡು ನಿಸರ್ಗದ ಮದ್ಯದಲ್ಲಿದ್ದು ಸುದ್ದಿಯಲ್ಲಿದ್ದಾರೆ.

ಮನೆಯ ಮುಂದೆ ನಿಂತರೆ ಸಿನಿಮಾ ಚಿತ್ರೀಕರಣಕ್ಕೆ ಕಾಡಿನಲ್ಲಿ ಮನೆಯ ಸೆಟ್ ಹಾಕಿದ್ದಾರೆನೋ ಎಂಬ ಅನುಭವವಾಗುವುದಂತೂ ನಿಜ.ಆದರೆ ನೈಸರ್ಗಿಕವಾಗಿ ನೂರಾರು ವಿಭಿನ್ನ ಪ್ರಜಾತಿಯ ಗಿಡಮರಗಳನ್ನು ನೆಟ್ಟು ಈಗ ಹೆಮ್ಮರಗಳಾಗಿ ಮನೆಯ ಅಂದವನ್ನು ಇಮ್ಮಡಿಗೊಳಿಸಲು ಲಕ್ಕಣ್ಣ ನವರು ಪಟ್ಟ ಶ್ರಮ ಅಲ್ಲಿ ಗೋಚರವಾಗುವುದು.

ಗೇಟ್ ತೆಗೆದು ಕಂಪೌಂಡ್ ಒಳಗೆ ಕಾಲಿಟ್ಟರೆ ಸಾಕು ಎಲ್ಲ ಕಡೆ ಸುಂದರ ಹುಲ್ಲು ಹಾಸು,ಮಧ್ಯೆ ಸುಂದರ ಮನೆ,ಪಕ್ಕದಲ್ಲಿ ಪುಟ್ಟ ಸಂದರ್ಶಕರ ಕೋಣೆ.ಸುತ್ತಲೂ ವಿಭಿನ್ನ ಜಾತಿಯ ಗಿಡಮರಗಳನ್ನು ನೋಡಲು ನಯನ ಮನೋಹರವಾಗಿದೆ.ಎಲ್ಲಿಯೂ ಕೂಡ ಕೃತ್ರಿಮತೆಗೆ ಆಸ್ಪದ ಕೊಡದೆ ಎಲ್ಲವನ್ನು ನೈಸರ್ಗಿಕ ವಾಗಿ ಬೆಳೆಸಿ ಮನೆಯ ಅಂದವನ್ನು ಹೆಚ್ಚಿಸಿವೆ.

ವಿಶ್ವ ಪರಿಸರ ದಿನದ ಅಂಗವಾಗಿ ಲಕ್ಕಣ್ಣ ಸವಸುದ್ದಿಯವರನ್ನು ನೋಡಿದರೆ,ಪ್ರಕೃತಿ ಮಡಿಲಲ್ಲಿ ನೂರಾರು ಗಿಡಮರಗಳನ್ನು ನೆಟ್ಟು ಅದರ ಮಧ್ಯೆ ಅಂದದ ಮನೆ ಮಾಡಿಕೊಂಡು ವಾಸವಾಗಿರುವುದು ಬೇರೊಬ್ಬರಿಗೆ ಮಾದರಿಯಾಗಿದ್ದಾರೆ.ತಮ್ಮ ರಾಜಕೀಯ ಬ್ಯುಸಿ ಬದುಕಿನಲ್ಲೂ ಕೂಡ,ಪರಿಸರ ಸರಕ್ಷಣೆಗೆ ಹಾಗೂ ಕೃಷಿಗೆ ಹೆಚ್ಚಿನ ಸಮಯ ಕೊಡುತ್ತಿರುವುದು ಶ್ಲಾಘನೀಯ.

ಅವರ ಮನೆ ಸುತ್ತ ಇರುವ 8 ರಿಂದ 9 ಎಕರೆ ಜಮೀನಿನಲ್ಲಿ 3 ಬೋರ್,1ಬಾವಿ ಇದೆ,ಇದೆ ನೀರಿನಿಂದ ಎಲ್ಲ ಜಮೀನಿಗೆ ನೀರುಣಿಸುತ್ತಾರೆ. ತೋಟದ ತುಂಬಾ ಒಂದು ಸುತ್ತು ಹಾಕಿ ಬಂದರೆ ಸಾಕು ಇಲ್ಲಿ ಕಲಿಯುವುದು ತುಂಬಾ ಇದೆ ಅಂತ ಅನಿಸುವುದಂತು ಸತ್ಯ. ಏಕೆಂದರೆ ಯಾವ ಪ್ರಗತಿಪರ ರೈತನಿಗೂ ಕಡಿಮೆ ಇಲ್ಲ ಅನ್ನುವ ಹಾಗೆ ಅವರು ರೂಢಿಸಿಕೊಂಡಿರುವ  ಕೃಷಿ ಹಾಗೂ ಕೃಷಿ ಪದ್ಧತಿಗಳು.

ಹೆಚ್ಚಾಗಿ ಈ ಭಾಗದ ರೈತರು ತಮ್ಮ ಜಮೀನುಗಳಲ್ಲಿ ಕಬ್ಬನ್ನು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದು ವಾಡಿಕೆ,ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಲಕ್ಕಣ್ಣ ನವರು ತಮ್ಮ ತೋಟದಲ್ಲಿ ಕಬ್ಬು ಬೆಳೆಯುವುದರ ಜೊತೆಗೆ ಜವಾರಿ ಬಾಳೆ ಹಣ್ಣು,ಅರಿಶಿಣ,ತೆಂಗಿನ ಗಿಡ, ದಾಳಿಂಬೆ ಗಿಡ, ಪೇರಲ, ಚಿಕ್ಕು ಗಿಡಗಳು, ಮಾವಿನ ಮರಗಳು, ಹೀಗೆ ವಿಭಿನ್ನ ರೀತಿಯ ಸೀಜನಲ್ ಹಣ್ಣಿನ ಗಿಡಗಳನ್ನು ಕೂಡ ಬೆಳೆದು ಇಳುವರಿಯನ್ನು ಪಡೆಯುತ್ತಿದ್ದಾರೆ.

ಇದರ ಜೊತೆಗೆ ಆಯುರ್ವೇದದಲ್ಲಿ ಹೆಸರಾಗಿರುವ ಅನೇಕ ಗಿಡಮೂಲಿಕೆ ಬಳ್ಳಿ ಮತ್ತು ಗಿಡಗಳು, ಜೊತೆಗೆ ಹತ್ತಿ ಮರ, ಬೋರೆ ಗಿಡ ಹೀಗೆ ಅನೇಕ ವಿಭಿನ್ನ ಪ್ರಜಾತಿಯ 200 ರಿಂದ 300 ಗಿಡಗಳನ್ನು ನಾವು ಕಾಣಬಹುದು. ಕಬ್ಬು ಬೆಳೆಯ ಜೊತೆಗೆ ಸೀಜನಲ ಹಣ್ಣಿನ ಗಿಡಗಳನ್ನು ಬೆಳೆಯುವುದರಿಂದ ಒಂದಿಲ್ಲ ಒಂದು ಬೆಳೆಯಲ್ಲಿ ನಾವು ಲಾಭವನ್ನು ಗಳಿಸಬಹುದಾಗಿದೆ ಎಂದು ರೈತರಿಗೆ ಸಲಹೆ ನೀಡುತ್ತ ಮಾದರಿಯಾಗಿದ್ದಾರೆ.

ಬಂದ ರೈತರಿಗೆ ತಿಳುವಳಿಕೆ ನೀಡುತ್ತ ಸರ್ಕಾರದ ಅನೇಕ ಸವಲತ್ತುಗಳನ್ನು ರೈತರು ಸರಿಯಾಗಿ ಬಳಸಿಕೊಂಡು, ಡ್ರಿಪ್,ಸ್ಪ್ರಿಂಕ್ಲರ್ ನಂತಹ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ರಾಸಾಯನಿಕ ಗೊಬ್ಬರಕ್ಕೆ ಮಾರು ಹೋಗದೆ ಹೆಚ್ಚಾಗಿ ಸಾವಯವ ಗೊಬ್ಬರ ಬಳಕೆ ಮಾಡಿದ್ದೆ ಆದರೆ,ನಮ್ಮ ಪ್ರತಿ ರೈತ ಯಾವುದೇ ಸಾಲ ಬಾಧೆ ಇಲ್ಲದೆ ಪ್ರಗತಿ ಪರ ರೈತನಾಗಿ ಹೊರ ಹೊಮ್ಮುವಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕಿವಿಮಾತು ಹೇಳುತ್ತಾರೆ.

ನಾವು ಈ ಕೊರೊನಾ ಸಮಯದಲ್ಲಿ ಆಮ್ಲಜನಿಕದ ಸಲುವಾಗಿ ಹಾತೊರೆಯುತ್ತ,ಅಲೆಯುತ್ತಿರುವ ಪ್ರಮುಖ ಕಾರಣವೇ ಪರಿಸರ ನಾಶ.ಮನೆಯ ಸುತ್ತ ಮುತ್ತ ಗಿಡ ಮರಗಳನ್ನು ನೆಟ್ಟು ನಮ್ಮ ಪರಿಸರವನ್ನು ಚೆನ್ನಾಗಿ ಇಟ್ಟುಕೊಂಡರೆ ಕಾಲ ಕಾಲಕ್ಕೆ ಮಳೆ ಬೆಳೆ ಆಗುವುದಲ್ಲದೆ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣವು ತನ್ನಿಂದ ತಾನೇ ಹೆಚ್ಚುತ್ತ,ಶುದ್ಧ ಗಾಳಿಯಿಂದ ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ ಎನ್ನುತ್ತಾರೆ ಸವಸುದ್ದಿಯವರು.ಯಾವುದೇ ಕೆಲಸ ಫಲ ಕೊಡಬೇಕಾದರೆ ಶ್ರದ್ಧೆ ಮತ್ತು ತುಂಬಾ ದಿನದ ಅವಿರತ ಪ್ರಯತ್ನವಿರುತ್ತದೆ.

ಈ ಗಿಡ ಮರಗಳು ಇಷ್ಟು ದೊಡ್ಡ ಹೆಮ್ಮರವಾಗಿ ಬೆಳೆದು ಫಲ ಕೊಡಲು ಏನಿಲ್ಲವೆಂದರೂ ನಮ್ಮ 15ವರ್ಷಗಳ ಪ್ರೀತಿ ಮತ್ತು ಶ್ರಮವಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.ತಮ್ಮ ಹಾಗೆಯೇ ತಮ್ಮ ಪ್ರೀತಿಯ ಧರ್ಮ ಪತ್ನಿಯು ಕೂಡ ಗಿಡ ನೆಡುವ ಹಾಗೂ ನೀರುಣಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ.ಜೊತೆಗೆ ತಮ್ಮ ಪ್ರೀತಿಯ ಪುಟಾಣಿ 10ವರ್ಷ ಹಾಗೂ 4ವರ್ಷದ ಪುತ್ರಿಯರು ಕೂಡ ಪುಟ್ಟ ಸಸಿಗಳನ್ನು ನೆಡುವುದು, ದಿನಾಲು ಎಲ್ಲ ಗಿಡಗಳಿಗೆ ನೀರು ಉಣಿಸುವುದೆಂದರೆ ಎಲ್ಲಿಲ್ಲದ ಉತ್ಸಾಹ ಎಂದು ಹೇಳುತ್ತಾರೆ.

ಒಟ್ಟಿನಲ್ಲಿ ಜನರು ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಒತ್ತು ಕೊಟ್ಟು,ಈ ಲಾಕ್ ಡೌನ್ ಸಮಯದ ಬಿಡುವಿನ ವೇಳೆಯಲ್ಲಿ ಇಂತಹ ಅನೇಕ ಪರಿಸರ ಪ್ರೇಮಿಗಳನ್ನು ಮಾದರಿಯನ್ನಾಗಿಟ್ಟುಕೊಂಡು,ತಮ್ಮ ತೋಟದಲ್ಲಿ ಅಥವಾ ಮನೆಯ ಮುಂದೆ ಚಿಕ್ಕ ಹೂದೋಟ, ಕಡೆಯ ಪಕ್ಷ ಒಂದೆರಡು ಗಿಡವನ್ನಾದರು ನೆಟ್ಟು ಪೋಷಿಸಿದ್ದೆ ಆದರೆ ಪ್ರಸಕ್ತ ಹಾಗೂ ಭವಿಷ್ಯದ ಆರೋಗ್ಯಯುತ ವಾತಾವರಣ ನಿರ್ಮಾಣವಾಗುವುದರಲ್ಲಿ ಎರಡು ಮಾತಿಲ್ಲ ಎಂಬುದೇ ಪತ್ರಿಕೆಯ ಆಶಯ.


ಚಂದ್ರಶೇಖರ್ ಪತ್ತಾರ

- Advertisement -
- Advertisement -

Latest News

Shahid Kapoor Birthday: ಈ ಬಾಲಿವುಡ್ ಹೀರೊ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಶಾಹಿದ್ ಕಪೂರ್ ಬಾಲಿವುಡ್ ನ ಬಹು ಬೇಡಿಕೆಯ ನಟರಲ್ಲಿ ಒಬ್ಬರು. ಇಂದು (ಫೆಬ್ರವರಿ 25) ಅವರ ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಎರಡು ದಶಕಗಳಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group