ಸಿಂದಗಿ:ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಯಶಸ್ಸು ಸಿಕ್ಕಾಗ ಸಾಮಾಜಿಕ ಮತ್ತು ಧಾರ್ಮಿಕ ಕೆಲಸಗಳಲ್ಲಿ ಅಳಿಲು ಸೇವೆ ಮಾಡಬೇಕು ಎಂದು ಬಿಜೆಪಿ ಮಂಡಲದ ಕೋಶಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.
ಪಟ್ಟಣದ ಬಂದಾಳ ರಸ್ತೆಯ ನೀಲಗಂಗಾ ನಗರದಲ್ಲಿ ನೂತನವಾಗಿ ನಿರ್ಮಾಣವಾದ ಶೀಘ್ರ ಹನುಮಾನ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಮತ, ಭೇದ-ಭಾವ ಎನ್ನದೇ ಎಲ್ಲರೂ ಒಂದಾಗಿ ಸೌಹಾರ್ದತೆಯಿಂದ ಬಾಳಬೇಕು. ಬದುಕಿನಲ್ಲಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಉತ್ತಮ ಕಾರ್ಯಗಳನ್ನು ಮಾಡಬೇಕು ಎಂದರು.
ಈ ವೇಳೆ ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ರಾಮಾಯಣದಲ್ಲಿ ನಾವು ಹೆಚ್ಚಾಗಿ ಕೇಳುವ ಇಬ್ಬರ ಹೆಸರೆಂದರೆ ಅದುವೇ ಶ್ರೀರಾಮ ಮತ್ತು ಹನುಮಂತ. ಹನುಮಂತನು ಶ್ರೀರಾಮನ ಪರಮ ಭಕ್ತ. ಅಂತೆಯೇ ಶ್ರೀರಾಮನ ಬಾಳಿನಲ್ಲೂ ಹನುಮಂತನಿಗೆ ವಿಶೇಷ ಮನ್ನಣೆಯಿದೆ. ಮುಂಬರುವ ದಿನಮಾನಗಳಲ್ಲಿ ಈ ದೇವಸ್ಥಾನದ ಮೇಲು ಹೊದಿಕೆಯ ಜೀಣೋದ್ಧಾರಕ್ಕೆ ಪ್ರೋತ್ಸಾಹ ಧನ ನೀಡುವೆ. ಶ್ರೀಶೈಲಗೌಡ ಅವರು ನೂತನ ಶೀಘ್ರ ಹನುಮಾನ ದೇವಸ್ಥಾನಕ್ಕೆ ಮೂರ್ತಿ ನೀಡಿದ್ದು ಶ್ಲಾಘನೀಯ ಎಂದರು.
ಇಲ್ಲಿನ ಬಂದಾಳ ರಸ್ತೆಯ ನೀಲಗಂಗಾ ನಗರದ ನೂತನ ಶೀಘ್ರ ಹನುಮಾನ ಮೂರ್ತಿಯ ಮೆರವಣಿಗೆ ಕುಂಭಮೇಳ, ಧ್ವನಿವರ್ಧಕ ಹಾಗೂ ವಾಧ್ಯಗಳೊಂದಿಗೆ ಸಂಭ್ರಮ ಸಡಗರದಿಂದ ದೇವಸ್ಥಾನ ತಲುಪಿತು. ದಾರಿಯುದ್ದಕ್ಕೂ ಭಕ್ತಾದಿಗಳು ಮೂರ್ತಿಗೆ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು.
ಇದೇ ಸಂದರ್ಭದಲ್ಲಿ ಕನ್ನೊಳ್ಳಿ ಶ್ರೀಮಠದ ಸಿದ್ದಲಿಂಗ ಶಿವಾಚಾರ್ಯರು ಪಾವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಮಹಾದೇವ ಬಿರಾದಾರ, ಶ್ರೀಶೈಲ ರೆಬಿನಾಳ, ಮಲ್ಲಿಕಾರ್ಜುನ ಸುಳಿಭಾವಿ, ಪರಮಾನಂದ ಕರಿಗೊಂಡ, ಶಂಕರೆಪ್ಪ ಬಿರಾದಾರ, ಪ್ರೇಮನಗೌಡ ಬಿರಾದಾರ, ಲಕ್ಷ್ಮಣ ಪೂಜಾರಿ, ಭೀಮನಗೌಡ ಬಿರಾದಾರ, ಗೊಲ್ಲಾಳಪ್ಪ ರೊಳ್ಳಿ, ಗಂಗಾಧರ ಕಿಣಗಿ, ವಿನೋದ ಕಂಗಳ, ಮತ್ತು ಮಂದೇವಾಲಿ, ರುದ್ರಯ್ಯ ಹಿರೇಮಠ ಸೇರಿದಂತೆ ಅನೇಕರು ಇದ್ದರು.