ಮೂಡಲಗಿ – ಪರಿಸರ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಾವುಗಳು ಅದನ್ನು ಹಾಳು ಮಾಡಿ ಅನುಭವಿಸುತ್ತಿರುವ ಸಂಕಷ್ಟವನ್ನು ಕಣ್ಣಾರೆ ಕಂಡಿದ್ದೇವೆ.ಅದರ ಭೀಕರತೆಯ ಅನುಭವ ಸಾಕಷ್ಟು ಪಾಠ ಕಲಿಸಿದೆ. ದೇವರು ನಮಗೆ ಬೇಕಾದ ಸಂಪತ್ತನ್ನೆಲ್ಲಾ ಭುವಿಯಲ್ಲಿ ಸೃಷ್ಟಿಸಿದ್ದಾನೆ. ದುರಾಸೆಗೆ ಬಿದ್ದ ಮಾನವ ಅದರ ಮೇಲೆ ಅಧಿಪತ್ಯ ಸಾಧಿಸಿ ಇಂದು ಪ್ರವಾಹ, ಮೇಘಸ್ಪೋಟದಂತಹ ಪ್ರಾಕೃತಿಕ ದುರಂತಗಳಿಗೆ ಕಾರಣವಾಗಿದ್ದಾನೆ. ಇಂದು ಪ್ರಕೃತಿಯಲ್ಲಿನ ಅನೇಕ ಜೀವಿಗಳ ಅಳಿವಿಗೆ ಕಾರಣವಾಗಿದ್ದಾನೆ. ಭವಿಷ್ಯದಲ್ಲಿ ಬಂಗಾರದ ಬದುಕು ಬಾಳುತ್ತಿರುವ ವಿದ್ಯಾರ್ಥಿಗಳು ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಪ್ರಕೃತಿಯ ಉಳಿಸಿ ಎಂದು ರಾಕೇಶ್ ಅರ್ಜುನವಾಡ ವಲಯ ಅರಣ್ಯಾಧಿಕಾರಿಗಳು ತಿಳಿಸಿದರು
ಅವರು ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ೨೦೨೩-೨೪ ನೇ ಸಾಲಿನ ಎನ್.ಎಸ್.ಎಸ್, ಕ್ರೀಡೆ, ಯುವ ರೆಡ್ ಕ್ರಾಸ್, ಸಾಂಸ್ಕೃತಿಕ, ರೋವರ್ಸ ಮತ್ತು ರೇಂಜರ್ಸ್ ಘಟಕಗಳ ಸಮಾರೋಪ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, “ವ್ಯಕ್ತಿ ಜೀವನದಲ್ಲಿ ಮುಂದೆ ಬರಬೇಕಾದರೆ ಸಾಕಷ್ಟು ಪರಿಶ್ರಮ ಪಡಬೇಕು. ಮಹಾವಿದ್ಯಾಲಯವು ನಿಮಗಾಗಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು, ಜೊತೆಗೆ ಪರಿಸರ ಪ್ರೇಮವನ್ನು ಬೆಳೆಸಿಕೊಂಡು ಉತ್ತಮ ನಾಗರಿಕರಾಗಿ ಉನ್ನತ ಹುದ್ದೆ ಪಡೆದು ತಾಯ್ನಾಡಿನ ಋಣ ತೀರಿಸಿ” ಎಂದು ಕರೆ ನೀಡಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಶ್ರೀಧರಬೋಧ ಸ್ವಾಮೀಜಿಗಳು ಆಶೀರ್ವಚನ ನೀಡಿ “ಮಹಾವಿದ್ಯಾಲಯ ಇಂದು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಅನೇಕ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಪಡೆದು ಕೆಲಸವನ್ನು ಹುಡುಕಿಕೊಂಡಿದ್ದಾರೆ. ನಿಮಗೆ ಕಲಿಸಿದ ಗುರುಗಳ ಬಗ್ಗೆ ವಿಧೇಯರಾಗಿ ನಡೆದುಕೊಂಡು ಸುಂದರವಾದ ಬದುಕು ರೂಪಿಸಿಕೊಳ್ಳಿ ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ಬಾಳಿ” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹೇಶ ಕಂಬಾರ ಪ್ರಾಂಶುಪಾಲರು ಮಾತನಾಡಿ, ಮಹಾವಿದ್ಯಾಲಯ ಇಂದು ಸಾಕಷ್ಟು ಅಭಿವೃದ್ಧಿ ಹೊಂದುತ್ತಿದ್ದು ಇನ್ನೂ ಹೆಚ್ಚು ಅಭಿವೃದ್ಧಿ ಆಗಬೇಕಿದೆ, ಈ ದಿಸೆಯಲ್ಲಿ ಎಲ್ಲರ ಸಹಕಾರ ಬೇಕು. ಇದನ್ನು ಉತ್ತರ ಕರ್ನಾಟಕದ ಮಾದರಿ ಕಾಲೇಜನ್ನಾಗಿ ರೂಪಿಸೋಣ ಪದವಿ ಮುಗಿಸಿದ ಅಂತಿಮ ವಿದ್ಯಾರ್ಥಿಗಳಿಗೆ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ನಮ್ಮ ಕಾಲೇಜಿನ ಬಾಗಿಲು ಸದಾ ತೆರೆದಿರುತ್ತದೆ. ನಿಮ್ಮ ಬಂಗಾರದ ಬದುಕಿಗೆ ನಮ್ಮ ಬೆಂಬಲ ಸದಾ ಇದೆ ಎಂದರು.
ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶಾನೂರಕುಮಾರ ಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರೀಡಾ ಸಂಯೋಜಕರಾದ ಡಾ.ರವಿ ಗಡದನ್ನವರ, ಸಾಂಸ್ಕೃತಿಕ ಸಂಯೋಜಕರಾದ ಸಂಜೀವಕುಮಾರ ಗಾಣಿಗೇರ , ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಚೇತನ್ ರಾಜ್ ಬಿ. ಆಯ್.ಕ್ಯೂ.ಎ.ಸಿ. ಸಹ ಸಂಯೋಜಕರಾದ ಹನುಮಂತ ಕಾಂಬಳೆ,ಎನ್.ಎಸ್.ಎಸ್ ಸಂಯೋಜಕರಾದ ಸಂಜೀವ ಮದರಖಂಡಿ, ಯುವ ರೆಡ್ ಕ್ರಾಸ್ ಸಂಯೋಜಕರಾದ ಭೀಮರಾವ್ ನಾಯಕ, ಬಿ.ಸಿ.ಹೆಬ್ಬಾಳ, ಶಿವಕುಮಾರ, ಶಿವಾನಂದ ಚಂಡಕೆ, ಶ್ರೀಮತಿ ಅಶ್ವಿನಿ ಎಸ್, ಎ.ಜಿ.ಗಿರೆನ್ನವರ, ಶಿವಾಜಿ ಮುಳಿಕ, ಗಾಯತ್ರಿ ಸಾಳೋಖೆ, ಸುಮಿತ್ರಾ ಮಾಸ್ತಿ, ಶೀತಲ ತಳವಾರ, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ಎಲ್ಲಾ ಪ್ರಾಧ್ಯಾಪಕರುಗಳು ಭಾಗವಹಿಸಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರಿ ಅರ್ಪಿತಾ ಮಳವಾಡ ಹಾಗೂ ಉದಯ ಮಾಳಗೆನ್ನವರ ಅನಿಸಿಕೆ ವ್ಯಕ್ತಪಡಿಸಿದರು.
ಶೃತಿ ಮಾಲಗಾರ ಅತಿಥಿಗಳನ್ನು ಪರಿಚಯಿಸಿದರು. ಐಶ್ವರ್ಯ ಕತ್ತಿ ಹಾಗೂ ವಿದ್ಯಾಶ್ರೀ ಸಾಯನ್ನವರ ಸ್ವಾಗತಿಸಿದರು. ಕುಮಾರಿ ವಿದ್ಯಾಶ್ರೀ ವಂದಿಸಿದರು. ಕುಮಾರಿ ಜಯಶ್ರೀ ಮದಿಹಳ್ಳಿ ಹಾಗೂ ಅಭಿಷೇಕ ಕಕಮರಿ ನಿರೂಪಿಸಿದರು.