ಭಾರತದ ಮಾಜಿ ಮುಖ್ಯ ಚುನಾವಣಾಧಿಕಾರಿಯಾಗಿದ್ದ ದಿವಂಗತ ಟಿ.ಎನ್. ಶೇಷನ್ ರ ಜೀವನದಲ್ಲಿ ನಡೆದ ಘಟನೆ ಇದಾಗಿದೆ.
ಒಮ್ಮೆ ಅವರು ತಮ್ಮ ಪತ್ನಿ ಶ್ರೀಮತಿ ಜಯಲಕ್ಷ್ಮಿ ಅವರೊಂದಿಗೆ ಕಾರಿನಲ್ಲಿ ಉತ್ತರ ಪ್ರದೇಶದ ಒಂದು ಘಟ್ಟ ಪ್ರದೇಶದಲ್ಲಿ ದಾರಿ ಕ್ರಮಿಸುತ್ತಿದ್ದರು. ರಸ್ತೆಯ ಇಕ್ಕೆಲಗಳಲ್ಲೂ ದೊಡ್ಡ ದೊಡ್ಡ ಮರಗಳು ಸಾಲು ಸಾಲಾಗಿ ಬೆಳೆದು ನಿಂತಿದ್ದವು. ಅದು ಅಷ್ಟೊಂದು ಜನಜಂಗುಳಿಯ, ವಾಹನಗಳ ಗದ್ದಲ ಇರುವ ಪ್ರದೇಶವಾಗಿರಲಿಲ್ಲ. ಎಲ್ಲ ಕಡೆಯೂ ಶಾಂತ ಪರಿಸರವಿತ್ತು. ಹಕ್ಕಿಗಳ ಕಲರವ ಕೇಳುತ್ತಿತ್ತು. ಒಟ್ಟಾರೆ ಅಲ್ಲಿನ ವಾತಾವರಣ ಅತ್ಯಂತ ಆಹ್ಲಾದಕರವಾಗಿತ್ತು.
ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದು ನಿಂತ ಗಗನಚುಂಬಿ ಮರಗಳ ಟೊಂಗೆಗಳ ಮೇಲೆ ನೂರಾರು ಗೀಜಗ ಹಕ್ಕಿಯ ಸುಂದರ ಗೂಡುಗಳು ಜೋತು ಬಿದ್ದಿದ್ದವು.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶೇಷನ್ ಪತ್ನಿ ಜಯಲಕ್ಷ್ಮಿ ಅವರಿಗೆ, ಅಲ್ಲಿ ಗಿಡದಲ್ಲಿ ಜೋತುಬಿದ್ದಿದ್ದ ಗೂಡುಗಳನ್ನು ಕಂಡು ತುಂಬಾ ಸಂತಸವಾಯಿತು. ಒಂದೆರಡು ಗೂಡುಗಳನ್ನು ಅಲ್ಲಿಂದ ತೆಗೆಯಿಸಿ, ತಮ್ಮ ಬಂಗಲೆಯ ಉದ್ಯಾನದಲ್ಲಿರುವ ಗಿಡಕ್ಕೆ ಕಟ್ಟಿದರೆ ತಮ್ಮ ಉದ್ಯಾನದ ಮೆರಗು ಇನ್ನೂ ಹೆಚ್ಚುತ್ತದೆ ಎಂದು ಯೋಚನೆ ಬರುತ್ತದೆ.
ತಕ್ಷಣವೇ ಅವರ ಕಾರು ರಸ್ತೆಯ ಪಕ್ಕಕ್ಕೆ ನಿಲ್ಲುತ್ತದೆ. ಅವರ ಕಾರು ನಿಂತಕೂಡಲೇ ಅವರಿಗಾಗಿ ಇದ್ದ ವಿಶೇಷ ಬೆಂಗಾವಲು ಪಡೆಯ ಗಾಡಿಗಳು ಬ್ರೆಕ್ ಹಾಕುತ್ತವೆ.
ಶೇಷನ್ ಸಾಹೇಬರ ಗಾಡಿಯ ಚಾಲಕನು, ಅಲ್ಲಿಯೇ ರಸ್ತೆಯ ಮೇಲೆ ದನಕರುಗಳನ್ನು ಮೇಯಿಸುತ್ತಿದ್ದ ಒಬ್ಬ ದನಗಾಹಿ ಹುಡುಗನನ್ನು ಕರೆಯುತ್ತಾನೆ. ಆತ ಇವರ ಕಡೆಗೆ ಅಳುಕುತ್ತ ಬಂದು ನಿಲ್ಲುತ್ತಾನೆ.
ಅವನಿಗೆ ಬೆಂಗಾವಲು ಪಡೆಯಲ್ಲಿಯ ಒಬ್ಬ ಹೇಳುತ್ತಾನೆ. “ನೋಡು ಅಲ್ಲಿ ಗಿಡದಲ್ಲಿ ಜೋತುಬಿದ್ದಿರುವ ಹಕ್ಕಿಗಳ ಎರಡು ಗೂಡುಗಳನ್ನು ತೆಗೆದು ಕೊಡು. ನಿನಗೆ ಇಪ್ಪತ್ತು ರೂಪಾಯಿ ಕೊಡುತ್ತೇನೆ” ಎನ್ನುತ್ತಾನೆ.
ಆ ದನಗಾಹಿ ಹುಡುಗ, ಕೆಳಗೆ ನೆಲದ ಕಡೆಗೆ ನೋಡುತ್ತ ನಕಾರಾತ್ಮಕವಾಗಿ ಇಲ್ಲವೆಂದು ತಲೆ ಅಲ್ಲಾಡಿಸುತ್ತಾನೆ. ಆಗ “ಏನೋ ನೀನು ಇಪ್ಪತ್ತು ರೂಪಾಯಿಗೆ ಆಗುವುದಿಲ್ಲ ಅಂತೀಯಾ… ಇರಲಿ ಐವತ್ತು ರೂಪಾಯಿ ಕೊಡುವೆ; ಎರಡು ಗೂಡು ತೆಗೆದು ಕೊಡು ” ಎಂದು ಕಾರಿನ ಚಾಲಕ ಅನ್ನುತ್ತಾನೆ.
ಆಗ ಆತ “ಸಾಹೇಬ್ರ ಹಣದ ಪ್ರಶ್ನೆ ಅಲ್ಲ. ನೀವು ಸಾವಿರಾರು ರೂಪಾಯಿ ಕೊಟ್ಟರೂ ಕೂಡ ನಾನು ಅವನ್ನು ನಿಮಗೆ ಕೊಡಲಾರೆ!” ಎಂದು ಕಡ್ಡಿ ಮುರಿದಂತೆ ಹೇಳುತ್ತಾನೆ.
“ಏಕೆ ” ? ಎಂದು ಕಾರಿನ ಚಾಲಕ ಮತ್ತೆ ಕೇಳುತ್ತಾನೆ.
ಆಗ ಆ ಹುಡುಗ “ನೋಡಿ ಸ್ವಾಮಿ , ಆ ಗೂಡುಗಳಲ್ಲಿ ಹಕ್ಕಿಗಳ ಮರಿಗಳು ಶಾಂತವಾಗಿ ಮತ್ತು ಅತ್ಯಂತ ಗಾಢ ವಿಶ್ವಾಸದಿಂದ ನಿದ್ರೆಗೆ ಜಾರಿರುತ್ತವೆ. ಸಂಜೆ ಅವುಗಳ ತಾಯಿ ಹಕ್ಕಿಗಳು ತಮ್ಮ ಕೊಕ್ಕಿನಲ್ಲಿ ಮರಿಗಳಿಗೆ ತಿನ್ನಿಸಲು ಏನಾದರೂ ಹುಳಹುಪ್ಪಟೆ, ಕಾಳು ಕಡಿ ತಂದಿರುತ್ತವೆ. ಆಗ ಅವುಗಳಿಗೆ ತಮ್ಮ ಮರಿಗಳು ಕಾಣದಿದ್ದರೆ ಅವು ವ್ಯಾಕುಲಗೊಂಡು ಅವು ಪಡುವ ಸಂಕಟವನ್ನು ನಾನು ಊಹಿಸಲೂ ಸಾಧ್ಯವಿಲ್ಲ. ಅವುಗಳ ಮನೆ ಮುರಿಯುವ ಕೆಟ್ಟ ಕೆಲಸ ನನ್ನಿಂದ ಆಗಲಾರದು ” ಅಂತ ಹೇಳಿದಾಗ,
ಅದನ್ನು ಕೇಳಿದ ಟಿ.ಎನ್. ಶೇಷನ್ ರ ಕಣ್ಣಿನಲ್ಲಿ ಯಾರೋ ಅಂಜನ ಹಾಕಿದಂತೆ ಅವರಿಗೆ ಅನ್ನಿಸಿತಂತೆ ! ” ಅವರಿಗೆ ತನ್ನ ಐ.ಎ.ಎಸ್ ಪದವಿ, ತನ್ನ ಉಚ್ಚ ಶಿಕ್ಷಣ ಇವೆಲ್ಲದರ ಅಭಿಮಾನ ಕರಗಿಹೋದಂತೆ ಅನಿಸಿತಂತೆ.
ಕ್ಷಣಾರ್ಧದಲ್ಲಿ ಅವರ ಎಲ್ಲಾ ಧಿಮಾಕು ಅಲ್ಲಿ ಆ ಹುಡುಗನ ಮುಂದೆ ಬೆತ್ತಲಾಗಿತ್ತು.
ಯಾವ ಶಿಕ್ಷಣ , ಸಂಸ್ಕೃತಿ, ಸಂಸ್ಕಾರ ತಾನು ಇನ್ನೂ ಕಲಿತಿರಲಿಲ್ಲವೋ ಅದನ್ನು ಈ ದನಗಾಹಿ ಹುಡುಗ ತನಗೆ ಇಂದು ಕಲಿಸಿದ. ಈ ಹುಡುಗ ನಿಸರ್ಗದಿಂದ, ಪರಿಸರದಿಂದ ಕಲಿತಿರುವ ಶಿಕ್ಷಣ ಬೇರೆ ಯಾವುದೇ ವಿಶ್ವವಿದ್ಯಾಲಯದಲ್ಲಿ ಸಿಗಲಾರದು ಎಂದು ಮನಸ್ಸಿನಲ್ಲಿ ಯೋಚಿಸಿ ಆ ಬಾಲಕನ ಕೈ ತನ್ನ ಕೈಯಲ್ಲಿ ಹಿಡಿದು ಒಂದು ಸಲ ತಮ್ಮ ಹಣೆಗೆ ಹಚ್ಚಿಕೊಂಡು ವಂದಿಸಿದರಂತೆ.
– ನೀಲಕಂಠ ದಾತಾರ.