spot_img
spot_img

ವಚನಪ್ರಿಯೆ ರುದ್ರಮ್ಮ ಅಮರೇಶ ಹಾಸಿನಾಳ ಸುನೀತದ‌ ವಿವರಣೆ

Must Read

- Advertisement -

ಸಿದ್ಧೇಶ್ವರಸ್ವಾಮಿಗಳ ಮಾನಸದ ಪುತ್ರಿ      ಶ್ವೇತವಸನವನುಟ್ಟು ಜಯದೇವಿತಾಯಂತೆ   ಅಮರಗಣಗಳ ಕೆಲಸ ಮುಂದುವರಿಸುವ ಚಿಂತೆ            ಸಪ್ತ ಗಿರಿಗಳ ದಾಟಿ ಪಯಣಿಸುತ ದಿವರಾತ್ರಿ

ಇದು ಶರಣೆ ಶ್ರೀಮತಿ ರುದ್ರಮ್ಮ ಹಾಸಿನಾಳರ ಬದುಕು
ಬರಹದ‌ ಕುರಿತಾಗಿ‌ ಬರೆದ ವ್ಯಕ್ತಿಚಿತ್ರಣ ಸುನೀತ.
ವಿಜಯಪುರದ ಜ್ಞಾನಯೋಗಿ ಸಿದ್ಧೇಶ್ವಸ್ವಾಮಿಗಳು ಗಂಗಾವತಿಗೆ ಒಂದು ತಿಂಗಳು ಪ್ರವಚನವ ಮಾಡಲು ಬಂದಿದ್ದರು.ಅದನ್ನು‌ ಕೇಳಿದ ರುದ್ರಮ್ಮ ಪ್ರಭಾವಿತಳಾಗಿ ಅವರ ಕುರಿತಾಗಿ ಒಂದು‌ ಕವನ ಬರೆದು ಅಚ್ಚುಹಾಕಿಸಿ ಹಂಚಿದಳು. ಹೀಗಾಗಿ ಅವರಿಂದ ಆಧ್ಯಾತ್ಮ ಚಿಂತನೆಯ ಮೊದಲ ಹೆಜ್ಜೆ ಇಟ್ಟು ಅವರನ್ನು ಮಾನಸಿಕ‌ ಗುರುವಾಗಿ‌ ಸ್ವೀಕರಿಸಿದಳು.

ಅವರ ಕರುಣೆಯ ಕೂಸಾಗಿ ಬೆಳೆದ‌ ಕಾರಣ ಅವರ
ಮಾನಸದ‌ ಮಗಳಾದಳು. ಸೊಲ್ಲಾಪುರದ ಜಯದೇವಿತಾಯಿ ಲಿಗಾಡೆಯಂತೆ ಬಿಳಿವಸ್ತ್ರ(ಶ್ವೇತ ಮಗಳ ಹೆಸರು ಕೂಡ) ಧರಿಸಿ ಅಂದರೆ ವೈರಾಗ್ಯ ತಾಳಿ ಚಿಕ್ಕವಯಸ್ಸಿನಲ್ಲಿ‌ ಪತಿ ಅಮರೇಶರನ್ನು ಕಳೆದುಕೊಂಡಾಗ ಸಂಸಾರದ ನಡೆಸುವ ಚಿಂತೆ ಕಾಡಿತು. ಅಲ್ಲದೆ ಅಮರ ಗಣಂಗಳಾದ ಶರಣರ ವಚನ ಪ್ರಚಾರವನ್ನು ಮಾಡುವ ಚಿಂತೆ ಬೆನ್ನಹತ್ತಿತು. ಪರಿಶುದ್ಧ
ಭಾವದಿಂದ ಶರಣಸಾಹಿತ್ಯ ಪರಿಷತ್ತು ,ಕದಳಿ‌ ಮಹಿಳೆ
ವೇದಿಕೆ ,ಬಸವದಳ ,ಬಸವಮಾರ್ಗ ಮುಂತಾದ ಸಂಘ ಸಂಸ್ಥೆಗಳ ಮುಖಾಂತರ ಅಚ್ಚುಕಟ್ಟಾಗಿ ಕಾರ್ಯಕ್ರಮ ಮಾಡತೊಡಗಿದಳು. ಓದಿದ್ದು ಒಕ್ಕಾಲಾದರು ವಚನ ಅಧ್ಯಯನ ಮಾಡಿ‌ ಮುಕ್ಕಾಲು ಬುದ್ಧಿ ಬೆಳೆಸಿಕೊಂಡು
ಶರಣ ಸಾಹಿತ್ಯವನ್ನು ಕುರಿತು ಅದ್ಭುತವಾಗಿ ಭಾಷಣ ಮಾಡತೊಡಗಿದಳು. ಏಳುಗುಡ್ಡಗಳ( ಗಿರಿ ಮಗನ ಹೆಸರು) ನಾಡಾದ ಗಂಗಾವತಿಯಿಂದ ಹೊರಟು ನಾಡಿನಾದ್ಯಂತ ಹಲವಾರು ಊರುಗಳಿಗೆ ಹಗಲು ರಾತ್ರಿಯೆನ್ನದೆ ಪ್ರಯಾಣ ಬೆಳೆಸಿ ಉಪನ್ಯಾಸಗಳನ್ನು ಮಾಡತೊಡಗಿದಳು. ಜೊತೆಗೆ ಬಸವ ಟಿವಿ ಚಾನೆಲ್ಲಲ್ಲಿ ಕಾರ್ಯಕ್ರಮ ಕೊಡತೊಡಗಿದಳು. ವಚನಕೋಶ ಓದಿ ಕರುನಾಡ ದೇಶ ತಿರುಗಿ ಅನೇಕ ಮಹಾನುಭಾವಿಗಳ ಸಂಪರ್ಕದಿಂದ ಅನುಭಾವ ಸಂಪಾದಿಸಿದಳು.

- Advertisement -

ವಚನಮಾಲೆಯ ಧರಿಸಿ ಬಸವಮಂತ್ರವ ಪಠಿಸಿ
ಹಣತೆಯನು ಹಚ್ಚಿಟ್ಟು ಹಬ್ಬಿಸುತ ಶಿವಬೆಳಕು
ರೊಚ್ಚಿಗೆದ್ದಳು ಕಂಡು ಧರ್ಮದೊಳಗಿನ ಕೊಳಕು
ನಾಡೆಲ್ಲ ಸುತ್ತಿದಳು ಶುದ್ಧಿಗೊಳಿಸಲು ಬಯಸಿ

ಶ್ರೀ ಸಿದ್ಧೇಶ್ವರ ಸ್ವಾಮಿಗಳ‌ ಅಂಕಿತದಿಂದ ೧೦೮ ವಚನಗಳನ್ನು
ರಚಿಸಿ “ವಚನಮಾಲೆ” ಪುಸ್ತಕ ಪ್ರಕಟಿಸಿದಳು. ಅದನ್ನೆ ಜಪಮಾಲೆ‌ ಮಾಡಿಕೊಂಡು ಮಂತ್ರಪುರುಷ ಬಸವಣ್ಣನ
ನಾಮವನ್ನು ಸದಾ ಪಠಿಸುತ್ತ “ಹಣತೆ ಹಬ್ಬಿದ ಬೆಳಕು” ಎಂಬ
ಕವನ ಸಂಕಲನವನ್ನು ಪ್ರಕಟಿಸಿದಳು. ದೇಹವೆಂಬ ಹಣತೆಯಲ್ಲಿ ಜ್ಞಾನದ ಬೆಂಕಿಹಚ್ಚಿ ನಾಡಿನ ತುಂಬ‌ ಶಿವಬೆಳಕು
ಹರಡಿದಳು. ಧರ್ಮದಲ್ಲಿರುವ ಹುಳುಕು ಕೊಳಕುಗಳನ್ನು
ಕಂಡು ಗಣಾಚಾರಿಯಾಗಿ ಶುದ್ಧೀಕರಿಸ ಬಯಸಿ ನಾಡೆಲ್ಲ
ತಿರುಗಿ ಖಂಡನೆ‌ಮಾಡತೊಡಗಿದಳು. ಅದರಲ್ಲಿ‌ ಹೆಚ್ಚಾಗಿ
ಮಠಗಳಲ್ಲಿ ನಡೆಯುವ ಅನಾಚರಗಳನ್ನು ಕಂಡು ಸಹಜವಾಗಿ
ಒಬ್ಬ ಸ್ನೇಹಿತೆಯೊಂದಿಗೆ ಹಂಚಿಕೊಂಡದ್ದು ಕಾರಣವಾಗಿ
ಒಂದು ಮಠದ ಸ್ವಾಮಿ ಈಕೆಯ ನನ್ನ ಸಾವಿಗೆ ಕಾರಣವೆಂದು
ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡನು.ಅದರಿಂದ ಬೇಸತ್ತು
ಇನ್ನೊಬ್ಬರನ್ನು ತಿದ್ದುವುದಕ್ಕಿಂತ ನನ್ನ‌ ನಾನು ತಿದ್ದಿಕೊಳ್ಳುವುದು
ಲೇಸೆಂದು ಬಗೆದು ಸಮಾಜಮುಖಿಯಾಗಿದ್ದವಳು ಅಂತರ್ಮುಖಿಯಾಗಿ ಏಕಾಂತವಾಗಿರಲು ಬಯಸಿದಳು.

ವಚನಗಳನೋದುತ್ತ ಹೊಸಹೊಳಹು ಹೊಳೆದಾಗ
ಬೆಳಗಿನೊಳಗಣ ಮಹಾಬೆಳಗು ನೋಡಿದ ಶರಣೆ
ಉರಿವ ನಾಲಗೆಗಂಜಿ ಮಾಡಿ ಮೌನಾಚರಣೆ
ಜೋಕೆಯಿಂದಲಿ ನಡೆದು ಮಾಡುವಳು ಶಿವಯೋಗ

- Advertisement -

ವಚನಗಳ ಅಧ್ಯಯನ‌ ಮಾಡುತ್ತ ತನ್ನ ಮತಿಗೆ ತೋಚಿದ
ಹಾಗೆ ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು ಮತ್ತು
ಸಿದ್ಧರಾಮೇಶ್ವರರ ವಚನಗಳನ್ನು ವಿಶ್ಲೇಚಣೆ ಮಾಡಿ
ಮುಖಪುಸ್ತಕದಲ್ಲಿ‌ ಹರಿಬಿಟ್ಟಳು.ಅವು ಜನಮನ್ನಣೆ ಪಡೆದ
ಕಾರಣ ೧೦೮ ಸೇರಿಸಿ “ವಚನ ಹೊಳಹು”ಎಂಬ ಪುಸ್ತಕವನ್ನು
ಮತ್ತು ಬಸವಣ್ಣನ ೧೦೮ ಸೇರಿಸಿ”ಬೆಳಗಿನೊಳಗೆ ಮಹಾಬೆಳಗು”ಎಂಬ ಮತ್ತೊಂದು ಪುಸ್ತಕವನ್ನು ಪ್ರಕಟಿಸಿದಳು. ವಚನಗಳ ಓದಿನಿಂದ‌ ಆಕೆಯಲ್ಲಿ ಹೊಸ
ಚಿಂತನೆಯ ಹೊಳಹು ಮೂಡಿತು. ಅದು ಬಸವಣ್ಣನ ಬೆಳಗಿನೊಳಗೆ ಮಹಾಬೆಳಗನ್ನು ಆಂತರ್ಯದಲ್ಲಿ ತೋರಿಸಿದ
ಕಾರಣ ನಿಜವಾದ ಶಿವಶರಣೆಯಾಗಿ ಆಧ್ಯಾತ್ಮದ ಆನಂದವನ್ನು ಅನುಭವಿಸಿದಳು. ಲೋಕ ವಿರೋಧಿಗಳಾದ ಶರಣರಿಗೆ ಸ್ವಾರ್ಥಿಗಳಾದ ಈ ನರಮಾನವರು ಅನೇಕ ನಿಂದೆ ಮಾಡಿದಂತೆ‌ ಆಕೆಯನ್ನು ನಿಂದಿಸಿದರು. ಅಂಥ ನಿಂದೆಯನ್ನು ಕೇಳಿ ಇನ್ನು ಇವರ ಸಹವಾಸ ಬೇಡವೆಂದು ಹಿಂಜರಿದಳು. ಅದಕ್ಕಾಗಿ ಈ ಲೋಕದೊಳಗೆ ಮೂಕನಾಗಿ ಜೋಕೆಯಾಗಿರಬೇಕೆಂದು ಮೌನಕ್ಕೆ ಶರಣಾದಳು. ಅಂತರಂಗದ ಸಾಧನೆಯಾದ ಲಿಂಗಧ್ಯಾನದಲ್ಲಿ ತನ್ನನ್ನು ತೊಡಗಿಸಿಕೊಂಡು ಸಾಧನೆಯ ಕಡೆಗೆ ಹೆಚ್ಚು‌ ಮನವನ್ನು ಕೇಂದ್ರಿಕರಿಸಿದಳು.

ಶ್ರೀ ಸಿದ್ಧೇಶ್ವರ ಸ್ವಾಮಿಗಳಂತೆ ಸಮನ್ವಯ ಸಾಧಿಸಿ ಖಂಡಿಸದೆ ಬರಿದೆ ಮಂಡನೆ ಮಾಡಿದ್ದರೆ ಚೆನ್ನಾಗಿರುತಿತ್ತು. ಇಂಥ ಅನರ್ಘ ರತ್ನದ ಬೆಳಕನ್ನು ಸಮಾಜ ಸ್ವೀಕರಿಸದೆ ಹೋಯಿತು.

ಶಿವಲೋಕದಿಂದಿಳಿದ ರುದ್ರಕನ್ನಿಕೆಯಿವಳು
ಶಿವಮಂತ್ರ ಜಪಿಸಿ ಭವಸಾಗರವನೀಜುವಳು

ನಿಜವಾಗಿ ಈಕೆ ಕೈಲಾಸದಿಂದ ಬಂದ ರುದ್ರಕನ್ನಿಕೆ(ರುದ್ರಮ್ಮ).
(ಎಲ್ಲರೂ ಅಲ್ಲಿಂದಲೆ ಬಂದವರು) ಲಿಂಗಮಧ್ಯೆ ಜಗತ್ಸರ್ವಂ
ಪಂಚಾಕ್ಷರಿಯ ಜಪಿಸುತ್ತ ಸಂಸಾರ ಸಮುದ್ರವನ್ನು‌ ಈಜಿ ದಡ ಸೇರಬಯಸುವಳು.

ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ

- Advertisement -
- Advertisement -

Latest News

ಕಲ್ಲು ಮಠದ ಶ್ರೀ ಪ್ರಭು ಸ್ವಾಮಿಗಳ ಲಿಂಗ ದೇವರ ಲೀಲಾ ವಿಳಾಸ ಚಾರಿತ್ರ

ಅಂತಾರಾಷ್ಟ್ರೀಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸಂಯುಕ್ತ ಆಶ್ರಯದಲ್ಲಿ ಕಲ್ಲು ಮಠದ ಶ್ರೀ...
- Advertisement -

More Articles Like This

- Advertisement -
close
error: Content is protected !!
Join WhatsApp Group