ಮೂಡಲಗಿ: ‘ಪರಿಸರದ ಉಳಿವು ಜೀವಸಂಕುಲದ ಉಳಿವು ಅಗಿದ್ದು, ಶುದ್ಧ ಪರಿಸರಕ್ಕೆ ಗಿಡಮರಗಳ ಕೊಡುಗೆಯು ಅಪೂರ್ವವಾಗಿದೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.
ಇಲ್ಲಿಯ ವಿಶ್ವಭಾರತಿ ಶಿಕ್ಷಣ ಸಂಸ್ಥೆಯ ಶಾಂತಿನಿಕೇತನ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಸಿಗಳಿಗೆ ನೀರುಣಿಸುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಶಾಲಾ ಮಕ್ಕಳಲ್ಲಿ ಗಿಡಮರಗಳ ಬೆಳೆಸುವ ಪ್ರಜ್ಞೆಯನ್ನು ಬೆಳೆಸಬೇಕು ಎಂದರು.
ನದಿ, ಬೆಟ್ಟ, ಕೆರೆ, ಗಾಳಿ, ಮಣ್ಣು, ಗಿಡ, ಮರಗಳೆಲ್ಲ ಪರಿಸರದ ಭಾಗವಾಗಿದ್ದು, ಪರಿಸರವನ್ನು ಕೆಣಕಿದಷ್ಟು ಅದು ಜೀವ ಸಂಕುಲಕ್ಕೆ ಅಪಾಯಕಾರವಾಗಿದೆ. ಕೋವಿಡ್ ನಮಗೆ ಈಗಾಗಲೇ ಎಚ್ಚರಿಕೆಯನ್ನು ನೀಡಿದ್ದು, ಅದನ್ನು ನೆನಪಿಸಿಕೊಂಡಾದರೂ ಶುದ್ಧ ಪರಿಸರ ಸಂರಕ್ಷಿಸುವುದಕ್ಕೆ ಪ್ರಾಮಾಣಿಕರಾಗುವುದು ಅವಶ್ಯವಿದೆ ಎಂದರು.
ಅರಳಿ ಮರ, ಅರ್ಜುನ ಮರ, ಅಶೋಕ ಮರ, ಬಿದಿರು, ಆಲದ ಮರ, ತುಳಸಿ, ಬೇವಿನ ಮರ ಸೇರಿದಂತೆ ಹಲವು ಪ್ರಬೇಧ ಮರಗಳು ಆಮ್ಲಜನಕವನ್ನು ಯಥೇಚ್ಛವಾಗಿ ನೀಡುವ ಯಂತ್ರಗಳು ಇದ್ದಂತೆ. ಇವು ವಾಯು ಮಾಲಿನ್ಯವನ್ನು ಸಹ ತಡೆಯುತ್ತವೆ ಎಂದರು.
ನಿವೃತ್ತ ಶಿಕ್ಷಕ ಜಿ.ಕೆ. ಮುರಗೋಡ ಮಾತನಾಡಿ, ‘ಪ್ರಾಣವಾಯು ವಿಪುಲವಾಗಿ ದೊರಕಿಸಿಕೊಳ್ಳುವುದಕ್ಕೆ ಗಿಡಮರಗಳನ್ನು ಬೆಳೆಸುವುದು ಅವಶ್ಯವಿದೆ’ ಎಂದರು.
ವಿಶ್ವಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಈಶ್ವರ ಮುರಗೋಡ ಅಧ್ಯಕ್ಷತೆ ವಹಿಸಿದ್ದರು. ಸುಭಾಷ ಬೆಳಕೂಡ, ಬಸವರಾಜ ಮುರಗೋಡ, ಸಂಸ್ಥೆಯ ಉಪಾಧ್ಯಕ್ಷ ಸುರೇಶ ಬೆಳಕೂಡ, ರಮೇಶ ಒಂಟಗೂಡಿ, ಕಲ್ಲಪ್ಪ ಒಂಟಗೂಡಿ, ಈರಪ್ಪ ಚಿಪ್ಪಲಕಟ್ಟಿ, ವಿದ್ಯಾಶ್ರೀ ಮುರಗೋಡ ಇದ್ದರು.
ಮುಖ್ಯ ಶಿಕ್ಷಕ ನದಾಫ ಅವರು ನಿರೂಪಿಸಿದರು.