ಕಾದಂಬರಿಕಾರ, ವಿಮರ್ಶಕ ಡಾ. ಸುರೇಶ ಪಾಟೀಲರ ನೂತನ ಕಾದಂಬರಿ “ಸನ್ನಿಧಿ”ಯ ಲೋಕಾರ‍್ಪಣೆ ಇದೇ ಭಾನುವಾರ ಬೆಳಿಗ್ಗೆ ೧೦.೦೦ ಗಂಟೆಗೆ ನಗರದ ಶೇಷಾದ್ರಿ ಪುರಂ ಸಂಜೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಪುಸ್ತಕದ ಲೋಕಾರ‍್ಪಣೆಯನ್ನು ನಾಡೋಜ ಮನು ಬಳಿಗಾರ್, ನಿಕಟಪೂರ‍್ವ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಇವರು ನೆರವೇರಿಸಲಿದ್ದಾರೆ.
ಕಾದಂಬರಿಯ ಕುರಿತು ವೀಣಾ ಬನ್ನಂಜೆ, ವಿಮರ‍್ಶಕಿ, ಲೇಖಕಿ ಇವರು ಮಾತನಾಡಲಿದ್ದು ಸಭೆಯ ಅಧ್ಯಕ್ಷತೆಯನ್ನು ಡಾ.ಕೃಷ್ಣ ಕಟ್ಟಿ, ನಿವೃತ್ತ ಪ್ರಾಧ್ಯಾಪಕರು, ಪ್ರಸಿದ್ಧ ಸಾಹಿತಿಗಳು ವಹಿಸಲಿದ್ದಾರೆ. ಐಸಿರಿ ಪ್ರಕಾಶನದಿಂದ ಮುದ್ರಣಗೊಂಡಿರುವ ಈ ವಿಶೇಷ ಕಾದಂಬರಿಯ ಲೋಕಾರ‍್ಪಣೆಯು ಶೇಷಾದ್ರಿಪುರಂ ಸಂಜೆ ಕಾಲೇಜು , ಗೋಧೂಳಿ ಕನ್ನಡ ಸಂಘ ಮತ್ತು ಸುಮೇರು ಟ್ರಸ್ಟ್‌ನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ ಎಂದು ಆಯೋಜಕರಾದ ಪ್ರಾಚಾರ‍್ಯ ಡಾ.ಎನ್.ಎಸ್.ಸತೀಶ್ ಮತ್ತು ಐಸಿರಿ ಪ್ರಕಾಶನ ಪ್ರಕಾಶನದ ಪ್ರಕಾಶಕ ಡಾ.ಮಂಜುನಾಥ ಪಾಳ್ಯ ತಿಳಿಸಿದ್ದಾರೆ.
ಲೇಖಕರ ಪರಿಚಯ :
ಲೇಖಕರಾದ ಡಾ. ಸುರೇಶ ಪಾಟೀಲರು, ಕಾದಂಬರಿಕಾರರು, ಲೇಖಕರು, ಇಲ್ಲಿಯವರೆಗೆ ೧೪-೧೫ ಕಾದಂಬರಿಗಳನ್ನು, ಹಲವು ವಿಮರ‍್ಶಾ ಗ್ರಂಥಗಳನ್ನು ಕಥಾ ಸಂಕಲನಗಳನ್ನು ಬರೆದಿದ್ದಾರೆ. ಇದಕ್ಕೆ ಮೊದಲು ಬರೆದ ಪರೀಕ್ಷಿತ ರಾಜನ ಮನದಾಳದ ಮಾತುಗಳನ್ನು ಬಿಂಬಿಸುವ “ಪರೀಕ್ಷಿತ”, ಮರಣಾನಂತರದ ವಿಷಯದ ಕುರಿತಾದ “ಸ್ವಧಾ” ಇತ್ತೀಚಿನ ಕೃತಿಗಳಾಗಿವೆ. ವಿಭಿನ್ನ ವಿಷಯಗಳ ಸೂಕ್ಷ್ಮ ಚಿತ್ರಣವನ್ನು ಪಾಟೀಲರ ಕಾದಂಬರಿಗಳಲ್ಲಿ ಕಾಣ ಬಹುದಾಗಿದೆ. ಇವಲ್ಲದೇ ಪ್ರವಾಸ ಕಥನ ಮೊದಲಾದವುಗಳನ್ನು ಬರೆದಿದ್ದಾರೆ. ಪ್ರವೃತ್ತಿಯಿಂದ ಪ್ರಾಧ್ಯಾಪಕರಾಗಿ ೩೧ ವರ‍್ಷಗಳ ಕಾಲ ಕೆಲಸ ನಿರ‍್ವಹಿಸಿದ ಇವರು ಎಪಿಎಸ್ ಸಂಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರು. “ಕನ್ನಡ ಕಾದಂಬರಿಗಳಲ್ಲಿ ರಾಜಕೀಯ ವಸ್ತು ವಿನ್ಯಾಸ” ಕುರಿತು ಸಂಶೋಧನಾತ್ಮಕ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದ ಪಾಟೀಲರು ೭-೮ ಜನರಿಗೆ ಡಾಕ್ಟರೇಟ್ ಪಡೆಯಲು ಮಾರ‍್ಗದರ‍್ಶಕರಾಗಿ ಅನೇಕ ವಿದ್ಯಾರ‍್ಥಿಗಳಿಗೆ ಎಂ ಫಿಲ್ ಮಾರ‍್ಗದರ‍್ಶಕರಾಗಿ ವಿಧ್ಯಾರ‍್ಥಿಗಳ ಮತ್ತು ಸಾಹಿತ್ಯ ಸೇವೆಯನ್ನು ನಿರಂತರವಾಗಿ ಮಾಡುತ್ತ ಬಂದಿದ್ದಾರೆ. ಮೊದಲಿಗೆಲ್ಲಾ ರಾಜಕೀಯ, ಸಾಮಾಜಿಕ ವಿಷಯಗಳನ್ನು ಪ್ರಮುಖವಾಗಿ ಬರೆಯುತ್ತಿದ್ದ ಪಾಟೀಲರ ಈ ಬಾರಿಯ ಪ್ರಯತ್ನ ವಿಶೇಷವಾಗಿ ಕಾಣುತ್ತದೆ.
ಕೃತಿಯ ಕುರಿತು :
೧೩ನೇ ಶತಮಾನದ ಶ್ರೀಮದಾನಂದತೀರ‍್ಥರೆಂದು ಪ್ರಸಿದ್ಧರಾದ ಶ್ರೀ ಮಧ್ವಾಚಾರ‍್ಯರ ಕುರಿತಾಗಿ ಆ ಕಾಲದ ಸದ್ಗ್ರಹಸ್ಥ ಜನಮೇಜಯನ ಕುತೂಹಲದಿಂದ ನಡೆಯುವ ಹುಡುಕಾಟ, ಆತ್ಮ ಪರಮಾತ್ಮನ ವಿಷಯದ ಅವನ ಮನದ ಜಿಜ್ಞಾಸೆಯುಳ್ಳ ಈ ಕಾದಂಬರಿಯು ವಿವೇಚನಾತ್ಮಕವಾಗಿ ಅಲೌಕಿಕ ವಿಷಯಗಳನ್ನು ಲೌಕಿಕ ಮನುಷ್ಯರ ಮನದಾಳದ ಪ್ರಶ್ನೆಗಳನ್ನು, ಹುಡುಕಾಟವನ್ನು ಬಿಂಬಿಸುತ್ತದೆ. ಕೇವಲ ಧಾರ‍್ಮಿಕ ಮತ್ತು ಆಧ್ಯಾತ್ಮಿಕವಾಗಿ ನೋಡಲ್ಪಡುತ್ತಿದ್ದ ಮಧ್ವಾಚಾರ‍್ಯರ ಜೀವನ, ಅವರ ತತ್ವಗಳನ್ನು ಕಾದಂಬರಿಯ ಮೂಲಕ ರಚಿಸಿರುವ ಡಾ. ಸುರೇಶ ಪಾಟೀಲರ ವಿಶೇಷ ಪ್ರಯತ್ನದ ಕೃತಿಯಾಗಿದೆ.

