ಮೂಡಲಗಿ : ಕಾನೂನಿನ ಮುಖಾಂತರ ನ್ಯಾಯ ಕೇಳಲು ಪ್ರತಿಯೊಬ್ಬರಿಗೂ ಹಕ್ಕಿದೆ, ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹೈಕೋರ್ಟ್ ಹಾಗೂ ಸರಕಾರದಿಂದ ಪ್ರತಿಯೊಂದು ಹಳ್ಳಿ ಹಳ್ಳಿಗೂ ಕಾನೂನಿನ ಅರಿವು ಮತ್ತು ನೆರವು ಬಗ್ಗೆ ತಿಳಿಯಪಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ನ್ಯಾಯವಾದಿ ಎಲ್.ವಾಯ್ ಅಡಿಹುಡಿ ಹೇಳಿದರು.
ತಾಲೂಕಿನ ಶಿವಾಪುರ (ಹ ) ಗ್ರಾಮದಲ್ಲಿ ತಾಲೂಕ ಕಾನೂನು ಸೇವೆಗಳ ಸಮಿತಿ ಗೋಕಾಕ, ನ್ಯಾಯವಾದಿಗಳ ಸಂಘ ಮೂಡಲಗಿ ಮತ್ತು ಇತರ ಇಲಾಖೆಗಳ ಸಹಯೋಗದಲ್ಲಿ ಕಾನೂನು ಅರಿವು ಮೂಲಕ ನಾಗರಿಕರ ಸಬಲೀಕರಣ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಂ.ಐ.ಬಡಿಗೇರ ನ್ಯಾಯವಾದಿಗಳು ಮಾತನಾಡಿ ಒಳ್ಳೆಯ ಸಮಾಜ ನಿರ್ಮಾಣ ಮಾಡಬೇಕಾದರೆ ರೀತಿ, ನೀತಿ ಹೇಗೆ ಅವಶ್ಯವಿದೆಯೋ ಅದೇ ರೀತಿ ಕಾಯ್ದೆ ಕಾನೂನು ಕೂಡಾ ಅಷ್ಟೇ ಮುಖ್ಯವಾಗಿದೆ ಮತ್ತು ಮೋಸ ವಂಚನೆ, ಅನ್ಯಾಯ ಎಲ್ಲ ಸಂಕೋಲೆಗಳಿಂದ ದೂರ ಆಗಬೇಕಾದರೆ ಕಾನೂನಿನ ಅರಿವು ಬಹಳ ಅವಶ್ಯವಿದೆ ಎಂದು ಹೇಳಿದರು. ಆರ್.ಬಿ ಮಮದಾಪುರ ವಕೀಲರು ಬಾಲ್ಯ ವಿವಾಹ ತಡೆಗಟ್ಟುವಿಕೆ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿ.ಆರ್.ಸಾಯನ್ನವರ ವಹಿಸಿದ್ದರು ಹಾಗೂ ಕಾರ್ಯಕ್ರಮದಲ್ಲಿ ಎಸ್. ಎಸ್. ಪಾಟೀಲ,ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಎಸ್. ಎಲ್. ಬಬಲಿ, ಎಸ್.ಎಸ್.ರೊಡ್ಡನವರ, ವಕೀಲರಾದ ಎ. ಎಸ್. ಆನಿಕಿಂಡಿ, ಐ.ಎಂ.ಹಿರೇಮಠ್, ಗ್ರಾಮದ ಎಲ್ಲ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು, ಗ್ರಾಮ ಪಂಚಾಯತ್ ಸರ್ವ ಸದಸ್ಯರು, ಎಲ್ಲ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಂಘ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಬಸವರಾಜ ಗುರುಸಿದ್ದನವರ ನಡೆಸಿಕೊಟ್ಟರು.