ಪ್ರಶಸ್ತಿ ಪ್ರದಾನ ಸಮಾರಂಭವೆಂದರೆ ಹೇಗಿರಬೇಕೆಂಬುದಕ್ಕೆ ಭವ್ಯ ನಿದರ್ಶನ ವಿಜಯಪುರದ ಈ ಕಾರ್ಯಕ್ರಮ
ಪಿಡಿಜೆ ಕಾಲೇಜಿನ ಆವರಣದಲ್ಲಿ ಹಾಕಲಾಗಿದ್ದ ಬೃಹತ್ ಪೆಂಡಾಲಿನಡಿಯಲ್ಲಿ, ಭವ್ಯ ವೇದಿಕೆಯಲ್ಲಿ, ಶ್ರೀಗಳ, ಗಣ್ಯರ ಅಮೃತ ಹಸ್ತಗಳಿಂದ, ಕಿಕ್ಕಿರಿದು ಸೇರಿದ್ದ ಅಪಾರ ಜನಸ್ತೋಮದೆದುರು, ಮಾರ್ದನಿಸುತ್ತಿದ್ದ ಅಕ್ಷರಬಂಧುಗಳ ಕರತಾಡನಗಳ ಸದ್ದಿನ ನಡುವೆ ರಾಷ್ಟ್ರಮಟ್ಟದ “ಬಸವವಿಭೂಷಣ” ಪ್ರಶಸ್ತಿ ಸ್ವೀಕರಿಸಿ, ಪುರಸ್ಕೃತಗೊಂಡು ಸನ್ಮಾನಿತನಾಗುವಾಗ ಅಕ್ಷರಶಃ ನನ್ನ ಹೃನ್ಮನಗಳು ಧನ್ಯತೆಯಲಿ ಮಿಂದು, ಕಣ್ಣಾಲಿಗಳು ಆನಂದಬಾಷ್ಪಗಳಿಂದ ಅಲಂಕೃತಗೊಂಡಿದ್ದವು.
ಪ್ರತಿ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸುವಾಗ ಅವರ ಪ್ರತಿಭೆ ಸಾಧನೆ ಸೇವೆಗಳನ್ನು ವಿಸ್ಕೃತವಾಗಿ ಸಭಿಕರೆದುರು ವರ್ಣಿಸುತ್ತಾ, ಅತ್ಯಂತ ಅಕ್ಕರೆ, ಮೆಚ್ಚುಗೆ, ಪ್ರೋತ್ಸಾಹ, ಹಾರೈಕೆ ಆದರಗಳಿಂದ ಸನ್ಮಾನಿಸಿ ಸತ್ಕರಿಸಿದ ರೀತಿ ಆದರ್ಶನೀಯವಾಗಿತ್ತು.
ಅನುಕರಣೀಯವಾಗಿತ್ತು. ನೋಡುಗರ ಕಂಗಳಲ್ಲಿ ಹೊಳಪು ಮೂಡಿ ಅಭಿಮಾನದಿ ಅಭಿನಂದಿಸುವಂತೆ, ಪಡೆದವರ ಎದೆಯಲ್ಲಿ ಧನ್ಯತೆ ಮೂಡಿ, ಕಣ್ಣಾಲಿಗಳು ಜಿನುಗುವಂತೆ ಸಂಪನ್ನವಾಯಿತು ಕ್ಷಣಗಳು.
ಇಂತಹ ಒಂದು ಮಾದರಿ ಕಾರ್ಯಕ್ರಮದ, ಯಶಸ್ವೀ ಸಮಾರಂಭದ ರೂವಾರಿಯಾದ ಬಸವ ಜನ್ಮಭೂಮಿ ಪ್ರತಿಷ್ಠಾನ ಹಾಗೂ ಸಾರಥ್ಯ ವಹಿಸಿದ್ದ ಡಾ. ಮುರುಗೇಶ್ ಸಂಗಮರು ನಿಜಕ್ಕೂ ಅಭಿನಂದನಾರ್ಹರು. ಅಸಂಖ್ಯ ಸಂಖ್ಯೆಯಲ್ಲಿ ನೆರೆದಿದ್ದ ಅಕ್ಷರಾಸಕ್ತರು, ವಿಜಾಪುರದ ಸಾಹಿತ್ಯಲೋಕದ ಶ್ರೀಮಂತಿಕೆ ಹಾಗೂ ಮುರುಗೇಶ್ ಸಂಗಮರ ಬಳಗದ ಕಾರ್ಯಕ್ಷಮತೆಯ ಪ್ರತೀಕ. ಪ್ರತಿಷ್ಠಾನದ ಜನಪ್ರಿಯತೆಯ ದ್ಯೋತಕ. ಮುರುಗೇಶ್ ಹಾಗೂ ಪ್ರತಿಯೊಬ್ಬರಿಗೂ ನಾನು ಚಿರಋಣಿ.
ಆ ಅಪೂರ್ವ ಸಮಾರಂಭದ ಕ್ಷಣಗಳು ಈಗಲೂ ಮೈಪುಳಕಿಸುತ್ತಿವೆ. ಅದೆಷ್ಟು ಅಕ್ಷರ ಬಂಧುಗಳು, ಅದೆಂತಹ ಸಂಭ್ರಮ. ಮುಖಾಮುಖಿಯಾದ ಸಹೃದಯರ ಅಕ್ಕರೆ ಪ್ರೀತಿಯಲ್ಲಿ ಅಕ್ಷರಶಃ ಮಿಂದು ಹೋದ ಅನುಭವ. ತಮ್ಮೂರಿಗೆ ಆತ್ಮೀಯವಾಗಿ ಸ್ವಾಗತಿಸಿ ಬಿಜಾಪುರದ ವೀಶೇಷ ಚುರುಮುರಿ ಉಡುಗೊರೆ ನೀಡಿದ ವೈಷ್ಣವಿ ಮೇಡಂ, ಉಪಹಾರ ನೀಡಿ ಸತ್ಕರಿಸಿದ ಮಾಧವ ಗುಡಿ ಸಾರ್, ನನಗಾಗಿ ರವೆ ಉಂಡೆ ಡಬ್ಬಿ ನೀಡಿ ಹರಸಿದ ಸುಮಾ ಮೇಡಂ, ಆಪ್ತತೆಯಿಂದ ಮಾತನಾಡಿಸಿ ಸಂಭ್ರಮಿಸಿದ ತಾರಮತಿ ಮೇಡಮ್, ಈರಮ್ಮ ಮೇಡಮ್, ಎಸ್,ಎನ್ ಪಾಟೀಲ್ ಮೇಡಂ ಮತ್ತು ಮುರುಗೇಶ್ ಸಂಗಮರ ಸಮಸ್ತ ಗೆಳೆಯರ ಬಳಗ, ಶಾಲಾ ಸಿಬ್ಬಂದಿ. ಕಾರ್ಯಕ್ರಮ ಉದ್ಘಾಟಿಸಿದ ಡಾ.ಸತೀಶ್ ಹೊಸಮನಿಯವರೊಂದಿಗಿನ ವಿಚಾರ ವಿನಿಮಯ, ಚೈತನ್ಯ ತುಂಬುವ ಅವರ ಪ್ರೋತ್ಸಾಹದ ನುಡಿಗಳು. ಒಟ್ಟಿನಲ್ಲಿ 500 ದೂರದ ಪ್ರಯಾಣದ ದಣಿವನ್ನು ಮರೆಸಿ, ಅಕ್ಷರ ನಂಟಿನ ಸಾಂಗತ್ಯದ ಸಾಕ್ಷಾತ್ಕಾರವಾಗುವಂತೆ ಮಾಡಿತು ವಿಜಯಪುರ.
ಇನ್ನೇನು ಹೊರಡಲೇಬೇಕೆಂದರೂ ಬಿಡದೆ, ತಮ್ಮ ಮನೆಗೆ ಕರೆದುಕೊಂಡು ಹೋಗಿ, ಬೇಡವೆಂದರೂ ಬಲವಂತವಾಗಿ ಬಿಸಿ ಬಿಸಿ ರೊಟ್ಟಿ, ಸಿಹಿ ಖಾದ್ಯಗಳ ಊಟ ಬಡಿಸಿ, ಶಾಲು ಹೊದೆಸಿ, ಹಣ್ಣು-ಹಂಪಲು ಉಡುಗೊರೆ ಕೊಟ್ಟು ಆಶೀರ್ವದಿಸಿದ ಶ್ರೀಮತಿ ಸುಜಾತ ಪಾಟೀಲ್ ಕುಟುಂಬದ ಆತಿಥ್ಯಕ್ಕೆ ನಾನೂ ಜೀವನವಿಡೀ ಅಭಾರಿ.
ತೃಣ ಮಾತ್ರದ ನನ್ನನ್ನು ವಿಜಯಪುರದ ಅಕ್ಷರ ಬಂಧುಗಳು ಅಭಿನಂದಿಸಿದ ರೀತಿ, ಅವರ ಪ್ರೀತಿ ಅವಿಸ್ಮರಣೀಯ. ಇವೆಲ್ಲವೂ ಸಾಕಾರವಾಗಿದ್ದು ನಿತ್ಯ ನನ್ನ ಬೆಳೆಸುತ್ತಿರುವ ಅಕ್ಷರಗಳಿಂದ. ಅನುದಿನವು ಎಡಬಿಡದೆ ಹಾರೈಸಿ ನನ್ನಿಂದ ಬರೆಸುತ್ತಿರುವ ನಿಮ್ಮ ಅಕ್ಕರೆ ಕಾರುಣ್ಯದಿಂದ. ಹಾಗಾಗಿ ವಿಜಯಪುರದ ಸಕಲ ಸುವರ್ಣ ಘಳಿಗೆಗಳ ದೃಶ್ಯಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಒಪ್ಪಿಸಿಕೊಳ್ಳಿ..”
-ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.