ಅದು ಅನುಭವ ಮಂಟಪವೇ – ಚನ್ನಬಸವ ಸ್ವಾಮೀಜಿ
ಬೀದರ – ಸದ್ಯ ಪೀರ ಪಾಶಾ ದರ್ಗಾ ಇರುವ ಜಾಗದಲ್ಲಿ ಮೂಲವಾಗಿ ಬಸವಣ್ಣನವರ ಅನುಭವ ಮಂಟಪ ಇತ್ತು ಎಂಬ ಬಗ್ಗೆ ಇಬ್ಬರು ಸ್ವಾಮೀಜಿಗಳ ಮಧ್ಯೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದು ವಿವಾದಕ್ಕೆ ಹೊಸರೂಪ ಬಂದಿದೆ.
ಇದರಿಂದ ಬಸವಣ್ಣನವರ ಮೂಲ ಅನುಭವ ಮಂಟಪ ಕುರಿತಂತೆ ಹೊಸ ಕಿಚ್ಚು ಹೊತ್ತಿಕೊಂಡಿದ್ದು ಇಬ್ಬರು ಸ್ವಾಮೀಜಿಗಳ ನಡುವಿನ ಕಿಚ್ಚು ಯಾವ ರೂಪ ಪಡೆಯುವುದೋ ಕಾದು ನೋಡಬೇಕಾಗಿದೆ.
ಭಾಲ್ಕಿಯ ಹಿರೇಮಠ ಸಂಸ್ಥಾನ ಅಧ್ಯಕ್ಷ ಹಾಗೂ ನೂತನ ಅನುಭವ ಮಂಟಪ ಅಧ್ಯಕ್ಷರಾದ ಬಸವಲಿಂಗ ಪಟ್ಟದ್ದೇವರು, ಅಲ್ಲಿ ಮೂಲ ಅನುಭವ ಮಂಟಪದ ಕುರುಹುಗಳು ಇಲ್ಲ ಎಂದು ಹೇಳುತ್ತಾರೆ.ಬಸವಲಿಂಗ ಪಟ್ಟದ್ದೇವರ ಈ ಹೇಳಿಕೆ ಹಿನ್ನೆಲೆಯಲ್ಲಿ ಲಿಂಗಾಯತ ಧರ್ಮದ ಜನರ ಭಾವನೆ ಗೆ ಧಕ್ಕೆ ಉಂಟಾಗಿದೆ ಎಂದು ಕೆಲವು ಲಿಂಗಾಯತ ನಾಯಕರಲ್ಲಿ ಗುಸು ಗುಸು ಚರ್ಚೆ ನಡೆಯುತ್ತಿರುವ ಸೂಚನೆಗಳು ದೊರಕುತ್ತಿವೆ.
ಬಸವಲಿಂಗ ಪಟ್ಟದ್ದೇವರು ಹೇಳುವುದೇನೆಂದರೆ:
ಬಸವಕಲ್ಯಾಣದಲ್ಲಿರುವ ಪೀರ್ ಪಾಶಾ ದರ್ಗಾದಲ್ಲಿ ಅನುಭವ ಮಂಟಪವಿದ್ದ ಬಗ್ಗೆ ಸಾಕ್ಷ್ಯಗಳಿಲ್ಲ. ಬಸವಣ್ಣನವರ ಬಗ್ಗೆ ಇರುವ ಹತ್ತಾರು ಗ್ರಂಥಗಳಲ್ಲೂ ಇದರ ಉಲ್ಲೇಖವಿಲ್ಲ. ಬಸವಣ್ಣನವರು ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ನಂಬಿಕೆ ಹೊಂದಿದ್ದರು. ಹೀಗಾಗಿ ಅದು ಭವ್ಯ ಮಂಟಪ ಆಗಿರಲಾರದು. ಒಂದು ಹೆಂಚಿನ ಮನೆಯಾಗಿರಬಹುದು ಕಾಲಾನಂತರದಲ್ಲಿ ಅದು ನಶಿಸಿ ಹೋಗಿರಬಹುದು ಎಂದು.
ಜ್ಞಾನಪೀಠ ಬಸವ ಗಂಗೋತ್ರಿ ಪೀಠಾಧ್ಯಕ್ಷರಾದ ಶ್ರೀ ಚನ್ನಬಸವಾನಂದ ಸ್ವಾಮೀಜಿ ಹೇಳುವುದೇನೆಂದರೆ ; 12 ನೇ ಶತಮಾನದಲ್ಲಿ ಬಸವಣ್ಣನವರು ನಿರ್ಮಿಸಿರುವ ಮೂಲ ಅನುಭವ ಮಂಟಪ ಪೀರ್ ಪಾಶಾ ದರ್ಗಾದ ಜಾಗದಲ್ಲೇ ಮಂಟಪವಿದೆ. ಆ ಜಾಗದಲ್ಲಿ ನಾವು ಹೋಗಿದ್ದೇವೆ ಅಲ್ಲಿ ವಿಭೂತಿ ಕಟ್ಟೆ ಇದೆ ಮತ್ತು ಅಲ್ಲಿ ನಂದಿ ವಿಗ್ರಹಕೂಡ ಇದೆ ಅದರ ಮೇಲೆ ಹಸಿರು ಬಟ್ಟೆ ಧರಿಸಿ ಪೀರ ತರಹ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆ ಕಟ್ಟಡ ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ನಿರ್ಮಾಣ ಮಾಡಿದ ಶಿಲ್ಪ ಕಲೆಯಾಗಿದೆ. ಅದು ಇದೀಗ ನವಾಬರ ವಂಶದವರ ಬಳಿ ಇದೆ ಹೀಗಾಗಿ ಸರ್ಕಾರ ಅದನ್ನು ಪರಿಶೀಲಿಸಿ ಮೂಲ ಅನುಭವ ಮಂಟಪ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಈ ವಿವಾದ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ರಾಜ್ಯ ಸರ್ಕಾರ ಮಧ್ಯೆ ಪ್ರವೇಶ ಮಾಡುತ್ತದೆಯೋ ಅಥವಾ ಇಬ್ಬರು ಸ್ವಾಮಿಗಳ ಮಧ್ಯೆ ಮೂರನೇ ಮಹಾಯುದ್ಧದಲ್ಲಿ ಬಸವಣ್ಣನವರ ಭಕ್ತರನ್ನು ಬಲಿಪಶು ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ