ಬೈಲಹೊಂಗಲ: ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗುವುದರ ಮೂಲಕ ಎಲ್ಲರೂ ಕನ್ನಡದ ಬಗ್ಗೆ ಅಭಿಮಾನ ತೋರಬೇಕು ಎಂದು ಬೈಲಹೊಂಗಲ ತಹಶೀಲ್ದಾರರು ಹಾಗೂ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಎಚ್.ಎನ್.ಶಿರಹಟ್ಟಿ ಹೇಳಿದರು.
ಕರ್ನಾಟಕ ಸಂಭ್ರಮ 50 ಹಾಗೂ 69 ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಸ್ವತಃ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗುವುದರ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನ ಪ್ರತಿಯೊಬ್ಬರೂ ಪರಿಷತ್ತಿನ ಸದಸ್ಯರಾಗಿ ಕನ್ನಡ ನಾಡು, ನುಡಿಯ ಸೇವೆಯಲ್ಲಿ ಸಕ್ರಿಯರಾಗುವಂತೆ ಅವರು ಕರೆ ನೀಡಿದರು. ಪರಿಷತ್ತಿನ ಕನ್ನಡಪರ ಕಾರ್ಯಕ್ರಮಗಳಿಗೆ ತಾಲುಕು ಆಡಳಿತದಿಂದ ಎಲ್ಲ ರೀತಿಯ ಸಹಕಾರ ಕೊಡಲಾಗುವುದು ಎಂದು ಅವರು ಭರವಸೆ ನೀಡಿದರು.
ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ, 1915 ರಲ್ಲಿ ಸ್ಥಾಪನೆಯಾಗಿ 109 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ತನ್ನದೇ ಅದ ವೈಶಿಷ್ಟ್ಯಗಳಿಂದ ಕೂಡಿದ್ದು ಕನ್ನಡವನ್ನು ಕಟ್ಟುವ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಕಾರ್ಯ ನಿರ್ವಹಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಮಾತನಾಡಿ, ರಾಜ್ಯದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ತಾಲೂಕನ್ನಾಗಿ ಮಾಡುವ ಗುರಿ ಹೊಂದಿದ್ದು ಅದನ್ನು ಈಡೇರಿಸುವಲ್ಲಿ ಎಲ್ಲರ ಬೆಂಬಲ, ಸಹಕಾರ ಅಗತ್ಯವಿದೆ ಎಂದು ಹೇಳಿದರು. ಸದಸ್ಯತ್ವ ಪಡೆಯಲು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9844491490 ಗೆ ಸಂಪರ್ಕಿಸುವಂತೆ ತಿಳಿಸಿದರು.
ಕಂದಾಯ ನಿರೀಕ್ಷಕರಾದ ಬಸವರಾಜ ಬೋರಗಲ್ಲ ಮಾತನಾಡಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ನಾವೆಲ್ಲಾ ಹೆಮ್ಮೆ ಪಡಬೇಕು. ಪರಿಷತ್ತಿನ ಆಶೋತ್ತರಗಳನ್ನು ಈಡೇರಿಸುವಲ್ಲಿ ಎಲ್ಲ ಕನ್ನಡಿಗರು ಮನಸ್ಸು ಮಾಡಬೇಕು ಎಂದು ಅಭಿಪ್ರಾಯಪಟ್ಟರು. ತಾಲುಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲ ರೀತಿಯ ಬೆಂಬಲ ಮತ್ತು ಸಹಕಾರ ನೀಡಲಾಗುವುದು ಎಂದು ಅವರು ಆಶ್ವಾಸನೆ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.